ನವದೆಹಲಿ(ಜು.03): ಚೀನಾದೊಂದಿಗಿನ ಗಡಿ ಸಂಘರ್ಷದ ಬೆನ್ನಲ್ಲೇ ಭಾರತದ ರಕ್ಷಣಾ ಸಚಿವಾಲಯ ಗುರುವಾರ 38,900 ಕೋಟಿ ರು. ವೆಚ್ಚದಲ್ಲಿ ಯುದ್ಧವಿಮಾನಗಳು, ಕ್ಷಿಪಣಿಗಳು ಹಾಗೂ ಇತರ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಸೇನಾಪಡೆಗೆ ಒಪ್ಪಿಗೆ ನೀಡಿದೆ. 

ಇದರಲ್ಲಿ ರಷ್ಯಾದಿಂದ 21 ಮಿಗ್‌-29 ಯುದ್ಧ ವಿಮಾನಗಳು ಹಾಗೂ ಹಿಂದುಸ್ತಾನ್‌ ಏರೋನಾಟಿಕ್ಸ್‌ ಲಿ. (ಎಚ್‌ಎಎಲ್‌)ನಿಂದ 12 ಸುಖೋಯ್‌-30 ಎಂಕೆಐ ಯುದ್ಧವಿಮಾನಗಳ ಖರೀದಿ ಮತ್ತು ಈಗಾಗಲೇ ಇರುವ 59 ಮಿಗ್‌-29 ಯುದ್ಧವಿಮಾನಗಳನ್ನು ಮೇಲ್ದರ್ಜೆಗೇರಿಸುವುದೂ ಸೇರಿದೆ.

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅಧ್ಯಕ್ಷತೆಯಲ್ಲಿ ನಡೆದ ರಕ್ಷಣಾ ಖರೀದಿ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮಿಗ್‌ ಯುದ್ಧವಿಮಾನಗಳನ್ನು ಖರೀದಿಸುವುದು ಹಾಗೂ ಮೇಲ್ದರ್ಜೆಗೇರಿಸುವುದಕ್ಕೆ 7,418 ಕೋಟಿ ರು. ಮತ್ತು ಸುಖೋಯ್‌ ಯುದ್ಧವಿಮಾನಗಳನ್ನು ಖರೀದಿಸುವುದಕ್ಕೆ 10,730 ಕೋಟಿ ರು. ವೆಚ್ಚ ಮಾಡಲಾಗುತ್ತದೆ. 

ಮಿತ್ರ ರಾಷ್ಟ್ರ ಮ್ಯಾನ್ಮಾರ್‌ಗೂ ಚೀನಾ ಕಿರುಕುಳ

ನೌಕಾಪಡೆ ಮತ್ತು ವಾಯುಪಡೆಗೆ 1000 ಕಿ.ಮೀ. ದೂರ ಹಾರುವ ಪಿನಾಕಾ ಕ್ಷಿಪಣಿಗಳು ಹಾಗೂ 248 ಅಸ್ತ್ರ ಕ್ಷಿಪಣಿಗಳನ್ನು ಖರೀದಿಸುವುದಕ್ಕೆ 20,400 ಕೋಟಿ ರು. ವೆಚ್ಚ ಮಾಡಲು ನಿರ್ಧರಿಸಲಾಗಿದೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟಾರೆ ಖರೀದಿ ಪ್ರಕ್ರಿಯೆಯಲ್ಲಿ 31,130 ಕೋಟಿ ರು. ಉತ್ಪನ್ನಗಳನ್ನು ಭಾರತೀಯ ಸಂಸ್ಥೆಗಳಿಂದಲೇ ಖರೀದಿಸಲಾಗುವುದು.