ಬಳ್ಳಾರಿ(ಮಾ.08): ​ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ರಾಜಶೇಖರ ಮುಲಾಲಿ ಅವರ ಅವಹೇಳನಕಾರಿಯಾಗಿ ಮಾತನಾಡಿದ್ದು, ಇನ್ನು ಮುಂದೆ ಮಾತನಾಡುವಾಗ ಎಚ್ಚರದಿಂದ ಇರಬೇಕು ಎಂದು ಜೆಡಿಎಸ್‌ ನಗರ ಘಟಕ ಅಧ್ಯಕ್ಷ ವಿಜಯಕುಮಾರ್‌ ಹೇಳಿದ್ದಾರೆ. 

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜಶೇಖರ ಮುಲಾಲಿ ಅವರು ಮಾಜಿ ಮುಖ್ಯಮಂತ್ರಿ ವಿರುದ್ಧ ಹಗುರವಾಗಿ ಮಾತನಾಡುವುದು ಸರಿಯಲ್ಲ. ಪ್ರಚಾರಕ್ಕಾಗಿ ಹಾಗೂ ಬ್ಲಾಕ್‌ಮೇಲ್‌ ಮಾಡಲು ನನ್ನ ಬಳಿ ಸಿಡಿಗಳಿವೆ ಎಂದು ಹೇಳುತ್ತಿದ್ದಾರೆ. ಅವರ ಬಳಿ ಸಿಡಿಗಳು ಇದ್ದರೆ ಬಿಡುಗಡೆಗೊಳಿಸಲಿ. ಆದರೆ, ಹಿರಿಯ ರಾಜಕೀಯ ನಾಯಕರ ತೇಜೋವಧೆ ಮಾಡುವುದು ಸರಿಯಲ್ಲ ಎಂದರು.

'ಕುಂಬಳಕಾಯಿ ಕಳ್ಳ ಅಂದ್ರೆ ಕುಮಾರಸ್ವಾಮಿ ಏಕೆ ಹೆಗಲು ಮುಟ್ಟಿಕೊಳ್ಬೇಕು?'

ರಾಜಶೇಖರ ಮುಲಾಲಿ ಅವರ ಇತಿಹಾಸ ನಮಗೆ ಗೊತ್ತಿದೆ. ಅವರು ಸರ್ಕಾರಿ ಕಚೇರಿಗಳಿಗೆ ಹೋಗಿ ದಾಖಲೆಗಳನ್ನು ಪರಿಶೀಲನೆ ಮಾಡುತ್ತಾರೆ. ದಾಖಲೆ ಪರಿಶೀಲಿಸಲು ಇವರಿಗೆ ಯಾರು ಅಧಿಕಾರ ನೀಡಿದರು ಎಂದು ಪ್ರಶ್ನಿಸಿದರು.
ಸಿಡಿಗಳು ಇದ್ದರೆ ರಾಜಶೇಖರ ಮುಲಾಲಿ ಅವರು ಬಿಡುಗಡೆಗೊಳಿಸಬೇಕು. ಆದರೆ, ಇದನ್ನೇ ಇಟ್ಟುಕೊಂಡು ಬ್ಲಾಕ್‌ಮೇಲ್‌ ಮಾಡುತ್ತಿದ್ದಾರೆ ಎಂದು ಗೊತ್ತಾಗುತ್ತಿದೆ. ಬಳ್ಳಾರಿಯಲ್ಲಿ ಅನೇಕ ಅಧಿಕಾರಿಗಳು ಮುಲಾಲಿ ಅವರಿಂದ ರೋಸಿ ಹೋಗಿದ್ದಾರೆ. ಅನಿವಾರ್ಯವಾಗಿ ಅವರು ಬಾಯಿ ಬಿಡುತ್ತಿಲ್ಲ ಎಂದರಲ್ಲದೆ, ಇನ್ನು ಮುಂದೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗಳ ವಿರುದ್ಧ ಮಾತನಾಡಿದರೆ ಅವರ ವಿರುದ್ಧ ನ್ಯಾಯಾಲಯದ ಮೊರೆ ಹೋಗಲಾಗುವುದು. ಮುಲಾಲಿ ಅವರ ವಿರುದ್ಧ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಪಕ್ಷದ ಮುಖಂಡರಾದ ಮುನ್ನಾಭಾಯಿ, ಜಿಲ್ಲಾ ವಕ್ತಾರ ಎಸ್‌.ಯಲ್ಲನಗೌಡ, ಕೆ. ಶ್ರೀನಿವಾಸ ರಾವ್‌, ಹಿರಿಯ ಮುಖಂಡ ವಾದಿರಾಜ ಶೆಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.