ಉತ್ತರ ಕನ್ನಡದ ಕಾಳಿ ನದಿಯಲ್ಲಿ ರಿವರ್ ರಾಫ್ಟಿಂಗ್ ಮಾಡುವಾಗ ವಿದ್ಯುತ್ ಸ್ಪರ್ಶಿಸಿ ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಮೃತಪಟ್ಟಿದ್ದಾರೆ. ರೆಸಾರ್ಟ್‌ನವರು ಅಳವಡಿಸಿದ್ದ ಪಂಪ್ ಸೆಟ್‌ನಿಂದ ನೀರಿಗೆ ವಿದ್ಯುತ್ ಪ್ರವಹಿಸಿದ್ದೇ ಈ ದುರಂತಕ್ಕೆ ಕಾರಣವಾಗಿದೆ.

ಉತ್ತರ ಕನ್ನಡ (ಮೇ 24): ಪ್ರಕೃತಿ ಸೌಂದರ್ಯ ಮತ್ತು ಸಾಹಸ ಕ್ರೀಡೆಗಳಿಗೆ ಹೆಸರಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಜಿಲ್ಲೆಯ ಜೋಯಿಡಾ ತಾಲೂಕಿನ ಗಣೇಶಗುಡಿ ಬಳಿ ಪ್ರಸಿದ್ಧ ಕಾಳಿ ನದಿಯಲ್ಲಿ (Kali River) ರಿವರ್ ರಾಫ್ಟಿಂಗ್ ಮಾಡುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಜಲಸಮಾಧಿಯಾದ ದಾರುಣ ಘಟನೆ ನಡೆದಿದೆ. ರೆಸಾರ್ಟ್ ಮಾಲೀಕರ ಬೇಜವಾಬ್ದಾರಿತನವೇ ಈ ಸಾವಿಗೆ ನೇರ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Add Asianetnews Kannada as a Preferred SourcegooglePreferred

ವಿಜಯವಾಡ ಮೂಲದ ಟೆಕ್ಕಿ ಸಾವು

ಮೃತರನ್ನು ಆಂಧ್ರಪ್ರದೇಶದ ವಿಜಯವಾಡ ಮೂಲದ ಮಹೇಶ್ (27) ಎಂದು ಗುರುತಿಸಲಾಗಿದೆ. ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಮಹೇಶ್, ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ತನ್ನ ಉಳಿದ ನಾಲ್ಕು ಮಂದಿ ಸ್ನೇಹಿತರೊಂದಿಗೆ ಉತ್ತರ ಕನ್ನಡ ಜಿಲ್ಲೆಯ ಪ್ರವಾಸಕ್ಕೆ ಬಂದಿದ್ದರು. ಐದು ಜನರ ಈ ಐಟಿ ಉದ್ಯೋಗಿಗಳ ತಂಡ ಗಣೇಶಗುಡಿ ಬಳಿಯ ಸಿಲ್ವರ್ ಬಿಲ್ ರೆಸಾರ್ಟ್‌ನಲ್ಲಿ (Silver Bill Resort) ತಂಗಿದ್ದು, ಅಲ್ಲಿಯೇ ರಾಫ್ಟಿಂಗ್ ಮಾಡಲು ಮುಂದಾಗಿತ್ತು.

ರೆಸಾರ್ಟ್ ಮಾಲೀಕರ ಅತಿಯಾದ ನಿರ್ಲಕ್ಷ್ಯ!

