ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆಯುವ 79ನೇ ಸ್ವಾತಂತ್ರ್ಯೋತ್ಸವಕ್ಕೆ ಹಾಜರಾಗಲು ಇ-ಪಾಸ್ ಕಡ್ಡಾಯಗೊಳಿಸಲಾಗಿದೆ. ಸೇವಾ ಸಿಂಧು ಪೋರ್ಟಲ್ ಮೂಲಕ ಆಧಾರ್ ಮತ್ತು ಮೊಬೈಲ್ ಸಂಖ್ಯೆ ಬಳಸಿ ಇ-ಪಾಸ್ ಪಡೆಯಬಹುದು.

ಬೆಂಗಳೂರು (ಆ.13): ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆಯುವ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಕಾರ್ಯಕ್ರಮವನ್ನು ವೀಕ್ಷಿಸಲು ಆಗಮಿಸುವ ಸಾರ್ವಜನಿಕರ ನೂಕುನುಗ್ಗಲು ತಪ್ಪಿಸಲು ಈ ಬಾರಿ ಹೊಸದಾಗಿ ಇ-ಪಾಸ್ ವ್ಯವಸ್ಥೆ ಜಾರಿ ಮಾಡಲಾಗಿದೆ. ಈ ವ್ಯವಸ್ಥೆ ಬಳಸಿಕೊಳ್ಳುವಂತೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಎಂ ತಿಳಿಸಿದ್ದಾರೆ.

ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆಯ ರಾಜ್ಯಮಟ್ಟದ ಸಮಾರಂಭದ ಸಿದ್ಧತೆಗಳ ಕುರಿತು ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಆಸಕ್ತರು ಸೇವಾ ಸಿಂಧು ವೆಬ್ ಸೈಟ್ www.sevasindhu.karnataka.gov.in ನಲ್ಲಿ ಆಧಾರ್ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಇ-ಪಾಸ್ ಅನ್ನು ಪಡೆಯಬಹುದು ಹಾಗೂ ಗೇಟ್ ನಂಬರ್ -5ರ ಮೂಲಕ ಪ್ರವೇಶವನ್ನು ಕಲ್ಪಿಸಲಾಗಿದೆ. ಈ ಸೌಲಭ್ಯವನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ಆಗಸ್ಟ್ 15 ರಂದು ಬೆಳಗ್ಗೆ 8.58 ಕ್ಕೆ ಮಾನ್ಯ ಮುಖ್ಯಮಂತ್ರಿಗಳು ಮೈದಾನದಕ್ಕೆ ಆಗಮಿಸಲಿದ್ದು, 9.00 ಗಂಟೆಗೆ ರಾಷ್ಟ್ರ ಧ್ವಜಾರೋಹಣ ಮಾಡಲಿದ್ದಾರೆ. ಧ್ವಜಾರೋಣದ ನಂತರ ಮಾನ್ಯ ಮುಖ್ಯಮಂತ್ರಿಗಳು ತೆರೆದ ಜೀಪಿನಲ್ಲಿ ಪೆರೇಡ್ ಪರಿವೀಕ್ಷಣೆ ಮತ್ತು ಗೌರವ ರಕ್ಷೆ ಸ್ವೀಕರಿಸಿ ನಾಡಿನ ಜನತೆಗೆ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಸಂದೇಶವನ್ನು ನೀಡಲಿದ್ದಾರೆ ಎಂದು ತಿಳಿಸಿದ ಅವರು, ಪಂಥಸಂಚಲನದಲ್ಲಿ ಕೆ.ಎಸ್.ಆರ್.ಪಿ, ಸಿ.ಆರ್.ಪಿ.ಎಫ್, ಬಿ.ಎಸ್.ಎಫ್, ಸಿ.ಎ.ಆರ್, ಗೋವಾ ಪೊಲೀಸ್, ಕೆ.ಎಸ್.ಐ.ಎಸ್.ಎಫ್, ಟ್ರಾಫಿಕ್ ಪೊಲೀಸ್, ಮಹಿಳಾ ಪೊಲೀಸ್, ಹೋಂ ಗಾರ್ಡ್ಸ್, ಟ್ರಾಫಿಕ್ ವಾರ್ಡನ್, ಆಗ್ನಿಶಾಮಕ ದಳ ಸಿಬ್ಬಂದಿ, ಡಾಗ್ ಸ್ಕ್ವಾಡ್ ಮತ್ತು ಬ್ಯಾಂಡ್ ಬ್ಯಾಂಡ್ ನ ಒಟ್ಟು 35 ತುಕಡಿಗಳಲ್ಲಿ ಸುಮಾರು 1,150 ಮಂದಿ ಭಾಗವಹಿಸಲಿದ್ದಾರೆ ಎಂದರು.

ರಾಜೇಶ್ ಮತ್ತು ನಿರ್ಮಲ.ಡಿ.ಆರ್ ತಂಡದಿಂದ ನಾಡಗೀತೆ ಮತ್ತು ರೈತಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಹೇರೋಹಳ್ಳಿಯ ಬಿಬಿಎಂಪಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ 650 ಮಕ್ಕಳಿಂದ 'ಸ್ವಾತಂತ್ರ್ಯ ಸಂಗ್ರಾಮದ ವೀರ ಕನ್ನಡತೀಯರು', ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನ 500 ಮಕ್ಕಳಿಂದ 'ಕರ್ನಾಟಕ ಸರ್ಕಾರದ 5 ಗ್ಯಾರಂಟಿ ಯೋಜನೆಗಳು' ಹಾಗೂ ಪೊಲೀಸ್ ಇಲಾಖೆ ವತಿಯಿಂದ ಒಟ್ಟು 253 ಅಧಿಕಾರಿ / ಸಿಬ್ಬಂದಿಗಳಿಂದ ಕರ್ನಾಟಕ ಪೊಲೀಸ್ ಸಾಮೂಹ ವಾದ್ಯಮೇಳಗಳ' ಸಾಂಸ್ಕೃತಿ ಕಾರ್ಯಕ್ರಮ ನಡೆಯಲಿವೆ ಎಂದು ತಿಳಿಸಿದರು.

ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಯಾವುದೇ ಆಕಸ್ಮಿಕ ವಿಪತ್ತು ಸಂಭವಿಸಿದಲ್ಲಿ ಅಗತ್ಯವಿರುವಷ್ಟು ಆಂಬುಲೆನ್ಸ್, ವೈದ್ಯಕೀಯ ಹಾಗೂ ವೈದ್ಯಕೀಯೇತರ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಹಾಗೂ ನಗರದ ಹಲವು ಆಸ್ಪತ್ರೆಗಳನ್ನು ಗುರುತಿಸಿ ಸಾಕಷ್ಟು ಸಂಖ್ಯೆಯಲ್ಲಿ ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ ಎಂದು ಹೇಳಿದರು.

ಇ-ಪಾಸ್ ಪಡೆಯುವುದು ಹೇಗೆ?

ಕಾರ್ಯಕ್ರಮವನ್ನು ವೀಕ್ಷಿಸಲು ಆಸಕ್ತಿ ಹೊಂದಿರುವ ಸಾರ್ವಜನಿಕರು ಸೇವಾ ಸಿಂಧು ಪೋರ್ಟಲ್ www.sevasindhu.karnataka.gov.in ನಿಂದ ಇ-ಪಾಸ್ ಅನ್ನು ಪಡೆಯಲು ಸೇವಾ ಸಿಂಧು ವೆಬ್‌ಸೈಟ್‌ನಲ್ಲಿ ಆಧಾರ್ ಕಾರ್ಡ್ ವಿವರಗಳನ್ನು ನಮೂದಿಸಿ ನೋಂದಾಯಿಸಿಕೊಳ್ಳತಕ್ಕದ್ದು ಮತ್ತು ವೆಬ್ಸೈಂಟ್ ನಲ್ಲಿ ಲಾಗಿನ್ ಮಾಡಿ ತಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿದ ನಂತರ ಬರುವ ಒಟಿಪಿ ಅನ್ನು ಅಳವಡಿಸಿ ಇ-ಪಾಸ್ ಅನ್ನು ಡೌನ್‍ ಲೋಡ್ ಮಾಡಿಕೊಳ್ಳಬಹುದಾಗಿದೆ.

ವಿಶೇಷ ಸೂಚನೆ: ಇ-ಪಾಸ್ ಕೇವಲ ಆಗಸ್ಟ್ 15 ರಂದು ಮಾತ್ರ ಮಾನ್ಯವಾಗಿರುತ್ತದೆ. ಇ-ಪಾಸ್ ಹೊಂದಿರುವವರು ಬೆಳಿಗ್ಗೆ 8:15 ಗಂಟೆಗಿಂತ ಮೊದಲು ಗೇಟ್ ನಂ.5ರ ಬಳಿ ಆವರಣದ ಒಳಗೆ ಪ್ರವೇಶಿಸಬೇಕು. ಈ ಸಮಯದ ನಂತರ ಪ್ರವೇಶ ಅನುಮತಿಸಲಾಗುವುದಿಲ್ಲ ಹಾಗೂ ಇ-ಪಾಸ್ ಅಮಾನ್ಯವೆಂದು ಪರಿಗಣಿಸಲಾಗುತ್ತದೆ. ಪ್ರತಿ ಇ-ಪಾಸ್ ಕೇವಲ ಒಬ್ಬರಿಗೆ ಮಾತ್ರ ಪ್ರವೇಶಿಸಲು ಅನುಮತಿಸಿದೆ. ಕಾರ್ಯಕ್ರಮದ ಸಮಯದಲ್ಲಿ ಇ-ಪಾಸ್ನಸ ಮುದ್ರಿತ ಪ್ರತಿ ಅಥವಾ ಡಿಜಿಟಲ್ (ಮೊಬೈಲ್) ಪ್ರತಿಯನ್ನು ಕಡ್ಡಾಯವಾಗಿ ಹೊಂದಿರಬೇಕು. 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಇ-ಪಾಸ್ ಅವಶ್ಯವಿರುವುದಿಲ್ಲ. ಇ-ಪಾಸ್ ಅನ್ನು ವರ್ಗಾಯಿಸುವಂತಿಲ್ಲ. ಇ-ಪಾಸ್‌ಗಳು ಒಟ್ಟು 3000 ಸಂಖ್ಯೆಗೆ ಸೀಮಿತವಾಗಿರುವುದರಿಂದ ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಮೂಲ ಗುರುತಿನ ಚೀಟಿ ಕಡ್ಡಾಯವಾಗಿ ಹೊಂದಿರಬೇಕು. ಇ-ಪಾಸ್ ಹೊಂದಿರುವವರಿಗೆ ಪಾರ್ಕಿಂಗ್ ಸೌಲಭ್ಯ ಒದಗಿಸಲಾಗುವುದಿಲ್ಲ. ಪಾರ್ಕಿಂಗ್ ವ್ಯವಸ್ಥೆಗೆ ಪಾಸ್ಧಾಾರರೇ ಜವಾಬ್ದಾರರಾಗಿರುತ್ತಾರೆ ಎಂದು ಸಕಾರದ ಮುಖ್ಯ ಕಾರ್ಯದಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.