ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಜಲಜೀವನ್ ಮಿಷನ್ ಕಾಮಗಾರಿ 20ನೇ ಸ್ಥಾನದಿಂದ 5ನೇ ಸ್ಥಾನಕ್ಕೇರಿದೆ. ಮಡಕಶಿರಾ-ಮಧುಗಿರಿ-ಪಾವಗಡ-ಕೊರಟಗೆರೆ ರೈಲ್ವೆ ಮಾರ್ಗ ಪೂರ್ಣಗೊಳ್ಳುವ ಮತ್ತು ಕಾಮಗಾರಿಗಳ ಪ್ರಗತಿ ಕುರಿತು ಸಚಿವ ವಿ. ಸೋಮಣ್ಣ ಮಾಹಿತಿ ನೀಡಿದ್ದಾರೆ.
ತುಮಕೂರು: ಜಲಜೀವನ್ ಮಿಷನ್ ಕಾಮಗಾರಿಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರ 20ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಬಂದಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ, ತುಮಕೂರು ಸಂಸದ ವಿ. ಸೋಮಣ್ಣ ತಿಳಿಸಿದರು.
ಪಾವಗಡ, ಮಧುಗಿರಿ, ಮಡಕಶಿರಾ ಹಾಗೂ ಕೊರಟಗೆರೆ ತಾಲ್ಲೂಕಿನ ರೈಲ್ವೆ ಕಾಮಗಾರಿ ವೀಕ್ಷಣೆ ನಂತರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಮಗಾರಿಗಳ ಪ್ರಗತಿ ಬಗ್ಗೆ ಮಾಹಿತಿ ನೀಡಿದರು.
2027ರ ಡಿಸೆಂಬರ್ ಒಳಗಾಗಿ ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭ
ಪಾವಗಡ ಹಾಗೂ ಮಧುಗಿರಿ ಭಾಗದ ಮಿಡಗೇಶಿಯಲ್ಲಿ ಇನ್ನೂ ಫ್ಲೋರೈಡ್ ನೀರು ಸಮಸ್ಯೆ ಇದೆ. ಅಲ್ಲಿನ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಉದ್ಘಾಟಿಸಲಾಗಿದೆ ಎಂದರು. ಮಡಕಶಿರಾ-ಮಧುಗಿರಿ-ಪಾವಗಡ-ಕೊರಟಗೆರೆ ರೈಲ್ವೆ ಮಾರ್ಗದ ಕಾಮಗಾರಿ ವೇಗವಾಗಿ ಸಾಗಿದ್ದು, 2027ರ ಡಿಸೆಂಬರ್ ಒಳಗಾಗಿ ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಲಿದೆ ಎಂದು ಭರವಸೆ ನೀಡಿದರು.
ತುಮಕೂರು-ಬೆಂಗಳೂರು ನಡುವೆ ಮೂರು-ನಾಲ್ಕು ಪಥದ ರೈಲ್ವೆ ಹಳಿ ನಿರ್ಮಾಣಕ್ಕೆ ಡಿಪಿಆರ್ ಸಿದ್ಧಪಡಿಸಲಾಗಿದೆ. ತುಮಕೂರು-ರಾಯದುರ್ಗ ನಡುವೆ ಎರಡು ಪಥದ ಕಾಮಗಾರಿಗೂ ಪ್ರಯತ್ನ ನಡೆಸಲಾಗಿದೆ ಎಂದು ಹೇಳಿದರು. ನಿನ್ನೆ ಮೇಲ್ಸೇತುವೆ ಕಾಮಗಾರಿ ಪರಿಶೀಲಿಸಿದ್ದು, ಗುಣಮಟ್ಟದ ಕೆಲಸ ನಡೆಯುತ್ತಿದೆ ಎಂದು ತೃಪ್ತಿ ವ್ಯಕ್ತಪಡಿಸಿದರು.
