ಹುಬ್ಬಳ್ಳಿ(ಮೇ.01): ಲಾಕ್‌ಡೌನ್‌ ಜಾರಿಯಲ್ಲಿದ್ದರೂ ಕೆಂಪು ಪಟ್ಟಿಯಲ್ಲಿರುವ ಹುಬ್ಬಳ್ಳಿ ನಗರದ ಸೂಕ್ಷ  ಪ್ರದೇಶಗಳಲ್ಲಿ ಸಂತೆ ಮಾರುಕಟ್ಟೆ ಸೇರಿ ವಿವಿಧ ಚಟುವಟಿಕೆಗಳು ಜನಸಂದಣಿಯಲ್ಲೇ ನಡೆಯುತ್ತಿರುವುದು ಆತಂಕ ಉಂಟುಮಾಡಿದೆ. ಇನ್ನೊಂದು ಕಡೆ ಗ್ರಾಮೀಣ ಭಾಗದಲ್ಲಿ ಷರತ್ತಿನ ಮೇಲೆ ವ್ಯಾಪಾರಕ್ಕೆ ಅನುವು ಮಾಡಿಕೊಡಲಾಗಿದ್ದು, ಅಂಗಡಿಕಾರರು ಸಿದ್ಧತೆಯಲ್ಲಿ ತೊಡಗಿದ್ದಾರೆ.

ಕೊರೋನಾ ಲಾಕ್‌ಡೌನ್‌ನಿಂದ ಕೆಲ ಕ್ಷೇತ್ರಗಳನ್ನು ಸಡಿಲಿಕೆ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸುತ್ತಿದ್ದಂತೆ ಗುರುವಾರ ನಗರದೆಲ್ಲೆಡೆ ವಾಹನ ಸಂಚಾರ ಹೆಚ್ಚಾಗಿದೆ. ಹುಬ್ಬಳ್ಳಿಯಲ್ಲಿ ಎಂಟು ಕೊರೋನಾ ಪ್ರಕರಣಗಳು ದೃಢಪಟ್ಟ ಹಿನ್ನೆಲೆಯಲ್ಲಿ ಸಡಿಲಿಕೆ ನೀಡಿಲ್ಲ. ಆದರೂ ಶೇ. 30ರಿಂದ 40ರಷ್ಟು ವಾಹನಗಳು ರಸ್ತೆಗಿಳಿದಿವೆ. ಪೊಲೀಸರು ಕೂಡ ಬಿಗುವನ್ನು ಸಡಿಲಗೊಳಿಸಿದ್ದು, ಲಗಾಮಿಲ್ಲದೆ ಜನಸಂಚಾರ ಆರಂಭವಾಗಿದೆ.

ಅಜ್ಜಿ ಮನೆಗೆ ತೆರಳಿದ್ದ ಬಾಲಕಿಗೆ ಕೊರೋನಾ, ಅಜಾದ್ ಕಾಲೋನಿ ಸೀಲ್‌ಡೌನ್!

ಕಟ್ಟಡ ಕಾಮಗಾರಿ ಸಲಕರಣೆಗಳು, ಕೃಷಿ ಸಲಕರಣೆಗಳ ಮಾರಾಟದ ಮಳಿಗೆಗಳು ತೆರೆದಿರುವುದು ಕಂಡು ಬಂತು. ಇಲ್ಲಿನ ಎಸ್‌.ಎಂ. ಕೃಷ್ಣ ನಗರಕ್ಕೆ ತೆರಳುವ ರಸ್ತೆಯಲ್ಲಿ ಮಂಗಳವಾರದಿಂದ ಸಂತೆ ಮಾರುಕಟ್ಟೆ ರೀತಿಯಲ್ಲಿ ವ್ಯಾಪಾರ ನಡೆಯುತ್ತಿದೆ. ನೂರಾರು ಜನರು ಗುಂಪುಗೂಡಿ ತರಕಾರಿ, ದಿನಸಿ ಖರೀದಿ ಮಾಡಿದರು. ಇಕ್ಕಟ್ಟಾದ ವಸತಿ ಪ್ರದೇಶದಲ್ಲಿ ಈ ರೀತಿಯಲ್ಲಿ ಮಾರುಕಟ್ಟೆ ನಡೆದಿರುವುದು ಪ್ರಜ್ಞಾವಂತರ ಆತಂಕಕ್ಕೆ ಕಾರಣವಾಗಿದೆ.

ಇನ್ನು, ನಗರದಲ್ಲಿ ಪಾಸಿಟಿವ್‌ ಪ್ರಕರಣ ಕಂಡುಬಂದ ಮುಲ್ಲಾಓಣಿ, ಆಜಾದ್‌ ನಗರದಲ್ಲಿ ಕಟ್ಟುನಿಟ್ಟಾಗಿ ಸೀಲ್‌ಡೌನ್‌ ಮುಂದುವರೆದಿದೆ. ಗ್ರಾಮೀಣ ಪ್ರದೇಶಗಳಲ್ಲಿ ಅಂಗಡಿ ಮುಂಗಟ್ಟು ತೆರೆಯಲು ವ್ಯಾಪಾರಿಗಳು ಸಿದ್ಧತೆ ನಡೆಸಿದ್ದಾರೆ. ಅದರ ಜೊತೆಗೆ ಕೃಷಿ ಚಟುವಟಿಕೆ ಕೂಡ ಗರಿಗೆದರಿದೆ. ಈಗಾಗಲೇ ನಾಲ್ಕೆ ೖದು ಬಾರಿ ಮಳೆ ಸುರಿದ ಕಾರಣ ಛಬ್ಬಿ, ಕುಸುಗಲ್‌ ಭಾಗದಲ್ಲಿ ಹೊಲ ಹದಗೊಳಿಸುವ ಕಾರ್ಯದಲ್ಲಿ ರೈತರು ತೊಡಗಿದ್ದು, ಬಿತ್ತನೆ ಬೀಜ ಖರೀದಿ ಹಾಗೂ ಅವುಗಳ ಪೋಷಣೆ ಕಾರ್ಯ ನಡೆಸಿದ್ದಾರೆ.