Asianet Suvarna News Asianet Suvarna News

ನಾನು ಕೊಲೆಗಾರನು ಅಲ್ಲ, ಕಾಣೆಯೂ ಆಗಿಲ್ಲ: ಕೊರೋನಾ ಸೋಂಕಿತ ಅಧಿಕಾರಿಯ ನೋವಿನ ಮಾತು

ನನ್ನ ಹಾಗೂ ಜನರ ಆರೋಗ್ಯದ ಬಗ್ಗೆ ನನಗೆ ಕಾಳಜಿ ಇದೆ: ಕಂದಾಯ ನಿರೀಕ್ಷಕ| ಮತ್ತೆ 19 ಜನರಿಗೆ ಕೊರೋನಾ ಪಾಸಿಟಿವ್‌| ಓರ್ವ ಮಹಿಳೆ ಸಾವು, ಜಿಲ್ಲೆಯಲ್ಲಿ ಈವರೆಗೆ 262 ಪ್ರಕರಣಗಳು ಪತ್ತೆ| ಸತ್ಯಾಂಶವನ್ನು ಮರೆಮಾಚಿ ಅಭಾಸವಾಗುವಂತೆ ಸುದ್ದಿ ಬಿತ್ತರಿಸುತ್ತಿರುವುದು ನನಗೆ, ನನ್ನ ಕುಟುಂಬಕ್ಕೆ ತೀವ್ರ ನೋವುಂಟು ಮಾಡಿದೆ ಎಂದು ಅಳುತ್ತಲೇ ನೋವು ತೋಡಿಕೊಂಡ ಕಂದಾಯ ನಿರೀಕ್ಷಕ|

Coronavirus Infected Government Officer talks Over His Health
Author
Bengaluru, First Published Jul 11, 2020, 10:42 AM IST
  • Facebook
  • Twitter
  • Whatsapp

ಗದಗ(ಜು.11):  ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಏರಿಕೆಯಾಗುತ್ತಿರುವ ಪ್ರಕರಣಗಳು ಶುಕ್ರವಾರ ಒಮ್ಮೆಲೆ ಸ್ಫೋಟಗೊಂಡಿದ್ದು, ಒಂದೇ ದಿನ 19 ಜನರಿಗೆ ಸೋಂಕು ದೃಢವಾಗುವ ಮೂಲಕ ಜಿಲ್ಲೆಯಲ್ಲಿ ಆತಂಕಕ್ಕೆ ಕಾರಣವಾಗಿದೆ.

ಕೆಲವು ದಿನಗಳಿಂದ ಕೇವಲ ಒಂದಂಕಿಯಷ್ಟುಮಾತ್ರ ಪ್ರಕರಣಗಳು ಪಾಸಿಟಿವ್‌ ಆಗಿದ್ದವು. ಆದರೆ, ಶುಕ್ರವಾರ ಮತ್ತೆ 19 ಜನರಿಗೆ ಸೋಂಕು ದೃಢವಾಗಿರುವುದು ಜಿಲ್ಲೆಯ ಜನತೆಗೆ ಸಿಡಿಲು ಬಡಿದಂತಾಗಿದೆ. ಸದ್ಯ ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 262 ಸೋಂಕು ದೃಢಪಟ್ಟಿದೆ. ಈ ಪೈಕಿ 165 ಜನ ಗುಣಮುಖರಾಗಿದ್ದಾರೆ. 92 ಜನ ಸೋಂಕಿತರು ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೋಂಕಿತರ ವಿವರ:

