Asianet Suvarna News Asianet Suvarna News

ದಾಂಡೇಲಿ ವಾಟರ್ ಸ್ಪೋರ್ಟ್ಸ್: ಪರವಾನಗಿ ಪಡೆದು ಮತ್ತೆ ಪ್ರಾರಂಭಿಸಲು ಜಿಲ್ಲಾಡಳಿತ ಸೂಚನೆ

ವೀಕೆಂಡ್ ಬಂದ್ರೆ ಸಾಕು ರಾಜ್ಯದ ಮೂಲೆ ಮೂಲೆಗಳಿಂದ ಜನರು ಉತ್ತರ ಕನ್ನಡ ಜಿಲ್ಲೆಯ ಹತ್ತಾರು ಪ್ರವಾಸಿ ತಾಣಗಳಿಗೆ ಮುಗಿಬೀಳುತ್ತಾರೆ. ಅದರಲ್ಲೂ ಪಶ್ಚಿಮಘಟ್ಟ ಪ್ರದೇಶದ ದಾಂಡೇಲಿ ಹಾಗೂ ಜೋಯಿಡಾದಲ್ಲಿ ನಡೆಯೋ ಜಲಸಾಹಸ ಕ್ರೀಡೆಗಳನ್ನು ಆಡೋಲೆಂದೇ ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.

Uttara Kannada District Administration Makes Dandeli Water Sports Game Re Start gvd
Author
Bangalore, First Published May 6, 2022, 7:52 PM IST

ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಕಾರವಾರ (ಮೇ.06): ವೀಕೆಂಡ್ (Weekend) ಬಂದ್ರೆ ಸಾಕು ರಾಜ್ಯದ (Karnataka) ಮೂಲೆ ಮೂಲೆಗಳಿಂದ ಜನರು ಉತ್ತರ ಕನ್ನಡ (Uttara Kannada) ಜಿಲ್ಲೆಯ ಹತ್ತಾರು ಪ್ರವಾಸಿ ತಾಣಗಳಿಗೆ ಮುಗಿಬೀಳುತ್ತಾರೆ. ಅದರಲ್ಲೂ ಪಶ್ಚಿಮಘಟ್ಟ ಪ್ರದೇಶದ ದಾಂಡೇಲಿ (Dandeli) ಹಾಗೂ ಜೋಯಿಡಾದಲ್ಲಿ ನಡೆಯೋ ಜಲಸಾಹಸ ಕ್ರೀಡೆಗಳನ್ನು (Water Adventure Game) ಆಡೋಲೆಂದೇ ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಆದರೆ ಇತ್ತೀಚೆಗೆ ನಡೆದ ಒಂದು ಅವಘಡದಿಂದಾಗಿ ಪರವಾನಗಿಯಿಲ್ಲದೇ ನಡೆಯುತ್ತಿದ್ದ ವಾಟರ್ ಸ್ಪೋರ್ಟ್ಸ್ ಚಟುವಟಿಕೆಗಳನ್ನು ಬ್ಯಾನ್ ಮಾಡಿದ್ದ ಜಿಲ್ಲಾಡಳಿತ, ಇದೀಗ ಪ್ರವಾಸಿಗರ ಸುರಕ್ಷತೆಯ ಕುರಿತು ಆದ್ಯತೆ ನೀಡುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳ ಜತೆಗೆ ವಾಟರ್ ಸ್ಫೋರ್ಟ್ ಚಟುವಟಿಕೆಗಳಿಗೆ ಮತ್ತೆ ಆದ್ಯತೆ ನೀಡಲು ಮುಂದಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ದಟ್ಟ ಅರಣ್ಯಗಳ ನಡುವೆ ಹರಿಯುವ ಸುಂದರ ನದಿ ಪ್ರದೇಶದಲ್ಲಿ ರ್ಯಾಫ್ಟಿಂಗ್, ಕಯಾಕಿಂಗ್‌ನಂತಹ ಜಲಸಾಹಸ ಕ್ರೀಡೆಗಳನ್ನು ಆಡುವ ಮಜಾನೇ ಬೇರೆ. ಹೀಗಾಗಿ ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ದಾಂಡೇಲಿ-ಜೋಯಿಡಾ ವ್ಯಾಪ್ತಿಯಲ್ಲಿ ಹರಿಯುವ ಕಾಳಿ ನದಿಯಲ್ಲಿ ಇಂತಹ ಜಲಸಾಹಸ ಕ್ರೀಡೆಗಳನ್ನು ಆಡಿ ಎಂಜಾಯ್ ಮಾಡೋದಕ್ಕೆ ಅಂತಾನೇ ಪ್ರವಾಸಿಗರು ಇಲ್ಲಿನ ರೆಸಾರ್ಟ್‌, ಹೋಂ‌ ಸ್ಟೇಗಳಿಗೆ ಮುಗಿಬೀಳುತ್ತಾರೆ. ಅದರಲ್ಲೂ ವಾರಾಂತ್ಯ ಹಾಗೂ ಸರ್ಕಾರಿ ರಜಾ ದಿನಗಳಲ್ಲಂತೂ ತಂಡೋಪ ತಂಡವಾಗಿ ಪ್ರವಾಸಿಗರ ದಂಡೇ ಇಲ್ಲಿಗೆ ಹರಿದುಬರುತ್ತದೆ. ಆದರೆ ಕಳೆದ ಹದಿನೈದು ದಿನಗಳ ಹಿಂದೆ ರ್ಯಾಫ್ಟಿಂಗ್ ವೇಳೆ ಅಗತ್ಯಕ್ಕಿಂತ ಹೆಚ್ಚಿನ ಜನರನ್ನು ಹತ್ತಿಸಿಕೊಂಡು ಹೋದ ಪರಿಣಾಮ ರ್ಯಾಫ್ಟ್‌ವೊಂದು ಬಂಡೆಗಳ ಬಳಿ ಸಿಕ್ಕಿಕೊಂಡು ಪ್ರವಾಸಿಗರನ್ನು ಅಪಾಯಕ್ಕೆ ದೂಡಿತ್ತು. 

