ಕೊಪ್ಪಳ: ನೀರು ಬಾರದ ಕಾಲುವೆಗೆ ಕೋಟ್ಯಂತರ ರು. ವೆಚ್ಚ!

*  ಈಗ ಮತ್ತೆ ದುರಸ್ತಿಗಾಗಿ 10.5 ಕೋಟಿ ಪ್ರಸ್ತಾವನೆ
*  ಖರ್ಚಾಗುವ ಹಣಕ್ಕೆ ಲೆಕ್ಕಾಚಾರವೂ ಇಲ್ಲ
*  ಸಿಂಗಟಾಲೂರು ಏತ ನೀರಾವರಿ ಯೋಜನೆ’ಯಲ್ಲಿ ರೈತರಿಗೆ ನೀರು ದಕ್ಕುತ್ತಿಲ್ಲ
 

10.5 Crores Proposal for Canal Repair on Singatalur Lift Irrigation Project grg

ಸೋಮರಡ್ಡಿ ಅಳವಂಡಿ

ಕೊಪ್ಪಳ(ಜೂ.08): ‘ಸಿಂಗಟಾಲೂರು ಏತ ನೀರಾವರಿ ಯೋಜನೆ’ಯಲ್ಲಿ ರೈತರ ಭೂಮಿಗೆ ಎಷ್ಟು ನೀರು ಹರಿದಿದೆಯೋ ಗೊತ್ತಿಲ್ಲ. ಆದರೆ, ಇದಕ್ಕಾಗಿ ಕೋಟ್ಯಂತರ ರು. ಖರ್ಚಾಗಿದ್ದು, ಇನ್ನೂ ಆಗುತ್ತಲೇ ಇದೆ. ಈ ಏತ ನೀರಾವರಿ ಯೋಜನೆಯ ಬಲಭಾಗದಲ್ಲಿ ಕಳೆದ ಹತ್ತು ವರ್ಷಗಳಿಂದ ನೀರಾವರಿಯಾಗಿದೆ. ಇಲ್ಲಿ ಕಾಲುವೆ ದುರಸ್ತಿಯಾದರೆ ಸರಿ. ಆದರೆ, ಎಡಭಾಗದಲ್ಲಿ ಇದುವರೆಗೂ ಹನಿ ನೀರು ಸಹ ರೈತರ ಭೂಮಿಗೆ ಉಣಿಸಿಲ್ಲ. ಆದರೆ, ಈಗಲೂ ಕಾಲುವೆಯ ನಿರ್ಮಾಣ ಮತ್ತು ದುರಸ್ತಿಗಾಗಿ ಸರ್ಕಾರ ಹಣ ಸುರಿಯುತ್ತಲೇ ಇದೆ!.

ಇದು ಚುನಾವಣೆಯ ವರ್ಷಕ್ಕೆ ಭರಪೂರ ಆದಾಯ ತಂದುಕೊಡುವ ಯೋಜನೆಯಾಗಿದೆ ಎನ್ನಲಾಗುತ್ತದೆ. ಕಾಂಗ್ರೆಸ್‌ ಸರ್ಕಾರದ ಅವಧಿ ಮುಗಿಯುವ ವೇಳೆ ಹನಿ ನೀರಾವರಿಯ ಪೈಲೆಟ್‌ ಕಾರ್ಯಕ್ರಮ ಜಾರಿ ಮಾಡಲಾಯಿತು. ಅದಾದ ಮೇಲೆ ಒಂದು ಹನಿ ನೀರು ರೈತರ ಭೂಮಿಗೆ ತಲುಪಲಿಲ್ಲ. ಅಲ್ಲದೇ ಹನಿ ನೀರಾವರಿ ಪೈಪ್‌ಗಳೂ ಉಳಿಯಲಿಲ್ಲ. ಹಾಕಿದ್ದೆಷ್ಟೋ? ಕದ್ದಿದ್ದೆಷ್ಟು? ದೇವರೇ ಬಲ್ಲ. ಈ ಬಗ್ಗೆ ಕಳ್ಳತನದ ಪ್ರಕರಣ ದಾಖಲು ಮಾಡಿ, ಯೋಜನೆಯನ್ನೇ ಬರ್ಖಾಸ್ತು ಮಾಡಿದರು.

