Asianet Suvarna News Asianet Suvarna News

ಬೆಂಗ್ಳೂರಿಗೆ ಬಂತು ಧಾರವಾಡ ವಂದೇ ಭಾರತ್‌ ರೈಲು..!

19ರಿಂದ ಬೆಂಗ್ಳೂರು-ಧಾರವಾಡ ವಂದೇ ಭಾರತ್‌ ಟ್ರಯಲ್‌, ಚೆನ್ನೈನಿಂದ ಬೆಂಗಳೂರಿಗೆ ಬಂದ 8 ಬೋಗಿಯ ರೈಲು, ಜೂ.26ರಂದು ಪ್ರಧಾನಿ ಮೋದಿ ನಿಶಾನೆ, ಮಂಗಳವಾರ ಹೊರತುಪಡಿಸಿ 6 ದಿನ ಸಂಚಾರ

Vande Bharat train Arrived at Bengaluru Railway Station grg
Author
First Published Jun 16, 2023, 5:22 AM IST | Last Updated Jun 16, 2023, 10:20 AM IST

ಬೆಂಗಳೂರು(ಜೂ.16): ಪ್ರತಿಷ್ಠಿತ ‘ವಂದೇ ಭಾರತ್‌ ರೈಲು’ ಗುರುವಾರ ಬೆಂಗಳೂರು ರೈಲು ನಿಲ್ದಾಣಕ್ಕೆ ಆಗಮಿಸಿದೆ. ಬೆಂಗಳೂರು- ಧಾರವಾಡ ಮಾರ್ಗದಲ್ಲಿ ಸಂಚರಿಸಲು ಜೂ. 26ರಂದು ಪ್ರಧಾನಿ ನರೇಂದ್ರ ಮೋದಿ ಅವರು ಇದಕ್ಕೆ ಚಾಲನೆ ನೀಡಲಿದ್ದು, ಅದಕ್ಕೂ ಮುನ್ನ ಸೋಮವಾರದಿಂದ ಇದರ ಪ್ರಾಯೋಗಿಕ ಚಾಲನೆ ನಡೆಯಲಿದೆ. ಎಂಟು ಬೋಗಿಗಳುಳ್ಳ ‘ಮಿನಿ ವಂದೇ ಭಾರತ್‌’ ಇದಾಗಿದೆ. ಚೆನ್ನೈನ ಪೆರಂಬೂರಿನಿಂದ ಹೊರಟು ಬೆಂಗಳೂರು ತಲುಪಿದ್ದು, ಇಲ್ಲಿನ ಕೆಎಸ್‌ಆರ್‌ ನಿಲ್ದಾಣದ 7ನೇ ಪ್ಲಾಟ್‌ಫಾರ್ಮ್‌ನಲ್ಲಿ ನಿಲುಗಡೆಯಾಗಿದೆ.

ಈ ವಂದೇ ಭಾರತ್‌ ರೈಲು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಹುಬ್ಬಳ್ಳಿಯ ಶ್ರೀಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣದ ಮೂಲಕ ಧಾರವಾಡ ರೈಲು ನಿಲ್ದಾಣದವರೆಗೆ ಅಂದರೆ 487.47 ಕಿ.ಮೀ. ಸಂಚರಿಸಲಿದೆ. ಮಂಗಳವಾರ ಹೊರತುಪಡಿಸಿ ವಾರದ ಆರು ದಿನಗಳ ಕಾಲ ಇದು ಪ್ರಯಾಣಿಕರಿಗೆ ಸೇವೆ ಒದಗಿಸಲಿದೆ ಎಂದು ನೈಋುತ್ಯ ರೈಲ್ವೆ ಬೆಂಗಳೂರು ವಿಭಾಗೀಯ ಅಧಿಕಾರಿಗಳು ತಿಳಿಸಿದ್ದಾರೆ.

ಈಶಾನ್ಯ ಭಾರತಕ್ಕೂ ಸಿಕ್ತು ವಂದೇ ಭಾರತ್‌ ರೈಲು: ದೇಶದ 18ನೇ ಸೆಮಿ ಹೈ ಸ್ಪೀಡ್‌ ಟ್ರೈನಿಗೆ ಪ್ರಧಾನಿ ಮೋದಿ ಚಾಲನೆ

