ನಟ ದರ್ಶನ್ ಅವರ ಬೆನ್ನು ನೋವು ನಿವಾರಣೆ ಹಾಗೂ ಜೈಲಿನಿಂದ ಬಿಡುಗಡೆಯಾಗಲಿ ಎಂದು ಪತ್ನಿ ವಿಜಯಲಕ್ಷ್ಮಿ ಅವರು ತುಮಕೂರಿನ ಶ್ರೀಕರಿಕಲ್ಲಮ್ಮ ದೇವಸ್ಥಾನದಲ್ಲಿ ವಿಶೇಷ ಹರಕೆ ಹೊತ್ತಿದ್ದಾರೆ. ದರ್ಶನ್ ಬಿಡುಗಡೆಯಾದ ಬಳಿಕ ಪತಿಯೊಂದಿಗೆ ಬಂದು ಹರಕೆ ತೀರಿಸುವುದಾಗಿ ಅವರು ಪೂಜೆ ಸಲ್ಲಿಸಿದ್ದಾರೆ. ಇತ್ತೀಚೆಗಷ್ಟೇ ಮಗ ವಿನೀತ್ ಹುಟ್ಟುಹಬ್ಬದಂದು ಜೈಲಿನಲ್ಲಿ ದರ್ಶನ್ ಭೇಟಿಯಾಗಿದ್ದ ವಿಚಾರವೂ ಗಮನ ಸೆಳೆದಿದೆ.

ತುಮಕೂರು: ನಟ ದರ್ಶನ್ ಹಾಗೂ ಕುಟುಂಬದ ಯೋಗಕ್ಷೇಮಕ್ಕಾಗಿ ವಿಜಯಲಕ್ಷ್ಮಿ ದರ್ಶನ್ ಅವರು ದೇವರ ಮೊರೆ ಹೋಗಿದ್ದಾರೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಅವರು ಜೈಲು ಸೇರಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಆದರೆ ಸದ್ಯ ದರ್ಶನ್ ಅವರು ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ಕೆಲ ದಿನಗಳ ಹಿಂದಷ್ಟೇ ಸೂಕ್ತ ಚಿಕಿತ್ಸೆಗಾಗಿ ನ್ಯಾಯಾಲಯಕ್ಕೆ ಮನವಿ ಸಲ್ಲಿಕೆ ಮಾಡಿದ್ದರು.

ದರ್ಶನ್‌ಗೆ ತೀವ್ರ ಬೆನ್ನು ನೋವಿನ ಸಮಸ್ಯೆ

ನಟ ದರ್ಶನ್ ಅವರು ಕಳೆದ 12 ವರ್ಷಗಳಿಂದ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ನಿರಂತರವಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ ಕೆಲವು ದಿನಗಳಿಂದ ಬೆನ್ನು ನೋವಿನ ಸಮಸ್ಯೆ ತೀವ್ರವಾಗಿದ್ದು, ಈ ಹಿನ್ನೆಲೆಯಲ್ಲಿ ಫಿಸಿಯೋಥೆರೆಪಿ ಚಿಕಿತ್ಸೆಗೆಂದು ಕೋರ್ಟ್ ನಲ್ಲಿ ನ್ಯಾಯಾಧೀಶರಿಗೆ ಮನವಿ ಸಲ್ಲಿಕೆ ಮಾಡಿದ್ದರು.