ಕೊಪ್ಪಳ: ತುಂಗಭದ್ರಾ ಡ್ಯಾಂನಲ್ಲಿ ನೀರುಂಟು, ಬಿಡುವುದಕ್ಕೇನು ಗಂಟು?

ಇದು ಒಂದು ಕಡೆಯಾದರೆ ಕೊಪ್ಪಳ ತಾಲೂಕಿನಲ್ಲಿ ನೀರು ಬಾರದ ಕಾಲುವೆಗಳನ್ನು ಆಗಾಗ ದುರಸ್ತಿ ಮಾಡಿಸಲಾಗುತ್ತದೆ. ಇದು ಯಾಕೆಂದು ತನಿಖೆಯಾಗಬೇಕು. ಒಂದೆಡೆ ತುಂತುರು, ಹನಿ ನೀರಾವರಿ ಯೋಜನೆಯನ್ನು ಜಾರಿ ಮಾಡಲಾಗುತ್ತದೆ. ಇನ್ನೊಂದೆಡೆ ‘ಮಧ್ಯಪ್ರದೇಶ ಮಾದರಿ’ ಜಾರಿಗೊಳಿಸಲಾಗುವುದು ಎನ್ನುವ ಮಾತು ಕೇಳಿ ಬರಲಾರಂಭಿಸಿದೆ. ಹಾಗಾದರೆ ಈ ಕಾಲುವೆಗಳನ್ನು ಯಾಕೆ ನಿರ್ಮಾಣ ಮಾಡಲಾಗುತ್ತದೆ. ಇದಕ್ಕಾಗಿ ಯಾಕೆ ಹಣ ವ್ಯಯ ಮಾಡಲಾಗುತ್ತದೆ ಎನ್ನುವುದೇ ಸೋಜಿಗದ ಸಂಗತಿ. ಕಾಲುವೆ ದುರಸ್ತಿಗಾಗಿ .10.5 ಕೋಟಿ ಪ್ರಸ್ತಾವನೆ ಕಳುಹಿಸಿಕೊಡಲಾಗಿದೆ. ಇದು ಮಂಜೂರಿಯಾಗಬೇಕು ಎನ್ನುವ ಕುರಿತು ರಾಜಕೀಯವಾಗಿ ತೆರೆಮರೆಯಲ್ಲಿ ಭಾರಿ ಕಸರತ್ತು ನಡೆದಿದೆ.

ದಿಢೀರ್‌ ಎಚ್ಚರ:

ಸರ್ಕಾರ ರಚನೆಯಾಗಿ 4 ವರ್ಷ ಮೌನವಾಗಿಯೆ ಇರುತ್ತಾರೆ. ಇತ್ತ ಕಣ್ಣೆತ್ತಿಯೂ ನೋಡುವುದಿಲ್ಲ. ಈಗ ಸರ್ಕಾರದ ಅವಧಿ ಮುಗಿಯುತ್ತಿದ್ದು, ಇನ್ನೇನು ಚುನಾವಣೆ ಸಮೀಪಿಸುತ್ತಿದ್ದಂತೆ ಸಿಂಗಟಾಲೂರು ಏತ ನೀರಾವರಿ ಯೋಜನೆ ನೆನಪಾಗುತ್ತದೆ. ಕಾಲುವೆ ನಿರ್ಮಾಣ ಕಾಮಗಾರಿಗಾದರೂ ಚಾಲನೆ ನೀಡಲಾಗುತ್ತದೆ. ಇಲ್ಲವೇ ಹನಿ ನೀರಾವರಿ ಯೋಜನೆಯನ್ನು ಪ್ರಾಯೋಗಿಕವಾಗಿ ಅನುಷ್ಠಾನ ಮಾಡಲು ಚಾಲನೆ ನೀಡಲಾಗುತ್ತದೆ. ಆದರೆ, ಚುನಾವಣೆ ಮುಗಿಯುತ್ತಿದ್ದಂತೆ ಅತ್ತ ಯಾರೂ ತಿರುಗಿಯೂ ನೋಡುವುದಿಲ್ಲ. ಪ್ರತಿ ಸರ್ಕಾರದಲ್ಲಿಯೂ ಇದೇ ರೀತಿ ಆಗುತ್ತಿದೆ.

