Asianet Suvarna News Asianet Suvarna News

Mandya: ಜಿಲ್ಲೆಯ ನಿರ್ಗತಿಕರಿಗೆ ‘ವಾತ್ಸಲ್ಯ’ ಆಶ್ರಯ

ಶ್ರೀಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ಜಿಲ್ಲೆಯಲ್ಲಿ ನಿರ್ಗತಿಕರಿಗೆ ‘ವಾತ್ಸಲ್ಯ’ ಯೋಜನೆಯಡಿ ನಿರ್ಗತಿಕರಿಗೆ ಸೂರು ನಿರ್ಮಿಸಿಕೊಡುವ ಕೆಲಸ ಸದ್ದಿಲ್ಲದೆ ನಡೆದಿದೆ. ಈಗಾಗಲೇ ಮಂಡ್ಯದಲ್ಲಿ ನಾಲ್ಕು ಮಂದಿ ನಿರ್ಗತಿಕರಿಗೆ ಮನೆ ನಿರ್ಮಿಸಿ ಕೊಟ್ಟು ಆಶ್ರಯ ಕಲ್ಪಿಸಿಕೊಡಲಾಗಿದೆ.

Vatsalya shelter for the needy of the district snr
Author
First Published Dec 13, 2022, 6:06 AM IST

ಮಂಡ್ಯ ಮಂಜುನಾಥ

  ಮಂಡ್ಯ (ಡಿ.13):  ಶ್ರೀಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ಜಿಲ್ಲೆಯಲ್ಲಿ ನಿರ್ಗತಿಕರಿಗೆ ‘ವಾತ್ಸಲ್ಯ’ ಯೋಜನೆಯಡಿ ನಿರ್ಗತಿಕರಿಗೆ ಸೂರು ನಿರ್ಮಿಸಿಕೊಡುವ ಕೆಲಸ ಸದ್ದಿಲ್ಲದೆ ನಡೆದಿದೆ. ಈಗಾಗಲೇ ಮಂಡ್ಯದಲ್ಲಿ ನಾಲ್ಕು ಮಂದಿ ನಿರ್ಗತಿಕರಿಗೆ ಮನೆ ನಿರ್ಮಿಸಿ ಕೊಟ್ಟು ಆಶ್ರಯ ಕಲ್ಪಿಸಿಕೊಡಲಾಗಿದೆ.

ನಗರದ ನ್ಯೂ ತಮಿಳು ಕಾಲೋನಿಯಲ್ಲಿ ಎರಡು ಮನೆ, ಬಸರಾಳು ಗ್ರಾಮ ಮತ್ತು ಸಾತನೂರು ಗ್ರಾಮದಲ್ಲಿ ತಲಾ ಒಂದೊಂದು ಮನೆಯನ್ನು (House)  ನಿರ್ಮಿಸಿಕೊಡಲಾಗಿದೆ. ನಿರ್ಗತಿಕರಿಗೆ .1 ಲಕ್ಷ ವೆಚ್ಚದಲ್ಲಿ ಚಿಕ್ಕದಾಗಿ ಮನೆ ನಿರ್ಮಿಸಿಕೊಡುವ ಧರ್ಮಸ್ಥಳ (Dharmasthala)  ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಪರಿಕಲ್ಪನೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

‘ವಾತ್ಸಲ್ಯ’ ಹೆಸರಿನಲ್ಲಿ ನಿರ್ಗತಿಕರು ಮತ್ತು ಬಡವರನ್ನು ಗುರುತಿಸಿ ಮನೆಗಳನ್ನು ಕಟ್ಟಿಕೊಡಲಾಗುತ್ತಿದೆ. ಈ ಯೋಜನೆಯ ಫಲಾನುಭವಿಗಳು ಯಾವುದೇ ಆದಾಯ ಮೂಲವನ್ನು ಹೊಂದಿರಬಾರದು. ಸ್ವಂತ ನಿವೇಶನವನ್ನು ಹೊಂದಿರಬೇಕು. ಇಲ್ಲವೇ ಸರ್ಕಾರ ಅಥವಾ ದಾನಿಗಳು ನೀಡಿದ ಜಾಗವಿದ್ದರೂ ಅಲ್ಲಿ ಶ್ರೀಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ .1 ಲಕ್ಷ ವರೆಗೆ ಹಣ ಖರ್ಚು ಮಾಡಿ ಮನೆಗಳನ್ನು ನಿರ್ಮಿಸಿಕೊಡುತ್ತಿದೆ.

