ಬಾಗಲಕೋಟೆ, (ಮಾ.07): ಎಚ್‌.ವೈ. ಮೇಟಿ ರಾಸಲೀಲೆ ಸಿ.ಡಿ.ರಿಲೀಸ್ ಮಾಡಿ ರಾಜ್ಯಾಧ್ಯಂತ ಸುದ್ದಿಯಾಗಿದ್ದ ಬಳ್ಳಾರಿ ಸಮಾಜಿಕ ಕಾರ್ಯಕರ್ತ ರಾಜಶೇಖರ್ ಮುಲಾಲಿ ಮತ್ತೆ ಸುದ್ದಿಯಾಗಿದ್ದಾರೆ.

ಹೌದು...ರಮೇಶ್ ಜಾರಕಿಹೊಳಿ ರಾಸಲೀಲೆ ಸಿ.ಡಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದು ಮುಲಾಲಿ, ನನ್ನ ಬಳಿ ಹಲವರ ಸಿ.ಡಿ. ಇವೆ ಎಂದು ಸ್ಫೋಟಕ ಹೇಳಿಕೆ ಕೊಟ್ಟಿದ್ದರು.

ಇದಕ್ಕೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ರು. ಅಲ್ಲದೇ ಸಿ.ಡಿ. ಇಟ್ಟುಕೊಂಡು ಹೆದರಿಸುತ್ತಿರುವವರನ್ನು ಬಂಧಿಸಿ ಎರೋಪ್ಲೇನ್ ಹತ್ತಿಸಬೇಕು ಅಂತೆಲ್ಲಾ ಹೇಳಿಕೆ ಕೊಟ್ಟಿದ್ದರು. ಇದೀಗ ಇದಕ್ಕೆ ರಾಜಶೇಖರ್ ಮುಲಾಲಿ ಆಕ್ರೋಶ ವ್ಯಕ್ತಪಡಿಸಿದ್ದು, ಕುಮಾರಸ್ವಾಮಿಗೆ ತಿರುಗೇಟು ಕೊಟ್ಟಿದ್ದಾರೆ.

MLA,MP ಸೇರಿದಂತೆ ಹಲವರ ಸಿ.ಡಿ. ಇವೆ: ಹೊಸ ಬಾಂಬ್ ಸಿಡಿಸಿದ ಮತ್ತೋರ್ವ ಸಾಮಾಜಿಕ ಕಾರ್ಯಕರ್ತ

ಬಾಗಲಕೋಟೆಯಲ್ಲಿ ಈ ಬಗ್ಗೆ ಇಂದು (ಭಾನುವಾರ) ಮಾತನಾಡಿದ ಮುಲಾಲಿ, ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿಗಳು ಏಳು ಜನ ಇದ್ದಾರೆ. ಅದರಲ್ಲಿ ಒಬ್ಬರು ಪದೇ ಪದೇ ವಯಾನಾಡಿಗೆ ಹೋಗುತ್ತಾರೆ ಎಂದು ನಾನು ಹೇಳಿದ್ದು ನಿಜ. ಆದರೆ, ಕುಂಬಳಕಾಯಿ ಕಳ್ಳ ಅಂದರೆ ಕುಮಾರಸ್ವಾಮಿ ಯಾಕೆ, ಹೆಗಲು ಮುಟ್ಟಿಕೊಳ್ಳಬೇಕು ಎಂದು ಪ್ರಶ್ನಿಸಿದರು.

ಇನ್ನೂ ಆರು ಜನ ಸಿಎಂಗಳು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಕುಮಾರಸ್ವಾಮಿ ಮಾತ್ರ ಅತ್ಯಂತ ಹಗುರವಾಗಿ ಮಾತನಾಡಿದ್ದಾರೆ. ಹೋರಾಟಗಾರರು ಎಂದರೆ ಕೇವಲವಾಗಿ ಕಾಣಬೇಡಿ. ಗೌರವದಿಂದ ಮಾತನಾಡಬೇಕು ಎಂದರು. 

ನಾನು ಮಾಜಿ ಮುಖ್ಯಮಂತ್ರಿಗಳು ಎಂದು ಗೌರವದಿಂದ ಕರೆದಿದ್ದೇನೆ. ಆದರೆ, ಕುಮಾರಸ್ವಾಮಿ, ಬಂಧಿಸಬೇಕು, ಎರೋಪ್ಲೇನ್ ಹತ್ತಿಸಬೇಕೆಂದು ಹೇಳಿದ್ದಾರೆ. ನಾವೇನು ಚಿತ್ರ ನಟಿಯನ್ನು ಮದುವೆಯಾಗಿಲ್ಲ. ಬಳಿಕ ನಟಿಯನ್ನು ಕೈಬಿಟ್ಟು ಬೇರೊಬ್ಬರನ್ನು ಮದುವೆಯಾಗಿಲ್ಲ. ಹೋರಾಟಗಾರರೆಂದರೆ ಏನು ಎಂದು ತೋರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.