Mandya News: ಸಿಬಿಐ ಸಂಕೋಲೆಯೊಳಗೆ ಮುಡಾ..!

  • ಸಿಬಿಐ ಸಂಕೋಲೆಯೊಳಗೆ ಮುಡಾ..!
  • ಹತ್ತು ವರ್ಷಗಳಿಂದ ಬಂಧಮುಕ್ತಗೊಳ್ಳದೆ ನಿವಾಸಿಗಳ ಸ್ಥಿತಿ ಅತಂತ್ರ
  • ಖಾತೆಯಾಗದೆ ಸಂಕಟ, ತನಿಖೆಯೊಳಗೆ 1800 ನಿವೇಶನಗಳು
Mandya Urban Development Authority is under the shackles of CBI rav

ಮಂಡ್ಯ ಮಂಜುನಾಥ

ಮಂಡ್ಯ (ನ.16) : ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ ಸಿಬಿಐ ಸಂಕೋಲೆಯೊಳಗೆ ಬಂಧಿಯಾಗಿದೆ. ಹತ್ತು ವರ್ಷ ಕಳೆದರೂ ಬಂಧಮುಕ್ತಗೊಳ್ಳುವ ಯಾವುದೇ ಲಕ್ಷಣಗಳೂ ಕಂಡುಬರುತ್ತಿಲ್ಲ. ಇದರಿಂದ ಪ್ರಾಧಿಕಾರದಿಂದ ರಚನೆಗೊಂಡ ವಿವೇಕಾನಂದ ನಗರ ಬಡಾವಣೆ ಅಭಿವೃದ್ಧಿ ಹಳ್ಳ ಹಿಡಿದಿದೆ. ನಿವಾಸಿಗಳ ಸ್ಥಿತಿ ಅತಂತ್ರವಾಗಿದೆ.

ವಿವೇಕಾನಂದ ನಗರ ಬಡಾವಣೆಯೊಳಗೆ ರಚನೆಯಾದ 2400 ನಿವೇಶನಗಳ ಪೈಕಿ 600 ನಿವೇಶನಗಳನ್ನು ಹೊರತುಪಡಿಸಿದರೆ ಉಳಿದ 1800 ನಿವೇಶನಗಳು ಸಿಬಿಐ ತನಿಖೆ ವ್ಯಾಪ್ತಿಯಲ್ಲಿವೆ. ಇದೇ ಕಾರಣದಿಂದ ನಿವೇಶನಗಳನ್ನು ಖಾತೆ ಮಾಡಿಕೊಡಲಾಗುತ್ತಿಲ್ಲ. ಮುಡಾದಿಂದ ಯಾವೊಂದು ಅಭಿವೃದ್ಧಿ ಚಟುವಟಿಕೆಯೂ ನಡೆಯುತ್ತಿಲ್ಲ. ಕೇವಲ ನಾವåಕಾವಸ್ಥೆ ಪ್ರಾಧಿಕಾರವಾಗಷ್ಟೇ ಉಳಿದುಕೊಂಡಿದೆ.

