ಯಾರು ಏನೇ ಹೇಳಿದರೂ ಕರ್ನಾಟಕ ಬಂದ್ ಹಿಂಪಡೆಯುವುದಿಲ್ಲ : ವಾಟಾಳ್ ನಾಗರಾಜ್
ಮುಂದಿನ ಡಿಸೆಂಬರ್ 5 ರಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ವಾಟಾಳ್ ನಾಗರಾಜ್ ಕರೆ ನೀಡಿದ್ದಾರೆ.
ಬಳ್ಳಾರಿ (ನ.24): ಮರಾಠ ಅಭಿವೃದ್ಧಿ ಪ್ರಾಧಿಕಾರ ರಚಿಸಲು ಹೊರಟಿರುವ ಸರ್ಕಾರ ವಿರುದ್ಧ ಡಿ. 5ರಂದು ಹಮ್ಮಿಕೊಂಡಿರುವ ‘ಕರ್ನಾಟಕ ಬಂದ್’ ನಿಲ್ಲುವುದಿಲ್ಲ. ಅದು ನಡೆದೇ ನಡೆಯುತ್ತದೆ ಎಂದು ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಸ್ಪಷ್ಟಪಡಿಸಿದರು.
ಬಳ್ಳಾರಿ ವಿಭಜನೆ ವಿರೋಧಿಸಿ ಹಮ್ಮಿಕೊಂಡಿದ್ದ ಹೋರಾಟದಲ್ಲಿ ಭಾಗಿಯಾಗಲು ಆಗಮಿಸಿದ್ದ ಅವರು ಸುದ್ದಿಗಾರರ ಜತೆ ಮಾತನಾಡಿದರು.
ಹೋರಾಟಗಾರರ ನಡುವೆ ಯಾವ ಭಿನ್ನಾಭಿಪ್ರಾಯವಿಲ್ಲ. ನಾರಾಯಣಗೌಡ, ಪ್ರವೀಣ್ ಶೆಟ್ಟಿಅವರು ನನ್ನ ಸ್ನೇಹಿತರು. ಇನ್ನೂ ಸಮಯವಿದೆ. ಅವರ ಜತೆ ಚರ್ಚಿಸುವೆ. ಮರಾಠರ ವೋಟ್‌ಬ್ಯಾಂಕ್‌ಗಾಗಿ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದ ವಿರುದ್ಧ ಎಲ್ಲ ಕನ್ನಡಿಗರು ಧ್ವನಿ ಎತ್ತಬೇಕಾಗಿದ್ದು, ಡಿ. 5ರ ಕರ್ನಾಟಕ ಬಂದ್ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಪ್ರತಿಷ್ಠೆಗಾಗಿ ನಡೆಯುತ್ತಿದೆಯಾ ಕರ್ನಾಟಕ ಬಂದ್: ಸಂಘಟನೆಗಳಿಗೆ ಬೆದರಿಕೆ ಹಾಕಿದ್ರಾ ವಾಟಾಳ್..? .
ಕನ್ನಡಿಗರ ಹಿತಾಸಕ್ತಿ ಮರೆತು ಮರಾಠಿಗರ ಪರ ನಿಲುವು ತೆಗೆದುಕೊಂಡಿರುವ ಸರ್ಕಾರದ ವಿರುದ್ಧ ಹೋರಾಟ ತೀವ್ರಗೊಳ್ಳಲಿದೆ. ಇದು ನನ್ನೊಬ್ಬನ ಹೋರಾಟವಲ್ಲ. ಕನ್ನಡಿಗರ ಸ್ವಾಭಿಮಾನದ ಹೋರಾಟವಾಗಿದೆ ಎಂದು ವಾಟಾಳ್ ಹೇಳಿದರು.
ಬಳ್ಳಾರಿ ವಿಭಜನೆ ವಿರೋಧಿಸಿ ಎಲ್ಲ ಶಾಸಕರು, ಜನಪ್ರತಿನಿಧಿಗಳು ಹೋರಾಟದಲ್ಲಿ ಪಾಲ್ಗೊಳ್ಳಬೇಕು. ಸ್ಥಳೀಯ ಶಾಸಕರು ತಮ್ಮ ಸ್ಥಾನಗಳಿಗೆ ರಾಜಿನಾಮೆ ಹೊರ ಬರಬೇಕು. ಯಡಿಯೂರಪ್ಪ ತೆಗೆದುಕೊಳ್ಳುತ್ತಿರುವ ಮೂರ್ಖತನದ ನಿರ್ಧಾರಗಳ ವಿರುದ್ಧ ಈ ಭಾಗದ ಶಾಸಕರು ಧ್ವನಿ ಎತ್ತುವಂತಾಗಬೇಕು ಎಂದರಲ್ಲದೆ, ಬಳ್ಳಾರಿ ವಿಭಜನೆ ಹೋರಾಟದಲ್ಲಿ ನಾನು ನಿರಂತರ ಭಾಗಿಯಾಗುತ್ತೇನೆ. ಎಷ್ಟುದಿನ ಬೇಕಾದರೂ ನನ್ನನ್ನು ಜೈಲಿಗೆ ಹಾಕಲಿ. ಹೆದರುವುದಿಲ್ಲ ಎಂದರು.
ಇದೇ ವೇಳೆ ಶಾಸಕ ರೇಣುಕಾಚಾರ್ಯ ಹಾಗೂ ಯತ್ನಾಳ್ ಅವರು ಕನ್ನಡಪರ ಸಂಘಟನೆಗಳ ಕುರಿತು ನೀಡಿರುವ ಹೇಳಿಕೆ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಾಟಾಳ್ ನಾಗರಾಜ್ ಅವರು, ಯತ್ನಾಳ್, ರೇಣುಕಾಚಾರ್ಯ ಅವರಿಗೆ ನನ್ನ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ? ಎಂದು ಕೇಳಿದರಲ್ಲದೆ, ಇದಕ್ಕೆ ಉತ್ತರಿಸುವುದು ಮೂರ್ಖತನವಾಗುತ್ತದೆ ಎಂದರು.