ರಾಜ್ಯದಲ್ಲಿ ಆಗಾಗ ಪ್ರತ್ಯೇಕ ಜಿಲ್ಲೆ ಮಾಡುವ ಬಗ್ಗೆ ಹಲವು ಪ್ರದೇಶಗಳಲ್ಲಿ ಕೇಳಿ ಬರುತ್ತಿದ್ದ ಮಾತುಗಳು ಇದೀಗ ರಾಜ್ಯವನ್ನು ಒಡೆಯುವ ಬಗ್ಗೆಯೂ ಕೇಳಿ ಬರುತ್ತಿದೆ. ಪ್ರತ್ಯೇಕ ರಾಜ್ಯದ ಬಗ್ಗೆ ಪ್ರಸ್ತಾಪ ಕೇಳಿ ಬಂದಿದೆ. 

ಕಾಗವಾಡ (ಜ.31): ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೂಗು ಸಮರ್ಥನೀಯ​ವ​ಲ್ಲ. ಆದಾಗ್ಯೂ ಪರಿಸ್ಥಿತಿಗಳು ಆ ಕೂಗಿಗೆ ಪೂರಕವಾಗಿ ಕಾಣುತ್ತಿವೆ. ಎಲ್ಲ ಕ್ಷೇತ್ರಗಳಲ್ಲೂ ಅನ್ಯಾಯವನ್ನು ಸಹಿಸಿಕೊಂಡು ಬಂದ ಉತ್ತರ ಕರ್ನಾಟಕದ ಜನ ಭವಿಷ್ಯದಲ್ಲಿ ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಇಟ್ಟರೆ ಆಶ್ಚರ್ಯವಿಲ್ಲ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಕಳವಳ ವ್ಯಕ್ತಪಡಿಸಿದರು. 

ಪಟ್ಟಣದಲ್ಲಿ ಶನಿವಾರ ಆರಂಭವಾದ 2 ದಿನಗಳ 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇ​ಳ​ನದ ಸರ್ವಾಧ್ಯಕ್ಷರಾಗಿ ಮಾತ​ನಾಡಿ, ಉತ್ತರ ಕರ್ನಾಟಕ ಪ್ರತ್ಯೇಕ ಕೂಗು ಸರಿಯಲ್ಲ. ಈ ಪರಿಸ್ಥಿತಿಗೆ ಪ್ರಾದೇಶಿಕ ಅಸಮತೋಲನ ಕಾರಣವಾಗಿದೆ. ಇದು ಹೋಗಬೇಕು. ಹಾಗಾಗಿ, ಕನ್ನಡಿಗರು ಭೌಗೋಳಿಕವಾಗಿ ಒಂದಾದರೆ ಸಾಲದು, ಭಾವನಾತ್ಮಕವಾಗಿ ಒಂದಾಗಬೇಕು. ನಮ್ಮ ಈ ಭಾಗದ ಜನಪ್ರತಿನಿಧಿಗಳು ಸದಾಕಾಲ ಹೋರಾಡುತ್ತಲೇ ಇರಬೇಕು ಎಂದು ಆಶಿಸಿದರು.

ಬೆಳಗಾವಿ ಟಿಕೆಟ್ ಫೈಟ್, ಇವರಿಗೆ ಸಿಗೋದು ಬಹಳ ಡೌಟ್..! ..

ಪ್ರಾದೇಶಿಕ ಅಸಮತೋಲನ ಎಲ್ಲ ಕ್ಷೇತ್ರಗಳಲ್ಲೂ ಎದ್ದು ಕಾಣುತ್ತಿದೆ. ಹಳೆ ಮೈಸೂರು ಭಾಗದಲ್ಲಿ ಬಂದಷ್ಟುನೀರಾವರಿ ಯೋಜನೆಗಳು ಉತ್ತರದಲ್ಲಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನುದಾನ ಬೆಂಗಳೂರಿನ ಕಲಾವಿದರು ಹಾಗೂ ಸಾಹಿತಿಗಳಿಗೇ ಮೀಸಲಿಟ್ಟಂತೆ ಹಂಚಿ ಹೋಗುತ್ತದೆ. ಪ್ರಶಸ್ತಿಗಳೂ ಹಾಗೇ ಆಗಿವೆ. ಅಕಾಡೆಮಿಗಳಲ್ಲಿ ಉತ್ತರ ಕರ್ನಾಟಕದವರಿಗೆ ಸ್ಥಾನಮಾನಗಳೆ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.