ವರದಿ :  ವಸಂತಕುಮಾರ್‌ ಕತಗಾಲ

 ಕಾರವಾರ (ಫೆ.07):  ಪ್ರಸಿದ್ಧ ಪ್ರವಾಸಿ ತಾಣ ಯಾಣದ ಬಳಿ ತೈಲಮನೆ ಮಜರೆಯ ಜನತೆ ಆಧುನಿಕ ಸೌಲಭ್ಯಗಳನ್ನು ಕಾಣದೆ ಬದುಕಿಗಾಗಿ ನಿರಂತರ ಹೋರಾಟ ನಡೆಸುತ್ತ ದಯನೀಯ ಪರಿಸ್ಥಿತಿಯಲ್ಲಿ ದಿನ ಕಳೆಯುತ್ತಿದ್ದಾರೆ.

8 ಕುಟುಂಬಗಳ ಸುಮಾರು 30ಕ್ಕೂ ಅಧಿಕ ಮಂದಿ ಇಲ್ಲಿ ವಾಸವಾಗಿದ್ದು, ವಿದ್ಯುತ್‌ವೊಂದನ್ನು ಹೊರತು ಪಡಿಸಿ ರಸ್ತೆ ಸೇರಿದಂತೆ ಯಾವುದೇ ಮೂಲ ಸೌಕರ್ಯವೂ ಇವರಿಗಿಲ್ಲ. ಇಂದಿಗೂ ರೇಷನ್‌, ಆಸ್ಪತ್ರೆಗಾಗಿ ಹತ್ತಾರು ಕಿ.ಮೀ. ನಡದೇ ಸಾಗಬೇಕಾಗಿದೆ.

ಪಕ್ಷಿಗಳ ಅದ್ಭುತ ಲೋಕ ಅತ್ತಿವೇರಿ ಪಕ್ಷಿಧಾಮಕ್ಕೆ ಸ್ವಾಗತ..! ...

ತೈಲಮನೆ ಮಜರೆ ಜನ ಯಾಣ ತಲುಪಬೇಕೆಂದರೆ ಕಾಲುದಾರಿಯಲ್ಲಿ 5 ಕಿ.ಮೀ. ಕಡಿದಾದ ಗುಡ್ಡ ಏರಬೇಕು. ಅಥವಾ ಕಚ್ಚಾ ರಸ್ತೆ ಮೂಲಕ ಬೈಕಿನಲ್ಲಿ ಯಾಣಕ್ಕೆ ಬರಬೇಕೆಂದರೆ ಅಚವೆ, ಅಂಗಡಿಬೈಲ್‌, ಮಾದನಗೇರಿ, ಕತಗಾಲ ಹೀಗೆ 50 ಕಿ.ಮೀ. ಸುತ್ತುಬಳಸಿ ಬರಬೇಕು. ರೇಷನ್‌ ಪಡೆಯಲು 10 ಕಿ.ಮೀ. ದೂರದ ಹರೀಟಾ ಬಳಿ ಬರಬೇಕು. ಕಾಯಿಲೆ ಬಿದ್ದವರನ್ನು ಜೋಲಿಯಲ್ಲಿ ಹೊತ್ತು ಗುಡ್ಡದಿಂದ ಕೆಳಕ್ಕಿಳಿಯಬೇಕು. ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರ ಎಂದರೆ 23 ಕಿ.ಮೀ. ದೂರದಲ್ಲಿರುವ ಕತಗಾಲ. 5 ಕಿ.ಮೀ. ಜೋಲಿಯಲ್ಲಿ ತಂದು ಅಲ್ಲಿಂದ ವಾಹನದ ಮೂಲಕ 18 ಕಿ.ಮೀ. ಕರೆತರಬೇಕು. ಜೋಲಿಯಲ್ಲಿ ಕರೆತಂದು ಆಸ್ಪತ್ರೆಗೆ ದಾಖಲಿಸುವ ತನಕ ಪ್ರಾಣ ಹಿಡಿದಿಟ್ಟುಕೊಂಡರೆ ಮಾತ್ರ ಚಿಕಿತ್ಸೆ ನೀಡಬಹುದು. ಈಚೆಗೆ ಗೋವಿಂದ ಮರಾಠಿ ಎನ್ನುವವರನ್ನು ಜೋಲಿಯಲ್ಲಿ ಹೊತ್ತು ತಂದರೂ ಬದುಕಿಸಿಕೊಳ್ಳಲಾಗಲಿಲ್ಲ.

ಜೀವ ಕೈಯಲ್ಲಿ ಹಿಡಿದು ಶಾಲೆಗೆ:  ಅಂಗನವಾಡಿ ಸಹಾಯಕಿ ಯಾಣದ ಅಂಗನವಾಡಿಗೆ ಪ್ರತಿದಿನ ಬರುತ್ತಾರೆ. 5 ಕಿ.ಮೀ. ಗುಡ್ಡ ಇಳಿದು ಆನಂತರ ಏದುಸಿರುಬಿಡುತ್ತ ಗುಡ್ಡ ಏರಬೇಕು. ಮನೆಗೆ ತಲುಪುವಾಗ ರಾತ್ರಿಯಾಗಿರುತ್ತದೆ. ಕರಡಿ, ಚಿರತೆ, ಹಂದಿ ಮತ್ತಿತರ ಕಾಡುಪ್ರಾಣಿಗಳ ಭಯ ಬೇರೆ.

