ಬೆಂಗಳೂರು(ಅ.24): ಅಷ್ಟ ಲಕ್ಷ್ಮಿ ಕನ್ನಡ ಭಕ್ತಿ, ಶರನ್ನವರಾತ್ರಿಯ ಪ್ರಯುಕ್ತ ಸಂಸ್ಕಾರ ಭಾರತಿ ಆಶ್ರಯದಲ್ಲಿ ವಿದುಷಿ ರಂಜನಿ ಕೀರ್ತಿ ಅವರಿಂದ ದೇವಿ ಕೃತಿ ಗಾಯನ ಕಾರ್ಯಕ್ರಮ ಇಂದು(ಶನಿವಾರ) ಸಂಜೆ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಲೈವ್‌ ಇರಲಿದೆ.

ದೇವಿಯನ್ನು ಆರಾಧಿಸುವ ಹಿಂದೂ ಧರ್ಮದ ಹಬ್ಬ ನವರಾತ್ರಿಯಾಗಿದ್ದು, ಇದನ್ನು ಕರ್ನಾಟಕದಲ್ಲಿ ದಸರಾ ಎಂದು ಕರೆಯಲಾಗುತ್ತದೆ. ಪಶ್ಚಿಮ ಬಂಗಾಳದಲ್ಲಿ ಇದು ದುರ್ಗಾ ಪೂಜೆ. ನವರಾತ್ರಿ ಎಂದರೆ ಒಂಬತ್ತು (ನವ) ರಾತ್ರಿಗಳು, ದೇವಿಯ ಒಂಬತ್ತು ವಿಧದ ರೂಪಗಳನ್ನು ಆರಾಧಿಸುವುದು ಪ್ರತೀತಿ ಇದೆ. 

ಹತ್ತನೇಯ ದಿನ 'ವಿಜಯ ದಶಮಿ', (2020 ಅಕ್ಟೋಬರ್ 26, ಸೋಮವಾರ ) ಈ ದಿನ ಶಮಿ ವೃಕ್ಷಕ್ಕೆ ಪೂಜೆಯನ್ನು ಸಲ್ಲಿಸಿ ಶಮಿ (ಬನ್ನಿ)ಯನ್ನು ವಿನಿಯೋಗ ಮಾಡುವದು ಕರ್ನಾಟಕದ ಆಚರಣೆಯ ಪದ್ಧತಿಯಾಗಿದೆ. ಇದೇ ದಿನ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿಯ ಮೂರ್ತಿಯ ಮೆರವಣಿಗೆ ಮೈಸೂರಿನಲ್ಲಿ ನಡೆಯುತ್ತದೆ. ಹಿಂದೂ ಪಂಚಾಂಗದ ಅಶ್ವಯುಜ ಶುದ್ಧ ಪಾಂಡ್ಯದ ದಿನ ನವರಾತ್ರಿ ಪ್ರಾರಂಭವಾಗುತ್ತದೆ.

ಆಯುಧಪೂಜೆಗೆ ರಂಗೇರಿದ ಮಾರುಕಟ್ಟೆ: ಕೊರೋನಾ ಭೀತಿ ನಡುವೆಯೂ ಹಬ್ಬಕ್ಕೆ ಸಿದ್ಧತೆ ಜೋರು

ಇಂದು ಶನಿವಾರ(ಅಕ್ಟೋಬರ್ 24, 2020) ಅಷ್ಟಮಿ. ದುರ್ಗಾಷ್ಟಮಿ. ಕಾಯಾ ವಾಚಾ ಮನಸಾ ದೇವಿಯನ್ನು ಸ್ತುತಿಸುವ ನವರಾತ್ರಿಯ ಎಂಟನೇ ದಿನ. ನಮ್ಮ ಕರ್ನಾಟಕದ ಮಾತೆಯರಿಗೆ ಭಕ್ತಿ - ಸಡಗರ ಮೇಳೈಸುವ ಸುದಿನವಾಗಿದೆ. ಗುಡಿ ಗುಂಡಾರಗಳಲ್ಲಿ, ಮನೆ ಮನೆಗಳಲ್ಲಿ, ಅಪಾರ್ಟ್‌ಮೆಂಟ್‌ಗಳಲ್ಲಿ, ಮನೆ ದೇವರ ಮನೆಯಲ್ಲಿ, ಫೇಸ್‌ಬುಕ್‌ನಲ್ಲಿ, ವಾಟ್ಸಾಪ್‌ನಲ್ಲಿ ದೇವಿ ಸ್ತುತಿ ಮಾಡಲಾಗುತ್ತದೆ. 

ಅನೇಕರು ಒಲಿದಂತೆ ಹಾಡುವರು. ಮನವಿಟ್ಟು ಆಲಿಸುವರು. ದೇವಿಸ್ತುತಿಯಲ್ಲಿ ಭಕ್ತಿಗೆ ಮೊದಲ ಮಣೆ. ಭಕ್ತಿ ಮತ್ತು ಶ್ರದ್ಧೆಗೆ ಸುಶ್ರಾವ್ಯ ಸಂಗೀತದ ಮೇಲೋಗರ ಬೆರೆತರೆ ರಸೋತ್ಪತ್ತಿ. ಇದು ದುರ್ಗಾಷ್ಟಮಿ ಭಕ್ತ ಕೋಟಿಗೆ ಕರುಣಿಸುವ ಒಲುಮೆ. ಇಂಥ ಸಂಗೀತದೊಲುಮೆಯ ಒಂದು ಬುಟ್ಟಿ ಇಂದು ಸಂಜೆ ಫೇಸ್‌ಬುಕ್‌ನಲ್ಲಿ ತೇಲಿ ಬರುತ್ತಿದೆ. ಹೃದಯ ತುಂಬಿಕೊಳ್ಳುವ ಸಂತೋಷ ನಮ್ಮ ನಿಮ್ಮೆಲ್ಲರದ್ದೂ ಆಗಿರಲಿ.

ಭಾರತೀಯ ಸಂಸ್ಕೃತಿಯನ್ನು ಪಾಲಿಸುವ, ಪೋಷಿಸುವ ಸಂಸ್ಥೆಗಳ ಸಾಲಿನಲ್ಲಿ ಸಂಸ್ಕಾರ ಭಾರತಿಯೂ ಒಂದಾಗಿದೆ. ಭಾರತದ ನಾನಾ ಪ್ರದೇಶಗಳಲ್ಲಿ  ಕೈಂಕರ್ಯ ನಿರತ ಸಂಸ್ಕಾರ ಭಾರತಿಯ ಬೆಂಗಳೂರು ದಕ್ಷಿಣ ಶಾಖೆಯ ವತಿಯಿಂದ ಈ ಸಂಜೆ ದಸರಾ - ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಗೀತ ಕಚೇರಿ - ವಿದುಷಿ ರಂಜನಿ ಕೀರ್ತಿ. ಮೃದಂಗ - ವಿದ್ವಾನ್ ಫಣೀಂದ್ರ ಭಾಸ್ಕರ್. ಫೇಸ್ ಬುಕ್ ಕ್ಲಿಕ್ ಇಲ್ಲಿದೆ..

https://www.facebook.com/groups/303074287738986