ಹುಬ್ಬಳ್ಳಿ(ಜು.11): ಕೋವಿಡ್‌-19 ಹಿನ್ನೆಲೆಯಲ್ಲಿ ಸಣ್ಣ ಹಾಗೂ ಅತಿ ಸಣ್ಣ ಉದ್ದಿಮೆಗಳನ್ನು (ಎಂಎಸ್‌ಎಂಇ) ನೆಲಕಚ್ಚುವ ಪರಿಸ್ಥಿತಿಯಿಂದ ಪಾರುಮಾಡಲು ಕೇಂದ್ರ ಸರ್ಕಾರ ಆತ್ಮನಿರ್ಭರ ಭಾರತದ ಭಾಗವಾಗಿ ಘೋಷಿಸಿದ 3 ಲಕ್ಷ ಕೋಟಿ ಬೆಂಬಲದ ಭಾಗವಾಗಿ ಜಿಲ್ಲೆಯ ಎಂಎಸ್‌ಎಂಇಗಳಿಗೆ 238.34 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 20 ಲಕ್ಷ ಕೋಟಿ ವಿಶೇಷ ಪ್ಯಾಕೇಜ್‌ನಿಂದಾಗಿ ದೇಶ ಮತ್ತು ರಾಜ್ಯದಲ್ಲಿ ಆರ್ಥಿಕ ಚೇತರಿಕೆ ಕಂಡುಬರುತ್ತಿದೆ. ಸರ್ಕಾರಿ ಮತ್ತು ಖಾಸಗಿ ಸ್ವಾಮ್ಯದ ಬ್ಯಾಂಕುಗಳು ಎಂಎಸ್‌ಎಂಇಗಳಿಗೆ ಎಮರ್ಜೆನ್ಸಿ ಕ್ರೆಡಿಟ್‌ ಲೈನ್‌ ಗ್ಯಾರೆಂಟಿ ಯೋಜನೆಯಡಿ 1 ಲಕ್ಷ ಕೋಟಿ ಸಾಲ ನೀಡಿವೆ. ರಾಜ್ಯದಲ್ಲಿ 66,785 ಖಾತೆದಾರರಿಗೆ 3391 ಕೋಟಿ ಸಾಲ ಮಂಜೂರಾಗಿದೆ. ಈ ಪೈಕಿ ಜಿಲ್ಲೆಯ 4,832 ಖಾತೆಗಳಿಗೆ ಸಾಲ ಬಿಡುಗಡೆ ಮಾಡಲಾಗಿದೆ ಎಂದರು.
ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಗರೀಬ್‌ ಕಲ್ಯಾಣ ಯೋಜನೆಯಡಿ ಧಾರವಾಡ ಜಿಲ್ಲೆಯ 3.50 ಲಕ್ಷ ಕುಟುಂಬಗಳ 12 ಲಕ್ಷ ಜನರಿಗೆ ಲಾಭ ದೊರೆತಿದ್ದು, 2 ಲಕ್ಷ ಕ್ವಿಂಟಲ್‌ ಅಕ್ಕಿ, 10,537 ಕ್ವಿಂಟಲ್‌ ತೊಗರಿಬೆಳೆ ವಿತರಿಸಲಾಗಿದೆ. ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಜಿಲ್ಲೆಯಲ್ಲಿ ಈ ವರೆಗೆ 1.10 ಲಕ್ಷ ರೈತರಿಗೆ . 115 ಕೋಟಿ ಅವರ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗಿದೆ ಎಂದರು.