ಪ್ರವಾಸಿಗರು ರಿವರ್ ರಾಫ್ಟಿಂಗ್ ಮಾಡುವ ನದಿಯ ಪ್ರಮುಖ ಜಾಗದಲ್ಲೇ ಸಿಲ್ವರ್ ಬಿಲ್ ರೆಸಾರ್ಟ್‌ನವರು ನೀರು ಎತ್ತುವ ದೊಡ್ಡ ಪಂಪ್ ಸೆಟ್ ಅಳವಡಿಸಿದ್ದರು ಎನ್ನಲಾಗಿದೆ. ಈ ನೀರಿನ ಪಂಪ್‌ನ ವೈರಿಂಗ್‌ನಲ್ಲಿ ಉಂಟಾಗಿದ್ದ ವಿದ್ಯುತ್ ತಂತಿ ಶಾರ್ಟ್ ಸರ್ಕ್ಯೂಟ್ ಆಗಿ ಇಡೀ ನೀರಿನ ಆವರಣಕ್ಕೆ ವಿದ್ಯುತ್ ಪ್ರವಹಿಸಿತ್ತು. ರಾಫ್ಟಿಂಗ್ ಮಾಡುವಾಗ ಮಹೇಶ್ ಅವರು ಅಕಸ್ಮಾತ್ತಾಗಿ ಈ ಪಂಪ್‌ನ ಸಮೀಪಕ್ಕೆ ಹೋಗಿದ್ದಾರೆ. ಪರಿಣಾಮವಾಗಿ ಅವರಿಗೆ ತೀವ್ರವಾಗಿ ವಿದ್ಯುತ್ ಶಾಕ್ ತಗುಲಿದ್ದು, ನೀರಿನಿಂದ ಹಿಂತಿರುಗಲು ಸಾಧ್ಯವಾಗದೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮಹೇಶ್ ಅವರ ಜೊತೆಯಲ್ಲಿದ್ದ ಉಳಿದ ನಾಲ್ಕು ಜನ ಸ್ನೇಹಿತರಿಗೂ ವಿದ್ಯುತ್ ಸ್ಪರ್ಶ ಉಂಟಾಗಿದೆಯಾದರೂ, ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಫ್ಟಿಂಗ್ ಮಾಡುವ ಸೂಕ್ಷ್ಮ ಪ್ರದೇಶದಲ್ಲೇ ಇಂತಹ ಅಪಾಯಕಾರಿ ಪಂಪ್ ಅಳವಡಿಸಬೇಡಿ ಎಂದು ಸ್ಥಳೀಯರು ಈ ಹಿಂದೆ ಹಲವು ಬಾರಿ ಎಚ್ಚರಿಸಿದ್ದರೂ ರೆಸಾರ್ಟ್ ಮಾಲೀಕರು ಮಾತ್ರ ಇದನ್ನು ಕಿವಿಗೆ ಹಾಕಿಕೊಂಡಿರಲಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ರಾಮನಗರ ಠಾಣೆಯಲ್ಲಿ ಪ್ರಕರಣ ದಾಖಲು

ಘಟನೆ ಸಂಭವಿಸುತ್ತಿದ್ದಂತೆ ಸ್ಥಳೀಯರು ಮತ್ತು ಭದ್ರತಾ ಸಿಬ್ಬಂದಿ ಮಹೇಶ್ ಅವರನ್ನು ರಕ್ಷಿಸಲು ಯತ್ನಿಸಿದರಾದರೂ ಅಷ್ಟರಲ್ಲೇ ತಡವಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಭೀಕರ ಅವಘಡಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯ ರಾಮನಗರ ಪೊಲೀಸ್ ಠಾಣೆಯಲ್ಲಿ (Ramnagar Police Station) ಪ್ರಕರಣ ದಾಖಲಾಗಿದ್ದು, ನಿರ್ಲಕ್ಷ್ಯ ತೋರಿದ ರೆಸಾರ್ಟ್ ಆಡಳಿತ ಮಂಡಳಿಯ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಸಾಹಸ ಕ್ರೀಡೆಗಳ ಹೆಸರಿನಲ್ಲಿ ರೆಸಾರ್ಟ್‌ಗಳು ಪ್ರವಾಸಿಗರ ಪ್ರಾಣದ ಜೊತೆ ಚೆಲ್ಲಾಟ ಆಡುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.