ಇಲ್ಲಿ ಎಸ್‌ಎಸ್‌ಎಲ್‌ಸಿ ತನಕ ಓದಿದವರೆಂದರೆ ಸೀತಾರಾಮ ಮರಾಠಿ ಮಾತ್ರ. ಅದೂ ಅವರು ಬೇರೆಲ್ಲೋ ಸಂಬಂಧಿಗಳ ಮನೆಯಲ್ಲಿ ಉಳಿದುಕೊಂಡು ಓದಿದರು. 3 ವಿದ್ಯಾರ್ಥಿಗಳು ಬೇರೆ ಎಲ್ಲೆಲ್ಲೋ ಸಂಬಂಧಿಗಳ ಮನೆಯಲ್ಲಿ ಉಳಿದು ಶಾಲೆಗೆ ಹೋಗುತ್ತಿದ್ದಾರೆ. ಶಾಲೆಗೆ ಹೋಗಲಾರದೆ ಇಲ್ಲಿನ ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಪ್ರಾಥಮಿಕ ಶಿಕ್ಷಣಕ್ಕೂ ಪಡಬಾರದ ಹಿಂಸೆ ಅನುಭವಿಸುತ್ತಿದ್ದಾರೆ.

ಊರಿನಲ್ಲಿ ನೀರಿಗೆ ಮಾತ್ರ ಕೊರತೆ ಇಲ್ಲ. ಊಟಕ್ಕೆ ಸಾಲುವಷ್ಟುಬತ್ತ ಬೆಳೆಯುತ್ತಾರೆ. ಅಡಕೆ, ತೆಂಗು ಹಾಗೂ ಬಾಳೆ ಬೆಳೆಯೂ ಅಗತ್ಯಕ್ಕೆ ತಕ್ಕಷ್ಟುಇದೆ. ಕೂಲಿಗೆ ಹೋಗಬೇಕಾದರೂ 5-6 ಕಿ.ಮೀ. ಗುಡ್ಡ ಇಳಿಯುವುದರೊಳಗೆ ಹೈರಾಣಾಗಿ ಹೋಗುತ್ತಾರೆ. ತೈಲಮನೆ ಯುವಕರಿಗೆ ಹೆಣ್ಣು ಕೊಡಲೂ ಉಳಿದ ಊರಿನವರು ಹಿಂದೆಮುಂದೆ ನೋಡುತ್ತಾರೆ.

ವಿದ್ಯುತ್‌ ಒಂದೇ ಆಶಾಕಿರಣ

ಊರಿಗೆ ಬಂದ ಸರ್ಕಾರದ ಏಕೈಕ ಸೌಲಭ್ಯ ಎಂದರೆ ವಿದ್ಯುತ್‌ ಮಾತ್ರ. ಅದೂ ಕೈಕೊಡುವ ದಿನಗಳೇ ಹೆಚ್ಚು. ಶಾಸಕರಾದ ದಿನಕರ ಶೆಟ್ಟಿ, ಜಿಪಂ ಸದಸ್ಯ ಗಜಾನನ ಪೈ, ಗ್ರಾಪಂ ಸದಸ್ಯ ರಾಜೀವ ಭಟ್‌ ತೈಲಮನೆ ಗ್ರಾಮದ ಸಮಸ್ಯೆ ನಿವಾರಣೆಗೆ ಪ್ರಯತ್ನಿಸುತ್ತಿದ್ದಾರೆ.

ತೈಲಮನೆಗೆ ಹೋಗಬೇಕೆಂದರೆ ಬಲುದೊಡ್ಡ ಸಾಹಸ. ನಾನು ಎರಡು ಬಾರಿ ಹೋಗಿದ್ದೇನೆ. ಅಲ್ಲಿ ರಸ್ತೆ, ಮೂಲಭೂತ ಸೌಲಭ್ಯ ಕಲ್ಪಿಸಲು ಪ್ರಯತ್ನ ನಡೆಸುತ್ತಿದ್ದೇನೆ.

- ರಾಜೀವ ಭಟ್‌, ಗ್ರಾಪಂ ಸದಸ್ಯರು

ತೈಲಮನೆಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿದ್ದೇವೆ. ಟಿಸಿ ಕೂಡ ಹಾಕಿಸುತ್ತೇವೆ. ರಸ್ತೆ ನಿರ್ಮಾಣದ ಪ್ರಯತ್ನ ನಡೆದಿದೆ. ಆದರೆ ಅರಣ್ಯ ಪ್ರದೇಶದಲ್ಲಿ ಇರುವುದರಿಂದ ತೊಡಕಾಗಿದೆ.

- ದಿನಕರ ಶೆಟ್ಟಿ, ಶಾಸಕರು, ಕುಮಟಾ