ನಿವೃತ್ತಿಗೆ ಕೇವಲ 1 ದಿನ ಬಾಕಿ ಇರುವಾಗಲೇ ಎಸಿಬಿ ಬಲೆಗೆ ಬಿದ್ದ MUDA ಅಧಿಕಾರಿ

ಒಂದೇ ಕಂತು ಸ್ಕೀಂ ನಡಿ 426, ನಿಮ್ಮ ಆಯ್ಕೆ ಸ್ಕೀಂ ನಡಿ 344, ಹಾಗೂ ಅವಧಿ ವಿಸ್ತರಿಸಿ ಹೆಚ್ಚುವರಿ ಬಡ್ಡಿ ಪಾವತಿಸಿಕೊಂಡಿರುವ ಸುಮಾರು 944 ನಿವೇಶನ ಪ್ರಕರಣ ಹಾಗೂ 107 ನಿವೇಶನಗಳ ಅಕ್ರಮ ಮಾರಾಟದಲ್ಲಿ ಪ್ರಾಧಿಕಾರದ ಅಧ್ಯಕ್ಷರು, ನಿರ್ದೇಶಕರು, ಅಧಿಕಾರಿಗಳು ಭಾಗಿಯಾಗಿರುವುದು ಕಂಡುಬಂದಿರುವುದರಿಂದ ಇವೆಲ್ಲವೂ ಸಿಬಿಐ ಅಧಿಕಾರಿಗಳ ತನಿಖಾ ಗಾಳದೊಳಗೆ ಸಿಲುಕಿವೆ. ಕಳೆದ ಅ.27ರಂದು ನಿಮ್ಮ ಆಯ್ಕೆ. ಒಂದೇ ಕಂತು. ಹೆಚ್ಚುವರಿ ಬಡ್ಡಿ ಪ್ರಕರಣಗಳ ಸ್ಕೀಂ ನಡಿ ಕಾನೂನು ಬಾಹಿರವಾಗಿ ಹಂಚಿಕೆ ಮಾಡಿರುವ ಪ್ರಕರಣಗಳ ಮರು ತನಿಖೆಗೆ ಸಿಬಿಐ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದ್ದು, ಸಿಬಿಐ ಸಲ್ಲಿಸಿದ್ದ ಬಿ ರಿಪೋರ್ಟನ್ನು ವಜಾಗೊಳಿಸಿದೆ. ಇದರಿಂದಾಗಿ ತನಿಖೆಯಿಂದ ಮುಕ್ತಿಯೇ ದೊರಕದಂತಾಗಿದೆ.

ಜಂಗಲ್‌ ಕಟಿಂಗ್‌ಗಷ್ಟೇ ಸೀಮಿತ: ನಗರಾಭಿವೃದ್ಧಿ ಪ್ರಾಧಿಕಾರದ ಕಾರ್ಯಚಟುವಟಿಕೆ ಕೇವಲ ವಿವೇಕಾನಂದನಗರ ಬಡಾವಣೆಯಲ್ಲಿ ಜಂಗಲ್‌ ಕಟಿಂಗ್‌, ರಸ್ತೆ ದುರಸ್ತಿ, ಬೀದಿದೀಪ ಅಳವಡಿಸುವುದಕ್ಕಷ್ಟೇ ಸೀಮಿತವಾಗಿದೆ. 2022-23ನೇ ಸಾಲಿನಲ್ಲಿ ಜಂಗಲ್‌ ಕಟಿಂಗ್‌ಗೆ 21,57,236 ಲಕ್ಷ ರು., ಸೋಡಿಯಂ, ಫೆä್ಲೕರೋಸೆಂಟ್‌ ಮತ್ತು ಎಲ್‌ಇಡಿ ಬೀದಿ ದೀಪಗಳ ಅಳವಡಿಕೆಗೆ 4,83,000 ರು., ಎ ಬ್ಲಾಕ್‌ನ ಆಯ್ದ ಭಾಗದಲ್ಲಿ ರಸ್ತೆ ದುರಸ್ತಿಗೆ 4,94,534 ರು., ನಗರಾಭಿವೃದ್ಧಿ ಕಚೇರಿ ಕಟ್ಟಡ ದುರಸ್ತಿಗೆ 4,85,471 ರು., ವಿವೇಕಾನಂದನಗರ ಸಿ ಬ್ಲಾಕ್‌ ರಸ್ತೆ ದುರಸ್ತಿಇಗೆ 4,94,534 ರು. ಹಾಗೂ ಎಫ್‌ ಬ್ಲಾಕ್‌ನ ರಸ್ತೆ ದುರಸ್ತಿಗೆ 4,94,534 ರು. ಸೇರಿ 46,09,300 ರು.ಗಳನ್ನು ಖರ್ಚು ಮಾಡಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.

