ಭಟ್ಕಳ ಪುರಸಭೆ ನಾಮಫಲಕದಲ್ಲಿ ಉರ್ದು ಅಕ್ಷರ: ಕನ್ನಡಿಗರ ಆಕ್ರೋಶ

*  ಕನ್ನಡಪರ ಸಂಘಟನೆಗಳಿಂದ ತೀವ್ರ ಆಕ್ರೋಶ
*  ತೆರವುಗೊಳಿಸದಿದ್ದಲ್ಲಿ ಉಗ್ರ ಹೋರಾಟದ ಎಚ್ಚರಿಕೆ
*  ಪುರಸಭೆಯ ಸುತ್ತಮುತ್ತ ಬಿಗಿ ಪೊಲೀಸ್‌ ಬಂದೋಬಸ್ತ್‌ 
 

Urdu Language in Bhatkal Town Municipal Council Name Board in Uttara Kannada grg

ಭಟ್ಕಳ(ಜೂ.28):  ಇಲ್ಲಿನ ಪುರಸಭೆಯ ನಾಮಫಲಕವನ್ನು ಉರ್ದು ಅಕ್ಷರದಲ್ಲಿ ಬರೆಯಿಸಿರುವುದಕ್ಕೆ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸೋಮವಾರ ಸಂಜೆ ಭುವನೇಶ್ವರಿ ಕನ್ನಡ ಸಂಘದ ನೇತೃತ್ವದಲ್ಲಿ ಪುರಸಭೆ ಎದುರು ಪ್ರತಿಭಟನೆ ನಡೆಸಲಾಯಿತು.

ಪುರಸಭೆಯ ನಾಮಫಲಕದಲ್ಲಿ ಬರೆಯಲಾದ ಉರ್ದು ಅಕ್ಷರಗಳನ್ನು ತೆರವು ಮಾಡಬೇಕು. ಇಲ್ಲದಿದ್ದಲ್ಲಿ ಜಿಲ್ಲಾದ್ಯಂತ ಪ್ರತಿಭಟನೆ ನಡೆಸುವುದು ಅನಿವಾರ್ಯವಾದೀತು ಎಂದು ಕನ್ನಡಪರ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಈ ಸಂದರ್ಭದಲ್ಲಿ ನಿವೃತ್ತ ಸೈನಿಕ ಹಾಗೂ ಪುರಸಭೆಯ ನಾಮನಿರ್ದೇಶಿತ ಸದಸ್ಯ ಶ್ರೀಕಾಂತ ನಾಯ್ಕ ಮಾತನಾಡಿ, ಕಾನೂನಿನ ಪ್ರಕಾರ ನಾಮಫಲಕದಲ್ಲಿ ಕನ್ನಡ, ಇಂಗ್ಲೀಷ್‌ ಮತ್ತು ಹಿಂದಿಯಲ್ಲಿ ಮಾತ್ರ ಬರೆಯಿಸಬಹುದಾಗಿದೆ. ಆದರೆ ಭಟ್ಕಳ ಪುರಸಭೆಯಲ್ಲಿ ಕನ್ನಡ, ಇಂಗ್ಲೀಷ್‌ ಜೊತೆಗೆ ಉರ್ದು ಭಾಷೆಯಲ್ಲೂ ಬರೆಯಿಸಲಾಗಿದೆ. ಹೀಗೆ ಸ್ಥಳೀಯ ಭಾಷೆಯಲ್ಲಿ ನಾಮಫಲಕ ಬರೆಯಿಸುತ್ತಾ ಹೋದರೆ ಮುಂದಿನ ದಿನಗಳಲ್ಲಿ ಇತರೆ ಭಾಷೆಯನ್ನೂ ಬರೆಯಿಸಬೇಕೆಂಬ ಆಗ್ರಹ ಬರಬಹುದು. ಹೀಗಾಗಿ ತಕ್ಷಣವೇ ಭಟ್ಕಳ ಪುರಸಭೆಯ ನಾಮಫಲಕದಲ್ಲಿ ಬರೆಯಿಸಲಾದ ಉರ್ದು ಅಕ್ಷರಗಳನ್ನು ತೆಗೆಯಿಸಬೇಕು. ಇಲ್ಲದಿದ್ದಲ್ಲಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಬೇಕಾದೀತು ಎಂದು ಎಚ್ಚರಿಕೆ ನೀಡಿದರು.

ಬಿಎಸ್‌ಎನ್‌ಎಲ್‌ ನಾಟ್‌ರೀಚೆಬಲ್‌: ಹಿಡಿಶಾಪ ಹಾಕುವ ಹಾಕುತ್ತಿರುವ ಜನತೆ..!

ಉರ್ದು ಅಕ್ಷರ ಬರೆಯುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರೂ ಪಟ್ಟು ಬಿಡದೇ ಉರ್ದು ಅಕ್ಷರವನ್ನು ಬರೆಯಿಸಲಾಗಿದೆ. ಇದಕ್ಕೆ ನಮ್ಮ ವಿರೋಧವಿದೆ. ಪುರಸಭೆ ಮತ್ತು ತಾಲೂಕು ಆಡಳಿತಕ್ಕೆ ನಾಮಫಲಕದಲ್ಲಿ ಇರುವ ಉರ್ದು ಅಕ್ಷರವನ್ನು ತೆರೆವು ಮಾಡುವಂತೆ ಮಂಗಳವಾರ ಸಂಜೆವರೆಗೆ ಸಮಯ ನೀಡಲಾಗಿದೆ. ಒಂದೊಮ್ಮೆ ತೆರವುಗೊಳಿಸದೇ ಇದ್ದಲ್ಲಿ ಜಿಲ್ಲೆಯಲ್ಲಿರುವ ಕನ್ನಡಪರ ಸಂಘಟನೆಗಳನ್ನು ಕರೆಯಿಸಿ ಉಗ್ರ ರೀತಿಯ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಭುವನೇಶ್ವರ ಸಂಘದ ಅಧ್ಯಕ್ಷ ರಮೇಶ ನಾಯ್ಕ ಕೂಡ ಪುರಸಭೆಯ ನಾಮಫಲಕಕ್ಕೆ ಅಳವಡಿಸಿರುವ ಉರ್ದು ಅಕ್ಷರವನ್ನು ತಕ್ಷಣ ತೆರವುಗೊಳಿಸಬೇಕೆಂದು ಆಗ್ರಹಿಸಿದರು.ಮನವಿಯನ್ನು ಪುರಸಭೆಯ ಅಧಿಕಾರಿಗಳು ಹಾಗೂ ಡಿವೈಎಸ್ಪಿ ಪರವಾಗಿ ಗ್ರಾಮಾಂತರ ಸಿಪಿಐ ಮಹಾಬಲೇಶ್ವರ ನಾಯ್ಕ ಸ್ವೀಕರಿಸಿದರು.

ಪೊಲೀಸ್‌ ಬಂದೋಬಸ್ತ್‌

ಪುರಸಭೆಯ ನಾಮಫಲಕದಲ್ಲಿ ಉರ್ದು ಅಕ್ಷರದ ಬಗ್ಗೆ ವಿವಾದ ಉಂಟಾದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪುರಸಭೆಯ ಸುತ್ತಮುತ್ತ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಸೋಮವಾರ ಸಂಜೆಯ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಜಮಾಯಿಸಿದ್ದರು.

ದಲಿತ ಸಿಎಂ ಚರ್ಚೆ ಇರುವುದು ಬಿಜೆಪಿಯಲ್ಲಲ್ಲ: ಸಚಿವ ಕೋಟ

ಕನ್ನಡಪರ ಸಂಘಟನೆಯವರು ಪುರಸಭೆ ನಾಮಫಲಕದಲ್ಲಿ ಉರ್ದು ಅಕ್ಷರ ಬರೆಸಿದ್ದು ತಪ್ಪು ಎಂದು ವಾದಿಸಿದರೆ, ಉರ್ದು ಭಾಷಿಕರು ಮೊದಲಿನಿಂದಲೂ ನಾಮಫಲಕದಲ್ಲಿ ಉರ್ದು ಅಕ್ಷರವಿತ್ತು. ಈಗ ಈ ಬಗ್ಗೆ ಅಕ್ಷೇಪಣೆ ಮಾಡುವುದು ಸರಿಯಲ್ಲ ಎಂಬ ವಾದ ಮಾಡಿದರು.

ನಾಮಫಲಕದಲ್ಲಿ ಬರೆಯಿಸಲಾದ ಉರ್ದು ಅಕ್ಷರವನ್ನು ಒಮ್ಮೆ ತೆಗೆಯಿಸಿದ್ದರೂ ಪುರಸಭೆಯ ಆಡಳಿತವರು ಪುನಃ ಅದನ್ನು ಬರೆಯಿಸುವುದರ ಮೂಲಕ ಹಠಕ್ಕೆ ಬಿದ್ದಿದ್ದಾರೆ ಎನ್ನುವುದು ಕನ್ನಡಪರ ಸಂಘಟನೆಗಳ ಆರೋಪವಾಗಿದೆ. ಆದರೆ ಪುರಸಭೆಯಲ್ಲಿ ಅಧಿಕಾರದಲ್ಲಿ ಇರುವವರ ವಾದ ವಿಭ್ನಿನವಾಗಿದ್ದು, ಈ ಹಿಂದಿನಿಂದಲೂ ಪುರಸಭೆ ನಾಮಫಲಕದಲ್ಲಿ ಪ್ರಥಮವಾಗಿ ಕನ್ನಡ, ಎರಡನೇಯದಾಗಿ ಇಂಗ್ಲಿಷ್‌ ಹಾಗೂ ಮೂರನೇಯದಾಗಿ ಉರ್ದು ಭಾಷೆಯಲ್ಲಿ ಬರೆಯಲಾಗಿತ್ತು. ಆದರೆ ಕೆಲವರು ಇದನ್ನೇ ದೊಡ್ಡದು ಮಾಡುತ್ತಿರುವುದು ಸರಿಯಲ್ಲ ಎನ್ನುವುದಾಗಿದೆ.

ಸಮಯಕ್ಕೆ ಸರಿಯಾಗಿ ಪೊಲೀಸರು ಆಗಮಿಸಿದ್ದರಿಂದ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಭಟ್ಕಳದಲ್ಲಿ ಸಣ್ಣ ಘಟನೆಯೂ ಸೂಕ್ಷ್ಮವಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ತೀವ್ರ ನಿಗಾ ಇಡಲಾಗಿದೆ.

ಭಟ್ಕಳ ಪುರಸಭೆಯ ನಾಮಫಲಕ ಈ ಹಿಂದಿನಿಂದಲೂ ಕನ್ನಡ, ಇಂಗ್ಲೀಷ್‌ ಭಾಷೆಯ ಜೊತೆಗೆ ಉರ್ದು ಭಾಷೆಯಲ್ಲೂ ಇತ್ತು. ಅದನ್ನೇ ಮುಂದುವರಿಸಿದ್ದೇವೆ. ಈ ಬಗ್ಗೆ ಅನಗತ್ಯ ವಿವಾದ ಬೇಡ ಅಂತ ಭಟ್ಕಳ ಪುರಸಭೆ ಅಧ್ಯಕ್ಷ ಪರ್ವೇಜ್‌ ಕಾಶೀಮಜಿ ತಿಳಿಸಿದ್ದಾರೆ.  
 

Latest Videos
Follow Us:
Download App:
  • android
  • ios