Udupi: ಸುಮನಸಾದ ರಂಗಹಬ್ಬ ಉದ್ಘಾಟಿಸಿದ ಹಿರಿಯ ರಂಗಕರ್ಮಿ ಸಿ.ಬಸವಲಿಂಗಯ್ಯ

ರಂಗಭೂಮಿಯಲ್ಲಿ ರಾಜಕೀಯವನ್ನು ವಸ್ತುವಾಗಿ ಇಟ್ಟುಕೊಂಡು ನಾಟಕ ಮಾಡಬೇಕು. ಆದರೆ ರಾಜಕೀಯ ಮಾಡಬಾರದು. ರಂಗಾಯಣವೂ ಸೇರಿದಂತೆ ರಂಗಭೂಮಿಯಲ್ಲಿ ಕೆಲಸ ಮಾಡುವವರು ಪ್ರಭುತ್ವಕ್ಕೆ ಜೈಕಾರ ಹಾಕಿದರೆ ಕಲೆ ನಶಿಸುತ್ತದೆ ಎಂದು ಹಿರಿಯ ರಂಗಕರ್ಮಿ ಸಿ.ಬಸವಲಿಂಗಯ್ಯ ಹೇಳಿದರು.

Veteran Theater Worker C Basavalingaiah Inaugurated The Theater Festival In Sumanasa At Udupi gvd

ಉಡುಪಿ (ಫೆ.27): ರಂಗಭೂಮಿಯಲ್ಲಿ ರಾಜಕೀಯವನ್ನು ವಸ್ತುವಾಗಿ ಇಟ್ಟುಕೊಂಡು ನಾಟಕ ಮಾಡಬೇಕು. ಆದರೆ ರಾಜಕೀಯ ಮಾಡಬಾರದು. ರಂಗಾಯಣವೂ ಸೇರಿದಂತೆ ರಂಗಭೂಮಿಯಲ್ಲಿ ಕೆಲಸ ಮಾಡುವವರು ಪ್ರಭುತ್ವಕ್ಕೆ ಜೈಕಾರ ಹಾಕಿದರೆ ಕಲೆ ನಶಿಸುತ್ತದೆ ಎಂದು ಹಿರಿಯ ರಂಗಕರ್ಮಿ ಸಿ.ಬಸವಲಿಂಗಯ್ಯ ಹೇಳಿದರು. ಸಾಂಸ್ಕೃತಿಕ ಸಂಘಟನೆ ಸುಮನಸಾ ಅಜ್ಜರಕಾಡು ಬಯಲು ರಂಗಭೂಮಿಯಲ್ಲಿ ಹಮ್ಮಿಕೊಂಡಿರುವ ರಂಗಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಂಗಭೂಮಿ ವ್ಯವಸ್ಥೆಯ ಪ್ರತಿರೋಧ. ಅದನ್ನು ಬಿಟ್ಟು ಯಾರ ಬಗ್ಗೆಯೋ ಭಜನೆ ಮಾಡಲು ಹೊರಟರೆ ರಂಗಭೂಮಿ ಉಳಿಯುವುದಿಲ್ಲ. 

ನೀತಿ ಬೋಧನೆ, ಧರ್ಮಬೋಧನೆ ರಂಗಭೂಮಿಯ ಕೆಲಸವಲ್ಲ. ಆ ಕೆಲಸ ಮಾಡಲು ಬೇರೆಯವರು ಇದ್ದಾರೆ. ಮನಸ್ಸುಗಳನ್ನು ಅರಳಿಸುವ ಕೆಲಸವನ್ನು ರಂಗಭೂಮಿ ಮಾಡಬೇಕು. ಮನಸ್ಸನ್ನು ಕೆಡಿಸುವ ಕೆಲಸವನ್ನು ಮಾಡಬಾರದು ಎಂದು ಸಲಹೆ ನೀಡಿದರು. ಅದ್ಭುತ ನಾಟಕಗಳು ಹುಟ್ಟುವುದೇ ದುರಿತ ಕಾಲದಲ್ಲಿ. ಸಮಾಜವು ಸಂಕಷ್ಟದಲ್ಲಿ ಇದ್ದಾಗ ಉತ್ತಮ ನಾಟಕಗಳು ಹೊರಹೊಮ್ಮುತ್ತದೆ. ಸದ್ಯದ ಕಾಲ ನೋಡಿದಾಗ ಅಂಥ ನಾಟಕಗಳು ಬರುವ ಅವಶ್ಯಕತೆ ಇದೆ ಎಂದರು. ಭಾರತೀಯರಾದ ನಾವು ಎಂದು ನಮ್ಮ ಸಂವಿಧಾನದ ಪ್ರಸ್ತಾವನೆಯಲ್ಲಿದೆ. 

