ಪೂರೈಕೆಯಲ್ಲಿ ಕೊರತೆ| ಕೊರೋನಾ ಸೋಂಕಿನ ಭೀತಿಯಿಂದಾಗಿ ಲಸಿಕೆ ಪಡೆಯಲು ಬಿಬಿಎಂಪಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬೆಳಗ್ಗೆ 7ರಿಂದಲೇ ಮುಗಿಬಿದ್ದಿದ್ದ ಸಾರ್ವಜನಿಕರು| 19 ಸಾವಿರ ಜನರಿಗೆ ಲಸಿಕೆ| 

ಬೆಂಗಳೂರು(ಮೇ.02): ಕೊರೋನಾ ಸೋಂಕು ಹೆಚ್ಚುತ್ತಿರುವ ಬೆನ್ನಲ್ಲೇ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ ಹಾಕುವ ಕಾರ್ಯಕ್ಕೆ ಚಾಲನೆ ದೊರೆತಿದೆ ಆದರೆ ಮೊದಲ ದಿನವೇ ಹಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ಇತರೆ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಕೊರತೆಯುಂಟಾಗಿದೆ.

ಈ ಹಿಂದೆ 45 ವರ್ಷ ಮೇಲ್ಪಟ್ಟವರಿಗೆ ಕೋವಿನ್‌ ವೆಬ್‌ಸೈಟ್‌ನಲ್ಲಿ ನೋಂದಣಿಯಾದವರಿಗೆ ಸರದಿಯಂತೆ ಪ್ರತಿ ಆರೋಗ್ಯ ಕೇಂದ್ರದಲ್ಲಿ ದಿನಕ್ಕೆ 100ರಿಂದ 150 ಜನರಿಗೆ ಲಸಿಕೆ ನೀಡಲಾಗುತ್ತಿತ್ತು. ಆದರೆ ಶನಿವಾರ 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ಹಾಕುವುದಾಗಿ ಸರ್ಕಾರ ಘೋಷಿಸಿತ್ತು. ಆದರೆ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಪೂರೈಸಿರಲಿಲ್ಲ. ಇದರಿಂದಾಗಿ ಆನ್‌ಲೈನ್‌ನಲ್ಲಿ ನೋಂದಣಿಯಾದ 45 ವರ್ಷ ಮೇಲ್ಪಟ್ಟ ಕೆಲವರಿಗೆ ಲಸಿಕೆ ಸಿಗಲಿಲ್ಲ ಎಂದು ಆರೋಗ್ಯ ಸಿಬ್ಬಂದಿ ಮಾಹಿತಿ ನೀಡಿದರು.

"

ಲಸಿಕೆ ಇಲ್ಲದೇ ಅಭಿಯಾನ ಆರಂಭಿಸಿದ ಸಿಎಂ: ಯಡಿಯೂರಪ್ಪ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

ಕೊರೋನಾ ಸೋಂಕಿನ ಭೀತಿಯಿಂದಾಗಿ ಸಾರ್ವಜನಿಕರು ಲಸಿಕೆಗಳನ್ನು ಪಡೆಯಲು ಬಿಬಿಎಂಪಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬೆಳಗ್ಗೆ 7ರಿಂದಲೇ ಮುಗಿಬಿದ್ದಿದ್ದರು. ಕೆಲವು ಕಡೆಗಳಲ್ಲಿ ಬೆಳಗ್ಗೆ 12 ಗಂಟೆಯಷ್ಟರಲ್ಲಿ ಲಸಿಕೆ ಖಾಲಿಯಾಗಿದ್ದರಿಂದ ಹಲವರು ನಿರಾಸೆಯಿಂದ ಹಿಂದಿರುಗಿದರು. ಮಧ್ಯಾಹ್ನದ ನಂತರ ಕೆಲ ಕೇಂದ್ರಗಳಿಗೆ ಲಸಿಕೆ ಬಂದಿದ್ದರಿಂದ ಪುನಃ ಲಸಿಕೆ ಹಾಕುವ ಕಾರ್ಯ ಮುಂದುವರೆಯಿತು.

19 ಸಾವಿರ ಜನರಿಗೆ ಲಸಿಕೆ

ಸರ್ಕಾರಿ ಮತ್ತು ಖಾಸಗಿ ಲಸಿಕಾ ಕೇಂದ್ರಗಳು ಒಟ್ಟು ಸೇರಿ 300ಕ್ಕೂ ಹೆಚ್ಚು ಕೇಂದ್ರಗಳಲ್ಲಿ 13,127 ಮಂದಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗಿದೆ. ಉಳಿದಂತೆ ಆರೋಗ್ಯ ಕಾರ್ಯಕರ್ತೆಯರಲ್ಲಿ 502 ಮಂದಿಗೆ ಮೊದಲ ಡೋಸ್‌, 633 ಮಂದಿ ದ್ವಿತೀಯ ಡೋಸ್‌ ಪಡೆದುಕೊಂಡಿದ್ದಾರೆ. ಮುಂಚೂಣಿ ಕಾರ್ಯಕರ್ತರಲ್ಲಿ 1,605 ಮಂದಿ ಮೊದಲ ಡೋಸ್‌, 363 ಮಂದಿ ದ್ವಿತೀಯ ಡೋಸ್‌ ಪಡೆದಿದ್ದಾರೆ. ಆನ್‌ಲೈನ್‌ ಮೂಲಕ 2772 ಮಂದಿ ನಾಗರಿಕರು ಲಸಿಕೆ ಪಡೆದಿದ್ದಾರೆ. 6390 ಮಂದಿ ನಾಗರಿಕರು ಮೊದಲ ಡೋಸ್‌ ಹಾಕಿಸಿಕೊಂಡಿದ್ದಾರೆ. ಒಟ್ಟಾರೆ 19,602 ಮಂದಿ ಶನಿವಾರ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ವಿಜಯೇಂದ್ರ ಅವರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona