Asianet Suvarna News Asianet Suvarna News

ಸಿರಿಧಾನ್ಯಗಳ ಬಳಕೆ ಸುಸ್ಥಿರ ಆಹಾರ ವ್ಯವಸ್ಥೆ ಸುಧಾರಣೆ

ಸಿರಿಧಾನ್ಯ ಬೆಳೆದು ಬಳಸುವ ಮೂಲಕ ಸುಸ್ಥಿರ ಆಹಾರ ವ್ಯವಸ್ಥೆಯಲ್ಲಿ ಸುಧಾರಣೆ ಆಗಲಿದೆ. ಈ ಬಗ್ಗೆ ಜನರಲ್ಲಿ ಮತ್ತಷ್ಟು ಅರಿವು ಮೂಡಿಸುವ ಕೆಲಸ ಆಗಬೇಕಿದೆ ಎಂದು ಜೀವವೈವಿದ್ಯ ಮಂಡಳಿಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಗತ್‌ರಾಮ್ ತಿಳಿಸಿದರು.

Use of Cereals to Improve Sustainable Food Systems snr
Author
First Published Oct 7, 2023, 9:25 AM IST

ತಿಪಟೂರು: ಸಿರಿಧಾನ್ಯ ಬೆಳೆದು ಬಳಸುವ ಮೂಲಕ ಸುಸ್ಥಿರ ಆಹಾರ ವ್ಯವಸ್ಥೆಯಲ್ಲಿ ಸುಧಾರಣೆ ಆಗಲಿದೆ. ಈ ಬಗ್ಗೆ ಜನರಲ್ಲಿ ಮತ್ತಷ್ಟು ಅರಿವು ಮೂಡಿಸುವ ಕೆಲಸ ಆಗಬೇಕಿದೆ ಎಂದು ಜೀವವೈವಿದ್ಯ ಮಂಡಳಿಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಗತ್‌ರಾಮ್ ತಿಳಿಸಿದರು.

ಕೊನೇಹಳ್ಳಿಯಲ್ಲಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕರ್ನಾಟಕ ಜೀವವೈವಿಧ್ಯ ಮಂಡಳಿ ಬೆಂಗಳೂರು, ಅರಣ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ನಡೆದ ಸುಸ್ಥಿರ ಆಹಾರ ವ್ಯವಸ್ಥೆ ಕಾಪಾಡಿಕೊಳ್ಳಲು ಸಿರಿಧಾನ್ಯ ಬೆಳೆ ಉತ್ತೇಜಿಸುವ ಕಾರ್ಯಗಾರವನ್ನು ಸಿರಿಧಾನ್ಯಗಳ ರಾಶಿಗೆ ಪೂಜಿಸಿ, ಗಿಡಕ್ಕೆ ನೀರೆರೆಯುವ ಮೂಲಕ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಜನರಿಗೆ ಸಿರಿಧಾನ್ಯ ಮಹತ್ವದ ಬಗ್ಗೆ ಅರಿವು ಮೂಡುತ್ತಿದ್ದು, ಸಿರಿಧಾನ್ಯಗಳ ಮೌಲ್ಯವರ್ಧನೆಯ ಬಗ್ಗೆ ಮಹಿಳೆಯರು ಗಮನ ಹರಿಸಬೇಕಿದೆ. ಬೇರೆ ಬೆಳೆಗಳೊಂದಿಗೆ ಸಿರಿಧಾನ್ಯ ಬೆಳೆಯುವುದರಿಂದ ರೈತರು ಮತ್ತಷ್ಟು ಆರ್ಥಿಕ ಸದೃಢರಾಗಬಹುದಾಗಿದ್ದು, ಇಂತಹ ಕಾರ್ಯಾಗಾರಗಳಲ್ಲಿ ಭಾಗವಹಿಸಿ ಅಗತ್ಯ ಮಾಹಿತಿ ಪಡೆದುಕೊಳ್ಳಬೇಕೆಂದರು.

ನೋಡಲ್ ಅಧಿಕಾರಿ ಡಾ. ಎಂ.ಜೆ. ಚಂದ್ರೇಗೌಡ ಮಾತನಾಡಿ ಸುಸ್ಥಿರತೆಯ ಮೊದಲ ಅವಶ್ಯಕತೆಯೆಂದರೆ ಆರ್ಥಿಕ ಸುಸ್ಥಿರತೆ ಎನ್ನುವುದರ ಜೊತೆಗೆ ಸಿರಿಧಾನ್ಯಗಳು ಹೆಚ್ಚಿನ ರೀತಿಯಲ್ಲಿ ಬೆಳೆದು ಮೌಲ್ಯವರ್ಧನೆಯ ಕಡೆ ಹೆಚ್ಚು ಗಮನಹರಿಸಿದರೆ ಆರ್ಥಿಕ ಸುಸ್ಥಿರತೆ ಕಾಪಾಡಿಕೊಳ್ಳಬಹುದು ಎಂದರು.

ಕೆವಿಕೆ ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥರಾದ ಡಾ.ವಿ.ಗೋವಿಂದಗೌಡ ಮಾತನಾಡಿ, ಮಳೆ ಕಡಿಮೆ ಬರುವಂತಹ ಜಾಗದಲ್ಲಿಯೂ ಹಾಗೂ ಎಲ್ಲಾ ಹವಾಮಾನ ಪರಿಸ್ಥಿತಿಗೆ ಹೊಂದಿಕೊಳ್ಳುವ ಬೆಳೆಗಳೆಂದರೆ ಸಿರಿಧಾನ್ಯಗಳು. ಸಜ್ಜೆ ತಿಂದು ಹೆಜ್ಜೆ ಹಾಕು, ಸಜ್ಜೆ ತಿಂದು ಬಾರ ಹೊರು, ಬರಗು ಇದ್ದರೆ ಬರದಲ್ಲೂ ಜೀವನ ನಿರ್ಮಾಣ ಮಾಡಬಹುದು. ಹಾರಕ ತಿಂದವರು ಹಾರಾಡುತ್ತಾ ಹೋದರು, ಊದಲು ತಿಂದರೆ ಉಬ್ಬಸನೆ ಬರುವುದಿಲ್ಲ ಎನ್ನುವುದರ ಮೂಲಕ ಸಿರಿಧಾನ್ಯಗಳಿಗೆ ಇರುವ ಮೌಲ್ಯತೆಯನ್ನು ವಿವರಿಸಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಜೆ. ಗೋವರ್ಧನ ಸಿಂಗ್ ಮಾತನಾಡಿ, ಸಿರಿಧಾನ್ಯಗಳಲ್ಲಿ ಅತಿ ಹೆಚ್ಚಿನ ಪೋಷಕಾಂಶಗಳು ಇರುವುದರಿಂದ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ವಿವಿಧ ರೀತಿಯ ಕಾಯಿಲೆ ಕಡಿಮೆ ಮಾಡಬಹುದು ಮತ್ತು ಸಿರಿಧಾನ್ಯಗಳು ಗ್ಲುಟೀನ್ ರಹಿತ ಆಗಿರುವುದರಿಂದ ದೇಹಕ್ಕೆ ಒಳ್ಳೆಯದು. ಆದ್ದರಿಂದ ಸಿರಿಧಾನ್ಯಗಳನ್ನು ದಿನನಿತ್ಯ ಬಳಸಬೇಕೆಂದರು.

ಕೆವಿಕೆ ಗೃಹ ವಿಜ್ಞಾನಿ ಡಾ. ಕೆ. ನಿತ್ಯಶ್ರೀ, ಸಿರಿಧಾನ್ಯಗಳ ಮೌಲ್ಯವರ್ಧನೆ ಮತ್ತು ಆರೋಗ್ಯದ ಕುರಿತು ಮಾತನಾಡಿ, ನಿತ್ಯ ಬಳಸುವ ಅಕ್ಕಿ, ಗೋಧಿಗಿಂತ ಸಿರಿಧಾನ್ಯಗಳಲ್ಲಿ ಹೆಚ್ಚಿನ ಪ್ರೋಟೀನ್, ವಿಟಮಿನ್, ನಾರಿನಾಂಶ ಖನಿಜ ಹಾಗೂ ಉತ್ತಮ ಕೊಲೆಸ್ಟ್ರಾಲ್ ಒಳಗೊಂಡಿದೆ. ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ, ಬೊಜ್ಜು, ಕ್ಯಾನ್ಸ್‌ರಂತಹ ರೋಗಗಳನ್ನು ತಡೆಯಲು ಸಿರಿಧಾನ್ಯ ರಾಮಬಾಣ. ಆದ್ದರಿಂದ ಅಕ್ಕಿ ಬಳಸಿದಂತೆಯೇ ಇವುಗಳನ್ನು ಉತ್ಪಾದಿಸಿ ಹಾಗೂ ಅದನ್ನು ಬಳಸಿ ಊಟ ಮಾಡಬೇಕು ಎಂದರು.

ಕೆವಿಕೆ ವಿಜ್ಞಾನಿ ಡಾ. ಪದ್ಮನಾಭನ್ ಸಿರಿಧಾನ್ಯಗಳ ಕೃಷಿ ಮತ್ತು ಮಾರುಕಟ್ಟೆ ಬಗ್ಗೆ ತಾಂತ್ರಿಕ ಅಧಿವೇಶನ ನಡೆಸಿಕೊಟ್ಟರು. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ರೈತ ಮಹಿಳೆಯರು ತಯಾರಿಸಿದ ಸಿರಿಧಾನ್ಯಗಳ ಖಾದ್ಯ ನೋಡುಗರ ಬಾಯಲ್ಲಿ ನೀರುರಿಸುವಂತಿದ್ದವು.

ಕಾರ್ಯಕ್ರಮದಲ್ಲಿ ಕೆವಿಕೆ ವಿಜ್ಞಾನಿಗಳಾದ ಎಂ.ಈ ದರ್ಶನ್, ಡಾ ಕೆ. ಕೀರ್ತಿಶಂಕರ್, ಡಾ. ತಸ್ಮೀಯಾ ಕೌಸರ್, ಹೆಚ್.ಮನೋಜ್, ಶ್ರೀಧರಮೂರ್ತಿ, ಡಾ. ಹೆಚ್.ಎಸ್. ಸತೀಶ್, ಶಿಶು ಅಭಿವೃದ್ದಿ ಮೇಲ್ವಿಚಾರಕಿ ಬಿ.ಎನ್.ಪ್ರೇಮ, ಅರಣ್ಯ ಇಲಾಖೆಯ ವಿ. ದೇವರಾಜು, ಪಿ.ಟಿ. ಲಕ್ಷ್ಮೀ ನಾರಾಯಣ, ಸುಬ್ಬರಾವ್, ಚಿಕ್ಕರಾಜೇಂದ್ರ, ನಾಗೇಶ್, ಮಂಡಳಿಯ ಕೆ.ಆರ್ ಪ್ರಸನ್ನ, ಪವಿತ್ರ, ಅಂಗನವಾಡಿ ಕಾರ್ಯಕರ್ತೆಯರು ರೈತರು ಹಾಗೂ ರೈತ ಮಹಿಳೆಯರು ಭಾಗವಹಿಸಿದ್ದರು.

Follow Us:
Download App:
  • android
  • ios