ಸುಳ್ಳಿನ ಸುಳಿಯಲ್ಲಿ ಸಿದ್ದರಾಮಯ್ಯ: ಸಿಎಂ ಬೊಮ್ಮಾಯಿ ಲೇವಡಿ

ಅದು ಬದಲಾಗಿ ಹಿಂದೂಗಳಾದ ನಾವು, ಮುಸ್ಲಿಮರಾದ ನಾವು, ಕ್ರಿಶ್ಚಿಯನ್ನರಾದ ನಾವು ಎಂದು ಆದರೆ ಸಂವಿಧಾನ ಎಕ್ಕುಟ್ಟಿ ಹೋಗುತ್ತದೆ. ನಾವು ಬಹುತ್ವದ ಭಾರತವನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದರು. ರಾಜಕೀಯದ ಬಗ್ಗೆ ಯಾರಿಗೆ ತಿಳಿದಿಲ್ಲವೋ ಅವರೇ ನಿಜವಾದ ಅನಕ್ಷರಸ್ತರು ಎಂದು ಚಿಂತಕರು ಹೇಳಿದ್ದಾರೆ. ಯಾಕೆಂದರೆ ನಮ್ಮ ನಿತ್ಯದ ಬದುಕಿನಲ್ಲಿ ಆಗುವ ಎಲ್ಲದಕ್ಕೂ ರಾಜಕೀಯ ನಿರ್ಧಾರಗಳು ಕಾರಣವಾಗಿರುತ್ತವೆ. ಇಂಥ ರಾಜಕೀಯ ಹೊಲಸೆದ್ದು ಹೋದಾಗ ಅದನ್ನು ಸಮಾಜಕ್ಕೆ ತೋರಿಸುವುದಲ್ಲದೇ ಯಾವ ದಾರಿಯಲ್ಲಿ ಹೋಗಬೇಕು ಎಂಬುದನ್ನು ರಂಗಭೂಮಿ ಮಾಡಬೇಕು ಎಂದು ಸಲಹೆ ನೀಡಿದರು. 

ರಂಗ ಸನ್ಮಾನ ಪಡೆದ ಕಲಾವಿದ ತೋನ್ಸೆ ವಿಜಯಕುಮಾರ್ ಮಾತನಾಡಿ, ನಾನು ಮುಂಬೈಗೆ ಹೋದಾಗ ಇಲ್ಲಿ ಕಲಿತಿದ್ದನ್ನು ಅಲ್ಲಿ ಪ್ರದರ್ಶಿಸಲು ಹೋದಾಗ ನನಗೆ ತಡೆಗಳು ಬಂದವು. ಇಲ್ಲಿಂದ ಹೋದವರು ಅಲ್ಲಿನ ಮರಾಠಿ, ಹಿಂದಿಯಲ್ಲಿ ಲೀನರಾಗಿದ್ದರು. ನಮ್ಮ ನಾಟಕಗಳಿಗೆ ಪ್ರೇಕ್ಷಕರಿರಲಿಲ್ಲ. ಪ್ರೇಕ್ಷಕರನ್ನು ಸೃಷ್ಟಿಸಿ ನಾಟಕ ಮಾಡಿದೆ ಎಂದು ನೆನಪು ಮಾಡಿಕೊಂಡರು. ಶಾಲೆಯ ಅಧ್ಯಾಪಕರು, ಯಕ್ಷಗಾನ ಗುರುಗಳು ಎಲ್ಲರೂ ಕಲಿಸಿದವರೇ. ಆದರೆ ನನ್ನಿಷ್ಟದ ರಂಗಭೂಮಿಯನ್ನು ಕಲಿಸಿದವರು ಆನಂದ ಗಾಣಿಗ, ರಾಘವೇಂದ್ರ ಭಟ್, ವೆಂಕಟಾಚಲ ಭಟ್ ಮುಂತಾದವರು. 

