ಹಿರಿಯ ಸಾಹಿತಿ ಪತ್ರಕರ್ತ ನಾ.ಸು. ಭರತನಹಳ್ಳಿ ಇನ್ನಿಲ್ಲ
ವಿವಿಧ ಕ್ಷೇತ್ರಗಳಲ್ಲಿ ಕ್ರಿಯಾಶೀಲರಾಗಿದ್ದ ಅನುಭವಿ| 30ಕ್ಕೂ ಹೆಚ್ಚು ಕೃತಿ ರಚನೆ, ಹಿಂದಿ, ಸಂಸ್ಕೃತದಲ್ಲೂ ಪ್ರಭುತ್ವ| ಯಲ್ಲಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ 25 ವರ್ಷಗಳ ಕಾಲ ಅಧ್ಯಕ್ಷರಾಗಿ, ಸಾಹಿತ್ಯ ಪರಿಚಾರಿಕೆಯಲ್ಲಿ ತೊಡಗಿಸಿಕೊಂಡಿದ್ದ ಭರತನಹಳ್ಳಿ|
ಯಲ್ಲಾಪುರ(ಡಿ.26): ನಾಡಿನ ಹಿರಿಯ ಸಾಹಿತಿ, ಪತ್ರಕರ್ತ, ಬಹುಮುಖ ಪ್ರತಿಭೆ ಹೊಂದಿದ್ದ ನಾ.ಸು. ಭರತನಹಳ್ಳಿ (84) ಶುಕ್ರವಾರ ನಿಧನರಾಗಿದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ನಾ.ಸು. ಭರತನಹಳ್ಳಿ ಅವರನ್ನು ಶಿರಸಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ನಿಧನರಾಗಿದ್ದಾರೆ. ಅವರಿಗೆ ಸೊಸೆ, ಮೂವರು ಪುತ್ರಿಯರು, ಮೊಮ್ಮಕ್ಕಳು ಇದ್ದಾರೆ.
ಮಗನನ್ನು ಕಳೆದುಕೊಂಡು ಹಿರಿಯ ವಯಸ್ಸಿನಲ್ಲಿ ತೀರಾ ಕಷ್ಟ ಅನುಭವಿಸಿದ್ದರು. ಕಳೆದ ವರ್ಷವಷ್ಟೇ ಪತ್ನಿ ನಿಧನ ಹೊಂದಿದ್ದರು. ಆದರೂ ಧೃತಿಗೆಡದೇ ವಿವಿಧ ಕ್ಷೇತ್ರಗಳಲ್ಲಿ ಕಾರ್ಯೋನ್ಮುಖರಾಗಿದ್ದರು. ನಾ.ಸು. ಕೇವಲ ಲೇಖಕ ಮಾತ್ರವಲ್ಲ. ಕೃಷಿಕ, ಸಂಘಟಕ, ರಂಗಕರ್ಮಿ, ಪತ್ರಕರ್ತ, ಪ್ರಕಾಶಕ, ಶಿಕ್ಷಕ ಎಲ್ಲವೂ ಹೌದು. 1954ರಿಂದ ಬರೆಯಲು ಪ್ರಾರಂಭಿಸಿದ ಅವರು ಕೊನೆಯವರೆಗೂ ಬರವಣಿಗೆ ನಿಲ್ಲಿಸಿರಲಿಲ್ಲ. ‘ಬಯಲು ಬೆತ್ತಲೆ’ ಕಥಾ ಸಂಕಲನ, ‘ಭೂಮಿಕೆ’, ‘ಪರಿವೃತ’ ಕಾದಂಬರಿಗಳು, ‘ಅವಾಂತರ’ ನಾಟಕ, ಆಕಾಶ ಹರಿದು ಬೀಳುತ್ತದೆ, ಪಂಜರದಲ್ಲಿ ಹುಲಿ, ರೊಬೊಟೊ ಮತ್ತು ಇತರ ಚಿಹ್ನೆಗಳು-ಮಕ್ಕಳ ನಾಟಕಗಳು, ತಾಲಿಬಾನ್ ಅಪಘಾನ್ ಮತ್ತು ನಾನು-ಅನುವಾದ ಕೃತಿ, ಪೂರ್ವ ತಟದಿ ಪುಟ್ಟವಿಶ್ವ-ಪ್ರವಾಸಿ ಕಥೆ, ಗೌರೀಶ ಕಾಯ್ಕಿಣಿ ಬದುಕು ಬರಹ-ಸಾಹಿತ್ಯ ಪರಿಷತ್ತು ಪ್ರಕಟಣೆ, ಪರಂಪರೆ-ಅಂಕಣ ಬರಹ ಸೇರಿದಂತೆ 30ಕ್ಕೂ ಹೆಚ್ಚು ಕೃತಿಗಳನ್ನು ಹೊರತಂದ ಅವರು, ಹಲವು ಶ್ರೇಷ್ಠ ಹಿಂದಿ ಗ್ರಂಥಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದರು.
