ಚಿಕ್ಕಮಗಳೂರು(ಜು.11): ಕೋವಿಡ್‌ ಕಾರಣಕ್ಕೆ ಮೂರು ತಿಂಗಳ ಕಾಲ ಕ್ಷೀಣಿಸಿದ್ದ ಹೊಸ ವಾಹನಗಳ ನೋಂದಣಿ ಲಾಕ್‌ಡೌನ್‌ ಸಡಿಲಿಕೆ ನಂತರ ಚೇತರಿಸಿಕೊಳ್ಳುತ್ತಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಮುರುಗೇಂದ್ರ ಬಿ.ಶಿರೋಡ್ಕರ್‌ ತಿಳಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವರ್ಷದ ಆರಂಭದಿಂದ ಪ್ರತಿ ವರ್ಷದಂತೆ ಇಲಾಖೆ ಕಾರ್ಯಚಟುವಟಿಕೆ ನಡೆದಿತ್ತಾದರೂ ಕೊರೋನಾದಿಂದ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಹೊಸ ವಾಹನಗಳ ನೋಂದಣಿ ಕಡಿಮೆಯಾದ ಪರಿಣಾಮ ಇಲಾಖೆ ಆದಾಯವೂ ಖೋತಾ ಆಗಿದೆ. 2020-21ನೇ ಸಾಲೆಗೆ ವಾರ್ಷಿಕ 53.72 ಕೋಟಿ ರು. ಗುರಿ ನಿಗದಿಪಡಿಸಿಕೊಳ್ಳಲಾಗಿದೆ. ಕಳೆದ ಮಾರ್ಚ್‌ನಿಂದ ಈವರೆಗೆ ನಿರೀಕ್ಷಿತ ಗುರಿ ಸಾಧಿಸಲು ಸಾಧ್ಯವಾಗದಿದ್ದರೂ, ಮುಂಬರುವ ಮಾರ್ಚ್ ವೇಳೆಗೆ ಪರಿಸ್ಥಿತಿ ಸುಧಾರಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ನಿಗದಿತ ಆರ್ಥಿಕ ಗುರಿಗೆ ಕಳೆದ ಏಪ್ರಿಲ್‌ನಲ್ಲಿ ಶೇ.5ರಷ್ಟು, ಮೇನಲ್ಲಿ ಶೇ.49 ಹಾಗೂ ಜೂನ್‌ ತಿಂಗಳಲ್ಲಿ ಶೇ.72ರಷ್ಟು ವಾಹನ ನೋಂದಣಿಯಾಗಿವೆ. ಏಪ್ರಿಲ್‌ ತಿಂಗಳಲ್ಲಿ ಲಾಕ್‌ಡೌನ್‌ ಇದ್ದ ಕಾರಣಕ್ಕೆ ವಾಹನ ನೋಂದಣಿಯಲ್ಲಿ ಕೇವಲ ಶೇ.5ರಷ್ಟು ಗುರಿ ಸಾಧನೆಯಾಗಿದ್ದರೆ, ಒಂದೂ ಚಾಲನಾ ಪರವಾನಗಿಯನ್ನು ವಿತರಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು.

ಫೆಬ್ರವರಿ ತಿಂಗಳಲ್ಲಿ 932 ವಾಹನ ನೋಂದಣಿಯಾದರೆ 1329 ಚಾಲನಾ ಪರವಾನಗಿ ನೀಡಲಾಗಿದೆ. ಮಾಚ್‌ರ್‍ನಲ್ಲಿ 1435 ನೋಂದಣಿ, 1939 ಚಾಲನಾ ಪರವಾನಗಿ ವಿತರಿಸಲಾಗಿದೆ. ಮೇ ಮಾಹೆಯಲ್ಲಿ 381 ನೋಂದಣಿಯಾಗಿದ್ದು, 545 ಚಾಲನಾ ಪರವಾನಗಿ ನೀಡಲಾಗಿದೆ. ಜೂನ್‌ ತಿಂಗಳಲ್ಲಿ 726 ವಾಹನ ನೋಂದಣಿಯಾದರೆ, 1166 ಚಾಲನಾ ಪರವಾನಗಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ನಾನು ಕೊಲೆಗಾರನು ಅಲ್ಲ, ಕಾಣೆಯೂ ಆಗಿಲ್ಲ: ಕೊರೋನಾ ಸೋಂಕಿತ ಅಧಿಕಾರಿಯ ನೋವಿನ ಮಾತು

ಮುಂದಿನ ವರ್ಷದಿಂದ ವಾಹನ ಚಾಲನ ಪರವಾನಗಿಗಳನ್ನು ವಾಹನ ತರಬೇತಿ ಕೇಂದ್ರಗಳಲ್ಲಿ ಹಾಗೂ ವಾಹನಗಳ ನೋಂದಣಿಯನ್ನು ಶೋರೂಂನಲ್ಲೇ ವಿತರಿಸಲಾಗುವುದು. ಇದರಿಂದ ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ಕಾರ್ಯಭಾರದ ಒತ್ತಡ ಸ್ವಲ್ಪ ಕಡಿಮೆಯಾಗಲಿದೆ ಎಂದು ಹೇಳಿದರು.

