ಹೊನ್ನಾವರ(ಡಿ.23): ಯಕ್ಷಗಾನ ಕಲಾಕ್ಷೇತ್ರದಲ್ಲಿ ಹಿರಿಯ ತಲೆಮಾರುಗಳಲ್ಲಿ ಒಬ್ಬರಾದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಣ್ಣಿಗೆಯ ತಿಮ್ಮಣ್ಣ ಯಾಜಿ (94) ಮಂಗಳವಾರ ಸಂಜೆ ತಮ್ಮ ಮನೆಯಲ್ಲಿ ವಿಧಿವಶರಾಗಿದ್ದಾರೆ.

ಮಣ್ಣಿಗೆ ತಿಮ್ಮಣ್ಣ ಯಾಜಿ ಎಂದೇ ಪ್ರಸಿದ್ಧರಾಗಿದ್ದ ಇವರು, ಯಕ್ಷಗಾನಗಳ ಪ್ರಮುಖ ನಾಯಕ, ಪ್ರತಿನಾಯಕ ಪಾತ್ರವಹಿಸಿದ್ದಲ್ಲದೇ, ಪೋಷಕ ಪಾತ್ರಗಳ ನಿರ್ವಹಣೆಯಲ್ಲೂ ತಮ್ಮ ಕಲಾವಂತಿಕೆಯ ಪಾರಮ್ಯ ಮೆರೆದು, ಅಪಾರ ಅಭಿಮಾನಿಗಳನ್ನು ಗಳಿಸಿದ್ದರು.

ಅಪಘಾತದಲ್ಲಿ ಗಾಯಗೊಂಡು ಮಂಗನ ನರಳಾಟ: ಕೋತಿಗೆ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ ಪೊಲೀಸ್‌

ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ಮೇಳದೊಂದಿಗೆ ಸುದೀರ್ಘಕಾಲ ಕಲಾವಿದರಾಗಿ ಗುರುತಿಸಿಕೊಂಡಿದ್ದಲ್ಲದೇ, ಶಿವರಾಮ ಹೆಗಡೆ ಕೆರೆಮನೆಯವರ ಆಪ್ತರಾಗಿದ್ದರು. ಶಂಭು ಹೆಗಡೆ ಕೆರೆಮನೆ ಹಾಗೂ ಶಿವಾನಂದ ಹೆಗಡೆ ಕೆರೆಮನೆ ಈ ಮೂರು ತಲೆಮಾರುಗಳ ಜತೆ ಕಲಾವಿದರಾಗಿ ಒಡನಾಡಿದ ಹೆಗ್ಗಳಿಕೆ ತಿಮ್ಮಣ್ಣ ಯಾಜಿ ಅವರದ್ದಾಗಿದೆ. ಯಕ್ಷಗಾನ ಅಕಾಡಮಿ ಪ್ರಶಸ್ತಿ, ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ ಸೇರಿದಂತೆ ನೂರಾರು ಪುರಸ್ಕಾರಗಳು ಇವರ ಕಲಾವಂತಿಕೆಯ ಹೆಗ್ಗುರುತಾಗಿ ಇವರಿಗೆ ಸಂದಿವೆ.

ಗುಂಡಬಾಳ ಮೇಳದಲ್ಲೂ ಪಾತ್ರ ನಿರ್ವಹಿಸಿರುವ ಜತೆ ಕೆಲವು ವರ್ಷ ಮೇಳವನ್ನು ಮುನ್ನಡೆಸಿದ್ದ ಇವರು ದೆಹಲಿಯವರೆಗೂ ಮೇಳದೊಂದಿಗೆ ತೆರಳಿ ಯಕ್ಷಗಾನ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದರು. ವಯೋಸಹಜ ಕಾರಣದಿಂದ ಕೆಲಕಾಲ ಪಾತ್ರ ನಿರ್ವಹಣೆಯಿಂದ ದೂರವೇ ಉಳಿದಿದ್ದ ಸಹೃದಯಿ ಕಲಾವಿದ ತಿಮ್ಮಣ್ಣ ಯಾಜಿ ಅವರು ತಮ್ಮ ಮನೆಯಲ್ಲಿ ವಿಧಿವಶರಾಗಿದ್ದು, ಮಕ್ಕಳು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಹಿರಿಯ ತಲೆಮಾರಿನ ಕಲಾವಿದರಾದ ಇವರ ನಿಧನಕ್ಕೆ ಕೆರೆಮನೆ ಶಿವಾನಂದ ಹೆಗಡೆ ಸೇರಿದಂತೆ ಹಿರಿಕಿರಿಯ ಕಲಾವಿದರು, ಅಭಿಮಾನಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.