ಹಿರಿಯ ಇತಿಹಾಸ ತಜ್ಞ ಹಾಗೂ ಲಕ್ಕುಂಡಿ ಉತ್ಖನನ ನಿರ್ದೇಶಕ ಟಿ.ಎನ್. ಕೇಶವ್ (74) ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಹಂಪಿ, ಅಜಂತಾ-ಎಲ್ಲೋರಾದಲ್ಲಿ ಮಹತ್ವದ ಸೇವೆ ಸಲ್ಲಿಸಿದ್ದ ಅವರ ಅಗಲಿಕೆಗೆ ಲಕ್ಕುಂಡಿ ಉತ್ಖನನ ಸ್ಥಳದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಗದಗ: ಗದಗ ತಾಲೂಕಿನ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಪುರಾತತ್ವ ಉತ್ಖನನ ಕಾರ್ಯದ ನಿರ್ದೇಶಕರಾಗಿದ್ದ ಹಿರಿಯ ಇತಿಹಾಸ ತಜ್ಞ ಹಾಗೂ ಪುರಾತತ್ವ ಇಲಾಖೆಯ ನಿವೃತ್ತ ಅಧೀಕ್ಷಕ ಟಿ.ಎನ್. ಕೇಶವ್ (74) ಅವರ ನಿಧನವು ಪುರಾತತ್ವ ಮತ್ತು ಇತಿಹಾಸ ವಲಯಕ್ಕೆ ಅಪಾರ ನಷ್ಟವನ್ನುಂಟುಮಾಡಿದೆ. ಅವರ ನಿಧನದ ಹಿನ್ನೆಲೆ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನ ಸ್ಥಳದಲ್ಲಿಯೇ ಶ್ರದ್ಧಾಂಜಲಿ ಮತ್ತು ಸಂತಾಪ ಸಭೆ ಆಯೋಜಿಸಲಾಯಿತು.
ಉತ್ಖನನ ನಡೆಯುತ್ತಿರುವ ಸ್ಥಳದಲ್ಲಿ ಟಿ.ಎನ್. ಕೇಶವ್ ಅವರ ಭಾವಚಿತ್ರವನ್ನು ಪ್ರತಿಷ್ಠಾಪಿಸಿ, ಪುರಾತತ್ವ ಇಲಾಖೆ ನಿರ್ದೇಶಕ ಡಾ. ಆರ್. ಶೇಜೇಶ್ವರ ಅವರ ನೇತೃತ್ವದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ವೇಳೆ ಉತ್ಖನನ ಕಾರ್ಮಿಕರು, ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ, ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಿದ್ದು ಪಾಟೀಲ್ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡರು. ಅಗಲಿದ ಹಿರಿಯ ಇತಿಹಾಸ ತಜ್ಞನಿಗೆ ಮೌನಾಚರಣೆ ಮೂಲಕ ಗೌರವ ಸಲ್ಲಿಸಲಾಯಿತು.
ಪುರಾತತ್ವ ವಲಯಕ್ಕೆ ಅಪಾರ ನಷ್ಟ
ಈ ಸಂದರ್ಭದಲ್ಲಿ ಮಾತನಾಡಿದ ಪುರಾತತ್ವ ಇಲಾಖೆ ನಿರ್ದೇಶಕ ಡಾ. ಆರ್. ಶೇಜೇಶ್ವರ ಅವರು, “ಟಿ.ಎನ್. ಕೇಶವ್ ಅವರು ಪುರಾತತ್ವ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದ ಅಪೂರ್ವ ತಜ್ಞರು. ಅವರ ಮಾರ್ಗದರ್ಶನ ಮತ್ತು ಸೇವೆಗಳು ಇಲಾಖೆಗೆ ಅಮೂಲ್ಯವಾಗಿವೆ. ಅವರ ಅಗಲಿಕೆ ನಮ್ಮೆಲ್ಲರಿಗೂ ತುಂಬಲಾರದ ನಷ್ಟ” ಎಂದು ಸಂತಾಪ ವ್ಯಕ್ತಪಡಿಸಿದರು.
