ನಾರಿ ಶಕ್ತಿಯನ್ನು ಅವಮಾನಿಸಿದವರ ಪಾಪದ ಕೊಡ ತುಂಬುತ್ತಾ ಬಂದಿದೆ. ಮಹಿಳೆಯರೇ ಅವರಿಗೆ ತಕ್ಕಪಾಠ ಕಲಿಸುತ್ತಾರೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಮೈಸೂರು (ಏ.23): ನಾರಿ ಶಕ್ತಿಯನ್ನು ಅವಮಾನಿಸಿದವರ ಪಾಪದ ಕೊಡ ತುಂಬುತ್ತಾ ಬಂದಿದೆ. ಮಹಿಳೆಯರೇ ಅವರಿಗೆ ತಕ್ಕಪಾಠ ಕಲಿಸುತ್ತಾರೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು. ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಕಸಿತ ಭಾರತ 2047 ಗುರಿಯೊಂದಿಗೆ ಭಾರತವನ್ನು ವಿಶ್ವದ ಭೂಪಟದಲ್ಲಿ ಪ್ರಥಮ ಸ್ಥಾನಕ್ಕೆ ಕೊಂಡೊಯ್ಯುವ ಸಂಕಲ್ಪದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದಿರುವ ಮಹಿಳಾ ಮೀಸಲಾತಿ ಕಾಯ್ದೆ ಒಂದು ಐತಿಹಾಸಿಕ ತೀರ್ಮಾನ. ಆದರೆ ಕಾಂಗ್ರೆಸ್, ಡಿಎಂಕೆ ಸೇರಿದಂತೆ ಇತರೆ ಪಕ್ಷಗಳು ನಡೆದುಕೊಂಡ ರೀತಿ ಸರಿಯಲ್ಲ ಎಂದರು.
ಈ ಪವಿತ್ರ ಕಾರ್ಯಕ್ಕೆ ವಿರೋಧ ಪಕ್ಷಗಳು ಅಡ್ಡಿಪಡಿಸುತ್ತಿರುವುದು ಮಹಿಳಾ ಕುಲಕ್ಕೆ ಮಾಡುತ್ತಿರುವ ದ್ರೋಹ, ಪಾಪದ ಕೃತ್ಯ. ಮಹಿಳಾ ಮೀಸಲಾತಿ ಬಿಲ್ ಸೋಲಿಸಲು ವಿರೋಧ ಪಕ್ಷಗಳು ನಡೆಸಿರುವ ಕುತಂತ್ರ ಇದು. ಮಹಿಳೆಯರು ಮುಖ್ಯವಾಹಿನಿಗೆ ಬರಬಾರದು ಎನ್ನುವ ಕೆಟ್ಟ ಚಾಳಿಯನ್ನು ಹೊಂದಿರುವ ಕಾಂಗ್ರೆಸ್, ಸಮಾಜವಾದಿ ಪಕ್ಷ, ಟಿಎಂಸಿ ಹಾಗೂ ಡಿಎಂಕೆ ಪಕ್ಷಗಳು ಒಟ್ಟಾಗಿ ಈ ಐತಿಹಾಸಿಕ ನಡೆಯನ್ನು ವಿರೋಧಿಸಿವೆ. ಇದು ದೇಶದ ಸಾಮಾನ್ಯ ಮಹಿಳೆಯರಿಗೆ ಮಾಡುತ್ತಿರುವ ಅಪಚಾರ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಧರ್ಮಾಧಾರಿತ ಮೀಸಲಾತಿ ಎಂಬ ಷಡ್ಯಂತ್ರ
ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಧರ್ಮಾಧಾರಿತ ಮೀಸಲಾತಿ ಸ್ಪಷ್ಟವಾಗಿ ವಿರೋಧಿಸಿದ್ದರು. ಆದರೆ, ಇಂದಿನ ವಿರೋಧ ಪಕ್ಷಗಳು ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಬೇಕು ಎಂಬ ಹೊಸ ವರಸೆ ತೆಗೆಯುವ ಮೂಲಕ ಸಮಾಜದಲ್ಲಿ ಸಂಘರ್ಷ ಸೃಷ್ಟಿಸಲು ಯತ್ನಿಸುತ್ತಿವೆ ಎಂದು ಅವರು ಆರೋಪಿಸಿದರು. ಎಸ್ಸಿ, ಎಸ್ಟಿ ಮತ್ತು ಒಬಿಸಿ ಮೀಸಲಾತಿಯನ್ನು ಗೌರವಿಸುವ ಎನ್.ಡಿ.ಎ ಸರ್ಕಾರ ಅಂಬೇಡ್ಕರ್ ಅವರ ಆಶಯದಂತೆ ನಡೆಯುತ್ತಿದೆ.
ಈ ಹೊಸ ಮೀಸಲಾತಿಯಿಂದ ದಕ್ಷಿಣ ಭಾರತಕ್ಕೆ ಅನ್ಯಾಯವಾಗುವುದಿಲ್ಲ. ಕ್ಷೇತ್ರ ಪುನರ್ವಿಂಗಡಣೆಯ ಕುರಿತು ಹಬ್ಬಿಸುತ್ತಿರುವುದು ಸುಳ್ಳು ಸುದ್ದಿ. 1976 ರಲ್ಲಿ 54 ಕೋಟಿ ಇದ್ದ ಜನಸಂಖ್ಯೆ ಇಂದು 140 ಕೋಟಿಗೆ ತಲುಪಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಅನಿವಾರ್ಯ ಎಂದರು. ಮೀಸಲಾತಿ ಜಾರಿಯಾದಲ್ಲಿ ಕರ್ನಾಟಕದ ಲೋಕಸಭಾ ಸ್ಥಾನಗಳ ಸಂಖ್ಯೆ 28 ರಿಂದ 42 ಕ್ಕೆ ಏರಿಕೆ ಆಗುವ ನಿರೀಕ್ಷೆ ಇದೆ. ದಕ್ಷಿಣ ರಾಜ್ಯಗಳಲ್ಲಿ ಒಟ್ಟು ಸ್ಥಾನಗಳ ಸಂಖ್ಯೆ 169ಕ್ಕೂ ಹೆಚ್ಚು ಏರಿಕೆಯಾಗಲಿದ್ದು, ಇದು ಮಹಿಳೆಯರ ರಾಜಕೀಯ ಸಬಲೀಕರಣಕ್ಕೆ ಪೂರಕವಾಗಲಿದೆ ಎಂದು ಅವರು ವಿವರಿಸಿದರು.
ಮೋದಿ ಸರ್ಕಾರದ 11 ವರ್ಷಗಳ ಮಹಿಳಾ ಪರ ಸಾಧನೆ ಅನನ್ಯ. ಕಳೆದ 50 ವರ್ಷಗಳಿಂದ ಕಾಂಗ್ರೆಸ್ ಕೇವಲ ಕಾಲಹರಣ ಮಾಡುತ್ತಾ ಬಂದಿದ್ದರೆ, ಮೋದಿ ಸರ್ಕಾರ ಕಳೆದ ಒಂದು ದಶಕದಲ್ಲಿ ಮಹಿಳೆಯರಿಗಾಗಿ ಕ್ರಾಂತಿಕಾರಿ ಯೋಜನೆ ಜಾರಿಗೆ ತಂದಿದೆ. 12 ಕೋಟಿ ಶೌಚಾಲಯಗಳನ್ನು ನಿರ್ಮಿಸಿದೆ. ಉಜ್ವಲ ಯೋಜನೆ ಮತ್ತು ಮಾತೃ ವಂದನಾ ಯೋಜನೆ, ಮುದ್ರಾ ಸಾಲ ಮತ್ತು ಸುಕನ್ಯಾ ಸಮೃದ್ಧಿ ಯೋಜನೆ ಜಾರಿಗೊಳಿಸಿದೆ. 5 ಕೋಟಿ ಮುಸ್ಲಿಂ ಮಹಿಳೆಯರಿಗೆ ಮುಕ್ತಿ ನೀಡಿದ ತ್ರಿವಳಿ ತಲಾಕ್ ನಿಷೇಧ ಮಾಡಿದ್ದು ಬಿಜೆಪಿ ಸರ್ಕಾರ ಎಂದರು.
ನಾರಿ ಶಕ್ತಿಯನ್ನು ಅವಮಾನಿಸಿದವರಿಗೆ ಉಳಿಗಾಲ ಇಲ್ಲ ಎಂಬುದಕ್ಕೆ ಇತಿಹಾಸವೇ ಸಾಕ್ಷಿ. ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ ಮತ್ತು ಮೈಸೂರಿನ ಮಹಾರಾಣಿ ವಾಣಿ ವಿಲಾಸ ಕೆಂಪನಂಜಮ್ಮಣ್ಣಿ ಅವರಂತಹ ಮಹಾನ್ ಮಹಿಳೆಯರು ನಮಗೆ ಪ್ರೇರಣೆ. ಅಂತಹ ಪರಂಪರೆಯನ್ನು ಗೌರವಿಸುವುದು ನಮ್ಮ ಆದ್ಯತೆ ಎಂದು ತಿಳಿಸಿದರು. ಮಹಿಳಾ ಸಬಲೀಕರಣದ ಮೂಲಕ ಸಶಕ್ತ ಭಾರತ ನಿರ್ಮಾಣಕ್ಕೆ ಭಾರತೀಯ ಜನತಾ ಪಕ್ಷ ಮತ್ತು ಎನ್.ಡಿ.ಎ ಮೈತ್ರಿಕೂಟ ಬದ್ಧವಾಗಿದ್ದು, ವಿರೋಧ ಪಕ್ಷಗಳ ನಾಟಕಕ್ಕೆ ಜನರು ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ. ಪಾಪದ ಹೊರೆಯನ್ನು ವಿಪಕ್ಷಗಳು ಹೊರಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ನಾರಿ ಶಕ್ತಿಯನ್ನು ಕೆಣಕಿದವರಿಗೆ ಉಳಿಗಾಲವಿಲ್ಲ ಎಂಬುದಕ್ಕೆ ಇತಿಹಾಸದ ಪುಟಗಳು ಸಾಕ್ಷಿಯಾಗಿವೆ. ಮಹಾಭಾರತದಲ್ಲಿ ದ್ರೌಪದಿಯನ್ನು ಕೆಣಕಿದ ಕೌರವರ ಸ್ಥಿತಿ ಏನಾಯಿತು? ಸೀತೆಯನ್ನು ಅಪಹರಿಸಿದ ರಾವಣನ ಸ್ಥಿತಿ ಏನಾಯಿತು? ಪೆಹಲ್ಗಾಮ್ ನಲ್ಲಿ ಪ್ರವಾಸಿಗರನ್ನು ಕೊಲೆಗೈದ ಉಗ್ರರ ಸ್ಥಿತಿ ಏನಾಯಿತು? ಎಂಬುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಮಹಿಳಾ ಮೀಸಲಾತಿ ಬಿಲ್ ವಿರೋಧಿಸಿದ ಕಾಂಗ್ರೆಸ್ ಪಕ್ಷದ ಪಾಪದ ಕೊಡ ತುಂಬಿದೆ. ಮುಂಬರುವ ದಿನಗಳಲ್ಲಿ ಮಹಿಳಾ ಮೀಸಲಾತಿ ಬಿಲ್ ಪಾಸ್ ಆಗುವ ವಿಶ್ವಾಸವಿದೆ ಎಂದರು.