ಮಂಗಳೂರಲ್ಲಿ ಕೊರೋನಾ ಸರಣಿ ಸಾವಿನ ಸ್ಫೋಟ: ಒಂದೇ ದಿನ 8 ಬಲಿ

ಜನಧನ ಖಾತೆ ಹೊಂದಿರುವ ಜಲ್ಲೆಯ 4 ಲಕ್ಷಕ್ಕೂ ಅಧಿಕ ಮಹಿಳೆಯರ ಖಾತೆಗೆ 3 ತಿಂಗಳಿಗೆ 1500 ನೇರ ವರ್ಗಾವಣೆ ಮಾಡಲಾಗಿದೆ. ವೃದ್ಧಾಪ್ಯ ವೇತನ, ವಿಧವಾ ವೇತನ, ದಿವ್ಯಾಂಗರ ಸೇರಿ 1,78,630 ಫಲಾನುಭವಿಗಳಿಗೆ . 32 ಕೋಟಿ ತಲುಪಿಸಲಾಗಿದೆ. ಜಿಲ್ಲೆಯಲ್ಲಿ ಕೊರೋನಾ ಲಾಕ್‌ಡೌನ್‌ ವೇಳೆ ಸಿಲುಕಿದ್ದ 15,664 ವಲಸೆ ಕಾರ್ಮಿಕರಿಗೆ ಸ್ವಾವಲಂಬಿ ಭಾರತ ಯೋಜನೆಯಡಿ ಆಹಾರ ಧಾನ್ಯ ವಿತರಿಸಿದ್ದೇವೆ. ಉಜ್ವಲ್‌ ಯೋಜನೆಯಡಿ ಜಿಲ್ಲೆಯಲ್ಲಿ ಜೂನ್‌ ಅಂತ್ಯದವರೆಗೆ 63,434 ಜನರಿಗೆ ಉಚಿತವಾಗಿ 1,10,231 ಗ್ಯಾಸ್‌ ಸಿಲೆಂಡರ್‌ ವಿತರಣೆ ಮಾಡಲಾಗಿದೆ. ಮನ್‌ರೇಗಾ ಯೋಜನೆಯಡಿ ಜಿಲ್ಲೆಯಲ್ಲಿ ಮಾ. 1ರಿಂದ ಜೂ. 30ರ ವರೆಗೆ 4298 ಕಾಮಗಾರಿ ಪ್ರಾರಂಭಿಸಿ 7,05,724 ಮಾನವ ದಿನಗಳನ್ನು ಸೃಜಿಸಿ 26.81 ಕೋಟಿ ವೆಚ್ಚ ಮಾಡಲಾಗಿದೆ ಎಂದರು.

ವೈಯಕ್ತಿಕವಾಗಿಯೂ ಸಾಕಷ್ಟು ಸಹಾಯ, ಸಹಕಾರ ಮಾಡಿದ್ದೇವೆ. ಏ. 1ರಿಂದ ಮೇ 31ರ ವರೆಗೆ 13 ವಾಹನಗಳ ಮೂಲಕ 2901 ರೋಗಿಗಳಿಗೆ ಮನೆಯಿಂದ ಆಸ್ಪತ್ರೆ, ಆಸ್ಪತ್ರೆಯಿಂದ ಮನೆಗೆ ತಲುಪಿಸುವ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಜರ್ಮನಿಯಲ್ಲಿ ಸಿಲುಕಿದ್ದ ಹುಬ್ಬಳ್ಳಿ ಮೂಲದ ಗರ್ಭಿಣಿ, ಇಂಗ್ಲೆಂಡ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಯುವಕನ ಶವ ತರಿಸಿಕೊಳ್ಳಲು ಕುಟುಂಬಕ್ಕೆ ಸಹಾಯ ಮಾಡಲಾಗಿದೆ ಎಂದರು.

ಡಿಮಾನ್ಸ್‌ನಲ್ಲಿ ದಿನಕ್ಕೆ 800 ರೋಗಿಗಳನ್ನು ಪರೀಕ್ಷೆ ಮಾಡಬಹುದಾದ ಲ್ಯಾಬ್‌ ಸ್ಥಾಪನೆ, ಕ್ಷೇತ್ರದಲ್ಲಿ 2 ಲಕ್ಷ ಮಾಸ್ಕ್‌ ತಯಾರಿಸಿ 8 ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲ ಗ್ರಾಪಂ, ಆರೋಗ್ಯಕೇಂದ್ರಕ್ಕೆ ಕಳಿಸಿಕೊಡಲಾಗಿದೆ. 25 ಸಾವಿರ ಫುಡ್‌ಕಿಟ್‌ ವಿತರಣೆ, 3 ಸಾವಿರ ಕೊರೋನಾ ವಾರಿಯರ್ಸ್‌ಗೆ ಸನ್ಮಾನ, ಪಿಯುಸಿ ಪರೀಕ್ಷೆ ವೇಳೆ 25 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಮಾಸ್ಕ್‌, ಪರೀಕ್ಷಾ ಕೇಂದ್ರಗಳಿಗೆ 120 ಥರ್ಮಲ್‌ ಸ್ಕ್ಯಾ‌ನರ್‌ ವಿತರಣೆ ಮಾಡಲಾಗಿತ್ತು. ಅದರಂತೆ ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳೆ 35 ಸಾವಿರ ವಿದ್ಯಾರ್ಥಿಗಳಿಗೆ 70 ಸಾವಿರ ಮಾಸ್ಕ್‌, 35 ಸಾವಿರ ಸ್ಯಾನಿಟೈಸರ್‌ ಮತ್ತು 250 ಥರ್ಮಲ್‌ ಸ್ಕ್ಯಾ‌ನರ್‌ಗಳನ್ನು ವಿತರಿಸಿದ್ದೆವು ಎಂದರು.

ಹಿಂಗಾರು ಹಂಗಾಮಿನ ಕಡಲೆ ಖರೀದಿ ಸ್ಥಗಿತಗೊಂಡಾಗ ಕೇಂದ್ರದ ನಾಫೆಡ್‌ ಸಂಸ್ಥೆಯಿಂದ ಕರ್ನಾಟಕ ರಾಜ್ಯ ಮಾರಾಟ ಮಹಾ ಮಂಡಳಕ್ಕೆ 156 ಕೋಟಿ ಬಿಡುಗಡೆ ಮಾಡಿಸಿ ರೈತರಿಗೆ ಅನುಕೂಲವಾಗುವಂತೆ ಮಾಡಲಾಗಿದೆ. ಇನ್ನು ಹತ್ತಿ ವ್ಯಾಪಾರದಲ್ಲಿ ಸಮಸ್ಯೆ ಉಂಟಾದಾಗಲೂ ಪರಿಹಾರ ಕಂಡುಕೊಳ್ಳಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಶಂಕರಪಾಟೀಲ್‌ ಮುನೇನಕೊಪ್ಪ, ಅರವಿಂದ ಬೆಲ್ಲದ, ವಿಧಾನ ಪರಿಷತ್‌ ಸದಸ್ಯ ವಿ.ಎಸ್‌. ಸಂಕನೂರು, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಸೇರಿ ಇತರರಿದ್ದರು.

ಮೃದು ಧೋರಣೆ ಇಲ್ಲ

ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳು ಕೊರೋನಾ ಪೀಡಿತರಿಗೆ ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿವೆ ಎಂಬ ದೂರಿದೆ. ಅಂಥ ವೈದ್ಯರ ಬಗ್ಗೆ ಮೃದುಧೋರಣೆ ಇಲ್ಲ. ವೈದ್ಯರನ್ನು ಬಲವಂತವಾಗಿ ಎಳೆದು ತಂದು, ಆಸ್ಪತ್ರೆಯಲ್ಲಿ ರೋಗಿಗಳನ್ನು ಕಳಿಸಿ ಚಿಕಿತ್ಸೆ ಕೊಡಿಸಲು ಆಗುವುದಿಲ್ಲ. ಹೀಗಾಗಿ ಅವರ ಮನವೊಲಿಕೆ ಮಾಡುತ್ತಿದ್ದೇವೆ. ಅದಕ್ಕೂ ಒಪ್ಪದಿದ್ದರೆ ನೋಟಿಸ್‌ ನೀಡುವುದು ಸೇರಿ ಅಗತ್ಯ ಕ್ರಮವನ್ನು ಜಿಲ್ಲಾಡಳಿತ ಕೈಗೊಳ್ಳಲಿದೆ ಎಂದರು.

ಫ್ಲೈ ಓವರ್‌ ಟೆಂಡರ್‌

ಚೆನ್ನಮ್ಮ ವೃತ್ತದಲ್ಲಿ ಫ್ಲೈ ಓವರ್‌ಗೆ ಮರು ಟೆಂಡರ್‌ ಕರೆಯಲಾಗುತ್ತಿದೆ. ಉದ್ದೇಶಿತ ಫ್ಲೈಓವರ್‌ ಇಲ್ಲಿ ನಿರ್ಮಾಣವಾಗಲಿದೆ ಎಂದು ಅವರು ಸಚಿವ ಜೋಶಿ ಹೇಳಿದರು.

ತೆರಿಗೆ ಸಂಗ್ರಹದಲ್ಲಿ ವ್ಯತ್ಯಾಸ; ಪೆಟ್ರೋಲ್‌, ಡೀಸೆಲ್‌ ದರ ಏರಿಕೆ

ಕೋವಿಡ್‌ ಬಿಕ್ಕಟ್ಟಿನ ಸಂದರ್ಭದಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಸಾಕಷ್ಟು ಜನಕಲ್ಯಾಣ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದು, ಈ ನಡುವೆ ತೆರಿಗೆ ಸಂಗ್ರಹದಲ್ಲಿ ವ್ಯತ್ಯಾಸವಾಗಿರುವ ಕಾರಣ ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಸಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಬೆಲೆ ಇಳಿಕೆ ಕುರಿತು ಸರ್ಕಾರ ಕ್ರಮವಹಿಸಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಮತ್ತು ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ. 

ಯುಪಿಎ ಕಾಲದಿಂದಲೂ ಪೆಟ್ರೋಲ್‌ ದರ ಏರಿಕೆಯಾಗುತ್ತಲೆ ಇದೆ. ಇವತ್ತಿನ ತೆರಿಗೆ ಪದ್ಧತಿಯಲ್ಲಿ ಪೆಟ್ರೋಲ್‌ ಡೀಸೆಲ್‌ ತೆರಿಗೆ ಕೆಲ ರಾಜ್ಯಗಳಲ್ಲಿ ಹೆಚ್ಚಿವೆ. ಕೊರೋನಾ ಸಮಸ್ಯೆಯ ಹಿನ್ನೆಲೆಯಲ್ಲಿ ವಹಿವಾಟುಗಳು ಕುಂದಿರುವ ಕಾರಣ ಜಿಎಸ್‌ಟಿ ಇಲ್ಲದೆ ತೆರಿಗೆ ಸಂಗ್ರಹವಾಗುತ್ತಿಲ್ಲ. ಜನರ ಜೀವನಮಟ್ಟ ಸುಧಾರಣೆ, ಆರೋಗ್ಯ ಸೇರಿದಂತೆ ಹಲವು ಜನಕಲ್ಯಾಣ ಕಾರ್ಯವನ್ನು ಸರ್ಕಾರ ಆದ್ಯತೆ ಮೇರೆಗೆ ಕೈಗೊಂಡಿರುವ ಈ ಸಂದರ್ಭದಲ್ಲಿ ತೆರಿಗೆ ಇಳಿಕೆ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಆದರೆ, ಸರ್ಕಾರ ಈ ಕುರಿತಂತೆ ಗಮನ ಹರಿಸುತ್ತಿದೆ ಎಂದರು.

ಕೊರೋನಾ ವೈರಸ್‌ ತಡೆಯುವಲ್ಲಿ ಕೇಂದ್ರ ಸರ್ಕಾರ ಉತ್ತಮ ಕ್ರಮ ಕೈಗೊಂಡಿದೆ. 20 ಲಕ್ಷ ಕೋಟಿ ಪ್ಯಾಕೇಜ್‌ನ ಧನಾತ್ಮಕ ಪರಿಣಾಮ ಕಂಡು ಬರುತ್ತಿದೆ. ಇನ್ನು, ಕೆಲ ಸಂದರ್ಭದಲ್ಲಿ ಅಧಿಕಾರಿಗಳು ನಮ್ಮ ಆದೇಶ ಇದ್ದಾಗಲೂ ಅದನ್ನು ಅರ್ಥ ಮಾಡಿಕೊಳ್ಳಲಾಗದೆ ಎಡವಿರುವ ಸಾಧ್ಯತೆ ಇದೆ. ಕೊರೋನಾ ಬಿಕ್ಕಟ್ಟಿನಲ್ಲಿರುವ ಜಗತ್ತಿನ ಇತರ ರಾಷ್ಟ್ರಗಳಿಗೆ ಹೋಲಿಕೆ ಮಾಡಿದಾಗ ಅಲ್ಲಿನ ಜನಸಾಂದ್ರತೆ, ವಿಸ್ತೀರ್ಣವನ್ನು ತೆಗೆದುಕೊಂಡಾಗ ಅಲ್ಲಿಗಿಂತ ಉತ್ತಮ ಸ್ಥಿತಿಯಲ್ಲಿದೆ. ರಾಜ್ಯದಲ್ಲಿ ಈಚೆಗೆ ಪಿಡುಗು ಹೆಚ್ಚಾಗಾಗುತ್ತಿರುವ ಕುರಿತಂತೆ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದರು.

ಕಲ್ಲಿದ್ದಲು ಕ್ರಾಂತಿಕಾರಿ

ಪ್ರಶ್ನೆಗೆ ಉತ್ತರಿಸಿದ ಅವರು, ಸ್ವಾತಂತ್ರ್ಯದ ಬಳಿಕ ಕಲ್ಲಿದ್ದಲು ಹಾಗೂ ಗಣಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ಸುಧಾರಣೆ ತರಲಾಗಿದೆ. ಕೋಲ್‌ ಇಂಡಿಯಾ ಖಾಸಗೀಕರಣ ಮಾಡುವ ಯಾವುದೇ ಪ್ರಸ್ತಾವನೆ ಇಲ್ಲ. ಅದರಂತೆ ಕಲ್ಲಿದ್ದಲು ಬ್ಲಾಕ್‌ಗಳನ್ನು ವಾಣಿಜ್ಯ ಉದ್ದೇಶಕ್ಕೆ ಹರಾಜು ಮೂಲಕ ನೀಡುವುದರಿಂದ ಯಾವುದೆ ರೀತಿ ದುರ್ಬಳಕೆ ಆಗದಂತೆ ಪಾರದರ್ಶಕವಾಗಿ ವಹಿವಾಟು ನಡೆಯುವಂತೆ ನೋಡಿಕೊಳ್ಳಲಾಗುತ್ತಿದೆ. 41 ಕಲ್ಲಿದ್ದಲು ಬ್ಲಾಕ್‌ಗಳನ್ನು ವಾಣಿಜ್ಯ ಉದ್ದೇಶಕ್ಕೆ ಹರಾಜು ಪ್ರಕ್ರಿಯೆಗೆ ನೀಡಲಾಗಿದೆ. 2023-24ರಲ್ಲಿ ಕಲ್ಲಿದ್ದಲು ಕ್ಷೇತ್ರದಲ್ಲಿ ಗಣನೀಯ ಉತ್ಪಾದನೆ ಕೈಗೊಂಡು ಬದಲಿ ಕಲ್ಲಿದ್ದಲು ಹೊರತುಪಡಿಸಿ ಉಳಿದಂತೆ ಆಮದನ್ನು ನಿಲ್ಲಿಸುವ ಮೂಲಕ ಆತ್ಮ ನಿರ್ಭರ ಭಾರತ ಸಾಧಿಸುವ ಗುರಿ ಇದೆ ಎಂದರು.

ಕಾಂಗ್ರೆಸ್‌ ಭ್ರಷ್ಟಾಚಾರದ ಮೂಲಸೆಲೆ

ಕೊರೋನಾ ಸಂದರ್ಭದಲ್ಲಿ ರಾಜ್ಯ ಸರ್ಕಾರ ಭ್ರಷ್ಟಾಚಾರ ನಡಸಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಭ್ರಷ್ಟಾಚಾರದ ಮೂಲ ಸೆಲೆಯೆ ಕಾಂಗ್ರೆಸ್‌. ಕಾಂಗ್ರೆಸ್‌ ನಡೆಸುತ್ತಿರುವ ಕುಟುಂಬ ಭ್ರಷ್ಟಾಚಾರದಲ್ಲಿ ಮುಳುಗಿದೆ. ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರವಾಗಿದೆ ಎಂದಾದರೆ ವಿನಾಕಾರಣ ಆರೋಪವನ್ನೇಕೆ ಮಾಡಬೇಕು. ಸುಮ್ಮನೆ ತನಿಖಾ ಸಂಸ್ಥೆಗಳಿಗೆ ದೂರು ನೀಡಲಿ ಬೇಡ ಎಂದವರು ಯಾರು? ಎಂದು ಸಿದ್ದರಾಮಯ್ಯಗೆ ಪ್ರಹ್ಲಾದ ಜೋಶಿ ಟಾಂಗ್‌ ನೀಡಿದರು.