ಮಂಗಳೂರು(ಮೇ 17): ಲಾಕ್‌ಡೌನ್‌ ಅವಧಿಯಲ್ಲೂ ಹೊಟೇಲ್‌ಗೆ ಆಹಾರ ಪಾರ್ಸೆಲ್‌ ಬೇಕೆಂದು ಆರ್ಡ್‌ರ್‌ ಮಾಡಿ ಆನ್‌ಲೈನ್‌ ಪಾವತಿ ಹೆಸರಿನಲ್ಲಿ ಒಟಿಪಿ ನಂಬರ್‌ ಪಡೆದು ಬ್ಯಾಂಕ್‌ ಖಾತೆಯಿಂದ ಹಣ ಎಗರಿಸಲು ಶನಿವಾರ ಮಂಗಳೂರಿನಲ್ಲಿ ವಿಫಲ ಯತ್ನ ನಡೆದಿದೆ. ಆದರೆ ಹೊಟೇಲ್‌ ಮಾಲೀಕರು ಎಚ್ಚೆತ್ತುಕೊಂಡಿದ್ದರಿಂದ ವಂಚನೆಗೆ ಒಳಗಾಗಿಲ್ಲ.

ಶನಿವಾರ ರಾತ್ರಿ 8.30ರ ಸುಮಾರಿಗೆ ಯೆಯ್ಯಾಡಿಯಲ್ಲಿರುವ ಹೊಟೇಲ್‌ಗೆ ಮಹಿಳೆಯೊಬ್ಬರು ಹಿಂದಿ ಭಾಷೆಯಲ್ಲಿ ಕರೆ ಮಾಡಿ, 5 ಸಾವಿರ ರು. ಮೊತ್ತದ ನಾತ್‌ರ್‍ ಇಂಡಿಯನ್‌ ಆಹಾರದ ಮೆನು ಪಾರ್ಸೆಲ್‌ಗೆ ಹೇಳಿದ್ದರು. ಪಾರ್ಸೆಲ್‌ ಕಳುಹಿಸಲು ವಿಳಾಸ ತಿಳಿಸುವಂತೆ ಮಾಲೀಕರು ಹೇಳಿದಾಗ, ಆಕೆ ಬೇಡ, ನಾನೇ ವಾಹನ ಕಳುಹಿಸುತ್ತೇನೆ ಎಂದಿದ್ದರು. ಅಲ್ಲದೆ ಬಿಲ್‌ನ್ನು ಆನ್‌ಲೈನ್‌ನಲ್ಲಿ ಪಾವತಿ ಮಾಡುವುದಾಗಿ ಹೇಳಿದ್ದರು. ನಗದು ಪಾವತಿಗೆ ಮಾತ್ರ ಅವಕಾಶ ಇರುವುದಾಗಿ ಮಾಲೀಕರು ಸ್ಪಷ್ಟಪಡಿಸಿದ್ದರು.

ದೆಹಲಿಯಿಂದ 2ನೇ ರೈಲು ಆಗಮನ: ಬೆಂಗಳೂರಿಗೆ 800 ಕನ್ನಡಿಗರು ವಾಪಸ್‌..!

ಇಷ್ಟೊಂದು ಮೊತ್ತದ ಪಾರ್ಸೆಲ್‌ ಬಗ್ಗೆ ಅನುಮಾನಗೊಂಡ ಹೊಟೇಲ್‌ ಮಾಲೀಕರು, ಪಾರ್ಸೆಲ್‌ನ್ನು ಸಿದ್ಧಪಡಿಸದೆ, ನಕಲಿ ಬಿಲ್‌ನ್ನು ಆಕೆಯ ವಾಟ್ಸ್‌ಆ್ಯಪ್‌ಗೆ ಕಳುಹಿಸಿದ್ದರು. ಆಗ ಆಕೆ ಬ್ಯಾಂಕ್‌ನ ಖಾತೆ ನಂಬರ್‌ ಕಳುಹಿಸುವಂತೆ ಸೂಚಿಸಿದ್ದರು. ಅದಿಲ್ಲದಿದ್ದರೆ ವೈಯಕ್ತಿಕ ಖಾತೆ ನಂಬರು ಆಗಬಹುದು ಎಂದಿದ್ದರು. ಮಾಲೀಕರಲ್ಲಿ ವಿಶ್ವಾಸ ಮೂಡಿಸಲು ಎಟಿಎಂ ಕಾರ್ಡ್‌, ಮಿಲಿಟರಿ ಸಿಬ್ಬಂದಿ ಹೆಸರಿನ ಐಡಿ ಕಾರ್ಡ್‌, ಬ್ಯಾಂಕ್‌ ಖಾತೆ ವಿವರವನ್ನೂ ಆಕೆ ಕಳುಹಿಸಿದ್ದರು. ಆದರೆ ಅವುಗಳನ್ನು ಪರಿಶೀಲಿಸಿದಾಗ ಎಲ್ಲವೂ ಬೇರೆ ಬೇರೆ ಹೆಸರನ್ನು ಹೊಂದಿತ್ತು.

ಈ ರಾಜ್ಯಕ್ಕೆ ತೆರಳುವ ವಲಸಿಗರಿಗೆ ರೈಲು ಸಂಚಾರ ಉಚಿತ!

ಇದೊಂದು ವಂಚಕರ ಜಾಲ ಎಂದು ಮನದಟ್ಟಾದ ಹಿನ್ನೆಲೆಯಲ್ಲಿ ಆಕೆಯ ಮೊಬೈಲ್‌ಗೆ ಮರಳಿ ಕರೆ ಮಾಡಿದ ಮಾಲೀಕರು, ತರಾಟೆಗೆ ತೆಗೆದುಕೊಂಡರು. ಆಗ ಆಕೆ ಅರ್ಧದಲ್ಲೇ ಕರೆ ಕಟ್‌ ಮಾಡಿದ್ದಲ್ಲದೆ, ಆ ನಂಬರನ್ನೇ ಬ್ಲಾಕ್‌ ಮಾಡಿದ್ದರು. ಟ್ರೂ ಕಾಲರ್‌ನಲ್ಲಿ ಪರಿಶೀಲಿಸಿದಾಗ ಆ ನಂಬರು ಉತ್ತರ ಪ್ರದೇಶದ ವಿಕಾಸ್‌ ಪಾಟೀಲ್‌ ಎಂದು ತೋರಿಸುತ್ತಿತ್ತು. ಆ ನಂಬರು ಕೂಡ ನಕಲಿ ಎಂಬುದು ಪತ್ತೆಯಾಗಿತ್ತು.