Mandya News: ಸಮಸ್ಯೆಗೆ ಸ್ಪಂದಿಸದ ಹಿನ್ನೆಲೆ; ರೈತರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ

  • ರೈತರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ
  • ರೈತಸಂಘದ ನೂರಾರು ಕಾರ್ಯಕರ್ತರು ಭಾಗಿ
  •  ಸಮಸ್ಯೆಗೆ ಕಿವಿಗೊಡದ ಸರ್ಕಾರದ ವಿರುದ್ಧ ಆಕ್ರೋಶ
Unresponsive problem District collectors office besieged by farmers mandya rav

ಮಂಡ್ಯ (ನ.17) : ರೈತರ ಸಮಸ್ಯೆಗಳ ಪರಿಹಾರಕ್ಕೆ ಸ್ಪಂದಿಸದೆ ದಿವ್ಯ ನಿರ್ಲಕ್ಷ್ಯ ವಹಿಸಿರುವ ರಾಜ್ಯ ಸರ್ಕಾರದ ವಿರುದ್ಧ ರೈತಸಂಘದ ನೂರಾರು ಕಾರ್ಯಕರ್ತರು ಹಾಗೂ ಮಹಿಳೆಯರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಬುಧವಾರ ಪ್ರತಿಭಟನೆ ನಡೆಸಿದರು.

ನಗರದ ಸರ್‌.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಕಳೆದ ಒಂಬತ್ತು ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ರೈತಸಂಘದ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷೇತರನಾಗಿ ಗೆಲ್ಲದಿದ್ದರೆ ಶಿರಚ್ಛೇದನ ಮಾಡಿಕೊಳ್ಳುವೆ: ಶಿವರಾಮೇಗೌಡ

ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಟನ್‌ ಕಬ್ಬಿಗೆ 4500 ರು.ದರ ನಿಗದಿ, ಹಾಲಿನ ದರ ಹೆಚ್ಚಳ ಮಾಡುವುದು, ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವುದೂ ಸೇರಿದಂತೆ ಅನೇಕ ಬೇಡಿಕೆಗಳ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಚರ್ಚಿಸಿದ ವೇಳೆ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಭರವಸೆ ನೀಡಿದ್ದರು.

ಆದರೆ, ಐದು ತಿಂಗಳು ಕಳೆದರೂ ರೈತರ ಯಾವುದೇ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಿಲ್ಲ. ಪರಿಹಾರ ಸೂಚಿಸುವ ಪ್ರಯತ್ನವನ್ನೂ ನಡೆಸಿಲ್ಲ. ಒಂಬತ್ತು ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಸಚಿವರಾದಿಯಾಗಿ ಯಾರೊಬ್ಬರೂ ಇತ್ತ ತಿರುಗಿ ನೋಡದೆ ರೈತರ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ. ಇದು ಸರ್ಕಾರದ ರೈತ ವಿರೋಧಿ ನೀತಿಯಾಗಿದೆ ಎಂದು ಟೀಕಿಸಿದರು.

ಕಬ್ಬಿನ ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಪಶು ಆಹಾರದ ಬೆಲೆಯೂ ಹೆಚ್ಚಳವಾಗಿದೆ. ಅದಕ್ಕಾಗಿ ಟನ್‌ ಕಬ್ಬಿಗೆ 4500 ರು., ಪ್ರತಿ ಲೀಟರ್‌ ಹಾಲಿನ ಬೆಲೆಯನ್ನು 40 ರು.ಗೆ ಹೆಚ್ಚಿಸುವುದು, ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕೆನ್ನುವುದು ನಮ್ಮ ಆಗ್ರಹವಾಗಿದೆ. ರೈತರ ಸಮಸ್ಯೆಯನ್ನು ಮರೆತುಕುಳಿತಿರುವ ಬಿಜೆಪಿ ಸರ್ಕಾರ ರಾಜಕೀಯ ಮೇಲಾಟದಲ್ಲಿ ತೊಡಗಿದೆ. ಬಾಯಿಯಲ್ಲಿ ಮಾತ್ರ ನಮ್ಮದು ರೈತಪರ ಸರ್ಕಾರ ಎನ್ನುವ ಬಿಜೆಪಿ ನಾಯಕರು ಅನ್ನದಾತರಿಗೆ ಬದುಕು ಕಟ್ಟಿಕೊಡುವ ಪ್ರಯತ್ನದಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ ಎಂದು ದೂರಿದರು.

ರೈತರ ಸಮಸ್ಯೆಗಳಿಗೆ ಸ್ಪಂದಿಸದ ಸರ್ಕಾರದ ವಿರುದ್ಧ ಹೋರಾಟವನ್ನು ತೀವ್ರಗೊಳಿಸಲಾಗುವುದು. ಅಹೋರಾತ್ರಿ ಧರಣಿಯನ್ನು ಮುಂದುವರೆಯಲಿದ್ದು, ಮುಂದಿನ ಹಂತದ ಹೋರಾಟದ ರೂಪು-ರೇಷೆಗಳನ್ನು ತಯಾರಿಸಿ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.