ಎಸ್ಐಆರ್ ವಿಚಾರದಲ್ಲಿ ಮುಖ್ಯಮಂತ್ರಿಗಳು ಧರಣಿ ಕುಳಿತರೂ ಏನು ಪ್ರಯೋಜನವಾಗಿಲ್ಲ. ಅಧಿಕಾರಿಗಳನ್ನು ನೇಮಿಸಿದವರೇ ಇವರು. ಬದ್ಧತೆ ಮತ್ತು ಇಚ್ಛಾಶಕ್ತಿ ಇಲ್ಲದಿದ್ದರೆ ಸುಳ್ಳನ್ನೇ ನಿಜ ಮಾಡಲು ಹೊರಡುತ್ತಾರೆ ಎಂದು ಟೀಕಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಯಾವ ಹಗರಣವೂ ಸಿಗದಿದ್ದಾಗ ಇಂತಹ ಆರೋಪ ಮಾಡುತ್ತಿದ್ದಾರೆ. ಫಾರಂ 6, 7, 8 ಇರುವುದೇ ಹೆಸರು ಸೇರಿಸಲು ಮತ್ತು ತೆಗೆೆಯಲು. ಹೆಸರು ಸೇರಿಸುವುದು ಸುಲಭ, ತೆಗೆಯುವುದು ಕಷ್ಟ ಎಂದು ಸ್ಪಷ್ಟಪಡಿಸಿದರು.
ಜೆಜೆಎಂ ಕಾಮಗಾರಿಯನ್ನು ಕಳಪೆ ಗುಣಮಟ್ಟ
ಕೇಂದ್ರ ಸರ್ಕಾರ ಹಣ ನೀಡುವ ಕೆಲಸ ಮಾಡುತ್ತದೆ. ಆದರೆ ಜೆಜೆಎಂ ಕಾಮಗಾರಿಯನ್ನು ಕಳಪೆ ಗುಣಮಟ್ಟದಲ್ಲಿ ಮಾಡಿಸುವುದು ರಾಜ್ಯ ಸರ್ಕಾರದ ಕೆಲಸ. ಸಾರ್ವಜನಿಕರ ಕೆಲಸ ಹೇಗೆ ನಡೆಯುತ್ತಿದೆ ಎಂದು ಪರಿಶೀಲಿಸುವುದು ರಾಜ್ಯದ ಜವಾಬ್ದಾರಿ ಎಂದು ಹೇಳಿದರು.
ಡಾ. ಜಿ. ಪರಮೇಶ್ವರ್ ಬಹಳ ಒಳ್ಳೆಯ ಮನುಷ್ಯ. ದೇವರು ಅವರಿಗೆ ಎಲ್ಲವನ್ನೂ ನೀಡಿದ್ದಾರೆ. ನಮ್ಮಿಬ್ಬರ ಸ್ನೇಹಕ್ಕೆ 35 ವರ್ಷಗಳ ಇತಿಹಾಸವಿದೆ. ಮುಂದಿನ ದಿನಗಳಲ್ಲಿ ಇಬ್ಬರೂ ಜೊತೆಯಾಗಿ ಕಾಮಗಾರಿ ವೀಕ್ಷಣೆಗೆ ಬರುತ್ತೇವೆ ಎಂದರು.
ಕಸಬಾ ಕೊರಟಗೆರೆ ಹೂಲೀಕುಂಟೆ ಬೈಪಾಸ್ ರಸ್ತೆಯಲ್ಲಿ ರೈಲ್ವೆ ಕಾಮಗಾರಿ ಈಗಾಗಲೇ ಆರಂಭವಾಗಿದ್ದು, 52/8 ಜಯಣ್ಣ ಬಿನ್ ಲೇಟ್ ಸಿದ್ದಪ್ಪ ಎಂಬುವವರ ಜಮೀನಿನ ಕಾಮಗಾರಿಯಲ್ಲಿ ಮೊದಲ ಅಳತೆಗಿಂತ 10 ಅಡಿ ಹೆಚ್ಚಿಗೆ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ರೈತ ಸಂಘದ ಮುಖಂಡ ಸಿದ್ದರಾಜು ಆರೋಪ ಮಾಡಿದ್ದು. ಈ ಸಂದರ್ಭದಲ್ಲಿ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸಚಿವರಿಗೆ ಮನವಿ ಮಾಡಿದರು.














