ಹೆಣ್ಣು ಕೊಡೋಕು ಹೆದರುವ ಈ ಊರಿಗೆ ಹೋದ್ರು ಜಿಲ್ಲಾಧಿಕಾರಿ
ಈ ಗ್ರಾಮಕ್ಕೆ ಜನರು ಹೆಣ್ಣು ಕೊಡೋದು ಹೆದರುವ ಸ್ಥಿತಿ ಇದೆ. ಈ ಊರನ್ನು ತಲುಪಬೇಕು ಎಂದರೆ 8 ಕಿಲೋಮೀಟರ್ ಕಿರಿದಾದ ದಾರೀಲಿ ಹೋಗಬೇಕು. ನೋಡೋಕೆ ಸುಂದರವಾದ ಈ ಊರಲ್ಲಿ ಅಭಿವೃದ್ಧಿ ಮಾತ್ರ ಅತೀ ಕಡಿಮೆ. ಇಂತಹ ಊರಿಗೆ ಜಿಲ್ಲಾಧಿಕಾರಿ ಹೋಗಿದ್ದಾರೆ.
ಮೇದಿನಿ [ಜ.05]: ಜಿಲ್ಲಾಡಳಿತ ಜನತೆ ಪರವಾಗಿದೆ. ಹೀಗಾಗಿ ಗ್ರಾಮಸ್ಥರನ್ನು ಮುಖ್ಯ ವಾಹಿನಿಗೆ ತರಲಾಗುವುದು ಎಂದು ಜಿಲ್ಲಾಧಿಕಾರಿ ಗ್ರಾಮಸ್ಥರಲ್ಲಿ ಧೈರ್ಯ ತುಂಬುವ ಪ್ರಯತ್ನ ಮಾಡಿದರು. ಕುಮಟಾ ತಾಲೂಕಿನ ಸೊಪ್ಪಿನ ಹೊಸಳ್ಳಿ ಗ್ರಾಪಂ ವ್ಯಾಪ್ತಿಯ ಮೇದಿನಿ ಎಂಬ ಕುಗ್ರಾಮದಲ್ಲಿ ಶನಿವಾರ ರಾತ್ರಿ ಗ್ರಾಮ ವಾಸ್ತವ್ಯ ಹೂಡುವ ಮೂಲಕ ಜಿಲ್ಲಾಧಿಕಾರಿ ಡಾ. ಕೆ. ಹರೀಶಕುಮಾರ ಅಲ್ಲಿನ ವಾಸ್ತವ ಪರಿಸ್ಥಿತಿಯನ್ನು ಅವಲೋಕಿಸಿ ಮಾತನಾಡಿದರು.
ಗ್ರಾಮಸ್ಥ ಕೃಷ್ಣ ಗೌಡ ಮಾತನಾಡಿ, ಹುಲಿದೇವರ ಕೊಡ್ಲಿನಿಂದ ಮೇದಿನಿಗೆ ಕಚ್ಚಾ ರಸ್ತೆಯಿದೆ. ಮಳೆಗಾಲ ಬಂದಾಕ್ಷಣ ಎಲ್ಲ ಕೊಚ್ಚಿ ಹೋಗುತ್ತದೆ. ಯಾರಿಗಾದರೂ ಆರೋಗ್ಯ ಸಮಸ್ಯೆಯಾದರೆ ಕಂಬಳಿಯಲ್ಲಿ ಹೊತ್ತು 7 ಕಿಮೀಗೆ ತೆರಳಬೇಕು. ಗ್ರಾಮಸ್ಥರು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದು. ಪಕ್ಕಾ ರಸ್ತೆ ಮಾಡಿಕೊಡಬೇಕು ಎಂದು ಕೋರಿದರು.
