ಕೈಗಾ ಅಣು ವಿದ್ಯುತ್ ಸ್ಥಾವರ ನಿರ್ಮಾಣಕ್ಕಾಗಿ ಭೂಮಿ ನೀಡಿದ ನಿರಾಶ್ರಿತರ ಹೋರಾಟಕ್ಕೆ ಯಶಸ್ಸು ಸಿಕ್ಕಿದೆ. ಸ್ಥಳೀಯರಿಗೆ ಉದ್ಯೋಗ, ರಸ್ತೆ ನಿರ್ಮಾಣ, ಮತ್ತು ಆರೋಗ್ಯ ಸೌಲಭ್ಯಗಳನ್ನು ಒದಗಿಸುವುದು ಸೇರಿದಂತೆ 7 ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಎನ್‌ಪಿಸಿ ಅಧಿಕಾರಿಗಳು ಒಪ್ಪಿಗೆ ಸೂಚಿಸಿದ್ದಾರೆ.

ಕಾರವಾರ: ಕೈಗಾ ಅಣು ವಿದ್ಯುತ್ ಸ್ಥಾವರ ನಿರ್ಮಾಣಕ್ಕಾಗಿ ಭೂಮಿ ನೀಡಿ ನಿರಾಶ್ರಿತರಾದ ಸ್ಥಳೀಯರ ನ್ಯಾಯಯುತ ಬೇಡಿಕೆಗಳಿಗಾಗಿ ನಡೆದ ಹೋರಾಟಕ್ಕೆ ಕೊನೆಗೂ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದ್ದು, ಸಂತ್ರಸ್ತರ 7 ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ರಾಘು ನಾಯ್ಕ ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

10 ಬೇಡಿಕೆಗಳ ಮನವಿ ಸಲ್ಲಿಕೆ

ಕಾರವಾರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ 56 ಕಿ.ಮೀ. ಸುದೀರ್ಘ ಪಾದಯಾತ್ರೆ ನಡೆಸಿ ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ಹಾಗೂ ನೇಮಕಾತಿ ಪರೀಕ್ಷಾ ಕೇಂದ್ರ ಕಾರವಾರದಲ್ಲಿಯೇ ಸ್ಥಾಪಿಸುವುದು ಸೇರಿದಂತೆ ಹತ್ತು ಪ್ರಮುಖ ಬೇಡಿಕೆಗಳನ್ನ ಇರಿಸಿ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಕೈಗಾ ಅಧಿಕಾರಿಗಳು ಸ್ಪಂದಿಸಿದ್ದಾರೆ ಎಂದರು.

ರಸ್ತೆಗಾಗಿ 25 ಕೋಟಿ ಹಣ ಬಿಡುಗಡೆ

ಈ ಹಿಂದೆ ಮಲ್ಲಾಪುರ-ಕೆರವಡಿ ರಸ್ತೆಯ ಅವ್ಯವಸ್ಥೆಯಿಂದಾಗಿ ಬಾಲಕಿಯೋರ್ವಳು ಸಾವನ್ನಪ್ಪಿದ ಘಟನೆ ನಡೆದಿತ್ತು. ಈ ರಸ್ತೆಯ ಪುನರ್ ನಿರ್ಮಾಣಕ್ಕಾಗಿ ಕೈಗಾ ಸಂಸ್ಥೆಯು ₹25 ಕೋಟಿ ಹಣ ಬಿಡುಗಡೆ ಮಾಡಿದ್ದು, ಈಗಾಗಲೇ ಟೆಂಡರ್ ಪ್ರಕ್ರಿಯೆಯೂ ಮುಗಿದಿದೆ. ಮಳೆಗಾಲ ಮುಗಿಯುತ್ತಿದ್ದಂತೆಯೇ ಕಾಮಗಾರಿ ಆರಂಭವಾಗಲಿದೆ. ಇದಲ್ಲದೇ, ಕೈಗಾ ಭಾಗದ ಗರ್ಭಿಣಿಯರು ಹಾಗೂ ರೋಗಿಗಳ ಅನುಕೂಲಕ್ಕಾಗಿ ಕೈಗಾ ಆಸ್ಪತ್ರೆಗೆ ನೀಡಲು ಉದ್ದೇಶಿಸಿದ್ದ ಸಿಟಿ ಸ್ಕ್ಯಾನ್ ಯಂತ್ರವನ್ನು, ವೈದ್ಯರ ಕೊರತೆಯ ಕಾರಣದಿಂದ ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ನೀಡಲು ಅಧಿಕಾರಿಗಳು ಒಪ್ಪಿದ್ದಾರೆ. ಜೊತೆಗೆ ಎರಡು ವೆಂಟಿಲೇಟರ್ ಅಳವಡಿತ ಆ್ಯಂಬುಲೆನ್ಸ್‌ಗಳನ್ನು ಒದಗಿಸುವುದಾಗಿ ಭರವಸೆ ನೀಡಿದ್ದಾರೆ.