30 ವರ್ಷಗಳಿಂದ ಆಕ್ಷೇಪಣೆಗಳು ಬಾಕಿ: ವಿಷಯ ನಿರ್ವಾಹಕರಾಗಿ ಕೆಲಸ ನಿರ್ವಹಿಸುತ್ತಿದ್ದ ಹೆಚ್‌.ಕೆ.ನಾಗರಾಜು 5 ಕೋಟಿ ರು. ಹಣ ದುರುಪಯೋಗ ಪ್ರಕರಣದಲ್ಲಿ ಬಂಧನವಾಗಿ ನಂತರ ಸೇವೆಯಿಂದ ವಜಾಗೊಂಡಿದ್ದಾರೆ. ಶಾಖೆಯ ಪ್ರಭಾರವನ್ನು ಬೇರೆಯವರಿಗೆ ವಹಿಸಿರುವ ಬಗ್ಗೆ ಯಾವುದೇ ದಾಖಲೆಗಳು ಪ್ರಾಧಿಕಾರದಲ್ಲಿ ಲಭ್ಯವಿಲ್ಲವೆಂದು ಹೇಳಲಾಗಿದ್ದು, 1990-91ರಿಂದ 2020-21ರವರೆಗೆ ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದರೂ ಕೈಗೊಂಡ ಕ್ರಮದ ಬಗ್ಗೆ ಯಾವುದೇ ಮಾಹಿತಿ ನೀಡಲು ಸಾಧ್ಯವಾಗಿಲ್ಲ ಎಂದು ಮುಡಾದಿಂದ ವರದಿಯನ್ನು ಸಲ್ಲಿಸಲಾಗಿದೆ.

5 ಕೋಟಿ ರು. ಹಣ ವಸೂಲಿಗೆ ಸೂಚನೆ: ಮುಡಾಗೆ ಸೇರಿದ 5 ಕೋಟಿ ರು. ಹಣ ದುರುಪಯೋಗ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯದಿಂದ ಶಿಕ್ಷೆಗೊಳಗಾಗಿರುವ ದೋಷಿಗಳಿಂದ 5 ಕೋಟಿ ರು. ಹಣ ವಸೂಲಿ ಮಾಡುವಂತೆ ವಿಧಾನಸಭೆಯ ಕಾಗದ ಪತ್ರಗಳ ಸಮಿತಿ ಅಧ್ಯಕ್ಷ ಸಾ.ರಾ.ಮಹೇಶ್‌ ಆಯುಕ್ತೆ ಆರ್‌.ಐಶ್ವರ್ಯ ಅವರಿಗೆ ಸೂಚನೆ ನೀಡಿದ್ದಾರೆ. ನ್ಯಾಯಾಲಯದಿಂದ ಶಿಕ್ಷೆಗೊಳಗಾದವರ ಆಸ್ತಿ ಮಂಡ್ಯನಗರ ಸೇರಿದಂತೆ ಎಲ್ಲೇ ಇದ್ದರೂ ಜಪ್ತಿ ಮಾಡಿ ಹಣವನ್ನು ಸಂಗ್ರಹಿಸುವಂತೆ ಸ್ಪಷ್ಟವಾಗಿ ತಿಳಿಸಿದ್ದಾರೆ.

ನಗರಸಭೆಯಿಂದ ನಿರ್ಣಯ ಮಾಡಿಸಿ: ಮಂಡ್ಯ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಪರಿವರ್ತಿಸುವಂತೆ ಸಮಿತಿಯ ಸದಸ್ಯ ದಿನೇಶ್‌ ಗೂಳಿಗೌಡ ಅವರು ಕಾಗದ ಪತ್ರಗಳ ಸಮಿತಿಯ ಎದುರು ಪ್ರಸ್ತಾಪಿಸಿದಾಗ, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ.ಅಜಯ್‌ ನಾಗಭೂಷಣ್‌ ಅವರು ಮಹಾನಗರಪಾಲಿಕೆ ಮಾಡಲು 2.5 ಲಕ್ಷ ಜನಸಂಖ್ಯೆ ಇರಬೇಕು. ನಗರಸಭೆ ಸುತ್ತಮುತ್ತಲಿನ ಗ್ರಾಮ ಪಂಚಾಯಿತಿಗಳು ನಗರಸಭೆಗೆ ಸೇರ್ಪಡೆಗೊಳ್ಳಲು ಒಪ್ಪಿಗೆ ಸೂಚಿಸಿ ನಿರ್ಣಯ ಕೈಗೊಳ್ಳಬೇಕು. ಆನಂತರ ನಗರಸಭೆಯಲ್ಲಿ ಅದನ್ನು ನಿರ್ಣಯ ಮಾಡಿ ಇಲಾಖೆಗೆ ಕಳುಹಿಸಿಕೊಟ್ಟರೆ ಪರಿಗಣಿಸಲಾಗುವುದು ಎಂದು ಉತ್ತರ ನೀಡಿದರು.

ಈ ವಿಷಯವಾಗಿ ಸಮಿತಿ ಸದಸ್ಯ ದಿನೇಶ್‌ ಗೂಳಿಗೌಡ ಅವರು ಗಮನಸೆಳೆದಾಗ, ಇದುವರೆಗೆ ವಿವೇಕಾನಂದನಗರ ಬಡಾವಣೆಯೊಳಗೆ ನೀರುತುಂಬಿಕೊಳ್ಳುವ ಬಗ್ಗೆ ಜಿಲ್ಲಾಧಿಕಾರಿಗಳಿಂದ ಯಾವುದೇ ವರದಿ ಬಂದಿಲ್ಲ. ತಾಂತ್ರಿಕ ಸಮಿತಿಯೊಂದನ್ನು ರಚಿಸಿ ಸಮಗ್ರ ವರದಿಯನ್ನು ಕಳುಹಿಸಿಕೊಟ್ಟರೆ ಅದನ್ನು ಸಚಿವ ಸಂಪುಟದ ಮುಂದಿಟ್ಟು ಅನುಮೋದನೆ ದೊರಕಿಸಿ ಕೊಡುವುದಾಗಿ ಸಭೆಯಲ್ಲಿದ್ದ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಉತ್ತರ ನೀಡಿದರು.

ಅಧ್ಯಕ್ಷ ಆಟಕ್ಕುಂಟು ಲೆಕ್ಕಕ್ಕಿಲ್ಲ

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹುದ್ದೆ ಹೆಸರಿಗೆ ಮಾತ್ರವಷ್ಟೇ. ಅವರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಂದಿನಿಂದ ಕೆ.ಆರ್‌.ಪೇಟೆಯ ಕೆ.ಶ್ರೀನಿವಾಸ್‌ ಅಧ್ಯಕ್ಷರಾಗಿ ನಂತರ ಬದಲಾವಣೆಗೊಂಡು ಮತ್ತೆ 5 ತಿಂಗಳಲ್ಲಿ ಅಧ್ಯಕ್ಷರಾಗಿ ಪುನರಾಯ್ಕೆಯಾದರು. ನಗರದ ಸುತ್ತಮುತ್ತ ಅಕ್ರಮವಾಗಿ ಬಡಾವಣೆಗಳು ರಚನೆಯಾಗುತ್ತಿದ್ದರೂ ಅಧ್ಯಕ್ಷರಾದಿಯಾಗಿ ಯಾವೊಬ್ಬ ಅಧಿಕಾರಿಗಳೂ ಕೇಳುತ್ತಿಲ್ಲ. ಸುಮಾರು 30ಕ್ಕೂ ಹೆಚ್ಚು ಅಕ್ರಮ ಬಡಾವಣೆಗಳು ರಚನೆಯಾಗಿವೆ. ಆದರೂ ಅಧಿಕಾರಿಗಳು ನೋಟಿಸ್‌ ನೀಡುವುದಕ್ಕೆ ಮಾತ್ರ ಸೀಮಿತರಾಗಿದ್ದಾರೆ. ಗ್ರಾಮಾಂತರ ವ್ಯಾಪ್ತಿಯಲ್ಲಿ ಮನೆ ನಿರ್ಮಿಸುವವರು ಮುಡಾದ ಗ್ರಾಮಾಂತರ ಯೋಜನಾ ನಿರ್ದೇಶಕರಿಂದ ಅನುಮತಿ ಪಡೆಯಬೇಕೆಂಬ ಸರ್ಕಾರದ ನಿಯಮವಿದ್ದರೂ ಇಂದಿಗೂ ಗ್ರಾಮ ಪಂಚಾಯಿತಿಗಳೇ ಅನುಮತಿ ನೀಡುತ್ತಾ ಮುಡಾಗೆ ಸೆಡ್ಡು ಹೊಡೆದಿವೆ. ಇದನ್ನೂ ಯಾರೊಬ್ಬರೂ ಪ್ರಶ್ನಿಸುತ್ತಿಲ್ಲ. ಅಧ್ಯಕ್ಷರಾದ ದಿನದಿಂದ ಇಲ್ಲಿಯವರೆಗೆ ಸಾಧನೆ ಏನೆಂಬುದನ್ನು ಅವಲೋಕಿಸಿದರೆ ಶೂನ್ಯವೇ ಎದ್ದು ಕಾಣುತ್ತದೆ. ಕೇವಲ ಅಧ್ಯಕ್ಷರು ಮಾತ್ರವಲ್ಲ, ನಗರಾಭಿವೃದ್ಧಿ ಪ್ರಾಧಿಕಾರದ ಕಾರ್ಯಸಾಧನೆಯೇ ಶೂನ್ಯವಾಗಿದೆ. ಮುಡಾದಲ್ಲಿ ಯಾವುದೇ ಕೆಲಸಗಳು ನಡೆಯುತ್ತಿಲ್ಲವೆಂಬ ಮಾತು ಸಾರ್ವಜನಿಕರಲ್ಲಿ ಮನೆ ಮಾಡಿದೆ.