ದೇವಿಯ ಎದುರು ವಿಶೇಷ ಹರಕೆ

ಇದರ ನಡುವೆ ಪತಿ ಹಾಗೂ ಕುಟುಂಬದ ಯೋಗಕ್ಷೇಮಕ್ಕಾಗಿ ವಿಜಯಲಕ್ಷ್ಮಿ ಅವರು ಸದ್ಯ ದೇವರ ಮೊರೆ ಹೋಗಿದ್ದಾರೆ. ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹೊನ್ನವಳ್ಳಿ ಹೋಬಳಿಯ ಚೌಲಿಹಳ್ಳಿ ಗ್ರಾಮದ ಶ್ರೀಕರಿಕಲ್ಲಮ್ಮ ದೇವಸ್ಥಾನಕ್ಕೆ ವಿಜಯಲಕ್ಷ್ಮಿ ಅವರು ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದು, ನಟ ದರ್ಶನ್ ಅವರ ಆರೋಗ್ಯ ಚೇತರಿಸಿಕೊಳ್ಳಲು ಹಾಗೂ ಸದ್ಯ ಎದುರಾಗಿರುವ ಸಂಕಷ್ಟ ದೂರವಾಗಲಿ ಎಂದು ವಿಶೇಷ ಹರಕೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ನಟ ದರ್ಶನ್ ಅವರು ಜೈಲಿನಿಂದ ಬಿಡುಗಡೆಯಾದರೆ ಪತಿಯ ಸಮೇತ ದೇವಸ್ಥಾನಕ್ಕೆ ಆಗಮಿಸಿ ಹರಕೆ ತೀರಿಸುವುದಾಗಿ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ ಎನ್ನಲಾಗಿದೆ.

ಇನ್ನು, ವಿಜಯಲಕ್ಷ್ಮಿ ದರ್ಶನ್ ಅವರು ಶ್ರೀಕರಿಕಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ಸಂದರ್ಭದಲ್ಲಿ ನಟ ಡಿ ಬಾಸ್ ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು.

ಮಗನ ಹುಟ್ಟು ಹಬ್ಬ ಆಚರಣೆ

ಇತ್ತೀಚೆಗೆ ವಿಜಯಲಕ್ಷ್ಮಿ ಅವರು ತಮ್ಮ ಪುತ್ರ ವಿನೀತ್ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ್ದರು. ಈ ಕುರಿತ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಜೈಲಿಗೆ ತೆರಳಿ ತಂದೆಯನ್ನು ಭೇಟಿಯಾಗಿದ್ದ ವಿನೀತ್‌ಗೆ ದರ್ಶನ್ ಅವರು ಕಿಟ್‌ಕ್ಯಾಟ್ ಚಾಕೋಲೇಟ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಈ ಹಿನ್ನೆಲೆಯಲ್ಲಿ 'ಪ್ರಪಂಚದಲ್ಲಿ ನನ್ನ ಅಪ್ಪ ಕೊಟ್ಟ ಈ ಉಡುಗೊರೆಗಿಂತ ದೊಡ್ಡದು ಬೇರೆ ಯಾವುದು ಇಲ್ಲ' ಎಂದು ವಿನೀಶ್ ಭಾವುಕರಾಗಿದ್ದರು.

ನಟಿ ದರ್ಶನ್ ಕುಟುಂಬ ಅವಹೇಳನಕಾರಿ ಹೇಳಿಕೆ ನೀಡುವಂತಿಲ್ಲ

ನಟ ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿ ಅವರು ತಮ್ಮ ಕುಟುಂಬದ ವಿರುದ್ಧ ಯಾವುದೇ ಅವಹೇಳನಾರಿ ಹೇಳಿಕೆ ನೀಡದಂತೆ ನಟ ಧನ್ವೀರ್ ಅವರಿಗೆ ನ್ಯಾಯಾಲಯ ನಿರ್ಬಂಧ ವಿಧಿಸಿದೆ. ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಧನ್ವೀರ್ ಹಾಗೂ ವಿಜಯಲಕ್ಷ್ಮಿ ಅವರ ನಡುವೆ ವಿವಾದ ಉಂಟಾಗಿ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಆ ಬಳಿಕ ಧನ್ವೀರ್ ಅವರು ಮಾತನಾಡಿದ್ದಾರೆ ಎನ್ನಲಾದ ಹಲವು ಆಡಿಯೋಗಳು ವೈರಲ್ ಆಗಿತ್ತು. ಆ ಸಂಬಂಧ ಮಾಧ್ಯಮಗಳಲ್ಲಿ ಮಾತನಾಡಿದ್ದ ಧನ್ವೀರ್, ವಿಜಯಲಕ್ಷ್ಮಿ ಅವರ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು.