ಬೆಂಗಳೂರಿನ ಚಂದ್ರಲೇಔಟ್‌ನಲ್ಲಿ ಮಷ್ರೂಮ್ ಬಿರಿಯಾನಿಗೆ ಚಟ್ನಿ ನೀಡಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಕಿಡಿಗೇಡಿಗಳ ಗುಂಪೊಂದು ಹೋಟೆಲ್ ಧ್ವಂಸ ಮಾಡಿದೆ. ಈ ವೇಳೆ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಕ್ಯಾಶ್ ಕೌಂಟರ್ ಜಖಂಗೊಳಿಸಿದ್ದು, ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಬೆಂಗಳೂರು (ಆ.9): ಮಷ್ರೂಮ್ ಬಿರಿಯಾನಿಗೆ ಚಟ್ನಿ ಕೊಟ್ಟಿಲ್ಲವೆಂಬ ಕ್ಷುಲ್ಲಕ್ಕ ಕಾರಣಕ್ಕೆ ಕಿಡಿಗೇಡಿಗಳು ಹೋಟೆಲ್‌ ಧ್ವಂಸ ಮಾಡಿ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಚಂದ್ರಲೇಔಟ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಘಟನೆಯ ಸಂಬಂಧ ಹೊಟೇಲ್‌ ಸಿಬ್ಬಂದಿ ರಂಜಿತ್ ಎಂಬುವರು ನೀಡಿದ ದೂರಿನನ್ವಯ ಅರುಣ್‌ ಎಂಬಾತನ ವಿರುದ್ಧ ಗಂಭೀರವಲ್ಲದ ಪ್ರಕರಣ (ಎನ್‌ಸಿಆರ್‌) ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೋಟೆಲ್ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿತ

ಆ.4 ರ ರಾತ್ರಿ ಅಪ್ಪು ಮಷ್ರೂಮ್ ದಮ್ ಬಿರಿಯಾನಿ ಹೋಟೆಲ್‌ಗೆ ಕಿಡಿಗೇಡಿಗಳ ತಂಡ ಬಂದಿತ್ತು. ಈ ವೇಳೆ ಬಿರಿಯಾನಿಗೆ ಚಟ್ನಿ ಯಾಕೆ ಕೊಟ್ಟಿಲ್ಲವೆಂದು ಸಿಬ್ಬಂದಿ ರಂಜಿತ್ ಎಂಬಾತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಂತರ ಹೋಟೆಲ್‌ ಮುಂದೆ ಇದ್ದ ಟೆಂಟ್, ಕ್ಯಾಶ್ ಕೌಂಟರ್ ಧ್ವಂಸಗೊಳಿಸಿದ್ದಾರೆ. ಅಂಗಡಿಯಲ್ಲಿದ್ದ ಸಿಬ್ಬಂದಿ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಹಲ್ಲೆಗೆ ಸಂಬಂಧಿಸಿದಂತೆ ದೂರು ಸ್ವೀಕರಿಸಲು ಆರಂಭದಲ್ಲಿ ಪೊಲೀಸರು ನಿರಾಕರಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ. ಕಿಡಿಗೇಡಿಗಳು ಹಲ್ಲೆ ಮಾಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.