ಕೂಡ್ಲಿಗಿ(ಡಿ.25]: ಕರ್ನಾಟಕ ಲೋಕಸೇವಾ ಆಯೋಗವು ಸೋಮವಾರದಂದು ಕೆಎಎಸ್‌ ಪರೀಕ್ಷೆ ಪಲಿಂತಾಶ ಪ್ರಕಟಿಸಿದ್ದು, ತಾಲೂಕಿನ ಚಿಕ್ಕಜೋಗಿಹಳ್ಳಿ ಗ್ರಾಮದ ಯುವಕ ಡಾ. ಎನ್‌. ವೆಂಕಟೇಶ್‌ ನಾಯ್ಕ ರಾಜ್ಯ 35ನೇ ರ‌್ಯಾಂಕ್ ಪಡೆದು ಅಸಿಸ್ಟಂಟ್‌ ಕಮಿಷನರ್ ಅಗಿ ಆಯ್ಕೆಯಾಗಿದ್ದಾರೆ.

ತಾಲೂಕಿನ ಚಿಕ್ಕಜೋಗಿಹಳ್ಳಿ ಗ್ರಾಮದ ಪಶು ಆಸ್ಪತ್ರೆಯಲ್ಲಿ ಗುಮಾಸ್ತನಾಗಿ ಸೇವೆ ಸಲ್ಲಿಸುತ್ತಿರುವ ನಾಗರಾಜ್‌ ಎಂಬುವರ ಮಗನಾದ ಡಾ. ಎನ್‌. ವೆಂಕಟೇಶ್‌ ನಾಯ್ಕ ಈ ಸಾಧನೆ ಮಾಡಿದ ಯುವಕ ಗ್ರಾಮೀಣ ಭಾಗದ ಯುವಕರಿಗೆ ಸ್ಫೂರ್ತಿಯಾಗಿದ್ದಾನೆ. ಈ ಹಿಂದೆ ತಹಸೀಲ್ದಾರ್‌ ಅಗಿ ಮತ್ತು ಪಶು ವೈದ್ಯರಾಗಿ ಆಯ್ಕೆಯಾಗಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪಶು ಆಸ್ಪತ್ರೆಯಲ್ಲಿ ಗುಮಾಸ್ತನಾಗಿ ನಾಗರಾಜ್‌ಗೆ ನಾಲ್ವರು ಮಕ್ಕಳಿದ್ದು, ಈ ಪೈಕಿ ಹಿರಿಯ ಮಗ ಡಾ. ಎನ್‌. ವಸಂತನಾಯ್ಕ ಮಂಡ್ಯ ಮೆಡಿಕಲ್‌ ಕಾಲೇಜ್‌ ಅಸ್ಪತ್ರೆಯಲ್ಲಿ ವೈದ್ಯರಾಗಿದ್ದು ಇನ್ನೊಬ್ಬ ಮಗಳು ಸಹ ವೈದ್ಯರಾಗಿದ್ದಾರೆ. ಕಿರಿಯ ಪುತ್ರರಾಗಿರುವ ಡಾ. ವೆಂಕಟೇಶ್‌ ನಾಯ್ಕ ಈ ಬಾರಿ ಅಸಿಸ್ಟಂಟ್‌ ಕಮಿಷನರ್  ಅಯ್ಕೆಯಾಗಿದ್ದಾರೆ.

ಶಿಕ್ಷಣ ಮತ್ತು ಹುದ್ದೆ:

ಚಿಕ್ಕಜೋಗಿಹಳ್ಳಿಯ ಕೇಂದ್ರೀಯ ಜವಹಾರ್‌ ನವೋದಯ ಶಿಕ್ಷಣ ಪಡೆದು ನಂತರ ಬೀದರ್‌ ಪಶುವೈದ್ಯಕೀಯ ವಿಶ್ವವಿದ್ಯಾಲಯ ಬಿವಿಎಸ್‌ ಪದವಿ ಪಡೆದಿದ್ದಾರೆ. ಆರಂಭದಲ್ಲಿ ಪಶು ವೈದ್ಯರಾಗಿ ಮತ್ತು 2017ರಲ್ಲಿ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ತಹಸೀಲ್ದಾರ್‌ ಅಗಿ ಏಕಕಾಲಕ್ಕೆ ಆಯ್ಕೆಯಾದ ಕಾರಣ ತಹಸೀಲ್ದಾರರಾಗಿ ಸೇವೆಗೆ ಸೇರಿದರು. ಸದ್ಯ ಗದಗ ಜಿಲ್ಲೆಯ ಮುಂಡರಗಿ ತಾಲೂಕು ತಹಸೀಲ್ದಾರ ಅಗಿ ಸೇವೆ ಸಲ್ಲಿಸುತ್ತಾರೆ.

ಸಾಧನೆಗೆ ನನ್ನ ತಂದೆ ಸ್ಫೂರ್ತಿಯಾಗಿದ್ದಾರೆ. ಅಲ್ಲದೆ ಅರ್ಥಿಕ ಸಮಸ್ಯೆ ನಡುವೆಯು ನಾಲ್ವರು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿದ್ದಾರೆ. ಅಲ್ಲದೆ, ಉನ್ನತ ಹುದ್ದೆ ಪಡೆಯಲು ಕಠಿಣ ಪರಿಶ್ರಮದ ಅಧ್ಯಯನದ ಅಗತ್ಯವಿದೆ ಹಾಗೂ ನಿತ್ಯ ಪತ್ರಿಕೆಗಳ ಅಭ್ಯಾಸವು ಪರೀಕ್ಷೆಗೆ ಪೂರಕವಾಗಲಿವೆ ಎಂದು ಚಿಕ್ಕಜೋಗಿಹಳ್ಳಿ ತಹಸೀಲ್ದಾರ್‌ ಡಾ. ಎನ್‌. ವೆಂಕಟೇಶ್‌ನಾಯ್ಕ ಅವರು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಚಿಕ್ಕಜೋಗಿಹಳ್ಳಿಯ ಡಾ. ವೆಂಕಟೇಶ್‌ ನಾಯ್ಕ ಅವರ ತಂದೆ ನಾಗರಾಜ್‌ ಅವರು, ಮಗನ ಸಾಧನೆಯಿಂದ ಕುಟುಂಬದಲ್ಲಿ ಸಂತಸ ಮೂಡಿದೆ ಹಾಗೂ ಅವನು ನಿರಂತರವಾಗಿ ಓದುವ ಹವ್ಯಾಸ ಮುಂದುವರಿಸಿಕೊಂಡು ಬಂದಿದ್ದ ತಹಸೀಲ್ದಾರ ಅಗಿದ್ದರೂ ಅವನ ಸರಳತೆ ಮತ್ತು ಓದುವ ಗೀಳು ಕೈಬಿಟ್ಟಿರಲಿಲ್ಲ ಎಂದು ಹೇಳಿದ್ದಾರೆ.