ಹುಬ್ಬಳ್ಳಿ(ಜು.03): ದೇಶದ ಭದ್ರತೆ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಿ ಮಾಡಿಕೊಳ್ಳುವುದಿಲ್ಲ. ಚೀನಾಗೆ ಒಂದಿಂಚು ಭೂಮಿಯನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಭಾರತದ ಸೈನ್ಯ ಎಲ್ಲದಕ್ಕೂ ಸನ್ನದ್ಧವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಇದು 1962ರ ಭಾರತ ಅಲ್ಲ, ಈಗ ಇರುವುದು ಮೋದಿ ಭಾರತ. 1960ರಿಂದಲೂ ಚೀನಾ ಯಾವ ರೀತಿ ವರ್ತಿಸಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಗಡಿ ವಿಚಾರದಲ್ಲಿ ಚೀನಾ ಜತೆ ರಾಜಿ ಸಂಧಾನ ಸಾಧ್ಯವಿಲ್ಲ. ನಾವು ಹೋರಾಡಲು ಸಿದ್ಧ. ಗಡಿಭಾಗದಲ್ಲಿ ರಕ್ಷಣಾ ಅಧಿಕಾರಿಗಳು ಎಲ್ಲ ರೀತಿಯಲ್ಲಿ ಸನ್ನದ್ಧರಾಗಿದ್ದಾರೆ ಎಂದರು.

21 ಮಿಗ್, 12 ಸುಖೋಯ್ ಯುದ್ಧ ವಿಮಾನ ಖರೀದಿಸಲು ಸರ್ಕಾರ ಅಸ್ತು

ಇದೇ ವೇಳೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್‌ ನಾಯಕಿಗೆ ಮಾಡಲು ಬೇರೆ ಕೆಲಸ ಇಲ್ಲ. ಹೀಗಾಗಿ ಮನಸ್ಸಿಗೆ ಬಂದಂತೆ ಹೇಳಿಕೆ ನೀಡುತ್ತಾರೆ. ಪ್ರತಿಪಕ್ಷ ಸ್ಥಾನದಲ್ಲಿರುವ ಕಾಂಗ್ರೆಸ್‌ಗೆ ಹೇಗೆ ವರ್ತಿಸಬೇಕು ಎಂಬ ಸಣ್ಣ ವಿವೇಚನೆ ಇಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಇನ್ನು, ಲಾಕ್‌ಡೌನ್‌ ಮಾತ್ರವೇ ಕೊರೋನಾ ನಿಯಂತ್ರಣಕ್ಕೆ ಪರಿಹಾರವಲ್ಲ. ಜನರನ್ನು ಮಾನಸಿಕವಾಗಿ ಸಿದ್ಧಗೊಳಿಸುವ ಉದ್ದೇಶಕ್ಕೆ ಮಾತ್ರ ದೇಶದಲ್ಲಿ ಲಾಕ್‌ಡೌನ್‌ ಜಾರಿಗೊಳಿಸಲಾಗಿತ್ತು. ಲಾಕ್‌ಡೌನ್‌ನಿಂದ ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಎಲ್ಲವನ್ನೂ ಬಂದ್‌ ಮಾಡಿ ವ್ಯವಹರಿಸಲು ಸಾಧ್ಯವಿಲ್ಲ. ಯಾವುದೇ ಕಾರಣಕ್ಕೂ ಮತ್ತೊಮ್ಮೆ ಲಾಕ್‌ಡೌನ್‌ ಘೋಷಣೆ ಮಾಡುವುದಿಲ್ಲ. ಕೊರೋನಾ ಪಾಸಿಟಿವ್‌ ಬಂದ ಪ್ರದೇಶವನ್ನು ಮಾತ್ರ ಸೀಲ್‌ಡೌನ್‌ ಮಾಡುತ್ತೇವೆ ಎಂದು ಹೇಳಿದರು.