ಪ್ರತಿಭಟನೆಯಲ್ಲಿ ರೈತಸಂಘದ ವರಿಷ್ಠೆ ಸುನೀತಾ ಪುಟ್ಟಣ್ಣಯ್ಯ, ನಂದಿನಿ ಜಯರಾಂ, ಮೈಸೂರು ಜಿಲ್ಲಾಧ್ಯಕ್ಷೆ ನೇತ್ರಾವತಿ, ಚಾಮರಾಜನಗರ ಜಿಲ್ಲಾಧ್ಯಕ್ಷ ಬಸವರಾಜು, ಮುಖಂಡರಾದ ಕೆ.ಆರ್‌.ಜಯರಾಂ, ಕೆ.ಎಲ್‌.ಕೆಂಪೂಗೌಡ, ಎಸ್‌.ಸಿ.ಮಧುಚಂದನ್‌, ಪ್ರಸನ್ನ ಎನ್‌.ಗೌಡ, ಲಿಂಗಪ್ಪಾಜಿ, ನಾಗರೇವಕ್ಕ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಬಿಗಿ ಪೊಲೀಸ್‌ ಪಹರೆ

ಜಿಲ್ಲಾಧಿಕಾರಿ ಕಚೇರಿಗೆ ರೈತರು ಮುತ್ತಿಗೆ ಹಾಕುವ ವಿಷಯ ತಿಳಿದ ಪೊಲೀಸರು ಜಿಲ್ಲಾಧಿಕಾರಿ ಕಚೇರಿ ಸುತ್ತ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಬಿಗಿ ಭದ್ರತೆ ಒದಗಿಸಿದರು. ಯಾವ ಕಡೆಯಿಂದಲೂ ಕಚೇರಿ ಪ್ರವೇಶದ್ವಾರಕ್ಕೆ ತೆರಳದಂತೆ ಬಂದ್‌ ಮಾಡಿದರು.

ನಗರದ ಸರ್‌ ಎಂ.ವಿಶ್ವೇಶ್ವರಯ್ಯ ಪ್ರತಿಮೆಯಿಂದ ಮೆರವಣಿಗೆಯಲ್ಲಿ ಆಗಮಿಸಿದ ನೂರಾರು ರೈತರು ಜಿಲ್ಲಾಧಿಕಾರಿ ಕಚೇರಿ ಬಳಿಗೆ ಆಗಮಿಸಿದರು. ಜಿಲ್ಲಾ ಪೊಲೀಸ್‌ ಅಧೀಕ್ಷಕರ ಕಚೇರಿ ಬಳಿ ಬಂದಾಗಲೇ ಪೊಲೀಸರು ತಡೆಯುವ ಯತ್ನ ನಡೆಸಿದರು. ಭಾರೀ ಸಂಖ್ಯೆಯಲ್ಲಿದ್ದ ರೈತರನ್ನು ಕಂಡ ಪೊಲೀಸರು ಬ್ಯಾರಿಕೇಡ್‌ಗಳನ್ನು ತೆಗೆದು ಮುಂದೆ ಸಾಗಲು ಅವಕಾಶ ನೀಡಿದರು. ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಬಂದಾಗ ಕಚೇರಿ ಮುಂಭಾಗಕ್ಕೆ ಪ್ರವೇಶ ನೀಡಲು ಪೊಲೀಸರು ನಿರಾಕರಿಸಿದರು. ಆಗ ರೈತಸಂಘದ ಮುಖಂಡರು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು.

ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸಲು ಬಂದಿದ್ದೇವೆ. ನಮ್ಮನ್ನು ತಡೆಯಬೇಡಿ. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತೇವೆ. ಅದಕ್ಕೆ ಅವಕಾಶ ಮಾಡಿಕೊಡಿ. ರೈತರ ತಾಳ್ಮೆಯನ್ನು ಪರೀಕ್ಷಿಸಬೇಡವೆಂದು ಹೇಳಿದ ಮೇಲೆ ಪೊಲೀಸ್‌ ಅಧೀಕ್ಷಕ ಎನ್‌.ಯತೀಶ್‌ ಸೂಚನೆ ಮೇರೆಗೆ ಪೊಲೀಸರು ಬ್ಯಾರಿಕೇಡ್‌ಗಳನ್ನು ತೆಗೆದು ರೈತರು ಪ್ರವೇಶದ್ವಾರಕ್ಕೆ ತೆರಳಲು ಅನುವು ಮಾಡಿಕೊಟ್ಟರು.

Mandya News: ಸಿಬಿಐ ಸಂಕೋಲೆಯೊಳಗೆ ಮುಡಾ..!

ಜಿಲ್ಲಾಧಿಕಾರಿ ಕಚೇರಿ ಎದುರು ಕುಳಿತು ರೈತಸಂಘದ ಕಾರ್ಯಕರ್ತರು ಹಾಗೂ ಮಹಿಳೆಯರು ಪ್ರತಿಭಟನಾ ಧರಣಿ ನಡೆಸಿದರು. ಹಲವು ದಿನಗಳ ಹಿಂದೆ ಬೀಡಿ ಕಾರ್ಮಿಕರ ಕಾಲೋನಿ ನಿವಾಸಿಗಳು ಪ್ರತಿಭಟನೆ ನಡೆಸುವ ವೇಳೆ ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಿ ಆತಂಕದ ವಾತಾವರಣ ಸೃಷ್ಟಿಸಿದ್ದರು. ಅದು ಮರುಕಳಿಸದಂತೆ ಪೊಲೀಸರು ಈ ಬಾರಿ ಮುಂಜಾಗ್ರತೆ ವಹಿಸಿ ಬಿಗಿ ಪೊಲೀಸ್‌ ಪಹರೆ ಏರ್ಪಡಿಸಿದ್ದರು.

Latest Videos
Follow Us:
Download App:
  • android
  • ios