ಮಳೆಗಾಲದಲ್ಲಿ ಮರ ಬಿದ್ದು, ಕನಿಷ್ಠ 15 ವಿದ್ಯುತ್ ಕಂಬಗಳಿಗೆ ಹಾನಿಯಾಗುತ್ತದೆ. ಹೆಸ್ಕಾಂನವರಿಗೆ ದುರಸ್ತಿಗೆ ಕಷ್ಟಸಾಧ್ಯ. ಹೀಗಾಗಿ 6 ತಿಂಗಳ ಮಾತ್ರ ವಿದ್ಯುತ್ ಇರುತ್ತದೆ. ಇದಕ್ಕೆ ಪರಿಹಾರವೆಂದರೆ 4 ಕಿಮೀ ನೆಲದಡಿ ವಿದ್ಯುತ್ ಕೇಬಲ್ ಹಾಕಿ ಕೊಡಬೇಕು. ಆಶ್ರಯ ಮನೆ ಒದಗಿಸಬೇಕು ಎಂದು ವಿನಂತಿಸಿದರು. ಜಿಲ್ಲಾಧಿಕಾರಿ ಡಾ. ಕೆ. ಹರೀಶಕುಮಾರ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ರೋಶನ್ ಒಳಗೊಂಡು ಅಧಿಕಾರಿಗಳು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶನಿವಾರ ರಾತ್ರಿ ಉಳಿದು ಗ್ರಾಮಸ್ಥರ ಸಮಸ್ಯೆ ಆಲಿಸಿದರು.
ಮೇದಿನಿ ಗ್ರಾಮಕ್ಕೆ ಹೆಣ್ಣು ಕೊಡೋಕೂ ಹೆದರ್ತಾರೆ !...
ಈ ಸಂದರ್ಭದಲ್ಲಿ ಕುಮಟಾ ಉಪ ವಿಭಾಗಾಧಿಕಾರಿ ಅಜಿತ ಎಂ., ಹೊನ್ನಾವರ ಡಿಎಫ್‌ಒ ಗಣಪತಿ ಕೆ., ಡಿಎಚ್‌ಒ ಡಾ. ಅಶೋಕಕುಮಾರ, ಕುಮಟಾ ತಹಸೀಲ್ದಾರ್ ಮೇಘರಾಜ ನಾಯ್ಕ, ಜಿಪಂ ಸದಸ್ಯ ಗಜಾನನ ಪೈ, ಎಪಿಎಂಸಿ ಅಧ್ಯಕ್ಷ ಧೀರೂ ಶಾನಬಾಗ, ಸೊಪ್ಪಿನ ಹೊಸಳ್ಳಿ ಗ್ರಾಪಂ ಅಧ್ಯಕ್ಷೆ ಪಾರ್ವತಿ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಹಿಮಂತರಾಜು ಜಿ., ಗ್ರಾಮಸ್ಥ ಗಣಪ ಗೌಡ ಇದ್ದರು.
ಸಂಭ್ರಮದ ಸ್ವಾಗತ: ಗ್ರಾಮಸ್ಥರು ಮಾವಿನ ತೋರಣ ಕಟ್ಟಿ, ಬ್ಯಾನರ್ ಹಾಕಿ, ಡೊಳ್ಳು ಕುಣಿತದೊಂದಿಗೆ ಅಧಿಕಾರಿಗಳನ್ನು ಊರಿಗೆ ಬರಮಾಡಿಕೊಂಡರು. ಇಡೀ ಗ್ರಾಮದಲ್ಲಿ ಸಂಭ್ರಮದ ವಾತಾವರಣ ಮೂಡಿತ್ತು. ಅಧಿಕಾರಿಗಳು ವಾಸ್ಯವ್ಯ ಮಾಡಲಿರುವ ಸರ್ಕಾರಿ ಕಿಪ್ರಾ ಶಾಲೆ ಸುಣ್ಣ-ಬಣ್ಣಗಳಿಂದ ಕಂಗೊಳಿಸುತ್ತಿದೆ.
ನೇತ್ರಾಣಿಯಲ್ಲಿ ಪತಿ ಜೊತೆ ಸಮುದ್ರದಾಳಕ್ಕೆ ಧುಮುಕಿದ ರೋಹಿಣಿ ಸಿಂಧೂರಿ..
