ಬೆಳಗಾವಿ(ಡಿ.19): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಸಲಾಗುತ್ತಿರುವ ಪ್ರತಿಭಟನೆಯಲ್ಲಿ ರೈಲ್ವೆ ಇಲಾಖೆ ಸೇರಿ ಸಾರ್ವಜನಿಕ ಆಸ್ತಿ ಪಾಸ್ತಿಗಳನ್ನು ಹಾನಿಮಾಡುವ ಪ್ರತಿಭಟನಾಕಾರರನ್ನು ಕಂಡಲ್ಲಿ ಗುಂಡಿಕ್ಕಿ ಹೇಳಿಕೆಗೆ ಈಗಲೂ ಬದ್ಧನಿದ್ದೇನೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿ ಹೇಳಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈಲ್ವೆ ಇಲಾಖೆ ಆಸ್ತಿಪಾಸ್ತಿ ಹಾನಿ ಮಾಡುವ ಪ್ರತಿಭಟನಾಕಾರರನ್ನು ಕಂಡಲ್ಲಿ ಗುಂಡಿಟ್ಟು ಕೊಲ್ಲಬೇಕು ಎಂದು ಅಂಗಡಿ ಮಂಗಳವಾರ ಹುಬ್ಬಳ್ಳಿಯಲ್ಲಿ ಹೇಳಿದ್ದರು. ಗೋಕಾಕ ತಾಲೂಕಿನ ಘಟಪ್ರಭಾದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ಅಂಗಡಿ, ಆ ಹೇಳಿಕೆಗೆ ನಾನು ಈಗಲೂ ಬದ್ಧ. ಯಾವುದೇ ಕಾರಣಕ್ಕೂ ಈ ಹೇಳಿಕೆ ಹಿಂಪಡೆಯುವುದಿಲ್ಲ. ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿ ಮಾಡಿದರೆ ಸುಮ್ಮನೆ ಕೂರಬೇಕಾ ಎಂದು ಪ್ರಶ್ನಿಸಿದರು. ಇದೇ ವೇಳೆ, ಯಾವುದೇ ಕಾರಣಕ್ಕೂ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಹಿಂದಕ್ಕೆ ಪಡೆಯುವುದಿಲ್ಲ. ಬೇಕಾದರೆ ಇಸ್ಲಾಂ ದೇಶ ಬೇಕು ಎನ್ನುವವರು ಆ ದೇಶಗಳಿಗೆ ಹೋಗಲಿ ಎಂದು ಕಿಡಿಕಾರಿದರು.

ರೈಲ್ವೆ ಆಸ್ತಿಗೆ ಹಾನಿ ಮಾಡಿದರೆ ಕಂಡಲ್ಲಿ ಗುಂಡಿಕ್ಕಿ, ಅಂಗಡಿ ಸಲಹೆ!

ನಂತರ ಕಾರ್ಯಕ್ರಮದಲ್ಲಿ ಮಾತನಾಡಿ ಅಪ್ಘಾನಿಸ್ತಾನ, ಬಾಂಗ್ಲಾದೇಶ, ಪಾಕಿಸ್ತಾನದ ಜೈನರು, ಕ್ರೈಸ್ತರು, ಸಿಖ್ಖರು, ಪಾರ್ಸಿಗಳು ಸೇರಿದಂತೆ ಇನ್ನಿತರ ಧರ್ಮದವರು ರಕ್ಷಣೆ ಕೋರಿ ಭಾರತಕ್ಕೆ ಬರುತ್ತಿದ್ದಾರೆ. ಅವರಿಗಾಗಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರಲಾಗಿದೆ. ಈ ತಿದ್ದುಪಡಿ ಕಾಯ್ದೆಯಿಂದ ಭಾರತದಲ್ಲಿರುವ ಮುಸ್ಲಿಮರಿಗೆ ಯಾವುದೇ ರೀತಿಯ ತೊಂದರೆ ಇಲ್ಲ. ಆದರೂ ಸ್ವಾರ್ಥಕ್ಕಾಗಿ ಕೆಲವರು ಅವರನ್ನು ಎತ್ತಿಕಟ್ಟುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೋಡಿ ರೈಲು ಮಾರ್ಗ ಸಮರ್ಪಣೆ:

ಘಟಪ್ರಭಾ ​ಹಾಗೂ ಚಿಕ್ಕೋಡಿ ನಡುವಿನ ಜೋಡಿ ರೈಲು ಮಾರ್ಗವನ್ನು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿ ಬುಧವಾರ ರಾಷ್ಟ್ರಕ್ಕೆ ಸಮರ್ಪಿಸಿದರು. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಘಟಪ್ರಭಾದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಈ ಮಾರ್ಗವನ್ನು ಉದ್ಘಾಟಿಸಿದರು. ಇದು ಲೋಂಡಾ-ಮೀರಜ್‌ ಜೋಡಿ ರೈಲು ಮಾರ್ಗದ ನಡುವಿನ ಮೊದಲ ಹಂತದ ಕಾಮಗಾರಿಯಾಗಿದೆ. ಘಟಪ್ರಭಾ-ಚಿಕ್ಕೋಡಿ ನಡುವೆ 16 ಕಿಮೀ ಜೋಡಿ ಮಾರ್ಗ ನಿರ್ಮಾಣವಾಗಿದೆ.