Uttara Kannada: ಜೋಯಿಡಾ-ದಾಂಡೇಲಿಯಲ್ಲಿ ಕಾನೂನು ನಿಯಮ ಮೀರಿ ಜಲಸಾಹಸ ಚಟುವಟಿಕೆ

ಈ ಪ್ರಕರಣವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ಈ ವೇಳೆ ಸಾಕಷ್ಟು ಮಂದಿ ಪರವಾನಗಿ ಇಲ್ಲದೆಯೇ ಜಲಸಾಹಸ ಕ್ರೀಡೆಗಳನ್ನು ನಡೆಸುತ್ತಿರುವುದು ಗಮನಕ್ಕೆ ಬಂದಿತ್ತು. ಈ ನಿಟ್ಟಿನಲ್ಲಿ ಜಲಸಾಹಸ ಕ್ರೀಡೆಗಳನ್ನು ಸುರಕ್ಷಿತ ರೀತಿಯಲ್ಲಿ ನಡೆಸಲು ಅನಧಿಕೃತ ಜಲಸಾಹಸ ಕ್ರೀಡೆಗಳಿಗೆ ಬ್ರೇಕ್ ಹಾಕಿದ್ದು, ಪರವಾನಗಿ ಪಡೆದು ನಡೆಸುವಂತೆ ಸೂಚನೆ ನೀಡಿದ್ದರು. ಆದರೆ ಪ್ರವಾಸಿಗರು ಆಗಮಿಸುವ ಅವಧಿಯಲ್ಲಿ ಜಲಸಾಹಸ ಕ್ರೀಡೆಗಳನ್ನು ಸ್ಥಗಿತಗೊಳಿಸಿ ಪ್ರವಾಸೋದ್ಯಮಕ್ಕೆ ಅಡ್ಡಿಪಡಿಸಲಾಗುತ್ತಿದೆ ಎಂದು ಜಲಸಾಹಸ ಕ್ರೀಡಾ ಆಯೋಜಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಸಂಬಂಧ ಸ್ಪಷ್ಟನೆ ನೀಡಿರುವ ಜಿಲ್ಲಾಧಿಕಾರಿ ಪರವಾನಗಿ ಪಡೆದು ಜಲಸಾಹಸ ಕ್ರೀಡೆ ನಡೆಸುತ್ತಿದ್ದವರಿಗೆ ಯಾವುದೇ ನಿರ್ಬಂಧ ಇಲ್ಲವಾಗಿದ್ದು, ಪರವಾನಗಿ ಪಡೆಯದವರು ನೋಂದಾಯಿಸಿಕೊಂಡು ಪರವಾನಗಿ ಪಡೆಯಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. 

