ಮಂಗಳೂರು(ಮಾ.14): ಭಾರತಕ್ಕೆ ಕಾಲಿಟ್ಟಿರುವ ಕರೋನಾ ಸೋಂಕು ಈಗ ಸರ್ಕಾರಿ ಇಲಾಖೆಗಳನ್ನು ಕಂಗೆಡಿಸಿದೆ. ದೂರು, ದುಮ್ಮಾನ, ವರ್ಗಾವಣೆ ಹೀಗೆ ಯಾವುದೇ ಬೇಡಿಕೆ ಅಥವಾ ಕುಂದುಕೊರತೆಗೆ ಮುಖತಃ ಭೇಟಿ ಬದಲು ವಿಡಿಯೋ ಕಾನ್ಫರೆನ್ಸ್‌ ಮೊರೆ ಹೋಗುವಂತೆ ಮಾಡಿದೆ.

ಮಾರಕ ರೋಗ ಕೊರೋನಾ ಸೋಂಕು ಭಾರತಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ಈಗ ಆಕಾಶವಾಣಿ ಮತ್ತು ದೂರದರ್ಶನ ಅಧಿಕಾರಿಗಳ ಭೇಟಿಯನ್ನು ವಿಡಿಯೋ ಕಾನ್ಫರೆನ್ಸ್‌ಗೆ ಸೀಮಿತಗೊಳಿಸಲಾಗಿದೆ. ಇದುವರೆಗೆ ಅಧಿಕಾರಿ ಮಟ್ಟದ ಸಭೆಗಳಿಗೆ ಬಳಕೆಯಾಗುತ್ತಿದ್ದ ವಿಡಿಯೋ ಕಾನ್ಫರೆನ್ಸ್‌ ಈ ಮೂಲಕ ವರ್ಗಾವಣೆ ಮತ್ತು ಕುಂದುಕೊರತೆಗೆ ಉಪಯೋಗವಾಗುವಂತಾಗಿದೆ.

ಮಾಹೆಯ ಮೂವರು ವಿದ್ಯಾ​ರ್ಥಿ​ಗಳು ಆಸ್ಪ​ತ್ರೆಗೆ ದಾಖ​ಲು

ಪ್ರತಿ ವರ್ಷ ಮಾಚ್‌ರ್‍, ಏಪ್ರಿಲ್‌ಗಳಲ್ಲಿ ವರ್ಗಾವಣೆ ಪ್ರಕ್ರಿಯೆ ಆರಂಭವಾಗುತ್ತದೆ. ಆಕಾಶವಾಣಿ-ದೂರದರ್ಶನದಲ್ಲಿ ತಂತ್ರಜ್ಞರು ಹಾಗೂ ಕಾರ್ಯಕ್ರಮ ನಿರ್ವಾಹಕರು ಸೇರಿ ದೇಶವ್ಯಾಪಿ ಸುಮಾರು 30 ಸಾವಿರದಷ್ಟುಸಿಬ್ಬಂದಿ ಇದ್ದಾರೆ. ವರ್ಗಾವಣೆ ಪ್ರಕ್ರಿಯೆಗೆ ಒಳಗಾಗುವವರು ಕೇಂದ್ರ ಕಚೇರಿಗೆ ಭೇಟಿ ನೀಡುವುದು ಸಾಮಾನ್ಯ. ಆಕಾಶವಾಣಿ-ದೂರದರ್ಶ ವಿಭಾಗದಲ್ಲಿ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಹಾಗೂ ಈಶಾನ್ಯ ಎಂಬ ಐದು ವಲಯಗಳಿವೆ. ಈ ಪೈಕಿ ಉತ್ತರ ಮತ್ತು ದಕ್ಷಿಣ ವಲಯಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ವರ್ಗಾವಣೆಗಳು ನಡೆಯುತ್ತವೆ. ಈ ಬಾರಿ ವರ್ಗಾವಣೆ ಯಥಾಪ್ರಕಾರ ನಡೆಯಲಿದ್ದರೂ ಲಾಬಿ, ಒತ್ತಡಗಳಿಗೆ ಸ್ವಲ್ಪ ಮಟ್ಟಿನ ಬ್ರೇಕ್‌ ಬೀಳಲಿದೆ. ಇದಕ್ಕೆ ಕಾರಣ, ಯಾವುದೇ ಕಾರಣಕ್ಕೂ ನಮ್ಮ ಭೇಟಿಗೆ ಬರಬೇಡಿ ಎಂದು ಮೇಲಧಿಕಾರಿಗಳು ಸೂಚನೆ ಹೊರಡಿಸಿದ್ದಾರೆ.

ವಿಡಿಯೋ ಕಾನ್ಫರೆನ್ಸ್‌ ಮಾತ್ರ:

ಮುಖತಃ ಭೇಟಿ ಮಾಡುವ ಯಾವುದೇ ವಿಚಾರವನ್ನು ಸದ್ಯದ ಮಟ್ಟಿಗೆ ಬೇಡ. ಕೊರೋನಾ ಭೀತಿ ಹಿನ್ನೆಲೆಯಲ್ಲಿ ಅಂತಹ ಏನೇ ಬೇಡಿಕೆ ಇದ್ದರೆ ಮೈಲ್‌ ಮೂಲಕ ತಿಳಿಸಿ. ಮುಖತಃ ಮಾತನಾಡಬೇಕಾದರೆ, ವಿಡಿಯೋ ಕಾನ್ಫರೆನ್ಸ್‌ ಮೂಲಕ ನಡೆಸುತ್ತೇವೆ. ಇದು ಕೇವಲ ವರ್ಗಾವಣೆಗೆ ಮಾತ್ರವಲ್ಲ ಕುಂದುಕೊರತೆ ಹೇಳಿಕೊಳ್ಳಲೂ ಅವಕಾಶವಿದೆ ಎಂದು ಆಕಾಶವಾಣಿ-ದೂರದರ್ಶನದ ಚೆನ್ನೈ ವಲಯದ ಉನ್ನತಾಧಿಕಾರಿಗಳು ತಿಳಿಸಿದ್ದಾರೆ. ಚೆನ್ನೈ ವಲಯಕ್ಕೆ ಕರ್ನಾಟಕ, ಆಂಧ್ರ, ತಮಿಳ್ನಾಡು, ತೆಲಂಗಾಣ, ಕೇರಳ ಹಾಗೂ ಅಂಡಮಾನ್‌-ನಿಕೋಬಾರ್‌ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶಗಳು ಒಳಗೊಳ್ಳುತ್ತವೆ. ಈ ವ್ಯಾಪ್ತಿಯ ಆಕಾಶವಾಣಿ-ದೂರದರ್ಶನ ಸಿಬ್ಬಂದಿ ಹಾಗೂ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್‌ ಮೂಲಕವೇ ಮೇಲಧಿಕಾರಿಗಳಲ್ಲಿ ಮಾತನಾಡಬೇಕಾಗಿದೆ.

ಪ್ರವಾಸ ಮೊಟಕು:

ಆಕಾಶವಾಣಿ ಮತ್ತು ದೂರದರ್ಶನ ಸಿಬ್ಬಂದಿ ಹಾಗೂ ಅಧಿಕಾರಿಗಳು ಹೊರಗೆ ಪ್ರವಾಸ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕರೋನಾ ಸೋಂಕಿನ ಮುನ್ನೆಚ್ಚರಿಕೆ ಕ್ರಮವಾಗಿ ಉನ್ನತಾಧಿಕಾರಿಗಳು ಈ ಸೂಚನೆ ಹೊರಡಿಸಿದ್ದಾರೆ. ವಿಶೇಷ ಹೊರಾಂಗಣ ಕಾರ್ಯಕ್ರಮ ಅಥವಾ ಶೂಟಿಂಗ್‌ಗೆ ತೆರಳುವುದು ಬೇಡ. ಕಚೇರಿಗೆ ಅನಿವಾರ್ಯವಿದ್ದರೆ ಬನ್ನಿ, ಇಲ್ಲದಿದ್ದರೆ ಮನೆಯಿಂದಲೇ ಕಾರ್ಯನಿರ್ವಹಿಸಿದರೆ ಉತ್ತಮ ಎಂದು ಉನ್ನತಾಧಿಕಾರಿಗಳು ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಹಿನ್ನೆಲೆಯಲ್ಲಿ ಆಕಾಶವಾಣಿ ಮತ್ತು ದೂರದರ್ಶನಕ್ಕೆ ಸಂಬಂಧಿಸಿದ ಹೊರಾಂಗಣ ಕಾರ್ಯಕ್ರಮಗಳ ಧ್ವನಿ ಮುದ್ರಣ ಹಾಗೂ ಚಿತ್ರೀಕರಣವನ್ನು ನಿರ್ಬಂಧಿಸಲಾಗಿದೆ.

ಕೊರೋನಾ ಭೀತಿ: ಚಿಕನ್ ಕೇಳೋರೆ ಇಲ್ಲ, 18000 ಕೋಳಿ ಜೀವಂತ ಸಮಾಧಿ

ರಾಷ್ಟ್ರಭಾಷಾ ಸಮಿತಿ ನಿಯೋಗ ಮಾ.17ರಂದು ಮಂಗಳೂರಿಗೆ ಆಗಮಿಸಬೇಕಿತ್ತು. ಕೊರೋನಾ ಭೀತಿ ಕಾರಣಕ್ಕೆ ಈ ಭೇಟಿಯನ್ನು ರದ್ದುಪಡಿಸಲಾಗಿದೆ. ಮಾತ್ರವಲ್ಲ ಹೊಸ ನೇಮಕಾತಿ ಹಾಗೂ ಸಂದರ್ಶನ ಪ್ರಕ್ರಿಯೆ ಕೂಡ ಸ್ಥಗಿತಗೊಳ್ಳುವಂತಾಗಿದೆ.

ಅನಗತ್ಯವಾಗಿ ಹೊರಗೆ ಪ್ರವಾಸ ಮಾಡದಂತೆ ಮೇಲಧಿಕಾರಿಗಳು ಸೂಚನೆ ನೀಡಿದ್ದಾರೆ. ಬಯೋ ಮೆಟ್ರಿಕ್‌ನ್ನು ಕೂಡ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ತುರ್ತು ಭೇಟಿ ಇದ್ದರೆ, ವಿಡಿಯೋ ಕಾನ್ಫರೆನ್ಸ್‌ಗೆ ಅವಕಾಶ ಕಲಿಸಲಾಗಿದೆ ಎಂದು ಆಕಾಶವಾಣಿ-ದೂರದರ್ಶನ ಉದ್ಯೋಗಿಗಳ ಸಂಘ ದಕ್ಷಿಣ ವಲಯ ಕಾರ್ಯದರ್ಶಿ ಚಂದ್ರಶೇಖರ್‌ ಶೆಟ್ಟಿ ಹೇಳಿದ್ದಾರೆ.