Koppala: ಪ್ರಾಮಾಣಿಕನೆಂದು ಹೇಳಿಕೊಳ್ಳುವ ಸಚಿವರ ಕ್ಷೇತ್ರದಲ್ಲಿ ಅತ್ಯಂತ ಕಳಪೆ ರಸ್ತೆ ಕಾಮಗಾರಿ
ಹಿಂದುಳಿದ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಕುದರಿಮೋತಿ ಗ್ರಾಮದಲ್ಲಿ ಇದೀಗ ಡಾಂಬಾರ್ ರಸ್ತೆ ಕಳಪೆ ಆಗಿರುವ ಆರೋಪಗಳು ಕೇಳಿಬಂದಿವೆ. ಕುದರಿಮೋತಿ ಗ್ರಾಮದಿಂದ ಚಂಡಿನಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಳಪೆ ಆಗಿದೆ. ಈ ಕ್ಷೇತ್ರದ ಶಾಸಕ ಹಾಲಪ್ಪ ಆಚಾರ್ ವಿರುದ್ಧ ಈಗ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ: ದೊಡ್ಡೇಶ್ ಯಲಿಗಾರ್ ಏಶಿಯಾನೆಟ್ ಸುವರ್ಣ ನ್ಯೂಸ್
ಕೊಪ್ಪಳ (ನ.24): ಆ ಸಚಿವರು ಮಾತೆತ್ತಿದರೆ ಸಾಕು ನಾನು ಪ್ರಾಮಾಣಿಕ, ನನ್ನ ಕ್ಷೇತ್ರದ ಯಾವುದೇ ಕಾಮಗಾರಿಯಲ್ಲಿ ಕಳಪೆ ಎನ್ನುವ ಮಾತೇ ಇಲ್ಲ ಎಂದು ಬೊಬ್ಬೆ ಹೊಡೆಯುತ್ತಾನೆ. ಆದರೆ ಇದೀಗ ಆತನದ್ದೇ ಸ್ವಕ್ಷೇತ್ರದಲ್ಲಿ ಇದೀಗ ರಸ್ತೆ ಕಾಮಗಾರಿ ಕಳಪೆಯಾಗಿದೆ. ಕೈಯಿಂದ ಅಗೆದರೆ ಸಾಕು ಡಾಂಬಾರ್ ಕಿತ್ತು ಬರುತ್ತಿದೆ. ಕೊಪ್ಪಳ ಜಿಲ್ಲೆ ಅಂದರೆ ಬಹುತೇಕರಿಗೆ ನೆನಪು ಬರುವುದು ಅತ್ಯಂತ ಹಿಂದುಳಿದ ಜಿಲ್ಲೆಯೆಂದು. ಈ ಜಿಲ್ಲೆಯ ಅಭಿವೃದ್ಧಿಗೆ ನೂರಾರು ಕೋಟಿ ರೂಪಾಯಿ ಅನುದಾನ ಬಂದರೂ ಸಹ ಇನ್ನೂ ಸಹ ಇಲ್ಲಿ ಅಭಿವೃದ್ಧಿ ಎನ್ನುವುದು ಮರಿಚಿಕೆ ಆಗಿದೆ. ಇಂತಹ ಹಿಂದುಳಿದ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಕುದರಿಮೋತಿ ಗ್ರಾಮದಲ್ಲಿ ಇದೀಗ ಡಾಂಬಾರ್ ರಸ್ತೆ ಕಳಪೆ ಆಗಿರುವ ಆರೋಪಗಳು ಕೇಳಿಬಂದಿವೆ. ಕುದರಿಮೋತಿ ಗ್ರಾಮದಿಂದ ಚಂಡಿನಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಳಪೆ ಆಗಿದೆ ಎನ್ನಲಾಗಿದೆ.
ಸಚಿವ ಹಾಲಪ್ಪ ಆಚಾರ್ ವಿರುದ್ಧ ಆಕ್ರೋಶ:
ಇನ್ನು ಕುದರಿಮೋತಿ ಯಲಬುರ್ಗಾ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಗ್ರಾಮವಾಗಿದೆ. ಈ ಕ್ಷೇತ್ರದ ಶಾಸಕ ಹಾಗೂ ಗಣಿ ಮತ್ತು ಭೂ ವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವ ಹಾಲಪ್ಪ ಆಚಾರ್ ಪ್ರತಿಯೊಂದು ಕಾರ್ಯಕ್ರಮದಲ್ಲಿ ನಾನು ಯಾವುದೇ ಭ್ರಷ್ಟಾಚಾರ ಮಾಡುವುದಿಲ್ಲ, ನಾನು ಕಳಪೆ ಕಾಮಗಾರಿಯನ್ನು ಎಂದಿಗೂ ಸಹಿಸುವುದಿಲ್ಲ ಎಂದು ಹೇಳ್ತಾರೆ. ಆದರೆ ಇದೀಗ ಸ್ವತಃ ಸಚಿವ ಹಾಲಪ್ಪ ಆಚಾರ್ ಸ್ವಕ್ಷೇತ್ರದಲ್ಲಿಯೇ ಇದೀಗ ಕಳಪೆ ಕಾಮಗಾರಿ ನಡೆದಿದೆ.ಇದರಿಂದಾಗಿ ಸಹಜವಾಗಿಯೇ ಸಚಿವ ಹಾಲಪ್ಪ ಆಚಾರ್ ವಿರುದ್ಧ ಕುದರಿಮೋತಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳಪೆ ರಸ್ತೆ ವರದಿ ಕೇಳಿದ ಪಿಎಂ ಕಚೇರಿ: ಕ್ಯಾರೆ ಎನ್ನದ ಪಾಲಿಕೆ!