ಸಮಗ್ರ ತನಿಖೆಗೆ ಆಗ್ರಹ:

ಸಿಂಗಟಾಲೂರು ಏತ ನೀರಾವರಿ ಯೋಜನೆಯಲ್ಲಿ ಎಡಭಾಗದಲ್ಲಿ ನಿರೀಕ್ಷೆ ಮೀರಿ ನೀರಾವರಿಯಾಗಿದೆ. ಆದರೆ, ಬಲಭಾಗದಲ್ಲಿ ನಿರೀಕ್ಷೆ ಮೀರಿ ಹಣವ್ಯಯ ಮಾಡಲಾಗಿದೆ. ಎಡಭಾಗದಲ್ಲಿ ಇದುವರೆಗೂ ಆಗಿರುವ ವೆಚ್ಚ ಮತ್ತು ಕಾಮಗಾರಿಯ ಕುರಿತು ಸಮಗ್ರ ತನಿಖೆಯಾಗಬೇಕು. ಆಗ ಸತ್ಯ ಹೊರಗೆ ಬರುತ್ತದೆ. ಸರ್ಕಾರ ವ್ಯಯ ಮಾಡಿದ ಹಣದ ಮೇಲೆ ನಿಗಾ ಇಡಬೇಕಾಗಿದೆ.

ಖರ್ಚಾಗುವ ಹಣಕ್ಕೆ ಯಾವುದೇ ಲೆಕ್ಕಾಚಾರ ಇಲ್ಲದಂತಾಗಿದೆ. ಇದುವರೆಗೂ ಆಗಿರುವ ವೆಚ್ಚದ ಕುರಿತು ಮಾಹಿತಿ ಸಹ ಬಹಿರಂಗ ಮಾಡುವುದಿಲ್ಲ. ಇದು ಸಾಕಷ್ಟುಅನುಮಾನಗಳಿಗೆ ಕಾರಣವಾಗಿದೆ. ರಾಜ್ಯ ಸರ್ಕಾರ ‘ಸಿಂಗಟಾಲೂರು ಏತ ನೀರಾವರಿ’ಗಾಗಿ ಇದುವರೆಗೂ ಮಾಡಿರುವ ಹಣಕಾಸಿನ ವೆಚ್ಚದ ಕುರಿತು ಶ್ವೇತಪತ್ರ ಹೊರಡಿಸಬೇಕು ಎನ್ನುವ ಆಗ್ರಹವೂ ಕೇಳಿಬರುತ್ತಿದೆ.

ಕೊಪ್ಪಳ: ಹತ್ತು ವರ್ಷವಾದರೂ ಬಾರದ ಹನಿ ನೀರು

‘ಸಿಂಗಟಾಲೂರು ಏತ ನೀರಾವರಿ ಯೋಜನೆ’ಯಲ್ಲಿ ನಿಧಾನಗತಿ ಅಷ್ಟೇ ಆಗಿಲ್ಲ. ಭಾರಿ ಪ್ರಮಾಣದ ಭ್ರಷ್ಟಾಚಾರವೂ ನಡೆದಿದೆ. ಇದರ ಸಮಗ್ರ ತನಿಖೆಯಾದಾಗಲೇ ಸತ್ಯ ಹೊರಬರುತ್ತದೆ ಅಂತ ಹೋರಾಟಗಾರ ವೈ.ಎನ್‌. ಗೌಡರ ತಿಳಿಸಿದ್ದಾರೆ.  

‘ಸಿಂಗಟಾಲೂರು ಏತ ನೀರಾವರಿ ಯೋಜನೆ’ಯಲ್ಲಿ ರೈತರಿಗೆ ನೀರು ದಕ್ಕುತ್ತಿಲ್ಲ. ಆದರೆ, ಇದುವರೆಗೂ ಹಣ ಮಾತ್ರ ಕೋಟಿ ಕೋಟಿ ರುಪಾಯಿ ವ್ಯಯ ಮಾಡಲಾಗುತ್ತಿದೆ. ಅದು ಎಲ್ಲಿ ಖರ್ಚಾಗುತ್ತದೆ ಎನ್ನುವುದೇ ದೊಡ್ಡ ಪ್ರಶ್ನೆ ಅಂತ ಹೋರಾಟಗಾರ ಶರಣಪ್ಪ ಜಡಿ ಹೇಳಿದ್ದಾರೆ. 
 

Latest Videos
Follow Us:
Download App:
  • android
  • ios