Mandya : 14ರಿಂದ 20ರವರೆಗೆ ಸಹಕಾರ ಸಪ್ತಾಹ ಆಚರಣೆ

ಮಂಡ್ಯ ಬೆಳವಣಿಗೆ ಸಾಧಿಸಬೇಕು. ಅದಕ್ಕಾಗಿ ಬೃಹತ್‌ ಮಂಡ್ಯ ರಚನೆಯಾಗಬೇಕಿದೆ. ಈ ಬಗ್ಗೆ ಕಾಗದಪತ್ರ ಸಮಿತಿ ಎದುರು ವಿಷಯ ಪ್ರಸ್ತಾಪಿಸಿದ್ದೇನೆ. ನಗರಸಭೆ ಸುತ್ತಲಿರುವ ಪಂಚಾಯಿತಿಗಳು ಸೇರ್ಪಡೆಗೆ ಒಪ್ಪಿ ನಿರ್ಣಯ ಮಾಡಬೇಕು. ಆನಂತರ ನಗರಸಭೆ ಒಂದು ನಿರ್ಣಯ ಮಾಡಿ ಕಳುಹಿಸಿಕೊಟ್ಟರೆ ಪರಿಗಣಿಸುವುದಾಗಿ ಇಲಾಖೆ ಕಾರ್ಯದರ್ಶಿಗಳು ತಿಳಿಸಿದ್ದಾರೆ. ಅದೇ ರೀತಿ ವಿವೇಕಾನಂದನಗರ ಬಡಾವಣೆ ಮಳೆ ಬಂದಾಗ ಜಲಾವೃತಗೊಳ್ಳುವುದನ್ನು ತಪ್ಪಿಸಲು ತಾಂತ್ರಿಕ ತಂಡವೊಂದನ್ನು ರಚಿಸಿ ಜಿಲ್ಲಾಧಿಕಾರಿ ಮೂಲಕ ವರದಿ ಕಳುಹಿಸಿಕೊಟ್ಟರೆ ಶಾಶ್ವತ ಪರಿಹಾರ ರೂಪಿಸುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

- ದಿನೇಶ್‌ ಗೂಳಿಗೌಡ, ಕಾಗದಪತ್ರ ಸಮಿತಿ ಸದಸ್ಯ

Latest Videos
Follow Us:
Download App:
  • android
  • ios