ಗದಗ ನಗರದ ಬಸವೇಶ್ವರ ನಗರ ನಿವಾಸಿ 51 ವರ್ಷದ ಮಹಿಳೆ (ಪಿ-31106) ಕೆಮ್ಮು ಹಾಗೂ ಜ್ವರದ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿದೆ. ಬೆಟಗೇರಿಯ ಕುರಟ್ಟಿಪೇಟ ನಿವಾಸಿ 33 ವರ್ಷದ ಪುರುಷ ಪಿ-23122 ಸೋಂಕಿತರ ಸಂಪರ್ಕದಿಂದಾಗಿ ಅದೇ ಪ್ರದೇಶದ 25 ವರ್ಷದ ಮಹಿಳೆ (ಪಿ-31107), 8 ವರ್ಷದ ಬಾಲಕಿ (ಪಿ-31108)ಗೆ ಸೋಂಕು ದೃಢಪಟ್ಟಿರುತ್ತದೆ. ಬೆಟಗೇರಿಯ ಹೆಲ್ತ್‌ಕ್ಯಾಂಪ್‌ ನಿವಾಸಿ 75 ವರ್ಷದ ಪುರುಷ ಪಿ-25321 ಸೋಂಕಿತರ ಸಂಪರ್ಕದಿಂದಾಗಿ ಗದಗ ತಾಲೂಕಿನ ಕಣಗಿನಹಾಳ ಗ್ರಾಮದ 26 ವರ್ಷದ ಪುರುಷ (ಪಿ-31109), ಮುಂಡರಗಿ ತಾಲೂಕಿನ ಡೋಣಿ ಗ್ರಾಮದ 24 ವರ್ಷದ ಪುರುಷ (ಪಿ-31110) ಇವರಿಗೆ ಸೋಂಕು ದೃಢಪಟ್ಟಿರುತ್ತದೆ.

ಗದಗ: ಹೊಲದಲ್ಲಿ ಸ್ವಯಂ ಕ್ವಾರಂಟೈನ್‌, ಯೋಧನ ಕಾರ್ಯಕ್ಕೆ ಭಾರೀ ಪ್ರಶಂಸೆ..!

ಮಹಾರಾಷ್ಟ್ರದ ಪುಣೆಯಿಂದ ಜಿಲ್ಲೆಗೆ ಆಗಮಿಸಿದ ಗದಗ ತಾಲೂಕಿನ ಬಿಂಕದಕಟ್ಟಿಗ್ರಾಮದ ನಿವಾಸಿ 52 ವರ್ಷದ ಪುರುಷ (ಪಿ-31111), ನಗರದ ಮುಳಗುಂದ ನಾಕಾ ಪ್ರದೇಶದ ನಿವಾಸಿ 25 ವರ್ಷದ ಮಹಿಳೆ (ಪಿ-31112) ಇವರಿಗೆ ಸೋಂಕು ದೃಢವಾಗಿದೆ. ಗದಗ ನಗರದ ಭೀಷ್ಮ ಕೆರೆ ಹತ್ತಿರದ ನಿವಾಸಿ 36 ವರ್ಷದ ಮಹಿಳೆ (ಪಿ-31113) ಕೆಮ್ಮು ಹಾಗೂ ಜ್ವರದ ಲಕ್ಷಣಗಳಿಂದಾಗಿ ಸೋಂಕು ದೃಢವಾಗಿದೆ. ದೆಹಲಿಯಿಂದ ಜಿಲ್ಲೆಗೆ ಆಗಮಿಸಿದ ರೋಣ ತಾಲೂಕಿನ ವಾಣಿಪೇಟ ನಿವಾಸಿ 28 ವರ್ಷದ ಪುರುಷ (ಪಿ-31114), ಗದಗ ವೀರನಾರಾಯಣ ಬಡಾವಣೆ ನಿವಾಸಿ 33 ವರ್ಷದ ಪುರುಷ ಪಿ-16612 ಸೋಂಕಿತರ ಸಂಪರ್ಕದಿಂದಾಗಿ ಗದಗ ಎಪಿಎಂಸಿಯ ನಿವಾಸಿ 62 ವರ್ಷದ ಪುರುಷ (ಪಿ-31115), 56 ವರ್ಷದ ಮಹಿಳೆ (ಪಿ-31116), 10 ವರ್ಷದ ಬಾಲಕಿ (ಪಿ-31117) 24 ವರ್ಷದ ಪುರುಷ (ಪಿ-31118) ಇವರಿಗೆ ಸೋಂಕು ದೃಢಪಟ್ಟಿದೆ.

