Asianet Suvarna News Asianet Suvarna News

ಇತರ ಜಿಲ್ಲೆಯ ಆಸ್ಪತ್ರೆಗಳಲ್ಲಿ ಉತ್ತರ ಕನ್ನಡ ರೋಗಿಗಳಿಗೆ ಚಿಕಿತ್ಸೆ ಸಿಗ್ತಿಲ್ಲ

ದಾಖಲಿಸಿಕೊಳ್ಳಲೂ ಹಿಂದೇಟು, ಬೆಡ್‌ ಇಲ್ಲ ಎಂಬ ಉತ್ತರ| ಉತ್ತರ ಕನ್ನಡದಲ್ಲಿ ಒಂದೇ ಒಂದು ಸುಸಜ್ಜಿತ ಆಸ್ಪತ್ರೆ ಇಲ್ಲ| ಅಪಘಾತದಿಂದ ತೀವ್ರ ಗಾಯಗೊಂಡವರು, ಹೃದಯ ಸಮಸ್ಯೆ, ಕಿಡ್ನಿ, ಮೆದುಳಿನ ತೊಂದರೆ ಹೀಗೆ ಏನೇ ಗಂಭೀರ ಪರಿಸ್ಥಿತಿಯಲ್ಲಿದ್ದರೂ ಇಲ್ಲಿನ ಜನತೆ ಉಡುಪಿ, ಮಂಗಳೂರು, ಬೆಳಗಾವಿ, ಗೋವಾ, ಹುಬ್ಬಳ್ಳಿ ಆಸ್ಪತ್ರೆಗಳನ್ನೇ ಅವಲಂಭಿಸಬೇಕು| 

Uttara Kannada District Patients Did Not Get Treatment in Oher Districtsgrg
Author
Bengaluru, First Published Sep 30, 2020, 3:38 PM IST

ಕಾರವಾರ(ಸೆ.30): ಉತ್ತರ ಕನ್ನಡದ ಗಂಭೀರ ಪರಿಸ್ಥಿತಿಯಲ್ಲಿರುವ ರೋಗಿಗಳು ಉಡುಪಿ, ದಕ್ಷಿಣ ಕನ್ನಡ, ಧಾರವಾಡ, ಬೆಳಗಾವಿ ಹೀಗೆ ನೆರೆ ಜಿಲ್ಲೆಯ ಆಸ್ಪತ್ರೆಗಳಿಗೆ ದಾಖಲಾಗಲು ಪರದಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆಯೂ ಇಲ್ಲ, ಬೇರೆಡೆ ದಾಖಲಿಸಿಕೊಳ್ಳುವುದೂ ಇಲ್ಲ. ರೋಗಿಗಳ ಪರಿಸ್ಥಿತಿ ಅಯೋಮಯವಾಗಿದೆ.

ಇದು ಕೇವಲ ಕೋವಿಡ್‌-19 ಸೋಂಕಿತ ರೋಗಿಗಳು ಮಾತ್ರವಲ್ಲ. ಬೇರೆ ಬೇರೆ ಕಾಯಿಲೆಯಿಂದ ಬಳಲುತ್ತಿರುವವರು ಹಾಗೂ ಅಪಘಾತಗಳಿಂದ ತೀವ್ರ ಗಾಯಗೊಂಡವರೂ ಇದೆ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದಾರೆ. ಹೊನ್ನಾವರದ ಗಜಾನನ ಭಾಗ್ವತ ಈಚೆಗೆ ಮೂಗು ಹಾಗೂ ಬಾಯಿಯಲ್ಲಿ ರಕ್ತಸ್ರಾವದಿಂದ ಹೊನ್ನಾವರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ, ಅವರಿಗೆ ತುರ್ತು ಚಿಕಿತ್ಸೆ ಬೇಕಿರುವುದರಿಂದ ಮಂಗಳೂರು ಅಥವಾ ಮಣಿಪಾಲಕ್ಕೆ ಕರೆದೊಯ್ಯುವಂತೆ ಸಂಜೆ ವೇಳೆಗೆ ತಿಳಿಸಿದರು. ಆದರೆ, ರಾತ್ರಿಯಿಡಿ ಉಡುಪಿ ಹಾಗೂ ಮಂಗಳೂರು ಜಿಲ್ಲೆಗಳ ಆಸ್ಪತ್ರೆಗೆ ದೂರವಾಣಿ ಕರೆ ಮಾಡಿ ಗಂಭೀರ ಪರಿಸ್ಥಿತಿಯಲ್ಲಿರುವ ರೋಗಿಯನ್ನು ಕರೆದುಕೊಂಡು ಬರುವುದಾಗಿ ತಿಳಿಸಿದರೆ ನಮ್ಮಲ್ಲಿ ಬೆಡ್‌ ಇಲ್ಲ, ಜಿಲ್ಲಾಧಿಕಾರಿಯ ಅನುಮತಿ ಪಡೆದು ಬರಬೇಕು. ದಾಖಲಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಉತ್ತರ ಬಂತು. ದೇವರ ಮೇಲೆ ಭಾರ ಹಾಕಿ ಹೊನ್ನಾವರದಲ್ಲೇ ಚಿಕಿತ್ಸೆ ಮುಂದುವರಿಸುವಂತಾಯಿತು. ಇದು ಒಂದು ಉದಾಹರಣೆ. ಇಂತಹ ಘಟನೆಗಳು ಕುಮಟಾ, ಹೊನ್ನಾವರ, ಭಟ್ಕಳ ಸೇರಿದಂತೆ ಜಿಲ್ಲೆಯ ಹಲವೆಡೆ ಪ್ರತಿದಿನವೂ ನಡೆಯುತ್ತಲೇ ಇದೆ.

