ಶಾಲಾ ಆರಂಭದ ಸಮಯವನ್ನು 15 ನಿಮಿಷಗಳ ಕಾಲ ಮುಂದೂಡಿ, ಆದ್ರೆ ಶಾಲಾ ಮುಕ್ತಾಯದ ಸಮಯದಲ್ಲಿ ಯಾವುದೇ ಬದಲಾವಣೆ ಮಾಡುವುದು ಬೇಡ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ವಿಶಿಷ್ಟ ಭೌಗೋಳಿಕ ಪರಿಸ್ಥಿತಿ ಹಾಗೂ ಗ್ರಾಮೀಣ ಭಾಗದ ಸಾರಿಗೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಶಾಲೆಗಳ ಆರಂಭದ ಸಮಯವನ್ನು 15 ನಿಮಿಷ ಮುಂದೂಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉತ್ತರ ಕನ್ನಡ ಜಿಲ್ಲಾ ಘಟಕ ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಯ ಪದಾಧಿಕಾರಿಗಳು ಬುಧವಾರ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒಗೆ ಮನವಿ ಸಲ್ಲಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಸ್‌ಗಳ ಅಲಭ್ಯತೆ

ಜಿಲ್ಲೆಯ ಬಹುತೇಕ ತಾಲೂಕುಗಳು ಗುಡ್ಡಗಾಡು ಹಾಗೂ ದುರ್ಗಮ ಪ್ರದೇಶಗಳಿಂದ ಕೂಡಿವೆ. ಹಲವು ಗ್ರಾಮೀಣ ಪ್ರದೇಶಗಳಲ್ಲಿ ಸಮರ್ಪಕವಾದ ಸಾರಿಗೆ ಹಾಗೂ ಸಂಪರ್ಕ ವ್ಯವಸ್ಥೆಯ ಕೊರತೆಯಿದೆ. ಬಸ್‌ಗಳ ಅಲಭ್ಯತೆಯಿಂದಾಗಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ಸರಿಯಾಗಿ ಶಾಲೆಗೆ ತಲುಪಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಯನ್ನು ಅರಿತು, ಶಾಲಾ ಆರಂಭದ ವೇಳೆಯಲ್ಲಿ ತುಸು ಬದಲಾವಣೆ ಮಾಡುವಂತೆ ಸಂಘದ ಪದಾಧಿಕಾರಿಗಳು ಮನವಿಯಲ್ಲಿ ಕೋರಿದ್ದಾರೆ.

ಪ್ರಸ್ತುತ 1ರಿಂದ 8ನೇ ತರಗತಿವರೆಗಿನ ಶಾಲೆಗಳು ಬೆಳಗ್ಗೆ 9.30ಕ್ಕೆ ಆರಂಭವಾಗಿ, ಸಂಜೆ 4.30ಕ್ಕೆ ಮುಕ್ತಾಯಗೊಳ್ಳುತ್ತಿವೆ. ಶಾಲಾ ಮುಕ್ತಾಯದ ಸಮಯದಲ್ಲಿ ಯಾವುದೇ ಬದಲಾವಣೆ ಮಾಡುವುದು ಬೇಡ, ಆದರೆ, ಶಾಲಾ ಆರಂಭದ ಸಮಯವನ್ನು ಮಾತ್ರ ಬೆಳಗ್ಗೆ 9.30ರ ಬದಲು 9.45ಕ್ಕೆ ನಿಗದಿಪಡಿಸುವಂತೆ ಶಿಕ್ಷಕರು ವಿನಂತಿಸಿದ್ದಾರೆ.

ಶನಿವಾರ ಸಮಯದಲ್ಲಿ ಬದಲಾವಣೆ ಬೇಡವಂತೆ

ಇನ್ನು ಶನಿವಾರದ ಶಾಲಾ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡುವ ಅಗತ್ಯವಿಲ್ಲ ಎಂದು ಸಂಘ ಸ್ಪಷ್ಟಪಡಿಸಿದೆ. ಪ್ರಸ್ತುತ ಶನಿವಾರದಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12.40ರವರೆಗೆ ನಡೆಯುತ್ತಿರುವ ತರಗತಿಗಳನ್ನು ಯಥಾಸ್ಥಿತಿಯಲ್ಲಿಯೇ ಮುಂದುವರಿಸಬೇಕು.

ಆದರೆ, ಶಿಕ್ಷಣ ಇಲಾಖೆಯ ಕರ್ತವ್ಯ ಆ್ಯಪ್‌ನಲ್ಲಿ ಶನಿವಾರದ ಶಾಲಾ ಅವಧಿಯನ್ನು ಬೆಳಗ್ಗೆ 9.30ರಿಂದ ಮಧ್ಯಾಹ್ನ 1.30ರವರೆಗೆ ಎಂದು ತಪ್ಪಾಗಿ ನಮೂದಿಸಲಾಗಿದೆ. ಅದನ್ನು ವಾಸ್ತವಿಕ ವೇಳಾಪಟ್ಟಿಗೆ ಅನುಗುಣವಾಗಿ ತಕ್ಷಣವೇ ಪರಿಷ್ಕರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಇದನ್ನೂ ಓದಿ: ಆಝಾನ್ ಕೊಡುತ್ತಿದ್ದ ವೇಳೆ ಹೃದಯಾಘಾತದಿಂದಾಗಿ ಧರ್ಮಗುರು ನಿಧನ; ಮೈಕ್ ಮುಂದೆಯೇ ಸಾವು

ಶಿಕ್ಷಕರ ನಿಯೋಗದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿ, ಶಿಕ್ಷಕರ ಸಂಘದ ಈ ಬೇಡಿಕೆ ನ್ಯಾಯಸಮ್ಮತವಾಗಿದೆ. ಈ ಕುರಿತು ಸಂಬಂಧಪಟ್ಟ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ಸಂಘದ ಜಿಲ್ಲಾಧ್ಯಕ್ಷ ಎಂ.ಜಿ. ನಾಯ್ಕ, ಪ್ರಧಾನ ಕಾರ್ಯದರ್ಶಿ ಮಂಜುನಾಥ ನಾಯಕ ಮತ್ತಿತರರು ಇದ್ದರು.

ಇದನ್ನೂ ಓದಿ: ಕುಸಿದ ಕಡವಾಡದ 60 ವರ್ಷ ಹಳೆಯ ಐತಿಹಾಸಿಕ ಸೇತುವೆ; ಮೀನುಗಾರರ ಬದುಕಿನ ಆಸರೆ ಈ ಸೇತುವೆ