ತುಮಕೂರು ಜಿಲ್ಲೆಗೆ ಭರ್ಜರಿ ಕೊಡುಗೆ ನೀಡಿದ ಕೇಂದ್ರ ಸಚಿವ ಸೋಮಣ್ಣ..!
ತುಮಕೂರು ಲೋಕಸಭಾ ಕ್ಷೇತ್ರದಿಂದ ಗೆದ್ದು ಸಂಸದರಾಗಿ ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಗೆದ್ದ ಆರಂಭದಲ್ಲೇ ತುಮಕೂರು ಕ್ಷೇತ್ರವನ್ನು ವಾರಣಾಸಿ ಮಾದರಿಯಲ್ಲಿ ಅಭಿವೃದ್ಧಿ ಮಾಡುವತ್ತ ದಾಪುಗಾಲು ಇಟ್ಟಿದ್ದಾರೆ. ಈಗಾಗಲೇ ಚೆನ್ನೈ ಟು ಶಿವಮೊಗ್ಗ ರೈಲು ಸಂಚಾರವನ್ನು ತುಮಕೂರು ಮೂಲಕ ಆರಂಭಿಸಿದ್ದಾರೆ.
ತುಮಕೂರು(ಜು.17): ಜಿಲ್ಲೆಯಲ್ಲಿ 350 ಕೋಟಿ ವೆಚ್ಚದಲ್ಲಿ 5 ಮೇಲ್ಸೇತುವೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಿ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ. ಈ ಮೂಲಕ ವಿ. ಸೋಮಣ್ಣ ರೈಲ್ವೆ ಇಲಾಖೆಯ ರಾಜ್ಯ ಖಾತೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ತುಮಕೂರು ಜಿಲ್ಲೆಗೆ ಮೊದಲ ಕೊಡುಗೆ ನೀಡಿದ್ದಾರೆ.
ತುಮಕೂರು ನಗರದ ಕ್ಯಾತ್ಸಂದ್ರ ಸ್ಟೇಶನ್-ಮೈದಾಳ ಗೇಟ್ ನಡುವೆ 57.3 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣವಾಗಲಿದೆ. ಅಂತೆಯೇ 89.03 ಕೋಟಿ ವೆಚ್ಚದಲ್ಲಿ ಬಡ್ಡಿಹಳ್ಳಿ ಗೇಟ್ ಅಗ್ನಿಶಾಮಕ ದಳದ ಬಳಿ, 97.69 ಕೋಟಿ ವೆಚ್ಚದಲ್ಲಿ ಬಟವಾಡಿ ಗೇಟ್ ಸಮೀಪ, 55.99 ಕೋಟಿ ವೆಚ್ಚದಲ್ಲಿ ಅರೆಯೂರು ರಸ್ತೆ(ಮಲ್ಲಸಂದ್ರ ಗೇಟ್) ಬಳಿ ಹಾಗೂ 50.57 ಕೋಟಿ ವೆಚ್ಚದಲ್ಲಿ ತುಮಕೂರು ಮೈಸೂರು ರಸ್ತೆಯ ನಿಟ್ಟೂರು ರೈಲ್ವೆ ಸ್ಟೇಷನ್ ಹತ್ತಿರ ಮೇಲ್ಸೇತುವೆ ನಿರ್ಮಾಣವಾಗಲಿದೆ.
ಕೇವಲ 10-15 ಸೈಟ್‌ಗೆ ಸಿದ್ದರಾಮಯ್ಯ ಈ ಮಟ್ಟಕ್ಕೆ ಯೋಜನೆ ಮಾಡ್ತಾರೆ ಅಂತ ಗೊತ್ತಿರಲಿಲ್ಲ: ಸೋಮಣ್ಣ
ಜಿಲ್ಲೆಯ ಐದು ಕಡೆ ಮೇಲ್ಸೇತುವೆ ನಿರ್ಮಾಣದಿಂದಾಗಿ ರಸ್ತೆ ಹಾಗೂ ರೈಲು ಸಾರಿಗೆ ಸುಗಮವಾಗಲಿದೆ ಮತ್ತು ಸುರಕ್ಷಿತವಾಗಲಿದೆ. ಈ ಕಾಮಗಾರಿಗಾಗಿ ಸಂಬಂಧಿಸಿದ ಪ್ರಕ್ರಿಯೆ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಂಡು ಅತಿ ಶೀಘ್ರದಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ವಿ.ಸೋಮಣ್ಣ ಭರವಸೆ ವ್ಯಕ್ತಪಡಿಸಿದ್ದಾರೆ. ಈ ಸೌಲಭ್ಯವನ್ನು ರಾಜ್ಯದ ಜನತೆಗೆ ಒದಗಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ರೈಲ್ವೆ ಖಾತೆಯ ಸಚಿವ ಅಶ್ವೀನಿ ವೈಷ್ಣವ ಮತ್ತು ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
ತುಮಕೂರು ಲೋಕಸಭಾ ಕ್ಷೇತ್ರದಿಂದ ಗೆದ್ದು ಸಂಸದರಾಗಿ ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಗೆದ್ದ ಆರಂಭದಲ್ಲೇ ತುಮಕೂರು ಕ್ಷೇತ್ರವನ್ನು ವಾರಣಾಸಿ ಮಾದರಿಯಲ್ಲಿ ಅಭಿವೃದ್ಧಿ ಮಾಡುವತ್ತ ದಾಪುಗಾಲು ಇಟ್ಟಿದ್ದಾರೆ. ಈಗಾಗಲೇ ಚೆನ್ನೈ ಟು ಶಿವಮೊಗ್ಗ ರೈಲು ಸಂಚಾರವನ್ನು ತುಮಕೂರು ಮೂಲಕ ಆರಂಭಿಸಿದ್ದಾರೆ. ಇದರ ಬೆನ್ನಲ್ಲೇ ಜನರ ಕೋರಿಕೆಯಂತೆ ಮೇಲ್ಸೇತುವೆಗಳ ನಿರ್ಮಾಣ ಕಾಮಗಾರಿಗೆ ಅನುಮೋದನೆ ತಂದಿದ್ದಾರೆ. ಜನ ಸೋಮಣ್ಣ ಅವರ ಕಾರ್ಯಕ್ಕೆ ಮೆಚ್ಚುಗೆ ನುಡಿಗಳನ್ನಾಡುತ್ತಿದ್ದಾರೆ.