ಮಹಿಳೆ ಬಟ್ಟೆತೊಳೆಯುತ್ತಿದ್ದಾಗ ಮೂವರಿಂದ ನಡೆಯಿತು ದುಷ್ಕೃತ್ಯ
ಮಹಿಳೆಯೋರ್ವರು ಮನೆ ಬಳಿಯಲ್ಲೇ ಬಟ್ಟೆ ತೊಳೆಯುವಾಗ ಅಪರಿಚಿತ ವ್ಯಕ್ತಿಗಳು ನೀರು ಕೇಳುವ ನೆಪದಲ್ಲಿ ಬಂದು ದುಷ್ಕೃತ್ಯ ಎಸಗಿದ್ದಾರೆ.
ಟೇಕಲ್ (ಮಾ.03): ಹಾಡುಹಗಲೇ ಬೆಳಿಗ್ಗೆ 11 ಗಂಟೆ ಸಮಯದಲ್ಲಿ ಟೇಕಲ್ ಗ್ರಾಮದ ಭಾಗ್ಯಮ್ಮ ಎನ್ನುವವರು ತೋಟದ ಬಳಿ ಇರುವ ತೊಟ್ಟಿಯ ನೀರಿನ ಬಳಿ ಬಟ್ಟೆತೊಳೆಯುತ್ತಿರುವಾಗ ಅಪರಿಚಿತರ ಗುಂಪೊಂದು ಈಕೆಯ ಬಳಿ ಇದ್ದ ಬಂಗಾರದ ಕತ್ತಿನ ಚೈನ್ ಹಾಗೂ ಕಿವಿಯ ಓಲೆ ಮತ್ತು ಕಾಲು ಚೈನ್ ಸುಮಾರು ಎರಡುವರೆ ಲಕ್ಷ ಬೆಲೆ ಬಾಳುವ ಆಭರಣಗಳನ್ನು ದೋಚಿರುವ ಘಟನೆ ಬೆಳಕಿಗೆ ಬಂದಿದೆ.
ಸುಮಾರು 25 ವರ್ಷ ವಯಸ್ಸಿನ ಇಬ್ಬರು ಅಪರಿಚಿತ ಪುರುಷರು ಹಾಗೂ ಮಗುವಿನ ಜತೆಗಿದ್ದ 30 ವರ್ಷದ ಮಹಿಳೆ ನೀರು ಕುಡಿಯುವ ನೆಪದಲ್ಲಿ ಭಾಗ್ಯಮ್ಮನ ಹತ್ತಿರ ಬಂದು ನೀರು ಕೇಳಿದ್ದಾರೆ. ಆಗ ಕುಡಿಯುವಂತೆ ಹೇಳಿದ ಭಾಗ್ಯಮ್ಮನ ಮುಖದ ಮೇಲೆ ಅಪರಿಚಿತ ಮಹಿಳೆ ಸೋಪು ನೀರು ಹಾಕಿದ್ದಾಳೆ. ಪರಿಣಾಮ ಭಾಗ್ಯಮ್ಮ ಪ್ರಜ್ಞೆ ತಪ್ಪಿದ್ದಾರೆ. ಆಗ ಅಪರಿಚಿತರು ಆಕೆಯ ಬಳಿಯಿದ್ದ 50 ಗ್ರಾಂ ತೂಕದ ಮಾಂಗಲ್ಯ ಸರ, 12 ಗ್ರಾಂ ಕಿವಿಯೊಲೆ, 2 ಕಾಲು ಚೈನು ದೋಚಿ ಪರಾರಿಯಾಗಿದ್ದಾರೆ.
ಬೆಂಗ್ಳೂರಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿ ಸ್ಫೋಟಕ ಸಂಗ್ರಹ..!
ಭಾಗ್ಯಮ್ಮ ಪ್ರಜ್ಞೆ ತಪ್ಪಿ ಬಿದ್ದಿರುವುದನ್ನು ಕಂಡು ಕುರಿಗಾಹಿಗಳು ಆಕೆಯ ಪತಿ ಅಮರನಾರಾಯಣನಿಗೆ ಪೋನ್ ಮಾಡಿ ತಿಳಿಸಿದ್ದಾರೆ. ಬಳಿಕ ಆಕೆಗೆ ಟೇಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಘಟನೆ ಬಗ್ಗೆ ಪೋಲಿಸರು ದೂರು ದಾಖಲಿಸಿಕೊಂಡಿದ್ದಾರೆ.
ಇತ್ತೀಚೆಗೆ ಇದೇ ಗ್ರಾಮದಲ್ಲಿ ಮಹಿಳೆಯೊಬ್ಬರು ಜಮೀನಿನಲ್ಲಿ ಕೆಲಸ ಮಾಡುತ್ತಿರುವಾಗ ಇಬ್ಬರು ಯುವರು ಆಗಮಿಸಿ ಆಕೆಯ ಕಿವಿಯೊಲೆ ದೋಚಿ ಪರಾರಿಯಾಗಿದ್ದ ಘಟನೆಯು ನಡೆದಿತ್ತು. ಈ ಘಟನೆಗಳಿಂದಾಗಿ ಮಹಿಳೆಯರು ತೋಟ, ಹೊಲಗದ್ದೆಗೆ ಹೋಗಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.