125 ನಿರ್ಗತಿಕರಿಗೆ ಮಾಸಾಶನ:

ಮಂಡ್ಯದಲ್ಲಿ 125 ಮಂದಿ ನಿರ್ಗತಿಕರಿದ್ದು ಅವರೆಲ್ಲರಿಗೂ ಮಾಸಾಶನ .1000 ನಂತೆ .1.20 ಲಕ್ಷ ವ್ಯಯಿಸಲಾಗುತ್ತಿದೆ. ಸ್ವಂತ ಜಾಗವಿರುವವರಿಗೆ 13*13 ಅಳತೆಯಲ್ಲಿ ಒಂದು ಹಾಲ್‌, ಅಡುಗೆ ಮನೆ, ಸ್ನಾನದಕೋಣೆ ಒಳಗೊಂಡಂತೆ ಪುಟ್ಟಮನೆಯನ್ನು ನಿರ್ಮಿಸಿಕೊಟ್ಟು ಆಶ್ರಯ ಕಲ್ಪಿಸಲಾಗುತ್ತಿದೆ.

ಮಾಸಾಶನ ಪಡೆಯುತ್ತಿರುವ ಬಹುತೇಕರಿಗೆ ಸ್ವಂತ ಜಾಗವಿಲ್ಲ. ಈ ಅಂಶವನ್ನು ಮನಗಂಡು ನಿರ್ಗತಿಕರಿಗೆ ಎಲ್ಲಾದರೂ ವಾಸಿಸಲು ಜಾಗ ಗುರುತಿಸಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದ್ದರೂ ಈವರೆಗೆ ಅದಕ್ಕೆ ಉತ್ತರವೇ ಬಂದಿಲ್ಲ. ಸಂಬಂಧಿಸಿದ ನಗರಸಭೆ, ಇತರೆ ಪ್ರಾಧಿಕಾರಗಳು, ದಾನಿಗಳು ಜಾಗ ಗುರುತಿಸಿಕೊಟ್ಟರೂ ಅಲ್ಲಿ ನಿರ್ಗತಿಕರಿಗೆ, ಕಡು ಬಡವರಿಗೆ ಸೂರು ಕಲ್ಪಿಸುವುದಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿಗಳು ಹೇಳುವ ಮಾತಾಗಿದೆ.

ಸಂಸ್ಥೆಯಿಂದಲೇ ಸಮೀಕ್ಷೆ:

ನಿರ್ಗತಿಕರು ಮತ್ತು ಕಡುಬಡವರನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಅಧಿಕಾರಿಗಳು ಮತ್ತು ಸದಸ್ಯರೇ ಸಮೀಕ್ಷೆ ನಡೆಸಿ ಆಯ್ಕೆ ಮಾಡುವರು. ಇದನ್ನು ಸ್ಥಳೀಯ ಸಂಸ್ಥೆಗಳೋ ಅಥವಾ ಜಿಲ್ಲಾಧಿಕಾರಿಗಳು ನಡೆಸುವುದಕ್ಕೆ ಅವಕಾಶವನ್ನೇ ನೀಡುತ್ತಿಲ್ಲ.

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದವರೇ ಖುದ್ದು ನಿರ್ಗತಿಕರು ಇರುವ ಸ್ಥಳಕ್ಕೆ ತೆರಳಿ ಪರಿಶೀಲನೆ ನೆಡೆಸುವರು. ಅವರ ಜೀವನಸ್ಥಿತಿ, ಆರ್ಥಿಕ ಮಟ್ಟಎಲ್ಲವನ್ನೂ ಪರಿಗಣಿಸಿ ಅವರಿಗೆ ಸ್ವಂತ ಸ್ಥಳವಿದ್ದರೆ ಮಾತ್ರ ಮನೆಗಳನ್ನು ನಿರ್ಮಿಸಿಕೊಡಲಾಗುತ್ತಿದೆ. ಈ ‘ವಾತ್ಸಲ್ಯ’ ಯೋಜನೆಯಿಂದ ನಿರ್ಗತಿಕರಾಗಿ ಬೀದಿಪಾಲಾಗುತ್ತಿದ್ದವರಿಗೆ ಸೂರಿನೊಂದಿಗೆ ಆಶ್ರಯವೂ ದೊರಕಿದಂತಾಗಿದೆ.

.1 ಲಕ್ಷದಲ್ಲಿ ಬೆಚ್ಚನೆಯ ಮನೆ:

ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ, ಗ್ರಾಮ ಪಂಚಾಯ್ತಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ನಿರ್ಗತಿಕರ ಬಗ್ಗೆ ಮಾಹಿತಿ ನೀಡಿದರೆ, ಅವರಿಗೆ ಸ್ವಂತ ಜಾಗವಿದ್ದರೆ, ಜಾಗವಿಲ್ಲದವರಿಗೆ ಸ್ಥಳ ಗುರುತಿಸಿಕೊಟ್ಟರೆ .1 ಲಕ್ಷ ವೆಚ್ಚದಲ್ಲಿ ಬೆಚ್ಚನೆಯ ಮನೆಯೊಂದು ನಿರ್ಗತಿಕರಿಗೆ ದೊರಕಿದಂತಾಗುತ್ತದೆ.