ಕಳೆದ ಎರಡು ದಶಕಗಳ ಹಿಂದೆ ರಾಜ್ಯದಲ್ಲೇ ಮೊದಲ ಬಾರಿಗೆ ತಾಲೂಕು ಕೇಂದ್ರವೊಂದರಲ್ಲಿ ಕನ್ನಡ ಸಾಹಿತ್ಯ ಭವನವನ್ನು ಕಟ್ಟಿನಿಲ್ಲಿಸಿದ ಹೆಗ್ಗಳಿಕೆ ಇವರದ್ದು. ಪ್ರಥಮ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ, ಉತ್ತರ ಕನ್ನಡದ ಘಟ್ಟದ ಮೇಲಿನ ತಾಲೂಕಿನ ಭಾಗಕ್ಕೆ ಕರ್ನಾಟಕ ಶ್ರೀ ಪ್ರಶಸ್ತಿ ಪಡೆದವರು.
ಖ್ಯಾತ ಯಕ್ಷಗಾನ ಕಲಾವಿದ ತಿಮ್ಮಣ್ಣ ಯಾಜಿ ಇನ್ನಿಲ್ಲ
ಇವರು 1961ರಿಂದ ಪತ್ರಿಕಾ ಬರಹ, ಸಾಹಿತ್ಯ ರಚನೆ ಪ್ರಾರಂಭಿಸಿ, ‘ಶಿರಸಿ ಸಮಾಚಾರ’ ಪತ್ರಿಕೆಯ ಮೂಲಕ ಬರವಣಿಗೆ ಆರಂಭಿಸಿ, ಜನತಾ ಪತ್ರಿಕೆ, ಶೃಂಗಾರ ಪತ್ರಿಕೆ ಆ ಕಾಲದ ಪತ್ರಿಕೆಗಳಲ್ಲಿ ಬಿಡಿಲೇಖನ, ನುಡಿಚಿತ್ರ, ವ್ಯಕ್ತಿಚಿತ್ರ ಬರೆಯುತ್ತ ತಮ್ಮ ಸಾಹಿತ್ಯಾಸಕ್ತಿಯನ್ನು ಬೆಳೆಸಿಕೊಳ್ಳುತ್ತ ತನ್ನ ಊರಿನಲ್ಲೇ ನಾಟಕ, ನಿರ್ದೇಶನ, ನಟನೆ ಅಲ್ಲದೇ, ಸಹಕಾರಿ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡು ಮುನ್ನಡೆಯುತ್ತ 1978ರಿಂದ 1990ರ ವರೆಗೆ ಮುನ್ನಡೆ ಪತ್ರಿಕೆಯ ಪ್ರಧಾನ ಸಂಪಾದಕರಾಗಿ, 1998ರಿಂದ 21 ವರ್ಷಗಳ ಕಾಲ ಸ್ವರ್ಣವಲ್ಲೀ ಪ್ರಭಾದ ಪ್ರಧಾನ ಸಂಪಾದಕರಾಗಿ ಮುನ್ನಡೆದಿದ್ದರು. ಪ್ರಸ್ತುತ ‘ಸ್ವರ್ಣವಲ್ಲಿ ಪ್ರಭಾ’ದ ಗೌರವ ಸಂಪಾದಕರಾಗಿ ಮುಂದುವರಿದಿದ್ದರು. ಪ್ರಜಾವಾಣಿ ಪತ್ರಿಕೆಯ ತಾಲೂಕು ವರದಿಗಾರರಾಗಿಯೂ, ಆಕಾಶವಾಣಿ ಧಾರವಾಡ ಜಿಲ್ಲಾ ಮಾಹಿತಿ ಸಂಗ್ರಹಕಾರರಾಗಿಯೂ, ಜಿಲ್ಲಾ, ರಾಜ್ಯದ ಪತ್ರಿಕಾ ಸಂಘಗಳ ವಿವಿಧ ಹುದ್ದೆಗಳಲ್ಲಿ ಅನೇಕ ವರ್ಷಗಳ ಕಾಲ ಸದಸ್ಯರಾಗಿದ್ದರು.