ಅವರಿಗೆ ಈ ಸನ್ಮಾನವನ್ನು ಸಮರ್ಪಿಸುತ್ತೇನೆ ಎಂದರು. ಮುಂಬೈಯಲ್ಲಿ ಇಲ್ಲಿನ ಜನರಿಗೆ ಗಟ್ಟಿತನದ ಭಾಷೆ ಇರಲಿಲ್ಲ. ಅಲ್ಲಿ ತುಳು, ಹಿಂದಿ ಯಾವುದೇ ಭಾಷಯಲ್ಲಿ ಒಂದು ವಾಕ್ಯ ಹೇಳಿದರೆ ಅದರಲ್ಲಿ ನಾಲ್ಕು ಭಾಷೆಗಳ ಮಿಶ್ರಣ ಇರುತ್ತಿದ್ದವು. ಅದನ್ನು ತಿದ್ದುವುದೇ ಕಷ್ಟದ ಕೆಲಸವಾಗಿತ್ತು. 60 ವರ್ಷಕ್ಕೆ 60 ಪಾತ್ರಗಳನ್ನು ಮಾಡಿದ್ದು ನಾನು ಏನು ಕಲಿತಿದ್ದೇನೆ ಎಂಬುದನ್ನು ತೋರಿಸುವುದಕ್ಕಾಗಿ ನಾನು ಸಾಂಸಾರಿಕ ನಾಟಕಗಳನ್ನು ಹೆಚ್ಚು ಮಾಡಿದ್ದು ಎಂದು ಹೇಳಿದರು. ಜಿಲ್ಲಾ ರಂಗಮಂದಿರಕ್ಕೆ 2012ರಲ್ಲಿ 50 ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗಿತ್ತು. 

ಸರ್ಕಾರ-ಜನರ ನಡುವೆ ಸೇತುವೆಯಾಗದ ಎಚ್‌ಡಿಕೆ: ಸಿ.ಪಿ.ಯೋಗೇಶ್ವರ್‌

ಆದರೆ ಭೂಮಿ ಸಿಕ್ಕಿರಲಿಲ್ಲ. ಐದು ವರ್ಷಗಳ ಹಿಂದೆ ಮತ್ತೆ ಅನುದಾನ ಬಂದಿತ್ತು. ಕೆಲವೇ ಸಮಯದಲ್ಲಿ ರಂಗಮಂದಿರ ನಿರ್ಮಾಣಗೊಳ್ಳಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಹೇಳಿದರು. ಉದ್ಯಮಿಗಳಾದ ಆನಂದ ಪಿ. ಸುವರ್ಣ, ಹರಿಯಪ್ಪ ಕೋಟ್ಯನ್, ದಿವಾಕರ ಸನಿಲ್, ಸುಮನಸಾ ಗೌರವಾಧ್ಯಕ್ಷ ಎಂ.ಎಸ್. ಭಟ್, ಸಂಚಾಲಕ ಭಾಸ್ಕರ ಪಾಲನ್ ಉಪಸ್ಥಿತರಿದ್ದರು. ಸುಮನಸಾ ಸಂಘಟನೆಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಸ್ವಾಗತಿಸಿದರು. ಕಾರ್ಯದರ್ಶಿ ಚಂದ್ರಕಾಂತ್ ಕುಂದರ್ ವಂದಿಸಿದರು. ನಾಗೇಶ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ನವೋದಯ ಮೈಸೂರು ತಂಡದಿಂದ ಅರಣ್ಯಕಾಂಡ ನಾಟಕ ಪ್ರದರ್ಶನಗೊಂಡಿತು.

Latest Videos
Follow Us:
Download App:
  • android
  • ios