ನಗರದ ನ್ಯೂ ತಮಿಳು ಕಾಲೋನಿಯಲ್ಲಿ ಮರಗಳ ಸಂಧಿಯೊಳಗೆ ಪ್ಲಾಸ್ಟಿಕ್‌ ಹಾಸು ಹಾಕಿಕೊಂಡು ಜೀವನ ನಡೆಸುತ್ತಿದ್ದ ಶಾಂತಮ್ಮ ಹಾಗೂ ಅಲಮೇಗಲಮ್ಮ ಅವರಿಗೆ ಶ್ರೀಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ಎರಡು ಸೂರುಗಳನ್ನು ನಿರ್ಮಿಸಿಕೊಟ್ಟು ಆಶ್ರಯ ಒದಗಿಸಲಾಗಿದೆ.

ಕಳೆದೆರಡು ದಿನಗಳ ಹಿಂದೆ ಮಂಡ್ಯ ನಗರಸಭೆ ಅಧ್ಯಕ್ಷ ಎಚ್‌.ಎಸ್‌.ಮಂಜು, ಬಿಜೆಪಿ ಮುಖಂಡ ವಸಂತಕುಮಾರ್‌, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾಧಿಕಾರಿ ನಾರಾಯಣ್‌ ಪಾಟಾಳಿ ಹಾಗೂ ಗ್ರಾಮೀಣಾಭಿವೃದ್ಧಿ ಸಂಘದ ಸದಸ್ಯರು ಮನೆಗಳನ್ನು ಶಾಂತಮ್ಮ ಹಾಗೂ ಅಲಮೇಗಲಮ್ಮ ಅವರಿಗೆ ಹಸ್ತಾಂತರಿಸಿದರು.

ಶ್ರೀಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ‘ವಾತ್ಸಲ್ಯ’ ಯೋಜನೆಯಡಿ ಕಡುಬಡವರು-ನಿರ್ಗತಿಕರಿಗೆ ಸೂರು ನಿರ್ಮಿಸಿಕೊಡುವ ಯೋಜನೆ ಮಾದರಿಯಾದದ್ದು. ನಿರ್ಗತಿಕರಿಗೆ ಇದೊಂದು ವರದಾನವಾಗಿದೆ. ಡಾ.ವೀರೇಂದ್ರ ಹೆಗ್ಗಡೆಯವರು ದೂರದೃಷ್ಟಿಯನ್ನಿಟ್ಟುಕೊಂಡು ದೇಶಕ್ಕೆ ಮಾದರಿಯಾಗುವಂತಹ ಯೋಜನೆ ರೂಪಿಸಿದ್ದಾರೆ. ಕಡುಬಡವರು, ನಿರ್ಗತಿಕರ ಪಾಲಿಗೆ ಅವರು ದೈವಸಮಾನರಾಗಿದ್ದಾರೆ. ಇಂತಹ ಜನೋಪಯೋಗಿ ಯೋಜನೆಗಳು ಡಿ.ವೀರೇಂದ್ರ ಹೆಗ್ಗಡೆಯವರ ಕೃಪಾಶೀರ್ವಾದದಿಂದ ರೂಪುಗೊಂಡು ಸಮಾಜದ ಅಭ್ಯುದಯಕ್ಕೆ ನೆರವಾಗಲಿ.

- ಎಚ್‌.ಎಸ್‌.ಮಂಜು, ಅಧ್ಯಕ್ಷರು, ನಗರಸಭೆ

ನಿರ್ಗತಿಕರು ಹಾಗೂ ಕಡುಬಡವರನ್ನು ನಾವೇ ಗುರುತಿಸುತ್ತೇವೆ. ಅವರಿಗೆ ಯಾವುದೇ ಆದಾಯ ಮೂಲವಿಲ್ಲದೆ ಯಾರ ಆಶ್ರಯದಲ್ಲೂ ಇಲ್ಲದೆ ಏಕಾಂಗಿಯಾಗಿ ಜೀವನ ನಡೆಸುತ್ತಾ ಸ್ವಂತ ಸ್ಥಳವನ್ನು ಹೊಂದಿದ್ದರೆ ಅಲ್ಲೊಂದು ಮನೆ ನಿರ್ಮಿಸಿಕೊಡಲಾಗುವುದು. ಮಂಡ್ಯದಲ್ಲಿ 125 ಜನ ನಿರ್ಗತಿಕರಿದ್ದು, ಬಹುತೇಕರಿಗೆ ನಿವೇಶನವಿಲ್ಲದಿರುವುದರಿಂದ ಸೂರು ನಿರ್ಮಿಸಿಕೊಡಲಾಗುತ್ತಿಲ್ಲ. ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಪತ್ರ ವ್ಯವಹಾರ ನಡೆಸಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ದಾನಿಗಳು ಜಾಗ ಕೊಟ್ಟರೂ ಮನೆ ನಿರ್ಮಿಸಿಕೊಡುತ್ತೇವೆ.

- ನಾರಾಯಣ್‌ ಪಾಟಾಳಿ, ಯೋಜನಾಧಿಕಾರಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ

Follow Us:
Download App:
  • android
  • ios