ಯಾದಗಿರಿ(ಸೆ.03):ಕೊರೋನಾ ನಿವಾರಣೆಯ ಸಮಯ ಸನ್ನಿಹಿತವಾಗಿದೆ ಎಂದು ಹುಣಸಿಹೊಳೆಯ ಕಣ್ವಪೀಠದ ಶ್ರೀವಿದ್ಯಾಕಣ್ವ ವಿರಾಜ ತೀರ್ಥ ಶ್ರೀಪಾದಂಗಳವರು ಹೇಳಿದ್ದಾರೆ.

ಜಿಲ್ಲೆಯ ಸುರುಪುರ ತಾಲೂಕಿನ ಹುಣಸಿಹೊಳೆಯ ಕಣ್ವಮಠದಲ್ಲಿ 45 ದಿನಗಳ ಕಾಲ ನಡೆದ ಚಾತುರ್ಮಾಸ ಮುಕ್ತಾಯ ಸಮಾರಂಭದಲ್ಲಿ ಸಂಸ್ಥಾನ ಪೂಜೆಯ ನಂತರದಲ್ಲಿ ಶಿಷ್ಯರನ್ನುದ್ದೇಶಿಸಿ ಆಶೀರ್ವಚನ ನೀಡಿದ ಅವರು, ಇಂದು ಜಗತ್ತಿನಾದ್ಯಂತ ಕೋವಿಡ್‌-19 ರೋಗ ಉಲ್ಬಣವಾಗುತ್ತಿರುವದರಿಂದ ಸಾಕಷ್ಟು ಭಕ್ತರಲ್ಲಿ ಮಾನಸಿಕ ಕ್ಷೋಭೆ, ಅಶಾಂತಿ ಉಂಟಾಗಿದೆ.

ಅನೇಕ ಕಡೆ ಸಾವು-ನೋವುಗಳಾಗಿವೆ. ಈ ರೋಗ ತಡೆಗೆ ದೇವರ ಧ್ಯಾನ, ಯೋಗ ಮತ್ತು ಸ್ತೋತ್ರಗಳ ಪಠಣೆ ಮಾಡಬೇಕು ಎಂದು ತಿಳಿಸಿದರು. ಸರ್ಕಾರದ ನಿಯಮಾನುಸಾರ ಮತ್ತು ಜನರ ಆರೋಗ್ಯ ದೃಷ್ಟಿಯಿಂದ ಪ್ರಸಕ್ತ ವರ್ಷ ಭಕ್ತರು ಸಾಕಷ್ಟು ಸಂಖ್ಯೆಯಲ್ಲಿ ಇಂದಿನ ಕಾರ್ಯಕ್ರಮಕ್ಕೆ ಬರಲು ಆಗಿಲ್ಲ. ಅವರೆಲ್ಲರಿಗೂ ವಿಠ್ಠಲ ಕೃಷ್ಣನ ಅನುಗ್ರಹಕ್ಕಾಗಿ ಪ್ರಾರ್ಥಿಸುವೆವು ಎಂದು ಹೇಳಿದರು. ವಿಪ್ರ ಬಂಧುಗಳು ನಮ್ಮ ಸಂಸ್ಕಾರ, ಉಪಾಸನೆ, ನಿತ್ಯ ಅಹ್ನೀಕಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ನಮ್ಮ ಅಹಾರ ಪದ್ಧತಿಯಿಂದಾಗಿ ಇಂತಹ ವಿಷಮ ಕಾಲದಲ್ಲಿಯು ಕೂಡಾ ನಾವೆಲ್ಲ ಆರೋಗ್ಯವಂತರಾಗಿರಲು ಸಾದ್ಯವಾಗಿದೆ ಎಂದರು.

ಯಾದಗಿರಿ: ತಮಟೆ ವಾಪಸ್‌ ಕೇಳಿದ್ದಕ್ಕೆ ಕೊಂದೇ ಬಿಟ್ರು..!

ಶ್ರೀಗಳ ಸ್ಪಷ್ಟನೆ:

ಶ್ರೀಮಠದ ಕುರಿತು ಅನೇಕರು ಸುಳ್ಳು ವದಂತಿಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಹಬ್ಬಿಸುತ್ತಿದ್ದಾರೆ. ವದಂತಿಗಳಿಗೆ ಭಕ್ತರು ವಿಚಲಿತರಾಗುವ ಕಾರಣವಿಲ್ಲ ಎಂದ ಕಣ್ವಪೀಠದ ಶ್ರೀವಿದ್ಯಾಕಣ್ವ ವಿರಾಜ ತೀರ್ಥ ಶ್ರೀಪಾದಂಗಳವರು, ದೂರದ ಊರುಗಳಿಂದ ಅನೇಕ ಭಕ್ತರು ಬಂದು ವಿಠ್ಠಲ ಕೃಷ್ಣನ ದರುಶನ ಪಡೆದು ಪಾವನರಾಗಿದ್ದಾರೆ. ಸಮಾಜ, ಸಂಘಟನೆ, ಅನೇಕ ಗೊಂದಲಗಳನ್ನು ತಮ್ಮೊಂದಿಗೆ ಮಾತನಾಡಿ ಸರಿಪಡಿಸಿಕೊಂಡಿದ್ದಾರೆ. ಮಠದಲ್ಲಿ ಯಾವುದೆ ಗೊಂದಲಗಳಿಲ್ಲಾ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸೀಮೋಲ್ಲಂಘನ, ಕೃಷ್ಣಾ ನದಿಯಲ್ಲಿ ದಂಡೋದಕ ಸ್ನಾನ, ಸಂಸ್ಥಾನ ಪೂಜೆ ನಡೆದವು. ಪಾದಪೂಜೆ ಹಾಗೂ ಮುದ್ರಾಧಾರಣೆ ನಡೆಯಿತು. ಅವದಂಭರ ಭಟ್ಟಜೋಷಿ ಬಳೂತಿ, ರಾಜೇಂದ್ರಆಚಾರ್ಯ ಬುದ್ದಿನ್ನಿ, ಕಿಶನರಾವ ರಾಯಚೂರು, ಹಣಮೇಶಾಚಾರ್ಯ ಬುದ್ದಿನ್ನಿ, ಶ್ಯಾಮಸುಂದರ ಜೋಷಿ ಕೊಡೇಕಲ್‌, ಗಂಗಾಧರ ಜೋಷಿ, ಗೋವಿಂದರಾವ ಸೂಗೂರು, ಸುರೇಶ ಕುಲಕರ್ಣಿ, ಮನೋಹರರಾವ ದ್ಯಾಮನಾಳ, ನರಸಿಂಗರಾವ ಕುಲಕರ್ಣಿ, ಶ್ರೀಹರಿ ಕುಲಕರ್ಣಿ ಇತರರು ಇದ್ದರು. ವಂದನಾ ಕುಲಕರ್ಣಿ ಅವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಸುರಪುರ, ಕಾಮನಟಗಿ, ಕವಿತಾಳ, ಸಿಂಧನೂರು, ಲಿಂಗಸೂರು, ಗಂಗಾವತಿಯಿಂದ ಅನೇಕ ಭಕ್ತರು ಆಗಮಿಸಿದ್ದರು. ಸರಳ, ಸುರಕ್ಷಾ ಅಂತರದೊಂದಿಗೆ ಚಾತುರ್ಮಾಸ ಸಮಾರಂಭ ಸಂಪನ್ನವಾಯಿತು.