ದಲಿತ ಸಿಎಂ ಚರ್ಚೆ ಇರುವುದು ಬಿಜೆಪಿಯಲ್ಲಲ್ಲ: ಸಚಿವ ಕೋಟ
* ಕಳೆದ ಬಾರಿ ಪರಮೇಶ್ವರ ಅವರನ್ನು ಯಾರು ಸೋಲಿಸಿದರು ಎಂದು ಪರಮೇಶ್ವರ ಅವರೇ ಹೇಳಲಿ
* ದಲಿತ ಮುಖ್ಯಮಂತ್ರಿ ಆಗಬೇಕು ಎಂದು ಜಿ. ಪರಮೇಶ್ವರ ಅವರಿಗೆ ಅಭಿಲಾಷೆ ಇತ್ತು
* ಬಿಜೆಪಿಯಲ್ಲಿ ನಿಲುವು ಸ್ಪಷ್ಟವಾಗಿದೆ. ಗೊಂದಲ ಕಾಂಗ್ರೆಸ್‌ನಲ್ಲಿದೆ
ಕಾರವಾರ(ಜೂ.28): ದಲಿತ ಮುಖ್ಯಮಂತ್ರಿ ಯಾರಾಗಬೇಕು ಎಂಬ ಚರ್ಚೆ ಇರುವುದು ಬಿಜೆಪಿಯಲ್ಲಿ ಅಲ್ಲ; ಕಾಂಗ್ರೆಸ್ ಅಂಗಳದಲ್ಲಿ. ಹಾಗಾಗಿ ಕಾಂಗ್ರೆಸ್ಸಿನವರು ಮೊದಲು ಚರ್ಚೆ ಮಾಡಿಕೊಂಡು ಆರೋಪ ಮಾಡಲಿ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸವಾಲು ಹಾಕಿದರು.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದ ಅಂಕಿ-ಅಂಶಗಳನ್ನು ಗಮನಿಸಿದರೆ ಅತಿಹೆಚ್ಚು ಪರಿಶಿಷ್ಟ ಜಾತಿ, ಪಂಗಡದ ಎಂಪಿಗಳು, ಕರ್ನಾಟಕದಲ್ಲಿರುವ ಮೀಸಲು ಕ್ಷೇತ್ರದಲ್ಲಿ ಹೆಚ್ಚು ಗೆದ್ದವರು ಬಿಜೆಪಿಯವರು. ಇದನ್ನು ಡಿ.ಕೆ. ಶಿವಕುಮಾರ, ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಬೇಕು ಅಂತ ಹೇಳಿದ್ದಾರೆ.
‘ಸಮಾಜ ಕಲ್ಯಾಣ’ದಲ್ಲಿ ಅಗ್ನಿವೀರರಿಗೆ ಮೀಸಲಾತಿ?: ಸಚಿವ ಕೋಟ ಹೇಳಿದ್ದಿಷ್ಟು
ಪರಮೇಶ್ವರ ದಲಿತ ಮುಖ್ಯಮಂತ್ರಿ ಎಂದು ಹೇಳುತ್ತಿದ್ದಾರೆ. ಅವರನ್ನು ಯಾರು ಮಂತ್ರಿ ಮಾಡಿದ್ದಾರೆ. ಯಾರು ಮಾಡಬೇಕಿತ್ತು ಎನ್ನುವ ಚರ್ಚೆ ಇದೆ. ಹಾಗಾಗಿ ಚರ್ಚೆ ಇರುವುದು ಬಿಜೆಪಿ ಅಂಗಳದಲ್ಲಿ ಅಲ್ಲ; ಕಾಂಗ್ರೆಸ್‌ನ ಅಂಗಳದಲ್ಲಿ ಚೆಂಡು ಅಡಗಿದೆ ಎಂದರು.
ಕಳೆದ ಬಾರಿ ಪರಮೇಶ್ವರ ಅವರನ್ನು ಯಾರು ಸೋಲಿಸಿದರು ಎಂದು ಪರಮೇಶ್ವರ ಅವರೇ ಹೇಳಲಿ. ದಲಿತ ಮುಖ್ಯಮಂತ್ರಿ ಆಗಬೇಕು ಎಂದು ಜಿ. ಪರಮೇಶ್ವರ ಅವರಿಗೆ ಅಭಿಲಾಷೆ ಇತ್ತು. ಅವರು ಸೋಲಲು ಯಾವ ಕಾರಣ ಎಂಬುದು ಹೇಳಲಿ. ಬಿಜೆಪಿಯಲ್ಲಿ ನಿಲುವು ಸ್ಪಷ್ಟವಾಗಿದೆ. ಗೊಂದಲ ಕಾಂಗ್ರೆಸ್‌ನಲ್ಲಿದೆ ಎಂದರು.