ನಿವೃತ್ತಿಯಾಗಿದ್ದರೂ ಕೂಡ ಪುರಾತತ್ವ ಕ್ಷೇತ್ರದ ಮೇಲೆ ಅಪಾರ ಆಸಕ್ತಿ ಹೊಂದಿದ್ದ ಟಿ.ಎನ್. ಕೇಶವ್ ಅವರು, ಅಜಂತಾ ಮತ್ತು ಎಲ್ಲೋರಾದ ಪುರಾತತ್ವ ಅವಶೇಷಗಳ ಸಂರಕ್ಷಣೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಹಂಪಿಯಲ್ಲಿ ಸುಮಾರು 20 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಅವರು, ವಿಠ್ಠಲ ದೇವಸ್ಥಾನ ಸೇರಿದಂತೆ ಹಲವು ಪ್ರಮುಖ ಸ್ಥಳಗಳಲ್ಲಿ ಉತ್ಖನನ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸಿದ್ದರು.
ಹಂಪಿ ಮತ್ತು ಇತಿಹಾಸ ಅಧ್ಯಯನದಲ್ಲಿ ಮಹತ್ವದ ಕೊಡುಗೆ
ಹಂಪಿ ಹಾಳಾಗಿರುವ ಕುರಿತು ವಿಶದವಾದ ಅಧ್ಯಯನ ವರದಿ ನೀಡಿದ್ದ ಕೇಶವ್ ಅವರು, ರವಿವರ್ಮ ಶಾಸನದಲ್ಲಿ ಉಲ್ಲೇಖಿತವಾಗಿರುವ ಹೊಂಡವನ್ನು ಉತ್ಖನನದ ಮೂಲಕ ಪತ್ತೆಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪುರಾತತ್ವ ಇಲಾಖೆಗೆ ಸಂಬಂಧಿಸಿದಂತೆ ಮ್ಯೂಸಿಯಂ ಸ್ಥಾಪನೆ ಹಾಗೂ ಅಭಿವೃದ್ಧಿಯಲ್ಲಿ ಅವರು ಸಿದ್ಧಹಸ್ತರಾಗಿದ್ದರು ಎಂಬುದು ಸಹೋದ್ಯೋಗಿಗಳ ಅಭಿಪ್ರಾಯವಾಗಿದೆ.
ಲಕ್ಕುಂಡಿ ಉತ್ಖನನಕ್ಕೆ ಮಾರ್ಗದರ್ಶನ
ಟಿ.ಎನ್. ಕೇಶವ್ ಅವರನ್ನು ಲಕ್ಕುಂಡಿಯ ಉತ್ಖನನ ನಿರ್ದೇಶಕರಾಗಿ ಆಯ್ಕೆ ಮಾಡಲಾಗಿತ್ತು. 2025ರ ಜೂನ್ ತಿಂಗಳಲ್ಲಿ ಉತ್ಖನನ ಕಾರ್ಯಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ ಅವರು ಸ್ಥಳದಲ್ಲೇ ಹಾಜರಿದ್ದು, ಆರಂಭಿಕ ಹಂತದಲ್ಲಿ ಅಗತ್ಯವಾದ ಸಲಹೆ ಮತ್ತು ಮಾರ್ಗದರ್ಶನ ನೀಡಿದ್ದರು. ನಂತರ ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಅನಾರೋಗ್ಯದಿಂದ ನಿಧನ
ಹಲವು ದಿನಗಳಿಂದ ಕರುಳು ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಟಿ.ಎನ್. ಕೇಶವ್ ಅವರು, ಇಂದು ಬೆಂಗಳೂರಿನ ತಮ್ಮ ಸ್ವಗೃಹದಲ್ಲಿ ತೀವ್ರ ಅನಾರೋಗ್ಯದಿಂದ ಕೊನೆ ಉಸಿರೆಳೆದಿದ್ದರು. ಅವರ ನಿಧನವು ಪುರಾತತ್ವ, ಇತಿಹಾಸ ಸಂಶೋಧನೆ ಮತ್ತು ಸಾಂಸ್ಕೃತಿಕ ಪರಂಪರೆ ಸಂರಕ್ಷಣೆಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದ್ದು, ಲಕ್ಕುಂಡಿ ಉತ್ಖನನ ಕಾರ್ಯದಲ್ಲಿದ್ದ ಎಲ್ಲರಲ್ಲೂ ತೀವ್ರ ದುಃಖ ಮೂಡಿಸಿದೆ.