70ನೇ ವರ್ಷದಲ್ಲಿ ಅವರಿಗೆ ಸನ್ಮತಿ ಎನ್ನುವ ಅಭಿನಂದನಾ ಗ್ರಂಥ ಅರ್ಪಿಸಲ್ಪಟ್ಟಿದೆ. ಪೊ›. ಟಿ.ಜಿ. ಭಟ್ ಹಾಸಣಗಿ ಅವರು ನಾ.ಸು. ಬಗ್ಗೆ ‘ಅವ್ಯಾಜ್ಯ ಪ್ರೀತಿ’ ಎಂಬ ಕೃತಿ ಬರೆದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದ 14ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ, ಯಲ್ಲಾಪುರ ತಾಲೂಕು ಪ್ರಥಮ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷ ಗೌರವ ಅವರಿಗೆ ಸಂದಿವೆ. ಯಲ್ಲಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ 25 ವರ್ಷಗಳ ಕಾಲ ಅಧ್ಯಕ್ಷರಾಗಿ, ಸಾಹಿತ್ಯ ಪರಿಚಾರಿಕೆಯಲ್ಲಿ ತೊಡಗಿಸಿಕೊಂಡಿದ್ದರು.
ನಾ.ಸು. ಅವರಿಗೆ ಕೆ. ಶ್ಯಾಮರಾವ್ ದತ್ತಿ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಕರ್ನಾಟಕಶ್ರೀ ಪ್ರಶಸ್ತಿ, ಕಾಸರಗೋಡಿನ ಕಯ್ಯಾರ ಕಿಂಞ್ಞಣ್ಣ ರೈ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಗ್ರಂಥ ಪ್ರಶಸ್ತಿ, ಮುಂಬೈಯ ಸೂರಿ ವೆಂಕಟರಮಣ ಶಾಸ್ತ್ರಿ ಪ್ರಶಸ್ತಿ, ಶಿರಸಿಯ ಉಪಾಯನ ಪ್ರಶಸ್ತಿ, ಸ್ವರ್ಣವಲ್ಲೀ ಮಠದ ಸಾಹಿತ್ಯ ರತ್ನಾಕರ, ಸಾಹಿತ್ಯ ಅಕಾಡೆಮಿ ಸುವರ್ಣ ಗೌರವ ಸೇರಿದಂತೆ ವಿವಿಧ ಪ್ರಶಸ್ತಿಗಳು ಸಂದಿವೆ. ನೂರಾರು ಸಂಘಟನೆಗಳು ಅವರನ್ನು ಗುರುತಿಸಿ, ಗೌರವಿಸಿವೆ. ಅಲ್ಲದೆ ಕನ್ನಡದ ಜತೆ ಹಿಂದಿ, ಆಂಗ್ಲ, ಭಾಷೆಯಲ್ಲೂ ಅಧ್ಯಯನಶೀಲತೆ ಹೊಂದಿದ ಇವರು ಸಂಸ್ಕೃತವನ್ನು ತಿಳಿದುಕೊಂಡವರಾಗಿದ್ದರು.
ಸಂತಾಪ:
ನಾ.ಸು. ಭರತನಹಳ್ಳಿ ನಿಧನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ವೇಣುಗೋಪಾಲ ಮದ್ಗುಣಿ, ಶ್ರೀ ಶಾರದಾಂಬಾ ದೇವಸ್ಥಾನದ ಅಧ್ಯಕ್ಷ ಡಿ. ಶಂಕರ ಭಟ್ಟ, ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ಜಿಲ್ಲಾ ಉಪಾಧ್ಯಕ್ಷ ಶಂಕರ ಭಟ್ಟತಾರೀಮಕ್ಕಿ, ಹಿರಿಯ ಸಾಹಿತಿಗಳಾದ ವನರಾಗ ಶರ್ಮಾ, ಪ.ಗ. ಭಟ್ಟಗುಡ್ಡೆ, ಅಡಕೆ ವ್ಯವಹಾರಸ್ಥರ ಸಂಘದ ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ಕವಯತ್ರಿ ಮುಕ್ತಾ ಶಂಕರ, ಮಾಜಿ ಅಧ್ಯಕ್ಷ ಶ್ರೀರಂಗ ಕಟ್ಟಿ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನರಸಿಂಹ ಸಾತೊಡ್ಡಿ, ಮಾಜಿ ಅಧ್ಯಕ್ಷ ನಾಗರಾಜ ಮದ್ಗುಣಿ ಕಂಬನಿ ಮಿಡಿದಿದ್ದಾರೆ.