ಧಾರವಾಡ ಜಿಲ್ಲೆಯಿಂದ ಆಗಮಿಸಿದ ಶಿರಹಟ್ಟಿಪಟ್ಟಣದ ನಿವಾಸಿ 40 ವರ್ಷದ ಪುರುಷ (ಪಿ-31119)ದ್ದು, ಪಟ್ಟಣದ ಮ್ಯಾಗೇರಿ ಓಣಿ ನಿವಾಸಿ 42 ವರ್ಷದ ಪುರುಷ (ಪಿ-31120) ನಿಗೆ ಸೋಂಕು ದೃಢಪಟ್ಟಿದ್ದು, ಇವರಿಗೆ ಸೋಂಕು ತಗುಲಿದ್ದು ಹೇಗೆ ಎಂಬ ಪತ್ತೆ ಕಾರ್ಯ ನಡೆದಿದೆ. ಗದಗ ನಗರದ ಗಂಗಿಮಡಿ ಪ್ರದೇಶದ ನಿವಾಸಿ 17 ವರ್ಷದ ಪುರುಷ (ಪಿ-31121) ಹಾಗೂ ಮುಂಡರಗಿ ತಾಲೂಕಿನ ಜಂತ್ಲಿ ಶಿರೂರ ಗ್ರಾಮದ ನಿವಾಸಿ 38 ವರ್ಷದ ಮಹಿಳೆ (31122) ಕೆಮ್ಮು ಜ್ವರದ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿರುತ್ತದೆ. ಅಂತರ ಜಿಲ್ಲಾ ಪ್ರವಾಸ ಹಿನ್ನೆಲೆಯಲ್ಲಿ ಬೆಟಗೇರಿಯ ಹೆಲ್ತ್‌ ಕ್ಯಾಂಪ್‌ ನಿವಾಸಿ 62 ವರ್ಷದ ಪುರುಷ (ಜಿಡಿಜಿ-31783) ಇವರಿಗೆ ಸೋಂಕು ದೃಢವಾಗಿದೆ. ಈ ಎಲ್ಲ ಸೋಂಕಿತರಿಗೂ ನಿಗದಿತ ಕೊವಿಡ್‌-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಜಿಲ್ಲೆಯ ಸ್ಥಿತಿಗತಿ:

ಜು. 10 ವರೆಗಿನ ಗದಗ ಜಿಲ್ಲೆಯ ಕೋವಿಡ್‌-19 ಸೋಂಕು ನಿಯಂತ್ರಣ ಪ್ರಕರಣಗಳ ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ಎಂ. ಸುಂದರೇಶ್‌ ಬಾಬು ಬಿಡುಗಡೆ ಮಾಡಿದ್ದಾರೆ. ಇದುವರೆಗೆ ಗದಗ ಜಿಲ್ಲೆಯಲ್ಲಿ ನಿಗಾಕ್ಕೆ ಒಳಗಾದವರ ಒಟ್ಟು ಸಂಖ್ಯೆ 12133, ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ ಒಟ್ಟು ಮಾದರಿ 12751, ನಕಾರಾತ್ಮಕವಾಗಿವೆ (ನೆಗೆಟಿವ್‌) ಎಂದು ವರದಿಯಾದ ಸಂಖ್ಯೆ 11468, ಒಟ್ಟು ಕೊವಿಡ್‌-19 ಪಾಸಿಟಿವ್‌ ದೃಢಪಟ್ಟಪ್ರಕರಣಗಳು 262 (ಇಂದಿನ 19 ಸೇರಿ), ಈ ಪೈಕಿ ಮೃತಪಟ್ಟವರು 6, ಸೋಂಕಿನಿಂದ ಗುಣಮುಖರಾದವರು ಒಟ್ಟು 165 ಜನ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು 92 ಜನ (ಇಂದಿನ 19 ಸೇರಿ). ಈ ವರೆಗೆ ರೈಲು ಮೂಲಕ ಮಹಾರಾಷ್ಟ್ರದಿಂದ ಗದಗ ರೈಲು ನಿಲ್ದಾಣಕ್ಕೆ 1382 ಪ್ರಯಾಣಿಕರು ಆಗಮಿಸಿದ್ದು ಈ ಪೈಕಿ 451 ಜನ ಗದಗ ಜಿಲ್ಲೆಗೆ ಸೇರಿದವರಾಗಿದ್ದಾರೆ. ಅದರಲ್ಲಿ 30 ಜನರಿಗೆ ಕೋವಿಡ್‌ ಸೋಂಕು ದೃಢಪಟ್ಟಿದೆ. ಇನ್ನುಳಿದ 931 ಜನರು ಬೇರೆ ಜಿಲ್ಲೆಯವರಾಗಿದ್ದು, ಸಂಬಂಧಪಟ್ಟಜಿಲ್ಲೆಗಳಿಗೆ ಕಳುಹಿಸಲಾಗಿದೆ.