ಉದ್ಯೋಗದಲ್ಲಿ ಸ್ಥಳೀಯರಿಗೆ ಆದ್ಯತೆ

ಕೈಗಾದಲ್ಲಿ ಖಾಲಿ ಇರುವ ಗ್ರೂಪ್ ‘ಸಿ’ ಹುದ್ದೆಗಳಲ್ಲಿ ಸ್ಥಳೀಯರಿಗೇ ಹೆಚ್ಚಿನ ಆದ್ಯತೆ ನೀಡಬೇಕು ಎಂಬ ಆಗ್ರಹಕ್ಕೆ ಅಧಿಕಾರಿಗಳು ಸಮ್ಮತಿಸಿದ್ದಾರೆ. ಪ್ರಸ್ತುತ ಕೈಗಾದಲ್ಲಿ 40% ಹೊರರಾಜ್ಯದವರು ಕೆಲಸ ಮಾಡುತ್ತಿದ್ದು, ಇನ್ಮುಂದೆ 75% ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂಬ ಪಟ್ಟನ್ನು ಹೋರಾಟಗಾರರು ಹಿಡಿದಿದ್ದಾರೆ. ಶೈಕ್ಷಣಿಕವಾಗಿ ಈ ವರ್ಷ ಸಿ.ಎಸ್.ಆರ್. ನಿಧಿಯಡಿ ₹9 ಕೋಟಿ ಅನುದಾನ ನೀಡಲಾಗುತ್ತಿದ್ದು, ಸ್ಥಳೀಯ ಶಾಲೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಶಿಕ್ಷಕರ ಪೂರೈಕೆ ಜೊತೆಗೆ, ವಿದ್ಯಾರ್ಥಿಗಳಿಗೆ ಸಿಇಟಿ ತರಬೇತಿ ನೀಡಲು ತರಬೇತುದಾರರನ್ನು ಒದಗಿಸಲು ಕೈಗಾ ಆಡಳಿತ ಮಂಡಳಿ ಮುಂದಾಗಿದೆ.

ಇದನ್ನೂ ಓದಿ: 5 ವರ್ಷದಲ್ಲಿ ಶಿರಸಿ ಮಾರಿಕಾಂಬಾ ದೇವಸ್ಥಾನದ ಜೀರ್ಣೋದ್ಧಾರಕ್ಕೆ 10 ಕೋಟಿ ರೂಪಾಯಿ ಖರ್ಚು

ಪ್ರಮುಖರಾದ ಎಚ್.ಎಫ್. ದೊಡ್ಡಣ್ಣನವರ್, ಶಂಕರ್ ಗುನಗಿ, ಉದಯ್ ನಾಯ್ಕ, ಕಾಶಿ ಭಂಟ್, ಸಂದೀಪ್ ನಾಯ್ಕ, ಗೌರೀಶ್ ನಾಯ್ಕ, ಚಂದ್ರಕಾಂತ್ ನಾಯ್ಕ, ರಾಜೇಶ ನಾಯ್ಕ, ರಮೇಶ ಗೌಡ, ರಮಾಕಾಂತ ಗುನಗಿ ಇದ್ದರು.

ಇದನ್ನೂ ಓದಿ: ಮಂಗಳೂರಿಂದ ಹೊರಡುವ ಕೊಂಕಣ ರೈಲ್ವೆ ಮಾರ್ಗದಲ್ಲಿ ಹಲವು ಟ್ರೈನ್ ಸಂಚಾರ ಭಾಗಶಃ ರದ್ದು, ಮರು ವೇಳಾಪಟ್ಟಿ ಪ್ರಕಟ!