ಜಿಲ್ಲೆಗೆ ಮೊದಲ ತ್ರೈಮಾಸಿಕದಲ್ಲಿ ಬಿಡುಗಡೆ ಮಾಡಲಾದ ಅನುದಾನ ಸಮರ್ಪಕವಾಗಿ ಬಳಕೆ ಮಾಡುವಂತೆ ಆರೋಗ್ಯ ಅಧಿಕಾರಿಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು. 

ಕೋಲಾರ (ಜು.27): ಜಿಲ್ಲೆಗೆ ಮೊದಲ ತ್ರೈಮಾಸಿಕದಲ್ಲಿ ಬಿಡುಗಡೆ ಮಾಡಲಾದ ಅನುದಾನ ಸಮರ್ಪಕವಾಗಿ ಬಳಕೆ ಮಾಡುವಂತೆ ಆರೋಗ್ಯ ಅಧಿಕಾರಿಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು. ಜಿಪಂ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ವೈದ್ಯರು, ಸಿ.ಎಂ.ಓಗಳು ಸೇರಿದಂತೆ 1146 ಅಧಿಕಾರಿ ಹಾಗೂ ಸಿಬ್ಬಂದಿ ಕೊರತೆ ಇರುವುದನ್ನು ಗಮನಿಸಲಾಗಿದೆ. ಈ ಬಗ್ಗೆ ಚರ್ಚಿಸಿ ಸಮರ್ಪಕ ಸಿಬ್ಬಂದಿಗಳನ್ನು ನೇಮಕ ಮಾಡಲಾಗುವುದು ಎಂದರು.

ಹೊರಗುತ್ತಿಗೆ ಮೂಲಕ ಪಡೆಯಬಹುದಾದ ಹುದ್ದೆಗಳಿಗೆ ಆಯಾ ಖಾಸಗಿ ಸಂಸ್ಥೆಗಳ ಮೂಲಕ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಈಗಾಗಲೇ ಅನುಮತಿ ನೀಡಲಾಗಿದೆ. ಅನುಮತಿ ಇಲ್ಲದ ಹುದ್ದೆಗಳಿಗೆ ಸರ್ಕಾರದ ವತಿಯಿಂದ ಶೀಘ್ರವಾಗಿ ಅನುಮತಿ ಕೊಡಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು. ಜಿಲ್ಲೆಯ ಜನತೆ ಆಯುಷ್ಮಾನ್‌ ಭಾರತ್‌ ಯೋಜನೆಯ ವಿಮಾ ಕಾರ್ಡ್‌ಗಳನ್ನು ಹೊಂದುವುದರಲ್ಲಿ ಹಿಂದೆ ಬಿದ್ದಿದ್ದಾರೆ. ಈ ವಿಮಾ ಕಾರ್ಡ್‌ಗಳಿಂದ ಹಲವು ರೋಗಗಳಿಗೆ ನಗದು ರಹಿತ ಚಿಕಿತ್ಸೆ ಪಡೆಯಬಹುದಾಗಿದೆ. ಈ ಪ್ರಯೋಜನ ಪಡೆಯಲು ಸಾರ್ವಜನಿಕರು ಮುಂದಾಗಬೇಕು ಅವರುಗಳಿಗೆ ಅಧಿಕಾರಿಗಳು ಜಾಗೃತಿ ಮೂಡಿಸಬೇಕು. ಎಂದು ತಿಳಿಸಿದರು.