ಓರ್ವ ಮಹಿಳೆ ಸಾವು:

ಗದಗ ನಗರದ ಬಸವೇಶ್ವರ ನಗರ ನಿವಾಸಿ 51 ವರ್ಷದ ಮಹಿಳೆ ಕೊರೋನಾ ಸೋಂಕು ತಗುಲಿ ಮೃತಪಟ್ಟಿದ್ದಾಳೆ. ಜು. 7ರಂದು ಸಂಜೆ ಕೆಮ್ಮು, ನೆಗಡಿ, ಜ್ವರದ ಲಕ್ಷಣಗಳು ಕಂಡು ಬಂದ ಹಿನ್ನಲೆಯಲ್ಲಿ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆ ಐಸಿಯು ವಿಭಾಗಕ್ಕೆ ಚಿಕಿತ್ಸೆಗೆ ದಾಖಲಾಗಿದ್ದಳು. ಪರೀಕ್ಷೆಗಾಗಿ ಸಂಗ್ರಹಿಸಲಾದ ಇವರ ಗಂಟಲು ದ್ರವದ ಪರೀಕ್ಷಾ ವರದಿಯು ಪಾಸಿಟಿವ್‌ ಬಂದಿದ್ದು, ಮಹಿಳೆ ಶುಕ್ರವಾರ ಮದ್ಯಾಹ್ನ 12.30ಕ್ಕೆ ಮೃತಪಟ್ಟಿದ್ದಾಳೆ. ಮೃತ ಮಹಿಳೆ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿರುತ್ತಾರೆ ಎಂದು ಹೇಳಲಾಗಿದೆ.

ನಾನು ಅಪರಾಧಿಯಲ್ಲ, ಕೊಲೆ ಮಾಡಿಲ್ಲ, ದರೋಡೆ ಮಾಡಿಲ್ಲ

ನಾನು ಅಪರಾಧಿಯಲ್ಲ, ಕೊಲೆ ಮಾಡಿಲ್ಲ, ದರೋಡೆ ಮಾಡಿಲ್ಲ. ಆದರೂ ದೃಶ್ಯಮಾಧ್ಯಮದವರು ನನ್ನನ್ನು ಕೊಲೆಗಾರ, ಅಪರಾಧಿ ಸ್ಥಾನದಲ್ಲಿ ಇರುವವರಂತೆ ಬಿಂಬಿಸಿದ್ದು, ಮಾನಸಿಕ ಹಿಂಸೆಯಾಗಿದೆ ಎಂದು ಕೊರೋನಾ ಕಾಯಿಲೆ ದೃಢಪಟ್ಟ ತಹಸೀಲ್ದಾರ್‌ ಕಾರ್ಯಾಲಯದ ಕಂದಾಯ ನಿರೀಕ್ಷಕ ನೋವಿನಿಂದ ಹೇಳಿದ್ದಾರೆ.

‘ಕನ್ನಡಪ್ರಭ’ದೊಂದಿಗೆ ದೂರವಾಣಿಯ ಮೂಲಕ ಅವರು ಮಾತನಾಡಿದ್ದಾರೆ. ಗುರುವಾರ ಬೆಳಗ್ಗೆ ದಿಢೀರ್‌ ಸುದ್ದಿ ತಿಳಿಸಿದ್ದರಿಂದ ಸ್ವಲ್ಪ ಕಸಿವಿಸಿಯಾಗಿದ್ದು ನಿಜ. ನನಗೂ ನನ್ನ ಆರೋಗ್ಯದ ಬಗ್ಗೆ ಕಾಳಜಿ ಇದೆ. ಸಾರ್ವಜನಿಕರ ಆರೋಗ್ಯದ ಬಗ್ಗೆಯೂ ಕಾಳಜಿ ಇದೆ. ನಾನು ಅನಕ್ಷರಸ್ಥನಲ್ಲ. ಇಂತಹ ಕಾಯಿಲೆ ಕುರಿತಾಗಿ ನಾನೇ ಸಾಕಷ್ಟುಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಮಾಡಿದ್ದೇನೆ. ಬೇರೊಬ್ಬರಿಗೆ ಹುಷಾರಾಗಿರಿ ಎಂದು ಹೇಳುವ ವ್ಯಕ್ತಿ ಕಾಯಿಲೆ ಬಂದರೆ ಕಣ್ಮರೆಯಾಗಿ, ತಪ್ಪಿಸಿಕೊಂಡು ಹೇಗೆ ಹೋಗಲು ಸಾಧ್ಯ? ಎಂದು ಬೇಸರ ವ್ಯಕ್ತ ಪಡಿಸಿದರು.