ಸಚಿವ ಆಚಾರ್ ಸಂಬಂಧಿಕರಿಂದ ಕಳಪೆ ಕಾಮಗಾರಿ ಜೊತೆಗೆ ಧಮಕಿ:
ಇನ್ನು ಈ ಕಳಪೆ ರಸ್ತೆಯನ್ನು ಮಾಡಿದ್ದು ಸ್ವತಃ ಅವರ ಸಂಬಂಧಿಕರಾದ ಬಾಪುಗೌಡ ಎನ್ನುವರು. ಇನ್ನು ಡಾಂಬಾರ್ ರಸ್ತೆ ಕಳಪೆ ಕಾಮಗಾರಿ ಆಗಿದೆ ಎಂದು ಗ್ರಾಮಸ್ಥರು ಹೇಳಿದರೆ ಗುತ್ತಿಗೆದಾರ ಬಾಪುಗೌಡ ನಾನು ಸಚಿವರ ಸಂಬಂಧಿಕನಾಗಿದ್ದು, ನನಗೆ ಯಾರು ಏನು ಮಾಡುತ್ತೀರಿ ಮಾಡಿಕೊಳ್ಳಿ ಎಂದು ಧಮಕಿ ಹಾಕಿದ್ದಾನಂತೆ.
Shivamogga News: ಜಲ ಜೀವನ್ ಕಳಪೆ ಕಾಮಗಾರಿ: ಕುರುಣಿಮಕ್ಕಿ ಗ್ರಾಮಸ್ಥರ ಆರೋಪ
ಮಾತೆತ್ತಿದರೆ ನಾನು ಪ್ರಾಮಾಣಿಕ ಎಂದು ಹೇಳಿಕೊಳ್ಳುವ ಸಚಿವ ಹಾಲಪ್ಪ ಆಚಾರ್ ಕ್ಷೇತ್ರದಲ್ಲಿ ಇದೀಗ ಅವರ ಸಂಬಂಧಿಕ ಗುತ್ತಿಗೆದಾರನಿಂದ ಅಪ್ರಾಮಾಣಿಕ ಕೆಲಸವಾಗಿದೆ. ಇದನ್ನು ಪ್ರಶ್ನಿಸಿದ ಗ್ರಾಮಸ್ಥರಿಗೆ ಪೊಲೀಸ್ ರಿಂದ ಧಮಕಿ ಸಹ ಹಾಕಿಸಲಾಗುತ್ತಿದೆ ಎನ್ನುವ ಆರೋಪಗಳು ಕೇಳಿಬಂದಿವೆ. ಇನ್ನು ಕುದರಿಮೋತಿ ಗ್ರಾಮದ ರಸ್ತೆ ಕಾಮಗಾರಿ ಕಳಪೆಯಾಗಿರುವುದು ಸಚಿವ ಹಾಲಪ್ಪ ಆಚಾರ್ ಗಮನಕ್ಕೆ ಬಂದರೂ ಸಹ ಸಚಿವ ಹಾಲಪ್ಪ ಆಚಾರ್ ಕಣ್ಮುಚ್ಚಿ ಕುಳಿತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇನ್ನಾದರೂ ಸಚಿವ ಹಾಲಪ್ಪ ಆಚಾರ್ ಎಚ್ಚೇತ್ತು ಕುದರಿಮೋತಿ ಗ್ರಾಮದಲ್ಲಿ ನಿರ್ಮಾಣವಾಗಿರುವ ಕಳಪೆ ಕಾಮಗಾರಿ ರಸ್ತೆಯನ್ನು ಉತ್ತಮ ಗುಣಮಟ್ಟದ ರಸ್ತೆಯನ್ನಾಗಿ ಪುನರ್ ನಿರ್ಮಾಣ ಮಾಡಬೇಕಿದೆ.