ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ರೌಡಿಶೀಟರ್‌ಗಳ ನಡುವಿನ ಜಗಳ ಬಿಡಿಸಲು ಹೋದ ಪೊಲೀಸ್ ಸಿಬ್ಬಂದಿ ಮೇಲೆಯೇ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಈ ಘಟನೆಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದು, ಆರೋಪಿಗಳಾದ ರೌಡಿಶೀಟರ್‌ಗಳ ವಿರುದ್ಧ ಪ್ರಕರಣ ದಾಖಲಿಸಿ, ಕೆಲವರನ್ನು ವಶಕ್ಕೆ ಪಡೆಯಲಾಗಿದೆ.
ಕಾರವಾರ, ಉತ್ತರಕನ್ನಡ (ಆ.9): ರಾಜ್ಯಾದ್ಯಂತ ಪುಂಡರ ಹಾವಳಿ ಮಿತಿಮೀರಿದೆ ಈ ಮೊದಲು ಸಾರ್ವಜನಿಕರ ಮೇಲೆ ಹಲ್ಲೆ ನಡೆಸುತ್ತಿದ್ದ ರೌಡಿಶೀಟರ್‌ಗಳು ಇದೀಗ ನೇರ ಪೊಲೀಸರ ಮೇಲೂ ಹಲ್ಲೆಗೆ ಮುಂದಾಗುತ್ತಿರುವುದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಪೊಲೀಸ್ ಸಿಬ್ಬಂದಿಗೆ ಚಾಕು ಇರಿದ ರೌಡಿಶೀಟರ್‌ಗಳು!
ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ಆಘಾತಕಾರಿ ಘಟನೆ ನಡೆದಿದ್ದು. ರಾತ್ರಿವೇಳೆ ರೌಡಿಶೀಟರ್‌ಗಳ ಮಧ್ಯೆ ನಡೆದ ಜಗಳಕ್ಕೆ ಸಂಬಂಧಿಸಿದದಂತೆ ಸ್ಥಳಕ್ಕೆ ಬಂದಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಪುಂಡರು ಏಕಾಏಕಿ ಚಾಕುವಿನಿಂದ ದಾಳಿ ಮಾಡಿ ಪರಾರಿಯಾಗಿದ್ದಾರೆ. ಈ ಘಟನೆಯಲ್ಲಿ ಚಾಕು ಇರಿತಕ್ಕೊಳಗಾದ ಪೊಲೀಸರಿಗೆ ಗಂಭೀರ ಗಾಯಗೊಂಡಿದ್ದು ಸ್ಥಳೀಯರ ಸಹಾಯದಿಂದ ಮಂಗಳೂರಿನ ಆದರ್ಶ ಹಾಸ್ಪೆಟಲ್ ಗೆ ದಾಖಲಿಸಲಾಗಿದೆ.
ಪೊಲೀಸರಿಗೆ ಚಾಕು ಇರಿದು ರೌಡಿಗಳು ಎಸ್ಕೇಪ್!
ತಡರಾತ್ರಿ ರೌಡಿಶೀಟರ್ ರಾಜು, ಅವನ ಗುಂಪು ಮನೋಜ್ ಎಂಬುವವನ ನಡುವೆ ಯಾವುದೋ ಕಾರಣಕ್ಕೆ ಜಗಳ ನಡೆದಿದೆ. ಎರಡು ಗುಂಪುಗಳ ನಡುವೆ ಮಾರಾಮಾರಿ ಆಗುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಕರೆ ಮಾಹಿತಿ ನೀಡಿದ್ದಾರೆ. ತಕ್ಷಣ ಪೊಲೀಸ್ ಸಿಬ್ಬಂದಿ ಹವಾಲ್ದಾರ ಸಂಗಪ್ಪ,ಕಾನಸ್ಟೇಬಲ್ ವಿನಾಯಕ್ ಶಟ್ಟಿ ಸ್ಥಳಕ್ಕೆ ಬಂದಿದ್ದಾರೆ. ಬಂದ ವೇಳೆ ರೌಡಿಶೀಟರ್‌ಗಳು ಜಗಳ ಮುಂದುವರಿಸಿದ್ದರು ಎನ್ನಲಾಗಿದೆ.
ರೌಡಿಗಳ ಮಧ್ಯೆ ನಡೆಯುತ್ತಿದ್ದ ಜಗಳ ಬಿಡಿಸಲು ಸಿಬ್ಬಂದಿ ಮುಂದಾಗಿದ್ದಾರೆ. ಈ ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ಕೋಪಗೊಂಡು ಹವಾಲ್ದಾರ್ ಸಂಗಪ್ಪಗ ಹಾಗೂ ಕಾನ್ಸ್‌ಟೇಬಲ್ ಗೆ ಚಾಕುವಿನಿಂದ ಇರಿದಿದ್ದಾರೆ. ಆದರೆ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ. ಪೊಲೀಸರಿಗೆ ಚಾಕು ಇರಿಯುತ್ತಿದ್ದಂತೆ ರೌಡಿಗಳು ಸ್ಥಳದಿಂದ ಕಾಲ್ಕಿತ್ತು ಪರಾರಿಯಾಗಿದ್ದಾರೆ. ಇತ್ತ ಗಾಯಗೊಂಡ ಪೊಲೀಸರನ್ನು ಸ್ಥಳೀಯರು ಮಂಗಳೂರಿನ ಆದರ್ಶ ಹಾಸ್ಪಿಟಲ್‌ಗೆ ದಾಖಲಿಸಿದ್ದಾರೆ.
ಪ್ರಕರಣ ದಾಖಲು
ಪೊಲೀಸ್ ಸಿಬ್ಬಂದಿಗೆ ಚಾಕು ಇರಿದ ಪ್ರಕರಣ ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಆರೋಪಿಗಳಾದ ರಾಜು, ರಿತೀಕ್, ಮದನ್ ನಾಯ್ಕ್, ಯೋಗೇಶ್, ದರ್ಶನ್ ಎಂಬ ನಾಲ್ವರು ರೌಡಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸದ್ಯ ರೌಡಿಶೀಟರ್‌ಗಳಾದ ರಾಜು, ಮನೋಜ್ ಎಂಬುವವರನ್ನ ವಶಕ್ಕೆ ಪಡೆದಿರುವ ಪೊಲೀಸರು ಉಳಿದ ಆರೋಪಿಗಳಿಗಾಗಿ ಶೋಧಕಾರ್ಯ ಮುಂದುವರಿಸಿದ್ದಾರೆ.
ತಡರಾತ್ರಿ ನಡೆದ ಘಟನೆಯಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಪೊಲೀಸರ ಮೇಲೆಯೇ ಈ ರೀತಿ ದಾಳಿ ಮಾಡುವ ರೌಡಿಗಳು ಇನ್ನು ಸಾಮಾನ್ಯ ಜನರ ಪರಿಸ್ಥಿತಿ ಹೇಗೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಪೊಲೀಸರು ರೌಡಿಶೀಟರ್‌ಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.


