ಬೆಂಗಳೂರು(ಫೆ.01): ಪ್ರಾದೇಶಿಕ ಅಸಮತೋಲನ ಹೀಗೆ ಮುಂದುವರೆದರೆ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಬೇಕೆಂಬ ಹೋರಾಟ ಮಾಡಬೇಕಾಗುತ್ತದೆ ಎಂಬ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರ ಹೇಳಿಕೆ ಖಂಡನೀಯ ಎಂದು ಹಿರಿಯ ಸಾಹಿತಿ ಕಮಲಾ ಹಂಪನಾ ಹೇಳಿದ್ದಾರೆ.

ಭಾನುವಾರ ಕನ್ನಡ ಸಂಘರ್ಷ ಸಮಿತಿ ಕೆಂಪೇಗೌಡನಗರದ ಉದಯಭಾನು ಕಲಾಸಂಘದಲ್ಲಿ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಮತ್ತು ದ.ರಾ.ಬೇಂದ್ರೆ ಹುಟ್ಟುಹಬ್ಬ, ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಜ್ಯದಿಂದ ಎಲ್ಲ ಸೌಲಭ್ಯ ಪಡೆದು ರಾಜ್ಯವನ್ನು ಒಡೆಯುವ ಹೇಳಿಕೆ ನೀಡುವುದು ಸರಿಯಲ್ಲ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದರೆ ಮುಖ್ಯಮಂತ್ರಿ, ಸಚಿವ ಸ್ಥಾನ ಸಿಗುತ್ತದೆ ಎಂಬ ಸ್ವಾರ್ಥದಿಂದ ಈ ರೀತಿಯ ಹೇಳಿಕೆಗಳನ್ನು ಪ್ರಭಾಕರ ಕೋರೆ ನೀಡಿದ್ದಾರೆ. ಅವರಿಗೆ ನಾಡಿನ ಇತಿಹಾಸ ಗೊತ್ತಿಲ್ಲ. ಏಕೀಕರಣಕ್ಕಾಗಿ ಹೋರಾಡಿದ ಮಹನೀಯರ ತ್ಯಾಗ, ಬಲಿದಾನದ ಅರಿವಿಲ್ಲ. ಕನ್ನಡ ಸಾಹಿತ್ಯ ಸಮ್ಮೇಳನದಂತಹ ಮಹತ್ವದ ಕಾರ್ಯಕ್ರಮದ ಸರ್ವಾಧ್ಯಕ್ಷರಾಗಿ ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಯೋಗ್ಯತೆ ಇಲ್ಲದವರು ಮಾತ್ರ ಇಂತಹ ಕೀಳುಮಟ್ಟದ ಹೇಳಿಕೆಗಳನ್ನು ನೀಡುತ್ತಾರೆ ಎಂದು ಕಿಡಿಕಾರಿದರು.

ಹಿರಿಯ ಪತ್ರಕರ್ತ ರಾಮಣ್ಣ ಕೋಡಿಹೊಸಹಳ್ಳಿ ಮಾತನಾಡಿ, ಹಿಂದಿ ಹೇರಿಕೆ ಇದೇ ರೀತಿ ಮುಂದುವರೆದರೆ ದೇಶದ ಒಕ್ಕೂಟ ವ್ಯವಸ್ಥೆಯಿಂದ ಕರ್ನಾಟಕ ಪ್ರತ್ಯೇಕವಾಗಲು ಹೋರಾಡಬೇಕಾಗುತ್ತದೆ. ಕೇಂದ್ರ ಸರ್ಕಾರದ ಕಚೇರಿಗಳು ಕರ್ನಾಟಕದಲ್ಲೂ ಕನ್ನಡ ಬಳಸಬೇಕಿಲ್ಲ. ತ್ರಿಭಾಷಾ ಸೂತ್ರವನ್ನು ರಾಜ್ಯಗಳು ಪಾಲಿಸಿದರೆ ಸಾಕು ಎನ್ನುವ ಮೂಲಕ ಕೇಂದ್ರ ಸರ್ಕಾರ ಉದ್ಧಟತನದ ಹೇಳಿಕೆ ನೀಡಿದೆ. ಕೇಂದ್ರದ ಈ ಧೋರಣೆಯಿಂದ ಕನ್ನಡದ ಅಸ್ಮಿತೆಗೆ ಧಕ್ಕೆಯಾಗಲಿದ್ದು, ಖಂಡನೀಯ ಎಂದು ಹೇಳಿದರು.

'ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ : ಇದರಲ್ಲಿ ಅಚ್ಚರಿ ಇಲ್ಲ'

ಹಿರಿಯ ಸಂಶೋಧಕ ಹಂಪ ನಾಗರಾಜಯ್ಯ ಮಾತನಾಡಿ, ಕುವೆಂಪು ಮತ್ತು ಬೇಂದ್ರೆ ಹೊಸಗನ್ನಡ ಸಾಹಿತ್ಯದ ಸೂರ್ಯಚಂದ್ರರಿದ್ದಂತೆ. ಕನ್ನಡದ ಶ್ವಾಸಕೋಶ ಇದ್ದಂತೆ. ಅವರ ಸಾಹಿತ್ಯ ಯುವ ಸಾಹಿತಿಗಳಿಗೆ ಮಾರ್ಗದರ್ಶನೀಯ ಎಂದರು.

ಕನ್ನಡ ಸಂಘರ್ಷ ಸಮಿತಿ ಅಧ್ಯಕ್ಷ ಡಾ. ಕೋ.ವೆಂ.ರಾಮಕೃಷ್ಣೇಗೌಡ ಮಾತನಾಡಿ, ಕುವೆಂಪು ಮತ್ತು ಬೇಂದ್ರೆ ಕನ್ನಡವನ್ನು ಕಟ್ಟುವ ಕೆಲಸ ಮಾಡಿದರು. ಆದರೆ, ಈಗಿನವರು ಕನ್ನಡವನ್ನು ಕೆಡವುತ್ತಿದ್ದಾರೆ. ಪ್ರತ್ಯೇಕತೆಯನ್ನು ಉತ್ತೇಜಿಸುತ್ತಿರುವವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕನ್ನಡ ಸಂಘರ್ಷ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಪ್ರಕಾಶಮೂರ್ತಿ, ಕೋಶಾಧ್ಯಕ್ಷ ಎ.ಎಸ್‌.ನಾಗರಾಜಸ್ವಾಮಿ, ಉದಯಭಾನು ಕಲಾಸಂಘದ ಸಂಸ್ಥಾಪಕ ಕಾರ್ಯದರ್ಶಿ ಎಂ.ನರಸಿಂಹ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರಶಸ್ತಿ ಪ್ರದಾನ

ನಾಡೋಜ ಪ್ರೊ.ಎಂ.ಎಚ್‌.ಕೃಷ್ಣಯ್ಯ ಅವರಿಗೆ ಅನಿಕೇತನ ಪ್ರಶಸ್ತಿ, ಇಂದಿರಾ ಕೃಷ್ಣಪ್ಪ ಅವರಿಗೆ ನಂ.ನಂಜಪ್ಪ ಚಿರಂತನ ಪ್ರಶಸ್ತಿ ಹಾಗೂ ಶಿವರಾಜ್‌ ವತ್ತುಮುರುವಣಿ ಅವರಿಗೆ ಕುವೆಂಪು ಯುವಕವಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.