ನಾನು ಎಲ್ಲರಂತೆ ಮನುಷ್ಯನೇ. ನನಗೂ ಕೊರೋನಾ ಕಾಯಿಲೆಯ ಗಂಭೀರತೆ ಗೊತ್ತಿದೆ. ಮತ್ತೊಬ್ಬರಿಂದ ತಿಳಿದುಕೊಳ್ಳುವಷ್ಟುದಡ್ಡ ನಾನಲ್ಲ. ನಾನು ಬಟ್ಟೆತರಲು ಮನೆಗೆ ತೆರಳಿದರೂ, ಒಂದು ಕ್ಷಣವೂ ನನ್ನ ಸಂಬಂಧಿಕರನ್ನು ನೋಡದೇ ತರಾತುರಿಯಲ್ಲಿ ಗದಗ ಜಿಮ್ಸ್‌ಗೆ ಬಂದು ದಾಖಲಾಗಿದ್ದೇನೆ. ಒಬ್ಬ ವ್ಯಕ್ತಿ ಬಗ್ಗೆ ಸಾರ್ವಜನಿಕವಾಗಿ ಪ್ರಸಾರ ಮಾಡುವಾಗ ಸಾಧಕ- ಬಾಧಕ ವಿಚಾರ ಮಾಡುವುದು ಒಳ್ಳೆಯದು ಎಂದು ಕಣ್ಣೀರು ಹಾಕಿದ ಅವರು, ನಿತ್ಯ ಆಫೀಸ್‌ಗೆ ಬರುವಂತೆ ಬಂದಿದ್ದೆ. ನನಗೆ ಈ ತರಹದ ಯಾವುದೇ ಲಕ್ಷಣ ಕಂಡುಬಂದಿರಲಿಲ್ಲ. ಒಮ್ಮೆಲೇ ಸುದ್ದಿ ತಿಳಿದಿದ್ದು, ಉಟ್ಟುಕೊಳ್ಳಲು ಬಟ್ಟೆಇಲ್ಲದ್ದರಿಂದ ಮರಳಿ ಊರಿಗೆ ಹೋಗಿ ಮನೆಯೊಳಗೂ ಹೋಗದೇ ವಿಷಯ ತಿಳಿಸಿ ಸ್ವಯಂಪ್ರೇರಣೆಯಿಂದಲೇ ಜಿಮ್ಸಗೆ ದಾಖಲಾಗಿದ್ದೇನೆ.