ಆರೋಗ್ಯ ತಪಾಸಣೆ: ಶನಿವಾರ ಮೇದಿನಿಯ 89 ಗ್ರಾಮಸ್ಥರ ಆರೋಗ್ಯ ತಪಾಸಣೆ ಕೈಗೊಳ್ಳಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ರಾತ್ರಿ ಗ್ರಾಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಹಳಿಯಾಳದ ಸಿದ್ದು ಬಿರಾದಾರ ಅವರಿಂದ ಗೊಂಬೆಯಾಟ, ಸಿದ್ದಿ ಡುಮಾಮಿ ನೃತ್ಯ ಪ್ರದರ್ಶನಗೊಂಡಿತು. ಇದೇ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಇಬ್ಬರಿಗೆ ಭಾಗ್ಯಲಕ್ಷ್ಮೀ ಬಾಂಡ್ ವಿತರಿಸಲಾಯಿತು. ನಾಲ್ಕು ಜನರಿಗೆ ವೃದ್ದಾಪ್ಯ ವೇತನ ವಿತರಿಸಲಾಯಿತು.
8 ಕಿ.ಮೀ. ಕಡಿದಾದ ರಸ್ತೆ : 8 ಕಿ.ಮೀ. ಕಡಿದಾದ ರಸ್ತೆ ಕುಮಟಾ ತಾಲೂಕಿ ಮೇದಿನಿ ಬಹುಕಾಲದಿಂದ ಸಮಸ್ಯೆಗಳ ಸರಮಾಲೆಯನ್ನೇ ಹೊತ್ತಿರುವ ಗ್ರಾಮವಾಗಿದೆ. ಕುಮಟಾ ತಾಲೂಕು ಕೇಂದ್ರದಿಂದ 38 ಕಿಮೀ ದೂರದ ಸಿದ್ದಾಪುರ ರಸ್ತೆಯಲ್ಲಿ ಸಾಗಿದರೆ ಸಿಗುವ ಹುಲಿದೇವರಕೊಡ್ಲು ತಿರುವಿನಿಂದ ಅಂದಾಜು 8 ಕಿ.ಮೀ. ಅತ್ಯಂತ ಕಡಿದಾದ ರಸ್ತೆಯಲ್ಲಿ ಕಾಲ್ನಡಿಯಲ್ಲಿ ಸಾಕಬೇಕಾದ ಊರು.
ಆತ್ಮಸ್ಥೈರ್ಯ ಮೂಡಿಸಿದ ಡಿಸಿ : ಸಮುದ್ರ ಮಟ್ಟದಿಂದ ಸುಮಾರು 2000 ಅಡಿಗಳಿಗೂ ಹೆಚ್ಚು ಎತ್ತರ ಪ್ರದೇಶವಾಗಿರುವುದರಿಂದ ಅತಿಹೆಚ್ಚು ಮಳೆ ಬೀಳುವ ಮತ್ತು ಹೆಚ್ಚು ಶೀತ ಹವಾಗುಣದ ಪ್ರದೇಶವಾಗಿದೆ. ಮೇದಿನಿ ಗ್ರಾಮಕ್ಕೆ ಸೂಕ್ತ ರಸ್ತೆ ಆಗಬೇಕು. ಸಮರ್ಪಕ ವಿದ್ಯುತ್ ಸಂಪರ್ಕ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಉತ್ತಮ ಶಾಲಾ ಕಟ್ಟಡ ಬೇಕು ಎಂಬುದು ಜನರ ಬಹುದೊಡ್ಡ ಬೇಡಿಕೆ. ಸಮಸ್ಯೆಗಳನ್ನು ಗಮನಿಸಿದ ಜಿಲ್ಲಾಧಿಕಾರಿ ಹರೀಶಕುಮಾರ ಗ್ರಾಮದಲ್ಲಿ ವಾಸ್ತವ್ಯ ಮಾಡಿ ಗ್ರಾಮಸ್ಥರಲ್ಲಿ ಸರ್ಕಾರದ ಪರವಾಗಿ ಆತ್ಮಸ್ತೈರ್ಯ ಮೂಡಿಸಿದ್ದಾರೆ.