ಸಾಗರ [ಫೆ.09]:  ಪಟ್ಟಣದ ಅಗ್ರಹಾರದ ನಿವಾಸಿ, ಕೆಪಿಸಿಎಲ್‌ ನಿವೃತ್ತ ಅಧಿಕಾರಿಯೊಬ್ಬರಿಗೆ ದೂರವಾಣಿ ಕರೆ ಮಾಡಿ ಬ್ಯಾಂಕಿನ ಎಟಿಎಂ ಮಾಹಿತಿ ಕೋರಿ ಹಣ ವಂಚಿಸಲು ಯತ್ನಸಿದ ಸಂಬಂಧ  ಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಪಟ್ಟಣದ ಅಗ್ರಹಾರದಲ್ಲಿ ವಾಸವಾಗಿರುವ ಟಿ.ಎಂ. ಸುಬ್ಬರಾವ್‌ ಎಂಬುವವರಿಗೆ ಬುಧವಾರ ಸಾಮಯಂಕಾಲ 4.24ರಿಂದ 5.29ರ ವರೆಗೆ 15ಕ್ಕೂ ಹೆಚ್ಚು ಸಲ ಅಪರಿಚಿತ ಸಂಖ್ಯೆಯಿಂದ ದೂರವಾಣಿ ಕರೆ ಮಾಡಿ ವಂಚನೆಗೆ ಯತ್ನಿಸಲಾಗಿದೆ.

7866822967 ಸಂಖ್ಯೆಯಿಂದ ಕರೆ ಮಾಡಿದ ವ್ಯಕ್ತಿ ತಾನು ರಾಜೇಂದ್ರ, ಸಾಗರ ಕೆನರಾ ಬ್ಯಾಂಕಿನ ವ್ಯವಸ್ಥಾಪಕ ಎಂದು ಪರಿಚಯಿಸಿಕೊಂಡಿದ್ದಾನೆ. ಸುಬ್ಬರಾವ್‌ ರೂಪೆ ಡೆಬಿಟ್‌ ಕಾರ್ಡ್‌ ಅವ​ಧಿ ಮುಗಿಯುತ್ತಿದ್ದು, ಅದನ್ನು ಮುಂದುವರಿಸಲು ಕೆಲವು ಮಾಹಿತಿ ಬೇಕು ತಿಳಿಸಿದ್ದಾನೆ. ಇದನ್ನು ನಂಬಿದ ಸುಬ್ಬರಾವ್‌ ತಮ್ಮ ಡೆಬಿಟ್‌ ಕಾರ್ಡ್‌ ಸಂಖ್ಯೆ ನೀಡಿದ್ದಾರೆ. ಆದರೆ ಆನಂತರ ಈ ಬಗ್ಗೆ ವ್ಯವಹಾರ ನಡೆಸಲು ಒಂದು ಒಟಿಪಿ ಬರುತ್ತದೆ ಅದನ್ನು ತಿಳಿಸಿ ಎಂದು ಹೇಳಿದ್ದಾನೆ.

ಕೋಲಾರ ಕೋಚ್‌ ಫ್ಯಾಕ್ಟರಿ ಕೈಬಿಟ್ಟು ಶಿವಮೊಗ್ಗಕ್ಕೆ ಶೆಡ್ : ಸಿಎಂ ತವರಿಗೆ ಕೊಡುಗೆ...

ಎಚ್ಚೆತ್ತುಕೊಂಡ ಸುಬ್ಬರಾವ್‌ ಗುರುವಾರ ಬೆಳಗಿನ ಅವ​ಧಿಯಲ್ಲಿ ತಾವೇ ಖುದ್ದು ಕೆನರಾ ಬ್ಯಾಂಕಿನ ಸಾಗರ ಶಾಖೆಗೆ ಬರುವುದಾಗಿ ತಿಳಿಸಿದ್ದಾರೆ. ಮತ್ತೆ ಮತ್ತೆ ಕರೆ ಬಂದಿದ್ದರಿಂದ, ಬ್ಯಾಂಕಿನ ಅಸಿಸ್ಟಂಟ್‌ ಮ್ಯಾನೇಜರ್‌ ಅವರಿಗೆ ತಮ್ಮ ಪರಿಚಯವಿದೆ. ಅವರಿಗೆ ದೂರವಾಣಿ ನೀಡಿದರೆ ಅವರ ಬಳಿ ಮಾತನಾಡಲು ಸಾಧ್ಯ ಎಂದು ತಿಳಿಸಿದ್ದಾರೆ. ಅವರು ಹೊರಗೆ ಹೋಗಿದ್ದಾರೆ ಎಂದು ಕರೆ ಮಾಡಿದ ವ್ಯಕ್ತಿ ಹೇಳಿದ್ದಾನೆ.

ಈ ಎಲ್ಲ ಘಟನೆಗಳಿಂದ ಸುಬ್ಬರಾವ್‌ ಅವರಿಗೆ ಇದೊಂದು ಹಣ ದೋಚುವ ಯತ್ನ ಎಂಬುದು ಸ್ಪಷ್ಟವಾಗಿದೆ. ಈ ಸಂಬಂಧ ಸುಬ್ಬರಾವ್‌ ಪೇಟೆ ಠಾಣೆಗೆ ದೂರು ನೀಡಿದ್ದಾರೆ. ಅಲ್ಲದೇ ಕೆನರಾ ಬ್ಯಾಂಕಿನ ಸಾಗರ ಶಾಖೆಗೆ ಭೇಟಿ ನೀಡಿ ದೂರವಾಣಿ ಕರೆಯ ಬಗ್ಗೆ ವಿಚಾರಿಸಿದ್ದಾರೆ. ಅಂತಹ ಯಾವುದೇ ಕರೆ ಬ್ಯಾಂಕಿನವರು ಮಾಡಿಲ್ಲ ಮತ್ತು ಅಂತಹ ಕರೆ ಬಂದಾಗ ಯಾವುದೇ ಮಾಹಿತಿ ನೀಡಬಾರದು ಎಂದು ಬ್ಯಾಂಕಿನ ಸಿಬ್ಬಂದಿ ಸುಬ್ಬರಾವ್‌ ಅವರಿಗೆ ಸೂಚಿಸಿದ್ದಾರೆ. ಅಲ್ಲದೇ ತಮ್ಮ ರೂಪೆ ಕಾರ್ಡ್‌ನ ವ್ಯವಹಾರವನ್ನು ಸ್ಥಗಿತಗೊಳಿಸುವಂತೆ ಸಹ ಬ್ಯಾಂಕಿನ ಸಿಬ್ಬಂದಿ ಬಳಿ ಸುಬ್ಬರಾವ್‌ ಕೋರಿದ್ದಾರೆ.