ಬೆಂಗಳೂರಿಂದ 6 ಗಂಟೆ 55 ನಿಮಿಷಗಳ ಅಂತರದಲ್ಲಿ ಇದು ಧಾರವಾಡ ತಲುಪಲಿದೆ ಎಂದು ನಿರೀಕ್ಷಿಸಲಾಗಿದೆ. ಬೆಂಗಳೂರು ನಗರದಿಂದ ಬೆಳಗ್ಗೆ 5.45ಕ್ಕೆ ಹೊರಟು ಮಧ್ಯಾಹ್ನ 12.40ಕ್ಕೆ ಧಾರವಾಡ ತಲುಪಲಿದೆ. ಧಾರವಾಡದಿಂದ ಮಧ್ಯಾಹ್ನ 1.15ಕ್ಕೆ ಹೊರಟು ರಾತ್ರಿ 8:10ಕ್ಕೆ ಬೆಂಗಳೂರು ನಗರವನ್ನು ತಲುಪುವ ನಿರೀಕ್ಷೆಯಿದೆ. ಇದು ಯಶವಂತಪುರ, ಸಂಪಿಗೆ ರೋಡ್‌ ರೈಲ್ವೇ ಸ್ಟೇಷನ್‌, ದಾವಣಗೆರೆ, ಕರ್ಜಗಿ, ಹುಬ್ಬಳ್ಳಿ ಮೂಲಕ ಧಾರವಾಡ ನಿಲ್ದಾಣದಲ್ಲಿ ನಿಲುಗಡೆ ಆಗಲಿದೆ. ಸಮಯದ ಕುರಿತು ಪ್ರಸ್ತಾವನೆ ಸಲ್ಲಿಸಲಾಗುವುದು. ಅಂತಿಮವಾಗಿ ರೈಲ್ವೇ ಮಂಡಳಿ ನಿರ್ಧರಿಸಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ರಾಜ್ಯಕ್ಕೆ ಎರಡನೇ ವಂದೇ ಭಾರತ್‌:

ಈಗಾಗಲೇ ರಾಜ್ಯದಲ್ಲಿ ದಕ್ಷಿಣ ರೈಲ್ವೆ ಒಡೆತನದ 16 ಬೋಗಿಗಳುಳ್ಳ ಚೆನ್ನೈ-ಮೈಸೂರು ರೈಲು ಸಂಚರಿಸುತ್ತಿದೆ. ನೈಋುತ್ಯ ರೈಲ್ವೆ ವ್ಯಾಪ್ತಿಯ ಮೊದಲ ವಂದೇ ಭಾರತ್‌ ರೈಲು ಇದಾಗಿದೆ.

ಮುಂದಿನ ತಿಂಗಳಿಂದ ದೇಶದ 21 ರಾಜ್ಯಗಳಲ್ಲಿ ವಂದೇ ಭಾರತ ಹೈ ಸ್ಪೀಡ್ ರೈಲು ಸಂಚಾರ

130 ಕಿ.ಮೀ. ವೇಗ ಡೌಟ್‌

ನೈಋುತ್ಯ ರೈಲ್ವೆ ಪಡೆಯುತ್ತಿರುವ ಮೊದಲ ವಂದೇ ಭಾರತ್‌ ರೈಲು ಇದಾಗಿದೆ. ಆದರೆ, ಅಂದುಕೊಂಡಂತೆ ಇದು ಗಂಟೆಗೆ 130 ಕಿ.ಮೀ. ವೇಗದಲ್ಲಿ ಚಾಲನೆ ಮಾಡುವುದು ಬಹುತೇಕ ಅನುಮಾನ. ಬೆಂಗಳೂರಿಂದ ಸಂಪಿಗೆ ರಸ್ತೆವರೆಗೆ ಹಳಿಗಳು ನೇರವಾಗಿವೆ. ಅದರ ಬಳಿಕ ಸಾಕಷ್ಟು ತಿರುವುಗಳಿವೆ. ಇದು ವಂದೇ ಭಾರತ್‌ ರೈಲಿನ ವೇಗಕ್ಕೆ ತಡೆಯಾಗಲಿದೆ. ಹೀಗಾಗಿ ಸರಾಸರಿ 70.54 ಕಿ.ಮೀ. ವೇಗದಲ್ಲಿ ಈ ರೈಲು ಸಂಚರಿಸಲಿದೆ ಎಂದು ನೈಋುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದರು.

8 ಕೋಚ್‌ಗಳ ವಂದೇ ಭಾರತ್‌ ಕೆಎಸ್‌ಆರ್‌ ನಿಲ್ದಾಣ ತಲುಪಲಿದೆ. ಸೋಮವಾರದಿಂದ ಇದರ ಪ್ರಾಯೋಗಿಕ ಚಾಲನೆ ನಡೆಸಲು ಚಿಂತಿಸಲಾಗಿದೆ. ಸಮಸ್ಯೆ, ಅಡೆತಡೆ ಕಂಡುಕೊಂಡು ನಿವಾರಿಸಲಾಗುವುದು ಅಂತ ಬೆಂಗಳೂರು ವಿಭಾಗೀಯ ಹೆಚ್ಚುವರಿ ವ್ಯವಸ್ಥಾಪಕಿ ಕುಸುಮಾ ಹರಿಪ್ರಸಾದ್‌ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios