ಕೋಟ್ಯಂತರ ರು. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ವಿಜಯನಗರದ ಪಾಲಿಕೆ ಬಜಾರ್‌ನ ಮಳಿಗೆಗಳನ್ನು ಇ- ಹರಾಜು (ಇ-ಆಕ್ಷನ್) ಮುಖಾಂತರ ಹಂಚಿಕೆ ಮಾಡುವಂತೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬೆಂಗಳೂರು : ಕೋಟ್ಯಂತರ ರು. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ವಿಜಯನಗರದ ಪಾಲಿಕೆ ಬಜಾರ್‌ನ ಮಳಿಗೆಗಳನ್ನು ಇ- ಹರಾಜು (ಇ-ಆಕ್ಷನ್) ಮುಖಾಂತರ ಹಂಚಿಕೆ ಮಾಡುವಂತೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ಹವಾನಿಯಂತ್ರಿತ ಪಾಲಿಕೆ ಬಜಾರ್ ನಲ್ಲಿ 79 ಮಳಿಗೆಗಳು ಬರಲಿದ್ದು, ಕೂಡಲೇ ಇ-ಆಕ್ಷನ್ ಮೂಲಕ ನಿಯಮಾನುಸಾರ ಮಳಿಗೆಗಳನ್ನು ವ್ಯಾಪಾರಿಗಳಿಗೆ ಹಂಚಿಕೆ ಮಾಡಿ ಎಂದು ನಿರ್ದೇಶಿಸಿದರು. ಪಾಲಿಕೆ ಬಜಾರ್ ಸುತ್ತಲೂ ಅನಧಿಕೃತವಾಗಿ ವ್ಯಾಪಾರ ಮಾಡುವುದನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕು. ಪಾಲಿಕೆ ಬಜಾರ್ ಮೇಲ್ವಿಚಾರಣೆಗಾಗಿ ಒಬ್ಬ ಕಂದಾಯ ಅಧಿಕಾರಿ ಪ್ರತ್ಯೇಕವಾಗಿ ನಿಯೋಜಿಸಲು ನಿರ್ದೇಶಿಸಿದರು.

ಶ್ರೀರಾಂಪುರ ಹೆರಿಗೆ ಆಸ್ಪತ್ರೆಯ ಕಟ್ಟಡ ಹಳೆಯದಾಗಿದ್ದು, ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ 50 ಹಾಸಿಗೆ ಒಳಗೊಂಡಂತೆ 4 ಅಂತಸ್ತಿನ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಕ್ರಮವಹಿಸಲು ಸೂಚಿಸಿದರು.

ವರದಿ ನೀಡಲು ಸೂಚನೆ:

ಗೋವಿಂದರಾಜನಗರ ಎಂ.ಸಿ. ಲೇಔಟ್ ನಲ್ಲಿರುವ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಪೈಕಿ ಅವಶ್ಯವಿರುವ ವೈದ್ಯರು, ಸಿಬ್ಬಂದಿ ಸಂಖ್ಯೆ, ಉಪಕರಣಗಳ ಅಗತ್ಯ, ಯಾವ ರೀತಿ ಆಸ್ಪತ್ರೆಯನ್ನು ಸಂಪೂರ್ಣವಾಗಿ ಬಳಸಬಹುದೆಂಬುದರ ಕುರಿತು ಸಂಪೂರ್ಣ ವರದಿ ನೀಡಲು ಅಧಿಕಾರಿಗಳಿಗೆ ತಿಳಿಸಿದರು.

ಇಂದಿರಾ ಕ್ಯಾಂಟೀನ್ ಹಾಗೂ ಇಂದಿರಾ ಅಡುಗೆ ಮನೆ ಪರಿಶೀಲನೆ

ದೀಪಾಂಜಲಿ ನಗರ ಬಳಿಯಿರುವ ಇಂದಿರಾ ಕ್ಯಾಂಟೀನ್ ಹಾಗೂ ಇಂದಿರಾ ಅಡುಗೆ ಮನೆ ಪರಿಶೀಲನೆ ನಡೆಸಿದರು. ಅಡುಗೆ ಕೋಣೆಯಲ್ಲಿ ಶುಚಿತ್ವ ಕಾಪಾಡಿಕೊಳ್ಳಿ, ಒಳ ಚರಂಡಿಯ ಚೇಂಬರ್ ನಿಂದ ಕೊಳಚೆ ನೀರು ಉಕ್ಕಿ ಬರುತ್ತಿದ್ದು, ಜಲಮಂಡಳಿ ಅಧಿಕಾರಿಗಳ ಗಮನಕ್ಕೆ ತಂದು ಕೂಡಲೆ ಸಮಸ್ಯೆ ಬಗೆಹರಿಸಲು ಸೂಚಿಸಿದರು.

ಈ ವೇಳೆ ಅಪರ ಆಯುಕ್ತ ದಿಗ್ವಿಜಯ್ ಬೋಡ್ಕೆ, ಜಂಟಿ ಆಯುಕ್ತ ಸಂಗಪ್ಪ, ನಗರ ಯೋಜನೆ ವಿಭಾಗದ ಅಪರ ನಿರ್ದೇಶಕ ಗಿರೀಶ್, ಮುಖ್ಯ ಎಂಜಿನಿಯರ್‌ ಡಾ.ರಾಘವೇಂದ್ರ ಪ್ರಸಾದ್‌ ಉಪಸ್ಥಿತರಿದ್ದರು.