ಉತ್ತರ ಕನ್ನಡದಲ್ಲಿ ಒಂದೇ ಒಂದು ಸುಸಜ್ಜಿತ ಆಸ್ಪತ್ರೆ ಇಲ್ಲ. ಅಪಘಾತದಿಂದ ತೀವ್ರ ಗಾಯಗೊಂಡವರು, ಹೃದಯ ಸಮಸ್ಯೆ, ಕಿಡ್ನಿ, ಮೆದುಳಿನ ತೊಂದರೆ ಹೀಗೆ ಏನೇ ಗಂಭೀರ ಪರಿಸ್ಥಿತಿಯಲ್ಲಿದ್ದರೂ ಇಲ್ಲಿನ ಜನತೆ ಉಡುಪಿ, ಮಂಗಳೂರು, ಬೆಳಗಾವಿ, ಗೋವಾ, ಹುಬ್ಬಳ್ಳಿ ಆಸ್ಪತ್ರೆಗಳನ್ನೇ ಅವಲಂಬಿಸಬೇಕು.

ಸ್ಕೂಟಿಗೆ ಲಾರಿ ಡಿಕ್ಕಿ: ಸ್ಥಳದಲ್ಲೇ ತಂದೆ-ಮಗಳ ಸಾವು, ಎರಡು ತುಂಡಾದ ಬಾಲಕಿಯ ದೇಹ

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಆಸ್ಪತ್ರೆಗಳು ಉತ್ತರ ಕನ್ನಡ ಜಿಲ್ಲೆಯ ರೋಗಿಗಳನ್ನೆ ಹೆಚ್ಚು ಅವಲಂಬಿಸಿವೆ. ಉತ್ತರ ಕನ್ನಡದ ತುಂಬೆಲ್ಲ ಆರೋಗ್ಯ ಕಾರ್ಡ್‌ಗಳನ್ನು ಸಹ ಮಾಡಿಸುತ್ತಿವೆ. ಜಿಲ್ಲೆಯಲ್ಲಿ ಆರೋಗ್ಯ ಕ್ಯಾಂಪ್‌ಗಳನ್ನು ಸಹ ಮಾಡುತ್ತ ಬಂದಿವೆ. ಆದರೆ ಕೋವಿಡ್‌-19 ಕಾಯಿಲೆ ಕಾಣಿಸಿಕೊಂಡ ತರುವಾಯ ಉತ್ತರ ಕನ್ನಡದ ರೋಗಿಗಳಿಗೆ ಈ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಲು ಸಾಧ್ಯವಾಗುತ್ತಿಲ್ಲ. ಎಲ್ಲೆ ಕೇಳಿದರೂ ಬೆಡ್‌ ಇಲ್ಲ, ಕೊರೋನಾ ಸೋಂಕಿತರು ತುಂಬಿದ್ದಾರೆ. ಜಿಲ್ಲಾಧಿಕಾರಿಗಳಿಂದ ಪರವಾನಿಗೆ ಪಡೆದುಕೊಂಡು ಬನ್ನಿ ಎಂಬ ಉತ್ತರಗಳು ಬರುತ್ತಿವೆ. ಕೆಲವರು ಆ್ಯಂಬುಲೆನ್ಸ್‌ನಲ್ಲಿ ರೋಗಿಗಳನ್ನು ಕರೆದೊಯ್ದು ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಅಲೆದಾಡಿದ ಉದಾಹರಣೆಯೂ ಇದೆ.

ಹಾಗಂತ ಈ ಸಮಸ್ಯೆ ಸದ್ಯಕ್ಕೆ ಹುಟ್ಟಿಕೊಂಡಿದ್ದೇನೂ ಅಲ್ಲ. ಆದರೆ, ದಿನಕಳೆದಂತೆ ಸಮಸ್ಯೆ ಬಗೆಹರಿಯುವ ಬದಲು ಇನ್ನಷ್ಟು ಕಠಿಣವಾಗುತ್ತಲೇ ಇದೆ. ಬೇರೆ ಜಿಲ್ಲೆಯ ಆಸ್ಪತ್ರೆಗಳಿಗೆ ಹೋಗಲು ಜನಸಾಮಾನ್ಯರು ಜಿಲ್ಲಾಧಿಕಾರಿ ಅವರಿಂದ ಪರವಾನಿಗೆ ಪಡೆಯುವುದು ಕಷ್ಟದ ಕೆಲಸ. ಅದರಲ್ಲೂ ತುರ್ತು ಸಂದರ್ಭ ಇದ್ದಾಗ ಪರವಾನಿಗೆಗೆ ಅಲೆದಾಡುವುದು ಸಾಧ್ಯವಿಲ್ಲದ ಮಾತು. ಈ ಸಮಸ್ಯೆಗೆ ತುರ್ತಾಗಿ ಪರಿಹಾರ ಬೇಕಾಗಿದೆ.

ಇತರ ಜಿಲ್ಲೆಗೆ ತೆರಳಿದಾಗ ಜಿಲ್ಲೆಯ ರೋಗಿಗಳಿಗೆ ಸಮಸ್ಯೆ ಉಂಟಾಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಆಯಾ ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರ ಒದಗಿಸುತ್ತೇವೆ ಎಂದು ಜಿಲ್ಲಾಧಿಕಾರಿಡಾ. ಹರೀಶಕುಮಾರ್‌ ಕೆ ಅವರು ತಿಳಿಸಿದ್ದಾರೆ. 
 

Follow Us:
Download App:
  • android
  • ios