ಕಾರವಾರ (ಜ.06) : ಮೇದಿನಿಯ ಕೋಟೆ, ಪರಿಸರ, ಊರಿನ ಜನತೆಗೆ ಮನಸೋತ ಜಿಲ್ಲಾಧಿಕಾರಿ ಡಾ. ಕೆ. ಹರೀಶಕುಮಾರ್ ಮೇದಿನಿಯ ಅಭಿವೃದ್ಧಿಗೆ ಕೊಡುಗೆ ನೀಡುವ ಭರವಸೆ ನೀಡಿದರು.

ಮೇದಿನಿಯಲ್ಲಿ ಶನಿವಾರ ಗ್ರಾಮ (ವಾರ್ತಾ) ವಾಸ್ತವ್ಯ ನಡೆಸಿದ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಎಂ. ರೋಶನ್ ಭಾನುವಾರ ಮೇದಿನಿಯ ಐತಿಹಾಸಿಕ ಕೋಟೆಯ ತುಂಬೆಲ್ಲ ಓಡಾಡಿ ಬೆರಗುಗೊಂಡರು. ಕೋಟೆ ನೋಡಲೆಂದು 3 ಕಿ.ಮೀ. ಕಾಲ್ನಿಡಿಗೆಯಲ್ಲಿ ಕ್ರಮಿಸಿದರು. 

ತ್ಯಾಜ್ಯ ಇಲ್ಲದ, ಶುದ್ಧ ನೈಸರ್ಗಿಕ ಕುಡಿಯುವ ನೀರಿನ ಸೌಲಭ್ಯ ಇರುವ ಹಾಗೂ ದಟ್ಟಡವಿಯಿಂದ ಆವೃತವಾದ ಮೇದಿನಿಯ ಸೌಂದರ್ಯವನ್ನು ಬಣ್ಣಿಸಿದ ಜಿಲ್ಲಾಧಿಕಾರಿ ಈ ಊರಿಗೆ ಆಗಮಿಸಿದ್ದು ತಮಗೂ ಸಮಾಧಾನ, ಸಂತಸ ತಂದಿದೆ ಎಂದರು.

ಹೆಣ್ಣು ಕೊಡೋಕು ಹೆದರುವ ಈ ಊರಿಗೆ ಹೋದ್ರು ಜಿಲ್ಲಾಧಿಕಾರಿ...

ಗ್ರಾಮ ವಾಸ್ತವ್ಯದ ಹಿನ್ನೆಲೆಯಲ್ಲಿ ಇಡೀ ಮೇದಿನಿಗೆ ಮೇದಿನಿಯೇ ಶೃಂಗಾರಗೊಂಡಿತ್ತು. ಊರಿನ ಇತಿಹಾಸದಲ್ಲೇ ಮೊದಲ ಬಾರಿಗೆ ಜಿಲ್ಲೆಯ ಉನ್ನತ ಸರ್ಕಾರಿ ಅಧಿಕಾರಿಗಳು ಆಗಮಿಸಿದ್ದು ವಿಶೇಷವಾಗಿತ್ತು. ತಮ್ಮ ಅಭಿವೃದ್ಧಿಯ ಬಾಗಿಲು ತೆರೆಯಲಿದೆ ಎಂಬ ಆಶಾವಾದವನ್ನು ಸ್ಥಳೀಯರು ವ್ಯಕ್ತಪಡಿಸಿದರು.

ಮೈ ಕೊರೆಯುವ ಚಳಿ: ಮೇದಿನಿಯ ಚಳಿಯೆ ಹಾಗೆ. ಮಧ್ಯಾಹ್ನದ ತನಕ ಕಳೆದ ರಾತ್ರಿಯ ಚಳಿ ಇದ್ದರೆ, ನಂತರ ರಾತ್ರಿಯ ಚಳಿ ಶುರುವಾಗುತ್ತದೆ. ಚಳಿಯಿಂದ ಪಾರಾಗಲು ಕ್ಯಾಂಪ್ ಫೈರ್ಯ ಹಾಕಲಾಯಿತು. ಶನಿವಾರ ತಡರಾತ್ರಿ 2 ಗಂಟೆವರೆಗೆ ಬೆಂಕಿಯ ಮೂಲಕ ಚಳಿಯಿಂದ ರಕ್ಷಣೆ ಪಡೆದರು. ಜಿಲ್ಲಾಧಿಕಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ, ಕುಮಟಾ ಉಪ ವಿಭಾಗಾಧಿಕಾರಿ ಅಜಿತ್ ಮತ್ತಿತರರು ತಮ್ಮ ಅನುಭವಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರೆ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಿಂದಿ ಗೀತೆ ಹಾಡಿ ರಂಜಿಸಿದರು.

ಮೇದಿನಿ ಗ್ರಾಮಕ್ಕೆ ಹೆಣ್ಣು ಕೊಡೋಕೂ ಹೆದರ್ತಾರೆ !...

ಶನಿವಾರ ಬೆಳಗ್ಗೆಯಿಂದ ಭಾನುವಾರ ಮಧ್ಯಾಹ್ನದ ತನಕ ಮೇದಿನಿಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಅಗಾಧವಾದ ನೈಸರ್ಗಿಕ ಸಂಪನ್ಮೂಲ ಇದ್ದೂ, ಆಧುನಿಕ ಸೌಲಭ್ಯದ ಕೊರತೆಯಿಂದ ಬಳಲುತ್ತಿರುವ ಜನತೆಗೆ ಇನ್ನು ಮುಂದೆ ತಮ್ಮ ಕಷ್ಟ-ಕಾರ್ಪಣ್ಯಗಳು ಮರೆಯಾಗಲಿವೆ ಎಂಬ ಆಸೆಯ ಬೀಜವನ್ನು ಬಿತ್ತುವಲ್ಲಿ ಅಧಿಕಾರಿಗಳು ಸಫಲರಾದರು. ವಾರ್ತಾಧಿಕಾರಿ ಹಿಮಂತರಾಜು ಅಚ್ಚುಕಟ್ಟಾಗಿ ಕಾರ್ಯಕ್ರಮ ಸಂಘಟಿಸಿದ್ದರು.