ಡಿಸಿಸಿ ಬ್ಯಾಂಕ್‌ನಲ್ಲಿ ಹಗರಣವೂ ನಡೆದಿಲ್ಲ, ತನಿಖೆಯೂ ಇಲ್ಲ: ಶಾಸಕ ನಂಜೇಗೌಡ

ಆಭಾ ಮತ್ತು ಆಯುಷ್ಮಾನ್‌ ಕಾರ್ಡ್‌ಗಳನ್ನು ಪ್ರತಿ ಒಳರೋಗಿಗೆ ಕಡ್ಡಾಯ ಮಾಡುವುವುದರಿಂದ ಶೀಘ್ರವಾಗಿ ಗುರಿ ತಲುಪಬಹುದು. ವಿಮಾ ಕಾರ್ಡ್‌ಗಳನ್ನು ವಿತರಿಸುವುದರಲ್ಲಿ ಜಿಲ್ಲೆಯನ್ನು ಅಗ್ರ ಮಾನ್ಯ ಜಿಲ್ಲೆಗಳಲ್ಲಿ ನೋಡಬೇಕೆಂಬುದು ನನ್ನ ಹಂಬಲ. ಅದರಂತೆಯೇ ಜಿಲ್ಲೆಯನ್ನು ಕ್ಷಯಮುಕ್ತ ಜಿಲ್ಲೆಯನ್ನಾಗಿ ಮಾಡುವ ಗುರಿಯನ್ನು ಅಧಿಕಾರಿಗಳು ಹೊಂದಬೇಕು. ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಈ ಕಚೇರಿಯನ್ನು ಕಡ್ಡಾಯವಾಗಿ ಬಳಸಬೇಕು ಇದರಿಂದ ಆಡಳಿತದಲ್ಲಿ ಪಾರದರ್ಶಕತೆ ತರಬಹುದಾಗಿದೆ. ಈ ಬಗ್ಗೆ ಅಧಿಕಾರಿ ನೌಕರರು ಹೊಂದಿರುವ ನಿರುತ್ಸಾಹ ಹಾಗೂ ಹಿಂಜರಿಕೆ ಬದಿಗಿಟ್ಟು ಕಾರ್ಯ ನಿರ್ವಹಿಸಬೇಕು. 

ಜಿಲ್ಲೆಯ ಬಹುತೇಕ ರೈತಾಪಿ ವರ್ಗದ ಜನರು ತಮ್ಮ ತಮ್ಮ ಕೆಲಸಗಳನ್ನು ಮುಗಿಸಿಕೊಂಡು ಸಂಜೆ ಮೇಲೆ ಲಭ್ಯವಾಗುವುದರಿಂದ ಪ್ರಸ್ತುತ ಈ ಗಿರುವ ನಮ್ಮ ಕ್ಲಿನಿಕ್‌ಗಳ ಸಮಯವನ್ನು ಮರುನಿಗದಿಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದರು. ಪ್ರಸಕ್ತ ಸಾಲಿನಲ್ಲಿ ಗರ್ಭಿಣಿಯರು ಹೆರಿಗೆಯಲ್ಲಿ ಸಾವನ್ನಪ್ಪುವ 5 ಪ್ರಕರಣಗಳನ್ನು ಗುರುತಿಸಲಾಗಿದೆ. ಈ ಪ್ರಮಾಣ ಜಿಲ್ಲೆಯ ಅತ್ಯಂತ ಅನುಭವಿ ವೈದ್ಯರಿದ್ದಾಗಲೂ ಮುಂಜಾಗ್ರತಾ ಕ್ರಮ ವಹಿಸಿ ಕಡಿಮೆ ಮಾಡಬಹುದಾಗಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಕೃತಕ ಹೆರಿಗೆ ಪ್ರಮಾಣ ಜಾಸ್ತಿಯಾಗುತ್ತಿದ್ದು ಇದನ್ನು ತಡೆಯಬೇಕು. ಬದಲಿಗೆ ಸಾಧ್ಯವಾದಷ್ಟುನೈಸರ್ಗಿಕ ಹೆರಿಗೆ ಪದ್ಧತಿಯಲ್ಲೇ ಹೆರಿಗೆ ಮಾಡಿಸಲು ಕ್ರಮ ವಹಿಸಬೇಕು. ಜಿಲ್ಲೆಯಲ್ಲಿ ನವಜಾತ ಶಿಶುಗಳಿಗೆ ಸರ್ಕಾರದಿಂದ ನೀಡಲಾಗುವ ಕಡ್ಡಾಯ ಲಸಿಕೆಗಳನ್ನು ತಪ್ಪದೇ ಕೊಡಿಸಬೇಕು. ಈ ನಿಟ್ಟಿನಲ್ಲಿ ಮಿಷನ್‌ ಇಂದ್ರಧನುಷ್‌ ಅಭಿಯಾನ ಚುರುಕುಗೊಳಿಸಿ ಯಾವುದೇ ಮಗು ಯಾವುದೇ ಕಾರಣಕ್ಕೆ ಈ ಯೋಜನೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದರು.