ಇಲಾಖೆಯಲ್ಲಿ 2018ರಲ್ಲಿ ಚಾಲನಾ ಪರವಾನಗಿ ಮತ್ತು 2019ರಲ್ಲಿ ರಿಜಿಸ್ಪ್ರೇಷನ್‌ ಕೆಲಸಗಳು ಆನ್‌ಲೈನ್‌ನಲ್ಲಿ ಆರಂಭವಾಗಿದ್ದು, ರಿಜಿಸ್ಟೇಷನ್‌ ಹೊರತುಪಡಿಸಿ ಉಳಿದೆಲ್ಲ ಕೆಲಸಗಳು ಕಚೇರಿಯಲ್ಲಿ ಆನ್‌ಲೈನ್‌ ಮೂಲಕ ಆರಂಭಗೊಳ್ಳುತ್ತಿವೆ. ಕಂಪ್ಯೂಟರ್‌ ಜ್ಞಾನ ಹೊಂದಿರುವ ಸಾರ್ವಜನಿಕರು ಯಾರ ಸಹಾಯವಿಲ್ಲದೆ, ಅರ್ಜಿಗಳನ್ನು ಆನ್‌ಲೈನ್‌ ಮೂಲಕ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.

ಆನ್‌ಲೈನ್‌ನಲ್ಲಿ ಇಲಾಖೆ ಸೇವೆಗಳು ಲಭ್ಯವಿರುವ ಬಗ್ಗೆ ಕಚೇರಿ ಹೊರಗೆ ಮಾಹಿತಿಯನ್ನು ಒದಗಿಸಲಾಗುತ್ತಿದೆ. ಸಾರಿಗೆ ಇಲಾಖೆಯಲ್ಲಿ ಕೇಂದ್ರಿಕೃತ ವೆಬ್‌ ಆಧಾರಿತ ತಂತ್ರಾಂಶ ವಾಹನ್‌-4 ಮತ್ತು ಸಾರಥಿ-4 ಅಳವಡಿಸಿರುವುದರಿಂದ ಸಾರ್ವಜನಿಕರು ಇಲಾಖೆಯ ಎಲ್ಲ ಸೇವೆಗಳನ್ನು ಆನ್‌ಲೈನ್‌ನಲ್ಲೇ ಸಲ್ಲಿಸಬಹುದಾಗಿದೆ. ಈ ಬಗ್ಗೆ ಬ್ಯಾನರ್‌ ಹಾಕುವ ಮೂಲಕ ಸಾರ್ವಜನಿಕರಿಗೆ ತಿಳುವಳಿಕೆ ನೀಡಲಾಗಿದೆ ಎಂದರು.

ವಾಹನ್‌-4 ತಂತ್ರಾಂಶ

ವಾಹನಗಳ ಹೊಸ ಕಾಯ್ದೆ ಮತ್ತು ಇತರೆ ನಿಯಮಗಳಲ್ಲಿ ನಿಗದಿಪಡಿಸಿದ ಅರ್ಜಿ ನಮೂನೆಗಳನ್ನು ನಿಗದಿಪಡಿಸಿದ ಶುಲ್ಕ, ತೆರಿಗೆ ಪಾವತಿಸಿ ಅರ್ಜಿಯನ್ನು ವಾಹನ್‌-4 ತಂತ್ರಾಂಶದಲ್ಲಿ ಕಚೇರಿಗೆ ಸಲ್ಲಿಸಬೇಕಾಗಿದೆ.

ಸಾರಥಿ-4 ಫಲಿತಾಂಶ:

ಕಲಿಕಾ ಲೈಸನ್ಸ್‌, ಚಾಲನಾ ಲೈಸನ್ಸ್‌ ಮತ್ತು ಪರವಾನಗಿಗೆ ಸಂಬಂಧಿಸಿದ ಇತರೆ ಸೇವೆಗಳಿಗಾಗಿ ಸಾರಥಿ-4 ತಂತ್ರಾಂಶವನ್ನು ಆಯ್ಕೆಮಾಡಬೇಕಾಗಿದೆ. ಅಗತ್ಯ ದಾಖಲೆಗಳನ್ನು ಸ್ಕ್ಯಾ‌ನಿಂಗ್‌ಮಾಡಿ, ಅಪ್‌ಲೋಡ್‌ ಮಾಡುವುದು ಮತ್ತು ಶುಲ್ಕ ಪಾವತಿಸಿದ ನಂತರ ಮೂಲ ದಾಖಲೆಗಳು ಮತ್ತು ಅರ್ಜಿಯೊಂದಿಗೆ ಲೈಸನ್ಸ್‌ ಪ್ರಾಧಿಕಾರದ ಮುಂದೆ ಅರ್ಜಿ ಪರಿಶೀಲನೆಗೆ ಅಭ್ಯರ್ಥಿ ಖುದ್ದಾಗಿ ಹಾಜರಾಗಬೇಕು ಎಂದರು.

ಶೇ.40 ಹುದ್ದೆ ಖಾಲಿ

ಇಲಾಖೆಯಲ್ಲಿ ಶೇ.40ರಷ್ಟು ಹುದ್ದೆಗಳು ಖಾಲಿ ಇವೆ. ಬ್ರೇಕ್‌ ಇನ್‌ಸ್ಪೆಕ್ಟರ್‌ಗಳ 7 ಹುದ್ದೆಗಳಲ್ಲಿ 1 ಹುದ್ದೆ ಮಾತ್ರ ಭರ್ತಿಯಾಗಿದೆ. ಹಾಗಾಗಿ, ಕಚೇರಿಯಲ್ಲಿ ಕಾರ್ಯಭಾರ ಅಧಿಕವಾಗಿದ್ದು, ಅಧಿಕಾರಿ ಮತ್ತು ಸಿಬ್ಬಂದಿ ಹೊಂದಾಣಿಕೆಯಿಂದ ಕಾರ್ಯನಿರ್ವಹಿಸುವ ಮೂಲಕ ಸಾರ್ವಜನಿರಿಗೆ ಉತ್ತಮ ಸೇವೆ ನೀಡುತ್ತಿದ್ದಾರೆ ಎಂದು ಹೇಳಿದರು.