ಬೇಸಿಗೆ ರಜಾದಿನಗಳನ್ನು ಎಂಜಾಯ್ ಮಾಡಲೆಂದು ವಿವಿಧೆಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಪ್ರತಿನಿತ್ಯ ದಾಂಡೇಲಿ, ಜೋಯಿಡಾ ಭಾಗದ ರೆಸಾರ್ಟ್‌, ಹೋಂಸ್ಟೇಗಳಿಗೆ ಆಗಮಿಸುತ್ತಾರೆ. ಆದರೆ ಇಲ್ಲಿ ಜಲಸಾಹಸ ಕ್ರೀಡೆ ನಡೆಸುತ್ತಿರುವ ಸಾಕಷ್ಟು ಮಂದಿ ಆಯೋಜಕರ ಬಳಿ ಪರವಾನಗಿಯೇ ಇಲ್ಲವಾಗಿದ್ದು, ಪ್ರವಾಸಿಗರ ಸುರಕ್ಷತಾ ಕ್ರಮಗಳನ್ನು ಕೂಡಾ ಪಾಲಿಸುತ್ತಿಲ್ಲ. ಈ ನಿಟ್ಟಿನಲ್ಲಿ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಉತ್ತರಾಖಂಡ ಹಾಗೂ ರಾಜ್ಯದ ಕೊಡಗು ಮಾದರಿಯಲ್ಲಿ ರ್ಯಾಫ್ಟಿಂಗ್, ಕಯಾಕಿಂಗ್‌ನಂತಹ ಜಲಸಾಹಸ ಕ್ರೀಡೆಗಳನ್ನು ಸುರಕ್ಷಿತ ರೀತಿಯಲ್ಲಿ ನಡೆಸಲು ಜಿಲ್ಲಾಡಳಿತ ನಿರ್ಧರಿಸಿದೆ. ಸುರಕ್ಷಿತ ಪ್ರವಾಸೋದ್ಯಮದ ಜತೆಗೆ ಆಯೋಜಕರ ಒಳಿತಿಗಾಗಿಯೇ ಜಿಲ್ಲಾಡಳಿತ ಈ ಕ್ರಮಗಳನ್ನು ಕೈಗೊಳ್ಳುತ್ತಿರೋದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. 

Covid Crisis: 'ಕೋವಿಡ್‌ ನಾಲ್ಕನೇ ಅಲೆ ಎದುರಿಸಲು ಉತ್ತರ ಕನ್ನಡ ಜಿಲ್ಲೆ ಸಿದ್ಧತೆ!

ಇನ್ನು ದಾಂಡೇಲಿ, ಜೋಯಿಡಾ ಭಾಗದಲ್ಲಿ ನಡೆಯುತ್ತಿರುವ ಪರವಾನಗಿ ರಹಿತ ಜಲಸಾಹಸ ಕ್ರೀಡೆಗಳ ಹಿನ್ನೆಲೆಯನ್ನು ಪರಿಶೀಲಿಸಿದಾಗ 2013 ರಿಂದ ಈವರೆಗೆ ಸಾಕಷ್ಟು ಅವಘಡಗಳು ಸಂಭವಿಸಿರುವುದು ಬೆಳಕಿಗೆ ಬಂದಿದ್ದು, ಸುಮಾರು 8 ವಾಟರ್‌ಸ್ಪೋರ್ಟ್ಸ್ ಆಪರೇಟರ್‌ಗಳ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ಪ್ರವಾಸಿಗರ ಸುರಕ್ಷತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಆಪರೇಟರ್‌ಗಳಿಗೆ ಎಸ್ಪಿ ಸೂಚನೆ ನೀಡಿದ್ದಾರೆ. ಒಟ್ಟಿನಲ್ಲಿ ಜಿಲ್ಲೆಗೆ ಬರುವ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಜಲಸಾಹಸ ಕ್ರೀಡೆಗಳಿಗೆ ಸೂಕ್ತ ಮಾರ್ಗಸೂಚಿಗಳನ್ನು ಅಳವಡಿಸಲು ಜಿಲ್ಲಾಡಳಿತ ಮುಂದಾಗಿರೋದು ಉತ್ತಮ‌ ಕ್ರಮವೇ ಸರಿ ಆಗಿದೆ. ಆದ್ರೆ, ಇದಕ್ಕೆ ಕೆಲವು ಆಪರೇಟರ್‌ಗಳಿಂದ ತೀವ್ರ ವಿರೋಧ ಕೂಡಾ ವ್ಯಕ್ತವಾಗಿದ್ದು, ಮುಂದಿನ ದಿನಗಳಲ್ಲಿ ಇದು ಯಾವ ತಿರುವು ಪಡೆದುಕೊಳ್ಳಲಿದೆ ಅನ್ನೋದನ್ನು ಕಾದುನೋಡಬೇಕಿದೆ.

Follow Us:
Download App:
  • android
  • ios