ದೃಶ್ಯ ಮಾಧ್ಯಮಗಳು ನಾಪತ್ತೆಯಾಗಿರುವುದಾಗಿ, ಪೋನ್‌ ಸ್ವಿಚ್‌ಆಫ್‌ ಮಾಡಿರುವುದಾಗಿ ಇಲ್ಲಸಲ್ಲದ ಅಂತೆ ಕಂತೆಗಳ ಸುದ್ದಿಯನ್ನು ಬಿತ್ತರಿಸುತ್ತಿರುವುದು ನೋವುಂಟು ಮಾಡಿದೆ. ಕೊರೋನಾ ವಾರಿಯರ್ಸ್‌ ಆಗಿ 3 ತಿಂಗಳಿಂದ ನನ್ನ ಸಂಸಾರವನ್ನು ನೋಡದೇ ಕೆಲಸ ಮಾಡಿದ್ದೇನೆ. ಮಾಧ್ಯಮಗಳಲ್ಲಿ ಶುಕ್ರವಾರ ಆರ್‌ಐ ಪತ್ತೆ ಮಾಡಿದ ಅಧಿಕಾರಿಗಳು ಎಂದು ಸುದ್ದಿ ಪ್ರಸಾರ ಮಾಡಿದ್ದಾರೆ. ಇದು ಕೂಡಾ ನನಗೆ ಬಹಳಷ್ಟುಮಾನಸಿಕವಾಗಿ ಹಿಂಸೆ ಉಂಟುಮಾಡಿದೆ.
ನಾನು ಸರ್ಕಾರಿ ಸೇವೆಯಲ್ಲಿರುವ ಜವಾಬ್ದಾರಿ ವ್ಯಕ್ತಿ, ಕೊರೋನಾ ಸಂಕಷ್ಟದಲ್ಲಿ ಕೆಲಸ ಮಾಡಿದ ವ್ಯಕ್ತಿಯೋರ್ವ, ಅದೇ ಕಾರ್ಯ ಮಾಡುವ ಸಂದರ್ಭದಲ್ಲಿ ತನಗೇ ಅರಿವಿಲ್ಲದಂತೆ ಸೋಂಕಿಗೆ ತುತ್ತಾದ ವೇಳೆಯಲ್ಲಿ ಮಾಧ್ಯಮಗಳು ನಡೆದುಕೊಳ್ಳುವ ರೀತಿ ಸರಿಯಾಗಿದೆಯೇ? ಒಮ್ಮೆ ಅವರ ಆತ್ಮವನ್ನು ಅವರೇ ಕೇಳಿಕೊಳ್ಳಲಿ, ಮೊದಲೇ ಮಾನಸಿಕವಾಗಿ ಕುಸಿದಿರುವ ವ್ಯಕ್ತಿಗೆ ಮತ್ತಷ್ಟುಕುಸಿಯುವಂತೆ ಮಾಡಿದರೆ ಇವರಿಗೇನು ಲಾಭ? ನಾನು ನಾಪತ್ತೆಯಾಗಿದ್ದೇನೆ ಎಂದು ಸುದ್ದಿ ಪ್ರಸಾರವಾಗುತ್ತಿದ್ದಂತೆ ನನ್ನ ಸಂಬಂಧಿಗಳು, ಕುಟುಂಬಸ್ಥರು ತೀವ್ರ ಆತಂಕಗೊಂಡು ಮನೆಯವರಿಗೆಲ್ಲ ಕರೆ ಮಾಡಿದ್ದು ಎಲ್ಲರೂ ಭಯಭೀತರಾಗಿದ್ದಾರೆ.

ನಮ್ಮ ಮನೆಯವರಿಗೆ, ನನಗೆ ಏನಾದರೂ ತೊಂದರೆಯಾದರೆ ಅದಕ್ಕೆ ಇವರೇ ನೇರವಾಗಿ ಹೊಣೆಯಾಗುತ್ತಾರೆ, ನಾನು ಅಪರಾಧಿಯೂ ಅಲ್ಲ, ನನಗೆ ನನ್ನ ಮತ್ತು ಸಾರ್ವಜನಿಕರ ಆರೋಗ್ಯದ ಬಗ್ಗೆ ಕಾಳಜಿ ಇದೆ. ಗುರುವಾರ ಜಿಮ್ಸ್‌ಗೆ ಸ್ವತಃ ನಾನೇ ಹೋಗಿ ದಾಖಲಾಗಿದ್ದೇನೆ ಎನ್ನುವುದನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ.

ಸತ್ಯಾಂಶವನ್ನು ಮರೆಮಾಚಿ ಅಭಾಸವಾಗುವಂತೆ ಸುದ್ದಿ ಬಿತ್ತರಿಸುತ್ತಿರುವುದು ನನಗೆ, ನನ್ನ ಕುಟುಂಬಕ್ಕೆ ತೀವ್ರ ನೋವುಂಟು ಮಾಡಿದೆ ಎಂದು ಅಳುತ್ತಲೇ ನೋವು ತೋಡಿಕೊಂಡ ಅವರು, ಜಿಮ್ಸ್‌ಗೆ ದಾಖಲಾಗುತ್ತಿದ್ದಂತೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ, ಶೀಘ್ರವೇ ಗುಣಮುಖನಾಗಿ ಮತ್ತೆ ಕರ್ತವ್ಯಕ್ಕೆ ಮರಳುತ್ತೇನೆ, ನಾನು ಅಪರಾಧಿ ಎಂದು ಬಿಂಬಿಸಿದವರ ಮುಂದೆ ಕೆಲಸ ಮಾಡಿ ತೋರಿಸುತ್ತೇನೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

Follow Us:
Download App:
  • android
  • ios