ಶಾಸಕರಾದ ಡಾ.ಜಿ. ಕೊತ್ತೂರು ಮಂಜುನಾಥ್‌, ಜಿ.ಕೆ.ವೆಂಕಟಶಿವಾರೆಡ್ಡಿ, ರೂಪಕಲಾ ಎಂ.ಶಶಿಧರ್‌, ಎಂಎಲ್‌ಸಿಗಳಾದ ಎಂ.ಎಲ್‌.ಅನಿಲ್‌ ಕುಮಾರ್‌, ಇಂಚರ ಗೋವಿಂದರಾಜು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್‌ ಕುಮಾರ್‌, ಇಲಾಖೆಯ ಆಯುಕ್ತರಾದ ರಂದೀಪ್‌ ದೇವ್‌, ರಾಷ್ಟ್ರೀಯ ಆರೋಗ್ಯ ಮಿಷನ್‌ ನಿರ್ದೇಶಕ ಡಾ.ವೈ.ನವೀನ್‌ ಭಟ್‌, ಜಿಲ್ಲಾಧಿಕಾರಿ ಅಕ್ರಂ ಪಾಷ, ಜಿಪಂ ಸಿಇಓ ಪದ್ಮ ಬಸವಂತಪ್ಪ, ಡಿಎಚ್‌ಓ ಡಾ.ಜಗದೀಶ್‌ ಇದ್ದರು.

ಸಮಾಲೋಚನಾ ಕೇಂದ್ರಗಳಿಗೆ ಭೇಟಿ: ಸಭೆಗೂ ಮುನ್ನ ಬೆಳಗ್ಗೆ ನಗರದ ಸ್ಯಾನಿಟೋರಿಯಂನಲ್ಲಿ ಸ್ಥಾಪಿಸಲಾಗಿರುವ ಡಿಎನ್ಸಿ ಸಮಾಲೋಚನಾ ಕೇಂದ್ರ, ವೇಮಗಲ್‌ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಮೇಡಿಹಾಳ ಆರೋಗ್ಯ ಕ್ಷೇಮ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿ ಖಾಸಗಿ ಸಂಸ್ಥೆಯ ಸಹಭಾಗಿತ್ವದಲ್ಲಿ ನಡೆಸಲಾಗುತ್ತಿರುವ ವರ್ಚುವಲ್‌ ಸಮಾಲೋಚನಾ ಕೇಂದ್ರಗಳ ಬಗ್ಗೆ ಮಾಹಿತಿ ಪಡೆದರು. ಇಂತಹ ಜನಸ್ನೇಹಿ ಕಾರ್ಯಕ್ರಮಗಳು ನಮ್ಮನ್ನು ಇನ್ನಷ್ಟುಜನಪರವಾಗಿ ಕೆಲಸ ಮಾಡಲು ಪ್ರೇರೇಪಿಸುತ್ತವೆ. ಟಾಟಾ ಕನ್ಸಲ್ಟೆನ್ಸಿ ಸಂಸ್ಥೆಯ ಈ ಕಾರ್ಯ ಅತ್ಯಂತ ಶ್ಲಾಘನೀಯ. ಇಂತಹ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ವಿಸ್ತರಿಸಲು ಸರ್ಕಾರದ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದರು.

ಕಟ್ಟುನಿಟ್ಟಾಗಿ ತೆರಿಗೆ ವಸೂಲಿ ಮಾಡಲು ಸೂಚನೆ: ಶಾಸಕಿ ರೂಪಕಲಾ

ನಕಲಿ ಕ್ಲಿನಿಕ್‌ಗಳ ಮುಚ್ಚಿಸಿ: ನಕಲಿ ಕ್ಲಿನಿಕ್‌ಗಳ ಹಾಗೂ ನಕಲಿ ಸ್ಕಾ್ಯನಿಂಗ್‌ ಕೇಂದ್ರಗಳ ಹಾವಳಿ ದಿನೇ ದಿನೇ ಹೆಚ್ಚುತ್ತಿದ್ದು, ಖಾಸಗಿ ಆಸ್ಪತ್ರೆಗಳೊಂದಿಗೆ ಚರ್ಚಿಸಿ ಇವುಗಳ ಮೇಲೆ ಅನಿರೀಕ್ಷಿತ ದಾಳಿ ನಡೆಸಿ ಅವುಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಅಕ್ರಂ ಪಾಷರಿಗೆ ವಿನಂತಿಸಿದರು.